ಆಂದ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ, ವೈಎಸ್ಆರ್ ಕಾಂಗ್ರೆಸ್ ಭರ್ಜರಿ ಗೆಲುವು

ಅಮರಾವತಿ: ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಫ‌ಲಿತಾಂಶ ಭಾನುವಾರ ಹೊರಬಿದ್ದಿದ್ದು ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದೆ.

ಎಲ್ಲಾ 11 ನಗರಸಭೆಗಳನ್ನು ಗೆದ್ದಿರುವ ಪಕ್ಷ, 71 ಪಟ್ಟಣ ಪಂಚಾಯ್ತಿಗಳಲ್ಲಿ 69ರಲ್ಲಿ ಅಧಿಕಾರ ಗದ್ದುಗೆಯೇರುವಲ್ಲಿ ಸಫ‌ಲವಾಗಿದೆ. ಅದರಲ್ಲೂ ವಿಶೇಷವಾಗಿ, ಪ್ರಮುಖ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು ನಗರಗಳಲ್ಲಿ ಅಧಿಕಾರಕ್ಕೆ ಬಂದಿರುವುದು ಪ್ರಮುಖ ವಿಪಕ್ಷವಾದ ತೆಲುಗುದೇಶಂ ಪಾರ್ಟಿಗೆ (ಟಿಡಿಪಿ) ತೀವ್ರ ಮುಖಭಂಗವಾಗಿದೆ.
ತಾಡಪತ್ರಿ ಹಾಗೂ ಮೈಡುಕೂರ್‌ ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ಉಂಟಾಗಿದೆ. ಅಲ್ಲಿ ಟಿಡಿಪಿ ಉತ್ತಮ ಸ್ಥಾನ ಗಳಿಸಿದ್ದರೂ, ಎರಡನೇ ಗರಿಷ್ಠ ಸ್ಥಾನ ಹೊಂದಿರುವ ವೈಎಸ್‌ಆರ್‌ ಪಕ್ಷವೇ ಇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರಕ್ಕೇರುವ ಸಾಧ್ಯತೆಗಳು ದಟ್ಟವಾಗಿವೆ. ಅದು ಸಾಧ್ಯವಾದರೆ, ಆಂಧ್ರದ ಎಲ್ಲಾ ನಗರಸಭೆಗಳಲ್ಲಿ ಟಿಡಿಪಿ ಅಧಿಕಾರದಿಂದ ದೂರ ಉಳಿಯಬೇಕಾಗುತ್ತದೆ.

75 ಮುನ್ಸಿಪಾಲಿಟಿಗಳ 2,122 ವಾರ್ಡ್‌ಗಳಲ್ಲಿ 1,754 ವಾರ್ಡ್‌ಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಟಿಡಿಪಿ 270 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ 8, ಜನ ಸೇನಾ ಪಕ್ಷ 19, ಸಿಪಿಐಎಂ 01 ಇತರ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು 70 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

‘ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರ ನಾಯಕತ್ವದಲ್ಲಿ ಜನರು ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಕಳೆದ 22 ತಿಂಗಳಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ. ಹೀಗಾಗಿ, ಮತದಾರರು ಬೆಂಬಲಿಸಿದ್ದಾರೆ’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ತಿಳಿಸಿದೆ.

‘ಮೂರು ರಾಜಧಾನಿಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರಕ್ಕೂ ಜನರು ಮತದಾನದ ಮೂಲಕ ಬೆಂಬಲಿಸಿದ್ದಾರೆ’ ಎಂದು ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *