ಅಶ್ಲೀಲ ವಿಡಿಯೊ ಪ್ರಕರಣ : ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ

ಬೆಂಗಳೂರು: ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ಎದುರಿಸುತ್ತಿದ್ದ ರಮೇಶ್ ಜಾರಕಿಹೊಳಿ ಅವರು ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಮುಖ್ಯಂತ್ರಿ ಯಡಿಯೂರಪ್ಪಗೆ ಅವರು ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಸಮಗ್ರ ತನಿಖೆ ನಡೆಸುವಂತೆ ಅವರು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

ಅಶ್ಲೀಲ ದೃಶ್ಯದ ಸಿಡಿ ಬಯಲಿಗೆ ಬಂದ ಬೆನ್ನಲ್ಲೇ ಅಜ್ಞಾತ ಸ್ಖಳಕ್ಕೆ ಹೋಗಿರುವ ರಮೇಶ್ ಜಾರಕಿಹೊಳಿ ಅವರು, ಇಂದು ಸಾಕಷ್ಟು ಚರ್ಚೆಗಳು ರಾಜಕೀಯ ಪ್ರಹಸನದ ಬಳಿಕ ರಾಜಿನಾಮೆ ನೀಡಿದ್ದಾರೆ

ಈ ಘಟನೆಯಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಒಂದೇ ಒಂದು ಕಾರಣದಿಂದಾಗಿ ನನ್ನ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ಪತ್ರದಲ್ಲಿ ರಮೇಶ್ ಜಾರಕಿಹೊಳಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಇನ್ನು ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಯಲು ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾನ ಮರ್ಯಾದೆ ಇದ್ದರೆ ರಾಜಿನಾಮೆ ನೀಡಿ ಎಂದು ಹೇಳಿದ್ದರು. ಇದೇ ವಿಚಾರವಾಗಿ ನೇರವಾಗಿಯೇ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದ ಕುಮಾರಸ್ವಾಮಿ ಅವರು ಅಧಿವೇಶನಕ್ಕೂ ಮುನ್ನವೇ ರಮೇಶ್ ಅವರು ರಾಜಿನಾಮೆ ನೀಡಿದರೆ ಒಳಿತು.. ಇಲ್ಲವಾದಲ್ಲಿ ಅಧಿವೇಶನದಲ್ಲಿ ಈ ಬಗ್ಗೆ ನಾವೇ ವಿಚಾರ ಪ್ರಸ್ತಾಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡಿದ್ದಾರೆ.

ನೆರೆಯ ತಮಿಳುನಾಡು, ಕೇರಳದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಸಂದರ್ಭದಲ್ಲಿ ಬಿಜೆಪಿ ಸಚಿವನ ರಾಸಲೀಲೆಯ ವಿಡಿಯೋ ರಿಲೀಸ್ ಆದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ಸಿಎಂ ಯಡಿಯೂರಪ್ಪನವರಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಲ್ಲಿದ್ದು ಹೈಕಮಾಂಡ್ ನಾಯಕರು ಹಾಗೂ ರಾಜ್ಯ ಬಿಜೆಪಿ ನಾಯಕರ ಮನವೊಲಿಕೆಗೆ ಪ್ರಯತ್ನಿಸಿದ ರಮೇಶ್ ಜಾರಕಿಹೊಳಿ ಕೊನೆಗೂ ವಿಫಲರಾಗಿದ್ದಾರೆ. ಪಕ್ಷಕ್ಕೆ ಉಂಟಾದ ಮುಜುಗರಕ್ಕೆ ನೈತಿಕ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆದರೆ ಬೆಳಗಾವಿ ಉಪಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಜಾರಕಿಹೊಳಿ ಕುಟುಂಬವನ್ನು ಎದುರು ಹಾಕಿಕೊಂಡರೆ ಬೆಳಗಾವಿ ಉಪಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *