ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಏಕೆ?

ಹಣಕಾಸು ರಂಗವನ್ನು ಖಾಸಗೀಕರಿಸುವ ಸರ್ಕಾರದ ಉದ್ದೇಶ ಬಜೆಟ್‌ನಲ್ಲಿ ನಿಚ್ಚಳವಾಗಿ ಬಹಿರಂಗಗೊಂಡಿದೆ. ಎರಡು ಸಾರ್ವಜನಿಕ ರಂಗದ ಲಾಭದಾಯಕವಾಗಿರುವ ಬ್ಯಾಂಕ್‌ಗಳನ್ನು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಿಸಲು ಘೋಷಣೆ ಮಾಡಲಾಗಿದೆ. ಎಲ್‌ಐಸಿಯ ಷೇರುಗಳ ಬಂಡವಾಳ ಹಿಂತೆಗೆತವೂ ಸೇರಿಕೊಂಡಿದೆ. ಹಣಕಾಸು ರಂಗ ಖಾಸಗೀಕರಣಗೊಂಡ ಕೂಡಲೇ, ಇಡೀ ಆರ್ಥಿಕತೆಯು ಬಂಡವಾಳದ ಹರಿವಿನ ಹುಚ್ಚಾಟಗಳಿಗೆ ತುತ್ತಾಗಲಿದೆ. ಆತ್ಮನಿರ್ಭರ ಭಾರತವು ಆತ್ಮಬರ್ಬರವಾಗಲಿದೆ !

ಡಾ.ಪ್ರಕಾಶ್ ಕೆ.

ಹಣಕಾಸು ಜಾಗತೀಕರಣದ ಆರಂಭದಲ್ಲಿ ಬ್ರಿಟನ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್, “ಉದ್ದಿಮೆಯನ್ನು ನಡೆಸುವುದು ಸರ್ಕಾರದ ಕೆಲಸವಲ್ಲ” (the business of the government is not to be in business) ಎಂದು ಹೇಳಿದ್ದನ್ನು ಜನರು ಮರೆಯುವ ಮೊದಲೇ ಭಾರತದ ಪ್ರಧಾನಿ ಮೋದಿ ಅದೇ ಹೇಳಿಕೆಯನ್ನು ಈಗ ಪುನರುಚ್ಚರಿಸಿದ್ದಾರೆ. 2021-22 ರ ಬಜೆಟ್‌ನಲ್ಲಿ ಸರ್ಕಾರ ತಾನು ನಡೆಸುವ ಎಲ್ಲಾ ಉದ್ದಿಮೆಗಳಿಂದಲೂ ಕೈತೊಳೆದುಕೊಳ್ಳಲು ಬಯಸುವ ಉದ್ದೇಶವನ್ನು ಭರಪೂರ ಪ್ರಸ್ತಾಪಿಸಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವುದಕ್ಕೆ ಸಂಪೂರ್ಣ ಒತ್ತನ್ನು ನೀಡಿದ್ದಾರೆ. ಮೋದಿ ಸರ್ಕಾರದ ಆಸ್ಥಾನ ಪಂಡಿತರು, ಬಹುತೇಕ ಮಾರಿಕೊಂಡ ಮಾಧ್ಯಮಗಳು ಈ ನೀತಿಯನ್ನು ಹಾಡಿ ಹೊಗಳಿ “ಅತ್ಯಂತ ಕ್ರಾಂತಿಕಾರಕ”, ಅಂತೂ ಕೊನೆಗೆ “ನಿಜವಾದ ಸುಧಾರಣೆಗಳು”, ಮುಂತಾಗಿ ಹಾಡಿ ಹೊಗಳುತ್ತಿದ್ದಾರೆ. ಖಾಸಗಿ ದೊಡ್ಡ ಬಂಡವಾಳದಾರರು, ಹಣಕಾಸು ಜೂಜುಕೋರರು, ವಿದೇಶೀ ಕಂಪನಿಗಳು ಕುಣಿದು ಕುಪ್ಪಳಿಸುತ್ತಿವೆ. “ಆತ್ಮನಿರ್ಭರ ಭಾರತಕ್ಕಾಗಿ ನೂತನ ಸಾರ್ವಜನಿಕ ವಲಯದ ಉದ್ದಿಮೆಗಳ ನೀತಿ” ಎಂಬ ಹಣಕಾಸು ಇಲಾಖೆಯ ಧೋರಣೆಯನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ.

(ಅ)ನೀತಿ ಆಯೋಗವು, ಬಂಡವಾಳ ಹಿಂತೆಗೆತದ ಕುರಿತು ವಿವಿಧ ರೀತಿಯ ಶಿಫಾರಸ್ಸುಗಳನ್ನು ನೀಡಿದೆ. ನಾಲ್ಕು ಪ್ರಮುಖ ವ್ಯೂಹಾತ್ಮಕ ವಲಯಗಳಲ್ಲಿ ಕನಿಷ್ಟ ಪ್ರಮಾಣವನ್ನು ಹೊರತುಪಡಿಸಿ ಎಲ್ಲವನ್ನೂ ಖಾಸಗೀಕರಿಸುವ, ಉಳಿದ ಎಲ್ಲಾ ವಲಯಗಳಲ್ಲೂ ಸರ್ಕಾರ ತನ್ನ ವ್ಯವಹಾರವನ್ನು ಕೊನೆಗೊಳಿಸಲಾಗುವುದು ಎನ್ನಲಾಗಿದೆ.

