ಕೃಷಿ ಕ್ಷೇತ್ರದ ಮಹಿಳೆಯರ ಕುರಿತ ರಾಷ್ಟ್ರೀಯ ಧೋರಣಾ ಕರಡು(2009) ಅನ್ನು ಅಂಗೀಕರಿಸಿ.
ದೆಹಲಿ : ದೇಶದಾದ್ಯಂತ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಮಾಜದ ಎಲ್ಲಾ ವಿಭಾಗಗಳ ಮಹಿಳೆಯರು ವಿಶೇಷವಾಗಿ ಮಹಿಳಾ ಕೃಷಿಕರು ಹಾಗೂ ಕೃಷಿ ಕೂಲಿಕಾರರು ಅಭೂತಪೂರ್ವ ರೀತಿಯಲ್ಲಿ ಭಾಗವಹಿಸುತ್ತಿರುವುದನ್ನು AIDWA, AIKS ಹಾಗೂ AIAWU ಸಂಘಟನೆಗಳು ಗಮನಿಸಿವೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದಲೂ ಕೃಷಿ ಬಿಕ್ಕಟ್ಟು ನಿರಂತರವಾಗಿ ಮುಂದುವರೆದುಕೊಂಡು ಬಂದಿದೆ. ಕಳೆದ ಐದು ವರ್ಷದಲ್ಲಿ ಕೃಷಿ ಮತ್ತು ಕೃಷಿ ಸಂಭಂದಿತ ವಲಯಗಳಲ್ಲಿ ಸುಮಾರು 72 ಮಿಲಿಯನ್ ಮಹಿಳೆಯರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಸುಮಾರು 4 ಲಕ್ಷ ಪುರುಷ ರೈತರು ಕೃಷಿ ಬಿಕ್ಕಟ್ಟಿನ ಪರಿಣಾಮದಿಂದ ಆತ್ಮಹತ್ಯೆಗೀಡಾಗಿದ್ದರೂ ಸಾಲಮನ್ನಾ ಅಥವಾ ಪುನರ್ವಸತಿ ಪ್ಯಾಕೇಜ್ ಗಳೂ ಅವರ ವಿಧವಾ ಪತ್ನಿಯರಿಗೆ ಇನ್ನೂ ತಲುಪಿಲ್ಲ. ರೈತರು ಹಾಗೂ ಕೃಷಿ ಕೂಲಿಕಾರರು ಎಂದು ಗುರುತಿಸಲ್ಪಡದೇ ಇರುವುದೇ ಸಾಮಾಜಿಕ ಭದ್ರತೆ ಹಾಗೂ ಇನ್ನಿತರ ಸೌಕರ್ಯಗಳ ಲಭ್ಯತೆಯಿಂದ ದೂರ ಉಳಿಯುವಂತಾಗಿದೆ. ಪಿಎಂ ಕಿಸಾನ್ ನಿಧಿ ಅಡಿಯಲ್ಲಿ ಸಿಗುವ ಅಲ್ಪ ಪ್ರಮಾಣದ ಹಾಗೂ ಅಸಮರ್ಪಕ ಆದಾಯ ಬೆಂಬಲ ಪಡೆಯಲೂ ಸಹ ಬಹುತೇಕ ಮಹಿಳೆಯರು ಅರ್ಹರಾಗಿಲ್ಲ.
