ಮಾತೃಮಂಡಳಿ ರಚನೆ ಪ್ರಸ್ಥಾಪ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಶ್ವಪ್ರಸನ್ನ ತೀರ್ಥಸ್ವಾಮಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಶ್ವಪ್ರಸನ್ ಸ್ವಾಮೀಜಿ ಹೇಳಿದ್ದೇನು : ಶಿವಮೊಗ್ಗ ನಗರದ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಯಜುಃ ಸಂಹಿತಾಯಾಗ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ” ಬ್ರಾಹ್ಮಣ ಹೆಣ್ಣು ಮಕ್ಕಳು ಇತರೆ ಜಾತಿ, ಧರ್ಮದ ಯುವಕರನ್ನು ವರಿಸುತ್ತಿರುವ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ. ಇಂತಹ ಪ್ರಕರಣಗಳ ತಡೆಗೆ ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಳಿ ರಚಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಲಹೆ ನೀಡಿದ್ದರು.
‘ಮನೆಗಳಲ್ಲಿ ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಏನಿದೆ? ಅವರು ಇಂತಹ ಸುಸಂಸ್ಕೃತ ಸಮಾಜ ತೊರೆದು ಬೇರೆ ಸಮಾಜದ ಯುವಕರನ್ನು ವರಿಸಲು ಕಾರಣಗಳೇನು? ಎನ್ನುವ ಅಂಶಗಳನ್ನು ಮಾತೃಮಂಡಳಿ ಮೂಲಕ ಅರಿಯಬೇಕಿದೆ. ಮಕ್ಕಳಿಗೆ ಬಾಲ್ಯದಿಂದಲೇ ಲೌಕಿಕ ಶಿಕ್ಷಣದ ಜತೆಗೆ ಧಾರ್ಮಿಕ ಸಂಸ್ಕಾರ ಕಲಿಸಬೇಕಿದೆ. ಗಣನೀಯವಾಗಿ ಇಳಿಕೆಯಾಗುತ್ತಿರುವ ಬ್ರಾಹ್ಮಣರ ಜನಸಂಖ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕರೆ ನೀಡಿದ್ದರು.
ಈ ಸಲಹೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟುಜನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ? ಯಾರೆಲ್ಲ ಏನು ಹೇಳಿದ್ದಾರೆ ಸಂಪೂರ್ಣ ಅಭಿಪ್ರಯಾಗಳು ಈ ಕೆಳಗೆ ಇವೆ.
ದಿನೇಶ್ ಅಮೀನ್ ಮಟ್ಟು, (ಹಿರಿಯ ಪತ್ರಕರ್ತರು) : ಮಾತೃಮಂಡಳಿ ರಚನೆ ಅಲ್ಲ, ವಿಶ್ವಪ್ರಸನ್ನತೀರ್ಥ ಸ್ವಾಮಿ ತಮ್ಮೆಲ್ಲ ಪ್ರಭಾವ ಬಳಸಿಕೊಂಡು ಬ್ರಾಹ್ಮಣ ಯುವತಿಯರು ಬೇರೆ ಜಾತಿ ಯುವಕರನ್ನು ಮದುವೆಯಾಗುವುದನ್ನು ತಡೆಯಲು ಕಾನೂನು ರಚನೆಯಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಪ್ರಸನ್ನತೀರ್ಥರ ಜಾತಿ ಪಾವಿತ್ರ್ಯವನ್ನು ರಕ್ಷಿಸಿದಾಗೂ ಆಗುತ್ತೆ, ಇತರ ಜಾತಿಗಳ ಬಡಪಾಯಿ ಯುವತಿಯರಿಗೆ ಆಗುತ್ತಿರುವ ಅನ್ಯಾಯವೂ ತಪ್ಪುತ್ತೆ.
