ಮಾರ್ಚ್ 5 ರಿಂದ ‘ಎಂ. ಎಸ್.ಪಿ. ದಿಲಾವೋ ಅಭಿಯಾನ್
ಮಾರ್ಚ್ 6-ದಿಲ್ಲಿಯ ಪಶ್ಚಿಮ ವರ್ತುಲ ಎಕ್ಸ್ ಪ್ರೆಸ್ ಹೆದ್ದಾರಿ ಬಂದ್
ಮಾರ್ಚ್ 15- ಖಾಸಗೀಕರಣದ ವಿರುದ್ದ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ
ದೆಹಲಿ : ಮಾರ್ಚ್ 2ರಂದು ಸಭೆ ಸೇರಿದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.)ದ ಸಾಮಾನ್ಯ ಸಭೆ ರೈತರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದೆ. ಕೇಂದ್ರದಲ್ಲಿ ಆಳುವ ಪಕ್ಷದ ಮೇಲೆ ಒತ್ತಡ ತರಲು ವಿಧಾನ ಸಭಾ ಚುನಾವಣೆಗಳು ಘೋಷಿಸಲ್ಪಟ್ಟಿರುವ ಪಶ್ಚಿಮ ಬಂಗಾಲ,ಅಸ್ಸಾಂ, ಕೇರಳ. ತಮಿಳುನಾಡು, ರಾಜ್ಯಗಳಲ್ಲಿ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸಲು ನಿರ್ಧರಿಸಿದೆ.
ಈ ಐದು ಕಡೆಗಳಿಗೆ ಎಸ್.ಕೆ.ಎಂ ತಂಡಗಳನ್ನು ಕಳಿಸಲಾಗುತ್ತದೆ. ಇವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಆದರೆ ಮೋದಿ ಸರಕಾರ ರೈತರೊಂದಿಗೆ ನ್ಯಾಯಯುತವಾಗಿ ವರ್ತಿಸುತ್ತಿಲ್ಲವಾದ್ದರಿಂದ ಅದರ ವಿರುದ್ಧ ಪ್ರಚಾರ ಮಾಡಲಾಗುವುದು, ರೈತರ ಹೋರಾಟದ ವಿರುದ್ಧ ಅದರ ಅಪಪ್ರಚಾರಕ್ಕೆ ಪ್ರತ್ಯುತ್ತರ ಕೊಡಲಾಗುವುದು ಎಂದು ಎಸ್.ಕೆ.ಎಂ. ಮುಖಂಡರು ಹೇಳಿದ್ದಾರೆ. ಮಾರ್ಚ್ 12ರಂದು ಕೊಲ್ಕತಾದಲ್ಲಿ ನಡೆಯಲಿರುವ ರೈತರ ರ್ಯಾಲಿಯಲ್ಲಿ ಎಸ್.ಕೆ.ಎಂ. ಮುಖಂಡರು ಭಾಗವಹಿಸುತ್ತಾರೆ.
ಇದಕ್ಕೆ ಮೊದಲು ಮಾರ್ಚ್ 5ರಂದು ಎಂ.ಎಸ್.ಪಿ. ದಿಲಾವೋ ಅಭಿಯಾನ್( ಎಂ.ಎಸ್.ಪಿ. ಪ್ರಚಾರಾಂದೋಲನ) ಆರಂಭಿಸಲಾಗುವುದು. ಇದು ಬೆಂಗಳೂರಿನಿಂದ ಆರಂಭವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಹೋಗುತ್ತದೆ.
ಮಾರ್ಚ್ 6 ರಂದು ಮೂರು ಕಾಯ್ದೆಗಳ ರದ್ಧತಿಗೆ ಆಗ್ರಹಿಸುವ ‘ದಿಲ್ಲಿ ಚಲೋ’ ಹೋರಾಟದ ಭಾಗವಾಗಿ ಸಾವಿರಾರು ರೈತರು ದಿಲ್ಲಿ ಗಡಿಗಳಿಗೆ ತಲುಪಿ ನೂರು ದಿನಗಳಾಗುತ್ತವೆ. ಅಂದು ಪಶ್ಚಿಮ ಪೆರಿಫೆರಲ್ ಹೆದ್ದಾರಿ ಅಥವ ಕುಂಡ್ಲಿ-ಮನೇಸರ್-ಪಲ್ವಲ್ ಎಕ್ಸ್ ಪ್ರೆಸ್ ವೇಯಲ್ಲಿ 11ರಿಂದ 4 ಗಂಟೆಯ ವರೆಗೆ ರಸ್ತೆ ತಡೆ ನಡೆಸಲು ಎಸ್.ಕೆ.ಎಂ. ನಿರ್ಧರಿಸಿದೆ. ದಿಲ್ಲಿಯನ್ನು ಸುತ್ತುವರೆದಿರುವ ಈ ಆರು ಪಥಗಳ ಹೆದ್ದಾರಿ ರೈತರು ಪ್ರತಿಭಟನೆ ಬಡೆಸುತ್ತಿರುವ ಸ್ಥಳಗಳಾದ ಸಿಂಘು, ಟಿಕ್ರಿ ಮತ್ತು ಗಾಜೀಪುರವನ್ನು ಜೋಡಿಸುವಂತದ್ದು. ಅಂದು ದೇಶದ ಇತರ ಭಾಗಗಳಲ್ಲಿ ರೈತ ಹೋರಾಟದ ಬೆಂಬಲಿಗರು ‘ಕಪ್ಪು ದಿನಾಚರಣೆ ನಡೆಸುತ್ತಾರೆ.
ಫೆಬ್ರುವರಿ 27ರಂದು ಕಿಸಾನ್-ಮಜ್ದೂರ್ ಏಕತಾ ದಿನಾಚರಣೆಯ ನಂತರ ರೈತರು ಮತ್ತು ಕಾರ್ಮಿಕರ ಜಂಟಿ ಹೋರಾಟವನ್ನು ಬಲಪಡಿಸಲು ಮಾರ್ಚ್ 1ರಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು 10 ಕೇಂದ್ರೀಯ ಕಾರ್ಮಿಕ ಸಂಘಗಳು ಹಾಗೂ ಅಖಿಲ ಬಾರತ ಒಕ್ಕೂಟಗಳ ಜಂಟಿ ವೇದಿಕೆಯ ಮುಖಂಡರ ಸಭೆ ನಡೆಯಿತು. ಮೂರು ಕಾಯ್ದೆಗಳು ಮತ್ತು ವಿದ್ಯುಚ್ಛಕ್ತಿ ಮಸೂದೆಯ ರದ್ಧತಿ ಎಂಎಸ್‍ಪಿ ಕಾನೂನಿನ ರೈತರ ಬೇಡಿಕೆ ಮತ್ತು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು ಹಾಗೂ ಕಾಸಗೀಕರಣವನ್ನು ನಿಲ್ಲಿಸಬೇಕು ಎಂಬ ಕಾರ್ಮಿಕರ ಬೇಡಿಕೆಗಳ ಮೇಲೆ ಜಂಟಿಯಾಗಿ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಇದರ ಭಾಗವಾಗಿ ಮಾರ್ಚ್ 15 ರಂದು ಕಾರ್ಮಿಕ ಸಂಘಗಳು ನಡೆಸಲಿರುವ ಖಾಸಗೀಕರಣ-ವಿರೋಧಿ ದಿನಾಚರಣೆಗೆ ಬೆಂಬಲ ನೀಡಲು ಎಸ್.ಕೆ.ಎಂ. ನಿರ್ಧರಿಸಿದೆ.