ಮಹಿಳಾ ರೈತರ ಹಾಗೂ ಕೃಷಿ ಕೂಲಿಕಾರರ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳಿಗೆ ಸರ್ಕಾರದ ಅತ್ಯಲ್ಪ ಪ್ರಮಾಣದ ಪ್ರತಿಕ್ರಿಯೆ ಅತ್ಯಂತ ಅಸಮರ್ಪಕ ವಾಗಿದ್ದು, MNREGA ಮತ್ತು NRLM ಹಾಗೂ Mudra ಯೋಜನೆಗಳೂ ಕುಂಠಿತಗೊಳ್ಳಲು ಕಾರಣವಾಗಿದೆ. ಇದರಿಂದಾಗಿ ಮಹಿಳೆಯರಲ್ಲಿ ಸಾಲಗ್ರಸ್ಥತೆ ಹೆಚ್ಚುತ್ತಿದ್ದು ಅವರು ಸಾಲದ ಸುಳಿಗೆ ನೂಕಲ್ಪಡುತ್ತಿರುವುದನ್ನು ಕಾಣಬಹುದಾಗಿದೆ. ಸಾಲಮನ್ನಾ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದ ಸಾಲ ಒದಗಿಸಬೇಕೆಂಬ ಬೇಡಿಕೆಯನ್ನು ಬಹು ಹಿಂದಿನಿಂದಲೂ ಸರ್ಕಾರಗಳು ನಿರ್ಲಕ್ಷಿಸಿವೆ. ಕಾರ್ಪೊರೇಟ್ ಪ್ರಾಜೆಕ್ಟ್ ಗಳಿಗಾಗಿ ಸಾರ್ವಜನಿಕ ಉಪಯೋಗಿ ಭೂಮಿಗಳನ್ನು ಮಾರುತ್ತಿರುವುದರಿಂದ ಮೇವು ಮತ್ತಿತರ ಅಗತ್ಯ ಗಳಿಗೆ ಅರಣ್ಯ ಹಾಗೂ ಜಲ ಸಂಪನ್ಮೂಲಗಳ ಮೇಲೆ ಪೂರ್ಣವಾಗಿ ಅಥವಾ ಪೂರಕ ಅಗತ್ಯವಾಗಿ ಅವಲಂಬಿಸಿರುವ ಮಹಿಳೆಯರ ಬದುಕು ಶೋಚನೀಯ ಸ್ಥಿತಿಗೆ ತಳ್ಳಲ್ಪಡುತ್ತಿದೆ. ಸಾರ್ವಜನಿಕ ಖರೀದಿ-ದಾಸ್ತಾನು ಹಾಗೂ ಸಾರ್ವಜನಿಕ ಪಡಿತರ ವ್ಯವಸ್ಥೆ (PDS) ದುರ್ಬಲಗೊಳ್ಳುತ್ತಿರುವುದರ ಫಲವಾಗಿ ಮಹಿಳೆಯರು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಬಹು ಬ್ರಾಂಡ್ ನ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿರುವುದು ಹಾಗೂ ಎಪಿಎಂಸಿ ಗಳನ್ನು ದುರ್ಬಲಗೊಳಿಸುತ್ತಿರುವುದು ತರಕಾರಿ, ಹಾಲು, ಮೀನು ಮುಂತಾದ ಚಿಲ್ಲರೆ ಮಾರಾಟದ ಮಹಿಳೆಯರ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ.
ಈ ಹಿನ್ನೆಲೆಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳ ಮೇಲೆ ಗಮನಹರಿಸಬೇಕಾದ ವಿಶೇಷ ಮುತುವರ್ಜಿ ಅಗತ್ಯ ವಾಗಿದ್ದು, 2009 ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ರೂಪಿಸಿದ ಕೃಷಿ ಕ್ಷೇತ್ರದ ಮಹಿಳೆಯರ ಕುರಿತ ಕರಡು ರಾಷ್ಟ್ರೀಯ ಧೋರಣೆಯಲ್ಲಿ ಕೆಲವು ಪರಿಹಾರಗಳನ್ನು ಒದಗಿಸಲಾಗಿದೆ. ಈಗ AIDWA ಅಧ್ಯಕ್ಷರಾಗಿರುವ ಆಗ ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯರಾಗಿದ್ದ ಮಾಲಿನಿ ಭಟ್ಟಾಚಾರ್ಯರವರ ನೇತೃತ್ವದಲ್ಲಿ ಈ ಕರಡು ಸಿದ್ದಗೊಂಡಿದ್ದು ಈ ಸಮಿತಿಯಲ್ಲಿ ಸಂಶೋಧಕರು ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರ ಗಳ ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತರು ಇದ್ದರು.