2016 ರಿಂದ 2020 ರ ನಡುವೆ 405 ಎಂ.ಎಲ್.ಎ. ಗಳು ಮತ್ತು 38 ಎಂ.ಪಿ.ಗಳು ಪಕ್ಷಾಂತರ ಮಾಡಿದ್ದಾರೆ. ಇವರಲ್ಲಿ 189 ಶಾಸಕರು, ಅಂದರೆ 44.9% ಮಂದಿ ಬಿಜೆಪಿ ಸೇರಿದ್ದಾರೆ. 16 ರಾಜ್ಯಸಭಾ ಸದಸ್ಯರಲ್ಲಿ 10 ಮಂದಿ ಬಿಜೆಪಿಗೆ ಪಕ್ಷಾಂತರ ಮಾಡಿದರು, ಅಂದರೆ 61.2 %. ಆದರೆ ಪಕ್ಷಾಂತರ ಮಾಡಿದ 12 ಲೋಕಸಭಾ ಸದಸ್ಯರಲ್ಲಿ ಐವರು ಬಿಜೆಪಿ ಬಿಟ್ಟರು, ಒಬ್ಬರು ಬೇರೆಪಕ್ಷ ದಿಂದ ಬಿಜೆಪಿ ಸೇರಿದರು.
ಇದು ಮಾರ್ಚ್ 11 ರಂದು ಎ.ಡಿ.ಆರ್.(ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್- ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘ) ಬಿಡುಗಡೆ ಮಾಡಿದ ಅಧ್ಯಯನದಲ್ಲಿ ಹೊರಬಿದ್ದಿರುವ ಕೆಲವು ಸಂಗತಿಗಳು.
ಪಕ್ಷಾಂತರ ಮಾಡಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಮತ್ತೆ ತಮ್ಮ ಹೊಸಪಕ್ಷದಿಂದ ಚುನಾವಣೆಗೆ/ಮರು ಚುನಾವಣೆಗೆ ನಿಲ್ಲುವುದು ಈಗ ಕಾಣುತ್ತಿರುವ ಹೊಸಪ್ರವೃತ್ತಿ. ಹೀಗೆ ತಮ್ಮ ಹೊಸ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದವರಲ್ಲಿ 225 ಮಂದಿ, ಅಂದರೆ 52% ದಷ್ಟು ಮತ್ತೆ ಗೆದ್ದು ಬಂದಿದ್ದಾರೆ, 48% ಮಂದಿ ಸೋತಿದ್ದಾರೆ.
ಗಮನಾರ್ಹ ಸಂಗತಿಯೆಂದರೆ ಮರುಚುನಾವಣೆಗಳಿಗೆ ನಿಂತ 49 ಪಕ್ಷಾಂತರಿಗಳಲ್ಲಿ 39 ಮಂದಿಗೆದ್ದು ಬಂದರು , ಅಂದರೆ 81%, ಆದರೆ ನಿಯಮಿತ ಚುನಾವಣೆಗಳಲ್ಲಿ ಸ್ಪರ್ಧಿಸಿದ 357 ಪಕ್ಷಾಂತರಿಗಳಲ್ಲಿ ಮತ್ತೆ ಗೆದ್ದು ಬಂದವರು 170, ಅಂದರೆ 48%. ಅಂದರೆ ಅರ್ಧಕ್ಕಿಂತ ಕಡಿಮೆ.
ಕರ್ನಾಟಕವಲ್ಲದೆ ಗೋವಾ, ಮಧ್ಯಪ್ರದೇಶ, ಮಣಿಪುರ, ಅರುಣಾಚಲ ಪ್ರದೇಶದ ಸರಕಾರಗಳು ಈ ಪಕ್ಷಾಂತರಗಳಿಂದಾಗಿ ಪತನಗೊಂಡು ಹೆಚ್ಚಿನ ಕಡೆಗಳಲ್ಲಿ ಬಿಜೆಪಿಯ ,ಅಥವ ಅದು ಸೇರಿರುವ ಸರಕಾರಗಳು ಬಂದವು ಮತ್ತು ಚುನಾವಣೆಗಳಲ್ಲಿ ಯಾರೇಗೆಲ್ಲಲಿ, ಸರಕಾರ ಮಾತ್ರ ಜೆಪಿಯದ್ದೇ ಎಂಬ ಘೋಷಣೆ ಮೂಡಿ ಬಂದಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.
