- ತಮಿಳುನಾಡು ಬಿಜೆಪಿ ತಯಾರಿಸಿರುವ ಹಾಡು
- ಸರಾಸರಿ ಶೇ. 15 ರಂತೆ ಹೆಚ್ಚುತ್ತಿರುವ ಡಿಸ್ ಲೈಕ್ ಗಳು
ಚೆನ್ನೈ: ತಮಿಳುನಾಡಿನ ಮಟ್ಟಿಗೆ ಚುನಾವಣೆ ಎಂದರೇ ಹಬ್ಬ. ಬೇರೆ ರಾಜ್ಯಗಳು ಚುನಾವಣೆಯನ್ನು ಎದುರಿಸುವುದಕ್ಕೂ ತಮಿಳುನಾಡಿನ ಜನ ಚುನಾವಣೆಯನ್ನು ಎದುರಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸಿನಿಮಾ ಮತ್ತು ರಾಜಕೀಯ ಇಲ್ಲಿನ ಜನರ ಎರಡು ಕಣ್ಣುಗಳಿದ್ದಂತೆ. ಸಿನಿಮಾವನ್ನು ಅಲ್ಲಿನ ಜನ ಪ್ರೀತಿಸುತ್ತಾರೋ ರಾಜಕೀಯದಲ್ಲೂ ಅಷ್ಟೇ ಸಿನಿಕ ತನವನ್ನು ನಿರೀಕ್ಷೆ ಮಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಇಂದಿಗೂ ಸಹ ತಮಿಳುನಾಡಿನಲ್ಲಿ ಸಿಎಂ ಸ್ಥಾನಕ್ಕೆ ಏರಬೇಕು ಎಂದರೆ ಅದಕ್ಕೆ ಸಿನಿಮಾ ಒಂದು ಪ್ರಮುಖ ವೇದಿಕೆ ಎಂದರೇ ತಪ್ಪಾಗಲಾರದು. ಇದೇ ಕಾರಣಕ್ಕೆ ತಮಿಳುನಾಡಿನಲ್ಲಿ ಎಲ್ಲಾ ಪಕ್ಷಗಳು ಮತ ಭೇಟೆಗಾಗಿ ಸಿನಿಮಾ ರೀತಿಯಲ್ಲೇ ಪ್ರಚಾರ ನಡೆಸುವುದು, ಹಾಡೊಂದನ್ನು ಬಿಡುಗಡೆ ಮಾಡುವುದು ಮಾಮೂಲಿ. ಇದೀಗ ಅಂತಹದ್ದೇ ಒಂದು ತಂತ್ರಕ್ಕೆ ಕೈ ಹಾಕುವ ಮೂಲಕ ಬಿಜೆಪಿ ತಮಿಳುನಾಡಿನಲ್ಲಿ ಪೇಜಿಗೆ ಸಿಲುಕಿದೆ.
ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕಮಲವನ್ನು ಅರಳಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಇದೀಗ ಈ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲೂ ಕರ್ನಾಟಕಕ್ಕೆ ಭೇಟಿ ನೀಡದ, ನ್ಯಾಯಯುತ ಪರಿಹಾರ ಮತ್ತು ಜಿಎಸ್ಟಿ ಪಾಲನ್ನು ನೀಡಲು ಮುಂದಾಗದ ಪ್ರಧಾನಿ ಕಳೆದ 6 ತಿಂಗಳಲ್ಲಿ ಅನೇಕ ಭಾರಿ ಈ ಎರಡೂ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ತಮಿಳುನಾಡಿಗಂತೂ ಸಾಕಷ್ಟು ಅನುಧಾನಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ನಾಯಕರು ಈ ಎರಡೂ ರಾಜ್ಯಗಳಲ್ಲಿ ಅಲ್ಲಿನ ಸೊಗಡಿಗೆ ಅನುಗುಣವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.
ಹೀಗೆ ತಮಿಳರ ಸೊಗಡಿನಂತೆ ಬಿಜೆಪಿ ಪ್ರಚಾರಕ್ಕಾಗಿ ಸಿದ್ದಗೊಡಿರುವುದೇ “ವಾಂಗ ಮೋದಿ ವನಕ್ಕಂ ಮೋದಿ” ಎಂಬ ಹಾಡು. ತಮಿಳರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ನಾಯಕರು ಈ ಹಾಡನ್ನು ಸಿದ್ದಪಡಿಸಿ ಅದನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಹಾಡಿನ ಚಿತ್ರೀಕರಣದಲ್ಲಿ ತಮಿಳುನಾಡಿನ ಬಿಜೆಪಿ ಹಿರಿಯ ನಾಯಕರಲ್ಲದೆ ಕರ್ನಾಟಕದ ಮಾಜಿ ಸಚಿವ ಸಿಟಿ ರವಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಆದರೆ, ಈ ಹಾಡು ಇದೀಗ ತಮಿಳುನಾಡಿನಲ್ಲಿ ಭಾರೀ ಟ್ರೋಲ್ಗೆ ಗುರಿಯಾಗುತ್ತಿದೆ. ಅಲ್ಲದೆ, ಲೈಕ್ಗಿಂತ 20 ಪಟ್ಟು ಡಿಸ್ಲೈಕ್ ಹೆಚ್ಚುತ್ತಿರುವುದು ತಮಿಳುನಾಡು ಬಿಜೆಪಿ ಘಟಕದ ಮುಖಭಂಗಕ್ಕೆ ಕಾರಣವಾಗಿದೆ.
ಮೋದಿ ಹಾಡಿಗೆ ತಮಿಳರ ಕಿಡಿ:
ಅಸಲಿಗೆ ಚುನಾವಣಾ ಪ್ರಚಾರಕ್ಕಾಗಿ ಹಾಡೊಂದನ್ನು ರಚನೆ ಮಾಡಿರುವ ತಮಿಳುನಾಡು ಬಿಜೆಪಿ , “ಕೊಂಗುನಾಡಿಗೆ ಬನ್ನಿ ಮೋದಿ ಕೋಟಿ ಜನ ಇಲ್ಲಿ ನಿಮ್ಮ ಹಿಂದೆ ಇದ್ದಾರೆ” ಎಂಬರ್ಥ ಸಾಹಿತ್ಯವನ್ನು ಬರೆದಿದೆ. ಆದರೆ, ಈ ಹಾಡಿನ ಸಾಹಿತ್ಯಕ್ಕೆ ದ್ರಾವಿಡ ನಾಡಿನ ಜನ ಕಿಡಿಕಿಡಿಯಾಗಿದ್ದಾರೆ.
ಏಕೆಂದರೆ ನರೇಂದ್ರ ಮೋದಿ ಯಾವಾಗ ತಮಿಳುನಾಡಿನಗೆ ಆಗಮಿಸಿದರೂ ಸಹ GO BACK MODI ಹ್ಯಾಷ್ ಟ್ಯಾಗ್ ನಂಬರ್ 1 ಟ್ರೆಂಡಿಂಗ್ನಲ್ಲಿರುತ್ತದೆ. ತಮಿಳು ಜನ ಮೋದಿ ವಿರುದ್ಧ ರಾಜ್ಯದ ಅಲ್ಲಿ ಪ್ರತಿಭಟಿಸುತ್ತಲೇ ಇದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಎಂದಿಗೂ ಒಪ್ಪದ ತಮಿಳರು ಈವರೆಗೆ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲಲು ಅವಕಾಶ ನೀಡಿಲ್ಲ. ಪರಿಸ್ಥಿತಿ ಹೀಗಿರುವಾದ “ಮೋದಿ ಹಿಂದೆ ಕೋಟಿ ತಮಿಳು ಜನ ಇದ್ದಾರೆ” ಎಂದು ಹಾಡು ಬರೆದರೆ ಸಹಿಸೀತೆ ತಮಿಳು ಮನ.
ಇದೇ ಕಾರಣಕ್ಕೆ ಬಿಜೆಪಿ ಹಾಡಿಗೆ ಲೈಕ್ಗಳಿಗಿಂತ ಡಿಸ್ಲೈಕ್ಗಳ ಸಂಖ್ಯೆ ಸರಾಸರಿಯಾಗಿ 15 ಪಟ್ಟು ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಕಮೆಂಟ್ಗಳಲ್ಲಿ ಬಿಜೆಪಿ ನಾಯಕರನ್ನು ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಅಲ್ಲಿನ ಸಾಮಾಜಿಕ ಜಾಲತಾನಗಳಲ್ಲಿ ಟ್ರೋಲ್ ಪೇಜ್ಗಳಲ್ಲಿ ಈ ಹಾಡನ್ನು ಎಡೆಬಿಡೆದೆ ಟ್ರೋಲ್ ಮಾಡುವ ಮೂಲಕ ದ್ರಾವಿಡರು ಪ್ರಧಾನಿ ಮೋದಿ ವಿರುದ್ಧದ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕುತ್ತಿದ್ದಾರೆ.
ಆದರೆ, ಈ ಭಾರಿಯಾದರೂ ತಮಿಳುನಾಡಿನಲ್ಲಿ ಶತಾಯಗತಾಯ ಖಾತೆ ತೆರೆಯಲೇಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಪ್ರಚಾರ ಆರಂಭಿಸಿದ್ದ ಬಿಜೆಪಿಗೆ ಹೀಗೊಂದು ಮರ್ಮಾಘಾತವಾಗುತ್ತದೆ ಎಂದು ಸ್ವತಃ ಬಿಜೆಪಿ ನಾಯಕರೇ ಊಹಿಸಿರಲಿಲ್ಲವೇನೋ?