ಇವೆಲ್ಲವೂ ಮಹಿಳೆಯನ್ನು’ ರೈತ’ ಹಾಗೂ ‘ಶ್ರಮಿಕ ‘ ಎಂದು ಗುರುತಿಸುವ ,ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಹಕ್ಕು ; ಆಹಾರ ಹಾಗೂ ಆಹಾರ ಭದ್ರತೆಯ ಹಕ್ಕು; ಬದುಕುವ ಹಾಗೂ ಘನತೆಯ ಕೆಲಸದ ಹಕ್ಕು ಹಾಗೂ ಸಾಲದಿಂದ ಮುಕ್ತಿ ಹಕ್ಕು ಮತ್ತು ನಿಯಂತ್ರಿತ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ಪಡೆಯುವ ಹಕ್ಕು ಎಂಬುದಕ್ಕೆ ಸಂಬಂದಿಸಿದ ಹಕ್ಕುಗಳಾಗಿವೆ .ಈ ಧೋರಣೆಗಳನ್ನು ಅಂತಿಮಗೊಳಿಸಿ ಕೃಷಿ ಮಂತ್ರಾಲಯಕ್ಕೆ ಸಲ್ಲಿಸಲಾಯಿತಾದರೂ ದುರದೃಷ್ಟವಶಾತ್ ಆ ನಂತರದ ಎಲ್ಲಾ ಸರ್ಕಾರಗಳು ಈ ಶಿಫಾರಸ್ಸುಗಳನ್ನು ಕಡೆಗಣಿಸುತ್ತಾ ಬಂದಿವೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕೃಷಿ ಕ್ಷೇತ್ರದ ಮಹಿಳೆಯರ ಕುರಿತ ಕರಡು ರಾಷ್ಟ್ರೀಯ ಧೋರಣೆಗಳನ್ನು ಅಂಗೀಕರಿಸುವ ಮೂಲಕ ಈ ಕೆಲವು ಸವಾಲುಗಳಿಗೆ ಪರಿಹಾರ ತೋರಬಹುದು ಎಂದು AIDWA , AIKS ಹಾಗೂ AIAWU ಸಂಘಟನೆಗಳು ಬಲವಾಗಿ ಪ್ರತಿಪಾದಿಸುತ್ತವೆ. ಮಹಿಳಾ ರೈತರ ಹಾಗೂ ಗ್ರಾಮೀಣ ಶ್ರಮಜೀವಿಗಳ ಉತ್ತಮ ಸ್ಥಿತಿಯನ್ನು ಖಾತ್ರಿಪಡಿಸಲು ಅಗತ್ಯವಾದ ನಿರ್ದಿಷ್ಟ ಬಜೆಟ್ ಅನುದಾನ ಒದಗಿಸುವ ಉದ್ದೇಶದ ಧೋರಣಾ ದಿಕ್ಕನ್ನು ಈ ಕರಡು ಹೇಳುತ್ತದೆ. ಈ ಪ್ರಸ್ತಾಪಿತ ಕ್ರಮಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ.
- ಈ ದೃಷ್ಟಿಯಿಂದ ಭೂ ಸುಧಾರಣೆಯನ್ನು ಜಾರಿಗೊಳಿಸಲು ಹಾಗೂ ಜಂಟಿ ಪಟ್ಟಾ ನೀಡಲು ಅಗತ್ಯವಾದ ವ್ಯಯಕ್ತಿಕ ಮತ್ತು ಸಾಂಪ್ರದಾಯಿಕ ಕಾನೂನುಗಳು ಸೇರಿದಂತೆ ಎಲ್ಲಾ ಕಾನೂನುಗಳಿಗೆ ತಿದ್ದುಪಡಿ ತರುವ ಕಾನೂನು ಕ್ರಮಗಳನ್ನು ಕೈಗೊಳ್ಳುವುದು.ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲೂ ಜಂಟಿ ಪಟ್ಟವನ್ನು ಜಾರಿಗೊಳಿಸುವುದು.ಮಹಿಳಾ ಹಕ್ಕುಗಳ ಹಾಗೂ ವಿಧವೆ,ಪರಿತ್ಯಕ್ತೆ ,ತೊರೆಯಲ್ಪಟ್ಟ ಮಹಿಳೆಯರು ಸೇರಿದಂತೆ ಒಂಟಿ ಮಹಿಳೆ ನೇತೃತ್ವದ ಕುಟುಂಬಗಳನ್ನು ಕೇಂದ್ರೀಕರಿಸಿ ಮಹಿಳೆಯರ ಭೂಮಿ ಹಕ್ಕನ್ನು ದಾಖಲಿಸುವುದು.
- ಸರ್ಕಾರಿ ಭೂಮಿ ಅಥವಾ ಬೀಳು ಭೂಮಿಯನ್ನು ಭೂ ರಹಿತರಿಗೆ ಕೃಷಿ ಉದ್ದೇಶಕ್ಕಾಗಿ ಗುತ್ತಿಗೆ ಅಥವಾ ಮಾರಾಟಕ್ಕೆ ಕೊಡುವಾಗ ಮಹಿಳಾ ಸಹಕಾರಿ ಸಂಘಗಳನ್ನು ಅಧ್ಯತೆಯಾಗಿ ಪರಿಗಣಿಸುವುದು.
- ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಗಳಲ್ಲಿ ಇರುವ ಮಹಿಳಾ ಕೃಷಿಕರು ಹಾಗೂ ಶ್ರಮಿಕರು ಶ್ರಮಜೀವಿಗಳಾಗಿ ಗುರುತಿಸಲ್ಪಡಬೇಕು ಹಾಗೂ ದಾಖಲಿಸಲ್ಪಡಬೇಕು ಮತ್ತು ಸಾಮಾಜಿಕ ಭದ್ರತೆ ಸೌಲಭ್ಯಗಳಾದ ಮಕ್ಕಳ ಆರೈಕೆ, ಆರೋಗ್ಯ ಆರೈಕೆ ಹಾಗೂ ವೃದ್ದಾಪ್ಯ ಪಿಂಚಣಿ ಯಂತಹ ಸವಲತ್ತುಗಳನ್ನು ಒದಗಿಸಬೇಕು.
- ಮಹಿಳಾ ಕಾರ್ಮಿಕರ ಸಹಕಾರಿ ಸಂಘಗಳ ರಚನೆಗೆ ಹಾಗೂ ಗುಂಪು ಕೃಷಿ ಗೆ ಸಹಾಯ ಧನ ಮತ್ತು ಉತ್ತೇಜನ ನೀಡುವ ಯೋಜನೆಗಳನ್ನು ರಾಜ್ಯ, ಕೇಂದ್ರ ಸರ್ಕಾರಗಳು ರೂಪಿಸಬೇಕು.ಪಶು ಸಂಗೋಪನೆ, ಅರಣ್ಯ ಕೃಷಿ ಮತ್ತಿತರೆ ಕೃಷಿ ಸಂಬಂದಿತ ಚಟುವಟಿಕೆಗಳಲ್ಲಿ ಗುಂಪಾಗಿ ತೊಡಗುವಂತೆ ಉತ್ತೇಜನ ಯೋಜನೆಗಳು ಹಾಗೂ ಹಣಕಾಸು ನೆರವು ಮೂಲಕ ಪ್ರೊತ್ಸಾಹಿಸಬೇಕು.
- ಗರಿಷ್ಟ ಮಟ್ಟದ ಕನಿಷ್ಠ ಕೂಲಿಯೊಂದಿಗೆ ಯಾವುದೇ ಧಾರ್ಮಿಕ, ಜಾತಿ ಹಾಗೂ ಲಿಂಗ ತಾರತಮ್ಯ ವಿಲ್ಲದೇ ಕನಿಷ್ಠ 200 ದಿನಗಳ ಉದ್ಯೋಗ ಒದಗಿಸುವಂತೆ ಮನರೇಗಾ ವನ್ನು ವಿಸ್ತರಿಸಬೇಕು.ಶಿಶು ಅರೈಕೆ ಸೌಲಭ್ಯಗಳನ್ನು ಮನರೇಗಾ ಕೆಲಸದ ಸ್ಥಳಗಳಲ್ಲಿ ಒದಗಿಸಬೇಕು.
- ಮೇವು ,ಬಿದಿರಿನಂತಹ ಅರಣ್ಯ ಉತ್ಪನ್ನಗಳು ,ಮೀನು, ಕೋಳಿ ಮತ್ತು ಇತರ ಸಾಕಾಣಿಕೆ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲು ಹಾಗೂ ನಿರ್ವಹಿಸಲು ಬೆಲೆ ಆಯೋಗ ಮತ್ತು ಬೆಲೆ ಸ್ಥೀರಿಕರಣ ನಿಧಿ ಸ್ಥಾಪಿಸಬೇಕು.
- ಮಹಿಳಾ ಸ್ವ ಸಹಾಯ ಗುಂಪುಗಳು ಮತ್ತು ಬೀಜ ಬ್ಯಾಂಕ್ ಗಳ ಮೂಲಕ ಬೀಜ ಹಾಗೂ ಬೆಳೆ ತಳಿಗಳ ಸಂರಕ್ಷಣೆ ಗೆ ಉತ್ತೇಜನ ಮತ್ತು ಬೆಂಬಲ ನೀಡಬೇಕು.
- ಗ್ರಾಮೀಣ ಪ್ರದೇಶದಲ್ಲಿ ಮನೆ ಬಳಕೆಗೆ ಹೊರತಾದ ಹಾಗೂ ಕೃಷಿ ಯೇತರ ( ಕೃಷಿ ಸಂಬಂಧಿತ ಚಟುವಟಿಕೆಗಳು ಸೇರಿದಂತೆ) ಚಟುವಟಿಕೆಗಳಿಗೆ ನೀರು ಹಂಚಿಕೆ ಮಾಡುವಾಗ ಸ್ಥಳೀಯ ಮಹಿಳಾ ಬಳಕೆದಾರರ ಸ್ಪಷ್ಟ ಹಾಗೂ ಪೂರ್ವ ಒಪ್ಪಿಗೆಯನ್ನು ಕಡ್ಡಾಯ ವಾಗಿ ಪಡೆಯತಕ್ಕದ್ದು.
- ರೈತ ಆತ್ಮಹತ್ಯೆ ಯಿಂದಾದ ವಿಧವೆಯರಿಗೆ ಋಣ ಪರಿಹಾರ ಹಾಗೂ ಸಾಲ ಮನ್ನಾ ಸೌಲಭ್ಯ ಕಲ್ಪಿಸಬೇಕು.ಪರಿತ್ಯಕ್ತೆ, ತೊರೆಯಲ್ಪಟ್ಟ ಹಾಗೂ ಹೊರಹಾಕಲ್ಪಟ್ಟು ನಿರಾಶ್ರಿತ ರಾದ ಮಹಿಳೆಯರೇ ನಡೆಸುತ್ತಿರುವ ಕುಟಂಬಗಳು ಸಾಲದಿಂದ ಮುಕ್ತಿ ಹೊಂದಲು ವಿಶೇಷ ನೆರವು ಒದಗಿಸುವುದು.
ಈ ನಿಭಂದನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ಮೂರು ಕೃಷಿ ವಿರೋಧಿ ಕಾಯ್ದೆಗಳು ರದ್ದಾಗಲೇಬೇಕು, ಲಾಭದಾಯಕ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ಪಡಿಸುವ ಕಾನೂನನ್ನು ಅಂಗೀಕರಿಸಬೇಕು ಮತ್ತು ಗಮನಾರ್ಹ ರೀತಿಯಲ್ಲಿ ಮಹಿಳಾ ರೈತರು ಹಾಗೂ ಕೃಷಿ ಕೂಲಿಕಾರರ ಕುರಿತ ಸರ್ಕಾರದ ಮನೋಭಾವ ಬದಲಾಗಬೇಕು.
ಈ ಪತ್ರಿಕಾಗೋಷ್ಠಿಯಲ್ಲಿ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನನ್ ಮೊಲ್ಲಾ , ಎಐಕೆಎಸ್ ಅಧ್ಯಕ್ಷ ಡಾ.ಅಶೋಕ್ ಧವಳೆ, ಎಐಡಿಡಬ್ಲ್ಯೂಎ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ, ಎಐಡಿಡಬ್ಲ್ಯೂ ಎ ಸಿಇಸಿ ಸದಸ್ಯೆ ಡಾ.ಅರ್ಚನಾ ಪ್ರಸಾದ್ ಎಐಎಡಬ್ಲ್ಯೂಯು ಜಂಟಿ ಕಾರ್ಯದರ್ಶಿ ವಿಕ್ರಮ್ ಸಿಂಗ್ , ಎಐಕೆಎಸ್ ಜಂಟಿ ಕಾರ್ಯದರ್ಶಿ ಎನ್ ಕೆ ಶುಕ್ಲಾ , ವಿಜ್ಜು ಕೃಷ್ಣನ್ ಹಾಗೂ ಬಾದಲ್ ಸರೋಜ್ ಮತ್ತು ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್ ಇದ್ದರು.
ವರದಿ : ಟಿ.ಯಶವಂತ್ ಮಂಡ್ಯ