ವಿದ್ಯಾರ್ಥಿ ಸಾವಿನ ಸುತ್ತ ಅನುಮಾನದ ಹುತ್ತ – ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಆಡಳಿತ ಮಂಡಳಿ
ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಜಯಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಎರಡನೇ ವರ್ಷದ ಎಂಜಿನಿಯರಿಂಗ್ನ ಮೂರನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿವಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ವಿದ್ಯಾರ್ಥಿ ಆತ್ಮಹತ್ಯೆ ವಿಚಾರವನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕಾಲೇಜು ಶುಲ್ಕ ಅಥವಾ ಪರೀಕ್ಷೆ ಬರೆಯುವ ವಿಚಾರಕ್ಕೆ ವಿದ್ಯಾರ್ಥಿ ಬೇಸರಗೊಂಡಿದ್ದನೇ?ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದು ಈವರೆಗೆ ತಿಳಿದು ಬಂದಿಲ್ಲ.
ಕಾಲೇಜಿನ 7 ನೇ ಅಂತಸ್ತಿನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ವಿವಿಪುರಂನಲ್ಲಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಇದೆ. 7 ಅಂತಸ್ತಿನ ಕಟ್ಟಡ ಇದಾಗಿದೆ. ಈವರೆಗೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿ ಸಾವಿನ ಬಗ್ಗೆ ಮೌನ ವಹಿಸಿದೆ. ಪ್ರಕರಣ ನಡೆಯುತ್ತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ, ಸದ್ಯ ಸಿಬ್ಬಂದಿಗಳು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಚೆಕ್ ಮಾಡಿ ಒಳಗೆ ಕಳಿಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಂದಿನಂತೆ ಪ್ರಯೋಗಾಲಕ್ಕೆ ಬಂದಿದ್ದ ಜಯಂತ್ ರೆಡ್ಡಿ ಕಟ್ಟಡದ ಮೇಲಿನಿಂದ ಜಿಗಿದು ಬಿದ್ದಿದ್ದಾನೆ ತಲೆಗೆ ತೀವ್ರ ತರ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.