ಮಹಾಕವಿ ಸಾಫೋಕ್ಲಿಸ್ ರಚನೆಯ ʻದೊರೆ ಈಡಿಪಸ್ʼ ನಾಟಕವನ್ನು ಕನ್ನಡದಲ್ಲಿ ರಚನೆ / ರೂಪಾಂತರಿಸಿರುವ ಪಿ. ಲಂಕೇಶ್ ರವರ ಜನ್ಮ ದಿನದ ಅಂಗವಾಗಿ ಪ್ರಯೋಗ ರಂಗ, ಬೆಂಗಳೂರು ಪ್ರಸ್ತುತ ಪಡಿಸುತ್ತಿದೆ.
ಶಶಿಧರ್ ಭಾರಿಘಾಟ್ ವಿನ್ಯಾಸ / ನಿರ್ದೇಶನ ಮಾಡಿರುವ ಈ ನಾಟಕವು ಇಂದು (ಮಾರ್ಚ್ 8, 2021) ಸಂಜೆ 7 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನಕ್ಕೆ ಏರ್ಪಡಿಸಲಾಗಿದೆ.
ನಾಟಕದ ಸಾರಾಂಶ:
ʻʻನಮ್ಮಲ್ಲಿ ಸಾವಿಗೆ ಹೇಗೆ ಉತ್ತರವಿಲ್ಲವೋ ಹಾಗೆ ನೋವು, ಮುಪ್ಪುಗಳಿಗೆ ಉತ್ತರವಿಲ್ಲ. ಆಕಸ್ಮಿಕಗಳ ಮೇಲೆ ಕಟ್ಟಿದ್ದು ಬದುಕು. ನಮ್ಮೆಲ್ಲ ಆಶಾವಾದ, ತರ್ಕ, ವೈಭವ, ಮಹತ್ವಾಕಾಂಕ್ಷೆಗಳಿಗೆ ವಿಧಿಯ ಕುಹಕದ ಉತ್ತರ ನೋಡಿ ಮನುಷ್ಯ ವಿಸ್ಮಿತನಾಗುತ್ತಾನೆ. ಇದಕ್ಕಿಂತ ಮುಖ್ಯವಾಗಿ ಭೂಮಿಗೆ ಅಂಟಿಕೊಂಡು ಅಲ್ಲಿಯೇ ತನ್ನ ಮೋಕ್ಷ ಪಡೆಯಲಾಗದ ಮನುಷ್ಯ ತನ್ನ ಹುಟ್ಟು ಮತ್ತು ಅರ್ಥವನ್ನು ಶೋಧಿಸುತ್ತಾ ಹೋಗುತ್ತಾನೆ. ಈ ದೃಷ್ಟಿಯಲ್ಲಿ ʻದೊರೆ ಈಡಿಪಸ್ʼ ನಾಟಕ ಸರ್ವಕಾಲಿಕ ಸಂಕೇತವಾಗಿ ನಮಗೆ ಹತ್ತಿರವಾಗುತ್ತದೆ.ʼʼ
ನಾಟಕದ ಮುಂಚಿತವಾಗಿ ಭಾರತ ಯಾತ್ರಾ ಕೇಂದ್ರ, ಬೆಂಗಳೂರು ಹಾಗೂ ಪ್ರಯೋಗ ರಂಗ, ಬೆಂಗಳೂರು ವತಿಯಿಂದ ಸಂಜೆ 6 ಗಂಟೆಗೆ ʻಲಂಕೇಶ್ 85ʼ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರಾದ ಶ್ರೀ ಟಿ.ಎನ್.ಸೀತಾರಾಮ್ ರವರಿಗೆ ಲಂಕೇಶ್ ಗೌರವ ಪುರಸ್ಕಾರವನ್ನು ನೀಡಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಶ್ರೀ ಎನ್.ಆರ್. ವಿಶು ಕುಮಾರ್, ನಿವೃತ್ತ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಎಂ.ಕೆ. ಭಾಸ್ಕರ್‌ರಾವ್, ಪತ್ರಕರ್ತರು, ಶ್ರೀಮತಿ ಕವಿತಾ ಲಂಕೇಶ್, ಚಲನಚಿತ್ರ ನಿರ್ದೇಶಕರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆ : ಡಾ.ಬಿ.ಎಲ್.ಶಂಕರ್, ಅಧ್ಯಕ್ಷರು, ಕರ್ನಾಟಕ ಚಿತ್ರಕಲಾ ಪರಿಷತ್ತು, ಇವರು ವಹಿಸಲಿದ್ದು, ಶ್ರೀಮತಿ ಇಂದಿರಮ್ಮ ಲಂಕೇಶ್ ಉಪಸ್ಥಿತರಿರುವರು.