ಪಕ್ಷಾಂತರ ಮಾಡಿದ 405 ಶಾಸಕರಲ್ಲಿ 170 (42%) ಕಾಂಗ್ರೆಸ್ ನಿಂದ ಆರಿಸಿ ಬಂದಿದ್ದವರು ;18 (ಅಂದರೆ 4.4.%) ಮಾತ್ರ ಬಿಜೆಪಿ ಯಿಂದ ಆರಿಸಿ ಬಂದವರು. ಕಾಂಗ್ರೆಸ್ ಸೇರಿದ ಪಕ್ಷಾಂತರಿಗಳ ಸಂಖ್ಯೆ 38 (9.4%) ಮಾತ್ರ.
ಕಳೆದ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಪಕ್ಷಾಂತರ ಮಾಡಿದ 12 ಸದಸ್ಯರಲ್ಲಿಎಲ್ಲರೂ ಸೋತರೆ, 16 ರಾಜ್ಯ ಸಭಾ ಸದಸ್ಯರಲ್ಲಿ ಎಲ್ಲರೂ ಗೆದ್ದಿದ್ದಾರೆ! ಇವರನ್ನುಆರಿಸುವವರು ಶಾಸಕರುತಾನೇ?
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಪಕ್ಷಾಂತರ ಮಾಡಿ ಚುನಾವಣೆಗಳಲ್ಲಿ ಸ್ಪರ್ಧಿಸಿದ ಎಂ.ಎಲ್.ಎ. ಮತ್ತುಎಂ.ಪಿ.ಗಳ ಘೋಷಿತ ಆಸ್ತಿಗಳಲ್ಲಿ 39% ಏರಿಕೆಯಾಗಿದೆ!
ಒಟ್ಟಿನಲ್ಲಿ, ತಾವೊಂದು ಭಿನ್ನಸ್ವರೂಪದ ಪಕ್ಷ ಎನ್ನುತ್ತಿದ್ದವರ ‘ಅಚ್ಛೇದಿನ್’ಗಳಲ್ಲಿ ಜನಗಳ ಸಾರ್ವಜನಿಕ ಹಿತಗಳಿಗಿಂತ ರಾಜಕಾರಣಿಗಳ ಖಾಸಗಿ ಹಿತಗಳ, ಹಣಬಲ ಮತ್ತುಅಧಿಕಾರ ದಾಹದ ಕೈಮೇಲಾಗಿದೆ, ನಮ್ಮ ಸಂಸದೀಯ ಪ್ರಜಾಪ್ರಭುತ್ವದ ನೈತಿಕ ಮಟ್ಟಇಳಿಯುತ್ತಿದೆ ಎಂದು ಎ.ಡಿ.ಆರ್ ಟಿಪ್ಪಣಿ ಮಾಡಿದೆ.
ಕರ್ನಾಟಕದಲ್ಲಿ ಪಕ್ಷಾಂತರ ಮಾಡಿ, ಸರಕಾರ ಉರುಳಿಸಿ ಮಂತ್ರಿಗಿರಿ ಗಿಟ್ಟಿಸಿ ಕೊಂಡವರ ಸಿ.ಡಿ. ಪ್ರಕರಣದ ಸುತ್ತಮುತ್ತಲಿನ ಬೆಳವಣಿಗೆಗಳು ಇದಕ್ಕೊಂದು ಉದಾಹರಣೆ.