ಡೆಹ್ರಾಡೂನ್: ಉತ್ತರಾಖಂಡ್ ನ ಆಡಳಿತರೂಢ ಪಕ್ಷ ಬಿಜೆಪಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವುದಕ್ಕಾಗಿ ಹಾಲಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.
ಮಾ.07 ರಂದು ಗೈರ್ಸೇನ್ ನಲ್ಲಿ ಬಜೆಟ್ ಅಧಿವೇಶನದ ಸಮಯದಲ್ಲಿ ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದ್ದು ಸರ್ಕಾರದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿತ್ತು. ಈ ಬೆನ್ನಲ್ಲೇ ತ್ರಿವೇಂದ್ರ ಸಿಂಗ್ ರಾವತ್ ಮಾ.09 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡ ದುರಂತ; ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ, ಮುಂದುವರೆದ ಶೋಧ ಕಾರ್ಯಚರಣೆ
ಉತ್ತರಾಖಂಡ್ ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಾವಧಿ ಪೂರ್ಣಗೊಳಿಸುವುದಕ್ಕೆ ಇನ್ನೂ ಒಂದು ವರ್ಷ ಬಾಕಿ ಇರುವಾಗ ನಾಯಕತ್ವದ ಬದಲಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಶಾಸಕರು ತ್ರಿವೇಂದ್ರ ಸಿಂಗ್ ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದರು ಈ ಸಂಬಂಧ ಮಾ.08 ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು.
2017 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಆಡಳಿತಕ್ಕೇರಿದ್ದ ಬಿಜೆಪಿ 69 ಸಂಖ್ಯಾಬಲ ಇರುವ ವಿಧಾನಸಭೆಯಲ್ಲಿ 57 ಸ್ಥಾನಗಳನ್ನು ಗೆದ್ದಿತ್ತು.
ಉತ್ತರಖಂಡ ಬಿಜೆಪಿ ಶಾಸಕರು ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ಆಡಳಿತದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಹೈಕಮಾಂಡ್ಗೆ ದೂರು ನೀಡಿದ್ದರು. ಹಲವು ಸಚಿವರು ಹಾಗೂ ಶಾಸಕರು ರಾವತ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಪಕ್ಷ ಹಾಗೂ ಸರ್ಕಾರ ಅಪಾಯಕ್ಕೆ ಸಿಲುಕುವ ಮೊದಲು ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.
ತ್ರೀವೇಂದ್ರ ಸಿಂಗ್ ರಾವತ್ ರಾಜೀನಾಮೆಯಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಧನ್ ಸಿಂಗ್ ಆಗಮಿಸುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಬಿಜೆಪಿ ಪಕ್ಷ ಬುಧವಾರ(ಮಾ.10) ಬೆಳಗ್ಗೆ 11 ಗಂಟೆ ಸಭೆ ಕರೆದಿದೆ. ಇಂದಿನ ಬೆಳವಣಿಗೆ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.