ಬೆಂಗಳೂರು: ಇದು ನಕಲಿ ಸಿಡಿ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ನಾನು ಅಪರಾಧಿಯಲ್ಲ, ನಿರಪರಾಧಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ.
ಸಿ.ಡಿ ಪ್ರಕರಣದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದರು. ಇಂದು ಬೆಂಗಳೂರಿನಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ “ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ದಯವಿಟ್ಟು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ. ಸಿ.ಡಿಗೆ 20 ಕೋಟಿ ರೂ ಖರ್ಚು ಮಾಡಲಾಗಿದೆ. ಯಶವಂತಪುರ ಮತ್ತು ಹುಳಿಮಾವು ಎರಡು ಕಡೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ”
ಸಿ.ಡಿ ಯಲ್ಲಿರುವ ಯುವತಿಗೆ 5 ಕೋಟಿ ರೂ, ವಿದೇಶದಲ್ಲಿ ಫ್ಲ್ಯಾಟ್ ಕೊಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಷಡ್ಯಂತ್ರ ಮಾಡಿದರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದ್ದಾರೆ.
ಕೇಸ್ ವಾಪಸ್ ಬೆನ್ನಲ್ಲಿ ಪತ್ರಿಕಾಗೋಷ್ಠಿ : ರಮೇಶ್ ಜಾರಕಿಹೊಳಿಯವರು ಮಹಿಳೆಯನ್ನು ಕೆಲಸದ ಆಮಿವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಿ.ಡಿ ಜೊತೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಇತ್ತೀಚೆಗೆ ಕೇಸ್ ವಾಪಸ್ ಪಡೆದಿದ್ದರು.
ಇದರ ಬೆನ್ನಲ್ಲೇ, ಸುದ್ದಿಗೋಷ್ಠಿ ನಡೆಸಿರುವ ರಮೇಶ್ ಜಾರಕಿಹೊಳಿ ನಡೆ ಬಹಳಷ್ಟು ಕುತೂಹಲ ಹಾಗೂ ಅನುಮಾನಗಳನ್ನು ಸೃಷ್ಟಿಸಿದೆ. ಜಾರಕಿಹೊಳಿ ಸಹೋದರರು ರಮೇಶ ರವರನ್ನು ಸಮರ್ಥನೆ ಮಾಡಿಕೊಳ್ಳುತ್ತಲೆ ಬಂದಿದ್ದರು, ಆಗಲೂ ಮಾಧ್ಯಮಗಳ ಕೈಗೆ ರಮೇಶ್ ಸಿಕ್ಕಿರಲಿಲ್ಲ. ಇತ್ತ ಯುವತಿ ನಾಪತ್ತೆಯಾಗಿದ್ದಾಳೆ, ದೂರುದಾರ ದಿನೇಶ್ ದೂರನ್ನು ವಾಪಸ್ಸ ಪಡೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಂತರ ರಮೇಶ್ ಪತ್ರಿಕಾಗೋಷ್ಠಿ ನಡೆಸಿದ್ದು, ಹಣದ ಆಟ, ಮೇಲಾಟ ನಡೆದಿರುವ ಸಾಧ್ಯತೆಗಳು ಇವೆ ಎಂಬ ಗುಸು ಗುಸು ಚರ್ಚೆ ಎಲ್ಲೆಡೆ ಕೇಳಿ ಬರುತ್ತಿದೆ.