ಅಂದಹಾಗೆ ಬ್ರಾಹ್ಮಣ ಯುವತಿಯರು ಬೇರೆ ಜಾತಿಯ ರೈತರು,ಕಾರ್ಮಿಕರು ಸೇರಿದಂತೆ ಆರ್ಥಿಕವಾಗಿ ದುರ್ಬಲವಾಗಿರುವವರನ್ನು ಮದುವೆಯಾಗಿರುವ ಉದಾಹರಣೆಗಳಿದೆಯೇ? ಐಎಎಸ್,ಐಪಿಎಸ್, ಯುಜಿಸಿ ವೇತನದಾರರು ಮತ್ತಿತರರನ್ನು ಮದುವೆಯಾಗಿರುವವರ ಪಟ್ಟಿ ಬೇಕಿದ್ದರೆ ಕೊಡಬಹುದು.
ಈ ಸ್ವಾಮಿಯ ಗುರುಗಳ ಜೊತೆ ಜಗಳವಾದರೂ ಆಡಬಹುದಿತ್ತು. ಅವರು ಲಂಗೋಟಿಯನ್ನಾದರೂ ಧರಿಸಿದ್ದರು..ಈ ಸ್ವಾಮಿ ಎಲ್ಲವನ್ನೂ…!? ಎಂದು ಪ್ರಶ್ನಿಸಿದ್ದಾರೆ.
ಬಿ.ಆರ್. ಮಂಜುನಾಥ್ (ಚಿಂತಕರು) : ಅಷ್ಟು ಮಾಡಿದರೆ ಸಾಕೆ! ಉತ್ತರ ಕನ್ನಡದಲ್ಲಿ ಹಳ್ಳಿಗಳಲ್ಲಿರುವ ಕೃಷಿಕ ಹುಡುಗರಿಗೆ ಹೆಣ್ಣು ಸಿಗದೆ ಯಾವ ಯಾವ ರಾಜ್ಯದಿಂದಲೋ ಜಾತಿಯಿಂದಲೋ ವಧುಗಳ ಆಮದಾಗುತ್ತಿದೆ ಎಂದು ಆ ಸಮುದಾಯದ ಗೆಳೆಯರೇ ಹೇಳಿದ್ದರು! ಈಗ ಶ್ರೀ ಗಳು ಅರ್ಜೆಂಟಾಗಿ ಕುಲಸ್ತರಾದ ವಯಸ್ಕ ಹೆಣ್ಣುಗಳನ್ನು ಉತ್ಪಾದಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಭಕ್ತಾದಿಗಳು ಒತ್ತಾಯಿಸಬೇಕಾಗಿದೆ!
ದಿನೇಶ್ ಕುಮಾರ, ಕನ್ನಡಪರ ಹೋರಾಟಕಗಾರ: ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿಗಳ ಗಂಡುಮಕ್ಕಳನ್ನು ಮದುವೆಯಾಗುವುದನ್ನು ತಡೆಯಲು ಮಾತೃಮಂಡಳಿ ರಚನೆ ಮಾಡುವ ಮಾತುಗಳನ್ನು ಆಡಿದ್ದಾರೆ ಬ್ರಾಹ್ಮಣ ಮಠದ ಸ್ವಾಮಿಯೊಬ್ಬರು. ಬ್ರಾಹ್ಮಣೇತರರಿಗೆ ಇದರಿಂದ ಸಮಸ್ಯೆಯೇನೂ ಇಲ್ಲ. ಸಮಸ್ಯೆ ಇರುವುದು, ಬ್ರಾಹ್ಮಣ ಹೆಣ್ಣುಮಕ್ಕಳಿಗೆ. ಧ್ವನಿ ಎತ್ತಿ ಮಾತಾಡಬೇಕಿರುವುದು ಅವರು. ಸೂಕ್ಷ್ಮವಾಗಿ ಆ ಹೇಳಿಕೆ ಗಮನಿಸಿ ನೋಡಿ. ಬ್ರಾಹ್ಮಣ ಗಂಡು ಮಕ್ಕಳು ಅಂತರ್ಜಾತಿ ವಿವಾಹವಾಗುವುದರ ಕುರಿತು ಸ್ವಾಮಿಗೇನೂ ಸಮಸ್ಯೆ ಇದ್ದಂತಿಲ್ಲ. ಅವರ ಟಾರ್ಗೆಟ್ ಬ್ರಾಹ್ಮಣ ಹೆಣ್ಣುಮಕ್ಕಳು ಮಾತ್ರ.
ಕುಟುಂಬದ ಹಿರಿಯರನ್ನು ಒಳಗೊಂಡ ಮಾತೃಮಂಡಲಿ ರಚಿಸಬೇಕು ಎಂಬ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ ಎಂದರೆ ಅದರರ್ಥ ಹೆಣ್ಣುಮಕ್ಕಳನ್ನು ಹೆತ್ತ ಪೋಷಕರನ್ನು ಒಂದು ವೇದಿಕೆಗೆ ತರುತ್ತಿದ್ದಾರೆ ಮತ್ತು ಅಲ್ಲಿ ಅವರನ್ನು ಕಟ್ಟುಪಾಡುಗಳಡಿ ಕಟ್ಟಿಹಾಕಲು ಸಜ್ಜಾಗಿದ್ದಾರೆ. ನಂತರದ ಹಂತ, ಒಂದು ಸಾಮಾನ್ಯ ನಿಯಮಾವಳಿಗಳನ್ನು ರೂಪಿಸುವುದು. ಅಲ್ಲಿಗೆ ಒಂದು ಮಾರಲ್ ಪೊಲೀಸಿಂಗ್ ತಂಡವೂ ಸಜ್ಜಾಗಿ ನಿಲ್ಲುತ್ತದೆ. ಮದುವೆಯಾಗದೆ ಉಳಿದ ಮಕ್ಕಳನ್ನು ಇಂಥವರಿಗೇ ಕೊಟ್ಟು ಮದುವೆ ಮಾಡಿ ಎಂಬ ಒತ್ತಡವೂ ಶುರುವಾಗುತ್ತದೆ. ಅಲ್ಲಿ ಹುಡುಗಿಯ ಆಯ್ಕೆ ನಗಣ್ಯವಾಗುತ್ತದೆ. ಕೊನೆಗೆ ಹೆಣ್ಣುಹೆತ್ತ ಬಡ ಪೋಷಕರು ಮಾತೃಮಂಡಳಿಯ ಆದೇಶದಂತೆ ಅವರಿಗಿಷ್ಟವಿಲ್ಲದ ವರ ಸಿಕ್ಕರೂ ಮದುವೆ ಮಾಡಿಕೊಡಬೇಕಾಗುತ್ತದೆ. ಅದಕ್ಕಾಗಿ ಒಂದು ಸುಳ್ಳು ಆರೋಪ ಸಿಕ್ಕರೂ ಸಾಕು. ನಿಮ್ಮ ಹುಡುಗಿ ಅದ್ಯಾರೋ ಒಕ್ಕಲಿಗರ ಹುಡುಗನ ಜತೆ ಅಥವಾ ಇನ್ಯಾವುದೋ ಜಾತಿ ಹುಡುಗನ ಓಡಾಡುತ್ತಿದ್ದಳು ಎಂಬ ಪುಕಾರು ಎಬ್ಬಿಸಿದರೆ ಸಾಕಲ್ಲವೇ?
ಮದುವೆ ಆಗದೇ ಉಳಿದಿರುವ ಬ್ರಾಹ್ಮಣ ಗಂಡು ಮಕ್ಕಳಿಗೆ ಬೇರೆ ಜಾತಿಯ ಹೆಣ್ಣುಗಳನ್ನು ತಂದು ಮದುವೆ ಮಾಡ್ತಿದಾರೆ. ಅದರ ಬಗ್ಗೆ ಈ ಸ್ವಾಮಿ ಏನೂ ಹೇಳ್ತಿಲ್ಲ. ಗಂಡು ಮಕ್ಕಳಿಗೆ ಅಂತರ್ಜಾತಿ ವಿವಾಹವನ್ನು ಮಾಡಿಸಬಹುದು. ಹೆಣ್ಣು ಮಕ್ಕಳು ಅಂತರ್ಜಾತಿ ವಿವಾಹ ಆಗುವಂತಿಲ್ಲ. ಇಷ್ಟೇ ಮಾತೃಮಂಡಳಿಯ ಒನ್ ಲೈನ್ ಅಜೆಂಡಾ.
