ಬೆಂಗಳೂರು: ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಮಂಗಳವಾರ ದೂರು ಸಲ್ಲಿಕೆಯಾಗಿದೆ.
ಸಂತ್ರಸ್ತ ಯುವತಿಯ ಪರವಾಗಿ ದೂರು ಸಲ್ಲಿಸಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ಸಚಿವರು ಯುವತಿಯ ಜತೆ ಏಕಾಂತದಲ್ಲಿ ಇರುವ ವಿಡಿಯೊ ತುಣುಕುಗಳು, ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ಆಡಿಯೊ ತುಣುಕುಗಳ ಸಿ.ಡಿಗಳನ್ನು ಸಲ್ಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಸಚಿವರದ್ದು ಎನ್ನಲಾದ ವಿಡಿಯೊ, ಆಡಿಯೊತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಮೇಶ್ ಜಾರಕಿಹೊಳಿ, ಆರೋಪ ಹೊರಬೀಳುತ್ತಿದ್ದಂತೆ ಯಾರ ಕೈಗೂ ಸಿಗದೆ ಕಾಣೆಯಾಗಿದ್ದರು. ಕೆಲ ಗಂಟೆಗಳ ವರೆಗೆ ಅವರ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು.
ಉತ್ತರ ಕರ್ನಾಟಕ ಮೂಲದ ಬಡ ಕುಟುಂಬದ ಯುವತಿಯೊಬ್ಬರು ಕಿರುಚಿತ್ರವೊಂದರ ನಿರ್ಮಾಣಕ್ಕೆ ನೆರವು ಕೋರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಮಾಡಿದ್ದರು. ನಿನಗೆ ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಬಳಿಕ ಕಾಮತೃಷೆಗಾಗಿ ಬಳಸಿಕೊಂಡಿದ್ದು, ವಂಚಿಸಿದ್ದಾರೆ’ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಆರೋಪಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
‘ಸಚಿವರ ಜತೆಗಿರುವುದನ್ನು ಸಂತ್ರಸ್ತ ಯುವತಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅವರು ಯುವತಿಯ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದರು. ಬಳಿಕ ನನ್ನನ್ನು ಸಂಪರ್ಕಿಸಿದ ಯುವತಿಯ ಕುಟುಂಬದವರು, ವಿಡಿಯೊ ಮತ್ತು ಆಡಿಯೊ ಸಿ.ಡಿಗಳನ್ನು ನೀಡಿದ್ದರು. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ, ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಂತ್ರಸ್ತ ಯುವತಿ ರಕ್ಷಣೆಗೆ ಮುಂದಾಗಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.
ದಿನೇಶ್ ಅವರಿಂದ ದೂರು ಸ್ವೀಕರಿಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ದಿನೇಶ್ ಅವರ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡರು. ಸಚಿವರು ಮತ್ತು ಯುವತಿಗೆ ಸಂಬಂಧಿಸಿದ ವಿಡಿಯೊ, ಆಡಿಯೊ ಸಿ.ಡಿಗಳು ಹೇಗೆ ಲಭ್ಯವಾದವು? ಯಾರು ತಲುಪಿಸಿದರು? ಸಂತ್ರಸ್ತರ ಬದಲು ದೂರು ನೀಡಲು ಬಂದಿದ್ದೇಕೆ? ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ.
ರಾಜಿನಾಮೆಗೆ ಹೆಚ್ಚಿದ ಒತ್ತಡ : ರಮೇಶ್ ಜಾರಿಕಿಹೊಳಿ ಕುರುತು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋದ ವ್ಯಕ್ತವಾಗಿದ್ದು, ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಬೆಳಗಾವಿ ಸೇರಿದಂತೆ ಕೆಲವೆಡೆ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ವಿರೋಧ ಪಕ್ಷದ ನಾಯಕರೂ ಕೂಡ ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಸದನದಲ್ಲಿ ಈ ವಿಚಾರ ಕುರಿತು ಸಾಕಷ್ಟು ಚರ್ಚೆ ನಡೆಯುವ ಸಾಧ್ಯತೆ ಇದ್ದು ಸಿಎಂ ಯಡಿಯೂರಪ್ಪ ಈಗ ಸಂದಿಗ್ಧತೆಗೆ ಸಿಲುಕಿದ್ದಾರೆ.
ಹೈಕಮಾಂಡ್ ಸೂಚನೆ? : ಪಂಚರಾಜ್ಯದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಗೆ ಮುಜುಗರ ಉಂಟಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಚಿವ ರಮೇಶ್ ಜಾರಕಿಹೊಳಿ ರಾಜಿನಾಮೆ ಪಡೆಯುವಂತೆ ಬಿಜೆಪಿ ಹೈಕಮಾಂಡ್ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸೂಚನೆ ನೀಡಿದ್ದಾಗಿ ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ಇಂದು ಮಧ್ಯಾಹ್ನ ರಾಜಿನಾಮೆ ಕೊಡುವ ಸಾಧ್ಯತೆ ಇದೆ ಎಂದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ :
ಸಾರ್ವಜನಿಕ ಜೀವನದಲ್ಲಿರುವ ಸಚಿವರು ನೈತಿಕತೆ ಕಳೆದುಕೊಂಡಿದ್ದಾರೆ. ಹೀಗಾಗಿ ಇಂತಹ ಪ್ರಕರಣವನ್ನು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ .
ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಕುಟುಂಬದ ಸದಸ್ಯರು ಬಂದು ನನ್ನ ಬಳಿ ಮನವಿ ಮಾಡಿದ್ರು, ಕಾನೂನು ಹೋರಾಟ ಮಾಡಿ ಅಂದ್ರು. ಈಗ ನಾನು ಸಂತೃಸ್ತೆಯ ಹೆಸರು ಹೇಳಿದ್ರೆ ತನಿಖೆಗೆ ಹಿನ್ನೆಡೆಯಾಗುತ್ತದೆ. ಆದರೆ ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ಇನ್ನು ರಾಜಕೀಯದ ಬಗ್ಗೆ ನನಗೇನು ಗೊತ್ತಿಲ್ಲ. ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸುತ್ತೇನೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈವೆರೆಗೆ ನಾನು ಸಚಿವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ. ಅಲ್ಲದೇ ನಾನು ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧವೇ ಪ್ರಕರಣವನ್ನು ದಾಖಲಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.