ನಾ ದಿವಾಕರ, ಹಿರಿಯ ಪತ್ರಕರ್ತರು: ಮಾತೆ ಅಥವಾ ಮಾತೃ ಈ ಪದದ ಮೂಲ ಧಾತು ಪ್ರೀತಿ ವಾತ್ಸಲ್ಯ ಮತ್ತು ಸ್ನೇಹ. ಮಾತೃ ಮಂಡಳಿ ಎಂದರೆ ಸಮಾಜದಲ್ಲಿ ಮನುಜ ಸಂವೇದನೆಯನ್ನು ಗಟ್ಟಿಗೊಳಿಸುವ ಸೇತುವೆ ಆಗಬೇಕು. ಮಾತೃ ಮಂಡಳಿ ಮಾನವ ಸಮಾಜದ ಎಲ್ಲ ತಾರತಮ್ಯ, ಅಸಮಾನತೆಗಳನ್ನೂ ತೊಡೆದುಹಾಕುವ ವೇದಿಕೆಯಾಗಬೇಕು. ಮಾತೃ ಮಂಡಳಿ ಮನುಕುಲವನ್ನು ಬಂಧಿಸುವ ವಾತ್ಸಲ್ಯದ ಸರಪಳಿ ಆಗಬೇಕು. ಮಾತೃ ಮಂಡಳಿ ಭಾರತೀಯ ಸಮಾಜದ ಅನಿಷ್ಟ ಜಾತಿ ದೌರ್ಜನ್ಯವನ್ನು ಹೋಗಲಾಡಿಸುವ ಪ್ರೀತಿಯ ಸೆಲೆ ಆಗಬೇಕು. ಮಾತೃ ಮಂಡಳಿ, ಶತಮಾನಗಳ ಅಸಮಾನತೆಯನ್ನು ಅಸ್ಪೃಶ್ಯತೆಯ ಪಿಡುಗನ್ನು ಕೊನೆಗೊಳಿಸುವ ಮನುಜ ಪ್ರೀತಿಯ ಆಶ್ರಯತಾಣ ಆಗಬೇಕು. ಮಾತೃ ಮಂಡಳಿ, ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಾ ನಿತ್ಯ ಅತ್ಯಾಚಾರಕ್ಕೆ ಗುರಿಯಾಗುತ್ತಿರುವ ಸ್ತ್ರೀ ಸಂಕುಲದ ರಕ್ಷಣಾ ಕೋಟೆ ಆಗಬೇಕು. ಮಾತೃ ಮಂಡಳಿ , ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾಗುತ್ತಿರುವ ಮಹಿಳಾ ಸಂಕುಲದ ಸಾಂತ್ವನದ ನೆಲೆಯಾಗಬೇಕು. ಆಗಲೇ ಮಾತೆ ಎಂಬ ಪದ ಅರ್ಥಪೂರ್ಣವಾಗುತ್ತದೆ.
ಇಂತಹ ಒಂದು ಮಾನವೀಯ ನೆಲೆಯ ಸಂವೇದನಾಶೀಲ, ಉದಾತ್ತ ಮೌಲ್ಯಗಳ “ಮಾತೃಮಂಡಳಿ ” ಸ್ಥಾಪಿಸುವ ಅರ್ಹತೆಯೇ ಇಲ್ಲದ ಪೇಜಾವರರು ಬ್ರಾಹ್ಮಣ ಹೆಣ್ಣುಮಕ್ಕಳನ್ನು ಅಂತರ್ಜಾತಿ ವಿವಾಹದಿಂದ ‘ ರಕ್ಷಿಸಲು ‘ ಮಾತೃ ಮಂಡಳಿ ರಚಿಸಲು ಕರೆ ನೀಡಿರುವುದು ಸ್ತ್ರೀ ಸಂಕುಲಕ್ಕೆ ಮಾಡುವ ಅಪಚಾರ. ಪಿತೃಪ್ರಧಾನ ವ್ಯವಸ್ಥೆಯ ಸಂರಕ್ಷಕರಾಗಿ, ಬ್ರಾಹ್ಮಣ ಪುರುಷರ ಸ್ವಾತಂತ್ರ್ತಕ್ಕೆ ಅಡ್ಡಿಯಾಗಲು ಇಚ್ಚಿಸದ ಕರ್ಮಠರು ಮಹಿಳೆಯರನ್ನು ಮತ್ತಷ್ಟು ದಿಗ್ಬಂಧನಕ್ಕೊಳಪಡಿಸಲು ಮುಂದಾಗಿರುವುದು ಅಚ್ಚರಿಯೇನಲ್ಲ.
ಬ್ರಾಹ್ಮಣ ಹೆಣ್ಣು ಮಕ್ಕಳು ಸುಸಂಸ್ಕೃತ ಸಮಾಜವನ್ನು ತೊರೆದು ಬೇರೆ ಸಮಾಜದ ಯುವಕರನ್ನು ವರಿಸುವುದನ್ನು ತಡೆಗಟ್ಟುವುದು ಪೇಜಾವರರ ಉದ್ದೇಶ. ತಮ್ಮ ಕಲ್ಪಿತ ಹಿಂದೂ ರಾಷ್ಟ್ರದಲ್ಲಿ ಎರಡು ಸಮಾಜಗಳಿರುವುದನ್ನು ತಾವೇ ಒಪ್ಪಿಕೊಂಡಂತಿದೆ. ಹಾಗೆಯೇ ಗೋಲ್ವಾಲ್ಕರ್ ಕನಸಿನ ಹಿಂದೂ ರಾಷ್ಟ್ರದ ಸಾಂಸ್ಕೃತಿಕ ಶ್ರೇಷ್ಠತೆ, ಅಂದರೆ ಬ್ರಾಹ್ಮಣ್ಯದ ಪಾರಮ್ಯವನ್ನು ಸಂರಕ್ಷಿಸುವ ಯೋಜನೆಯೂ ಪೇಜಾವರರ ಮಾತುಗಳಲ್ಲಿ ಅಡಗಿದೆ. ಇದು ಕೇವಲ ಪೇಜಾವರರ ಧ್ವನಿಯಷ್ಟೇ ಅಲ್ಲ, ಇದರ ಮೂಲ ನಾಗಪುರದಲ್ಲಿದೆ. ಅಧಿಕಾರ ರಾಜಕಾರಣದ ಮೋಹಕ್ಕೆ ಬಲಿಯಾಗಿ ಇಂತಹ ಕರ್ಮಠರ ಮಾತುಗಳನ್ನೂ ವಿರೋಧಿಸಲಾಗದೆ ಇರುವವರು ಇನ್ನಾದರೂ ನಿದ್ದೆಯಿಂದ ಏಳಬೇಕು. ಮಾತೆಯರಲ್ಲೂ ತಾರತಮ್ಯ ಮಾಡಲು ತಮ್ಮದೇ ಆದ ಸಾಂಪ್ರದಾಯಿಕ ಅಸ್ತ್ರಗಳನ್ನು, ಮಾರ್ಗಗಳನ್ನು ಬಳಸುವ ಪೇಜಾವರರಂತಹ ಕರ್ಮಠರಿಗೆ ” ಮಾತೃ ಮಂಡಳಿ ” ರಚಿಸುವ ನೈತಿಕ ಅರ್ಹತೆ ಇದೆಯೇ ?