ನಾಲ್ಕು ವ್ಯೂಹಾತ್ಮಕ ವಲಯಗಳೆಂದರೆ: (1) ಅಣು ಶಕ್ತಿ, ಅಂತರಿಕ್ಷ ಮತ್ತು ರಕ್ಷಣೆ (2) ಸಾರಿಗೆ ಮತ್ತು ದೂರಸಂಪರ್ಕ (3) ಇಂಧನ, ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಮತ್ತು (4) ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವೆಗಳು. ಈ ನಾಲ್ಕು ವಲಯಗಳಲ್ಲಿ ಸಾರ್ವಜನಿಕ ಉದ್ದಿಮೆಗಳ “ಅತ್ಯಂತ ಕನಿಷ್ಟ ಇರುವಿಕೆ” ಇರಲಿದೆ. ಉಳಿದ ಉದ್ದಿಮೆಗಳನ್ನು ಖಾಸಗೀಕರಿಸಲಾಗುವುದು, ವಿಲೀನಗೊಳಿಸಲಾಗುವುದು ಅಥವಾ ಮುಚ್ಚಲಾಗುವುದು.

ವ್ಯೂಹಾತ್ಮಕವಲ್ಲದ ವಲಯಕ್ಕೆ ಸಂಬಂಧಿಸಿ, ಮೋದಿ ಸರ್ಕಾರದ ನೀತಿಯೇನೆಂದರೆ, ಎಲ್ಲಾ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣ ಅಥವಾ ಮುಚ್ಚಿಬಿಡಲಾಗುವುದು.

ಹಣಕಾಸು ರಂಗವನ್ನು ಖಾಸಗೀಕರಿಸುವ ಸರ್ಕಾರದ ಉದ್ದೇಶ ಬಜೆಟ್‌ನಲ್ಲಿ ನಿಚ್ಚಳವಾಗಿ ಬಹಿರಂಗಗೊಂಡಿದೆ. ಎರಡು ಸಾರ್ವಜನಿಕ ರಂಗದ ಲಾಭದಾಯಕವಾಗಿರುವ ಬ್ಯಾಂಕ್‌ಗಳನ್ನು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಿಸಲು ಘೋಷಣೆ ಮಾಡಲಾಗಿದೆ. ಎಲ್‌ಐಸಿಯ ಷೇರುಗಳ ಬಂಡವಾಳ ಹಿಂತೆಗೆತವೂ ಸೇರಿಕೊಂಡಿದೆ. ಹಣಕಾಸು ರಂಗ ಖಾಸಗೀಕರಣಗೊಂಡ ಕೂಡಲೇ, ಇಡೀ ಆರ್ಥಿಕತೆಯು ಬಂಡವಾಳದ ಹರಿವಿನ ಹುಚ್ಚಾಟಗಳಿಗೆ ತುತ್ತಾಗಲಿದೆ. ಆತ್ಮನಿರ್ಭರ ಭಾರತವು ಆತ್ಮಬರ್ಬರವಾಗಲಿದೆ !

ಇದಲ್ಲದೆ, ಶಿಕ್ಷಣ, ಆರೋಗ್ಯ, ಸಾರಿಗೆ, ವಿದ್ಯುತ್ ಮುಂತಾದ ಸೇವಾ ವಲಯವೂ ಖಾಸಗೀಕರಣ ವೇಗ ಪಡೆದುಕೊಂಡಿದೆ. ಇದು ಜನರ ಜೀವನದ ಮೇಲೆ ನೇರ ಪರಿಣಾಮ ಉಂಟು ಮಾಡಲಿದೆ.

ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆತ ಅಥವಾ ಖಾಸಗೀಕರಣದ ನೀತಿಗಳಿಗೆ ನೀಡಲಾಗುವ ಕಾರಣಗಳೇನು?

1). ಸರ್ಕಾರದ ಬಳಿಯಿರುವ ಸಂಪನ್ಮೂಲಗಳು ಕಡಿಮೆ. ಬಜೆಟ್ ಕೊರತೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಂಪನ್ಮೂಲ ಬೇಕು.

2). ಮೂಲ ಸಂರಚನೆ ಮತ್ತು ಶಿಕ್ಷಣ, ಆರೋಗ್ಯ, ಬಡತನ ನಿವಾರಣಾ ಕಾರ್ಯಕ್ರಮದಂತಹ ಸಾಮಾಜಿಕ ವಲಯಗಳಲ್ಲಿ ಹೂಡಿಕೆ ಮಾಡಲು ಸರ್ಕಾರಕ್ಕೆ ತಕ್ಷಣದಲ್ಲಿ ಸಂಪನ್ಮೂಲ ಬೇಕು. ಬಂಡವಾಳ ಹಿಂತೆಗೆತದಿಂದ ಬರುವ ಸಂಪನ್ಮೂಲವನ್ನು ಈ ವಲಯಗಳಿಗೆ ತೊಡಗಿಸಬಹುದು.

3). ಸಾಕಷ್ಟು ಸಂಖ್ಯೆಯ ಸಾರ್ವಜನಿಕ ಉದ್ದಿಮೆಗಳು ಅಸಮರ್ಥವಾಗಿವೆ ಮತ್ತು ಅಪಾರ ನಷ್ಟವನ್ನು ಅನುಭವಿಸುತ್ತಿವೆ. ಬಂಡವಾಳ ಹಿಂತೆಗೆತದಿಂದ ಈ ಉದ್ದಿಮೆಗಳ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಖಾಸಗಿ ಉದ್ದಿಮೆಗಳು ಅಥವಾ ಸಾರ್ವಜನಿಕರಿಗೆ ಇದರಲ್ಲಿ ಭಾಗ ನೀಡಿದಾಗ ನಿರ್ವಹಣೆಯಲ್ಲಿ ಹೊಣೆಗಾರಿಕೆ ಹೆಚ್ಚಾಗುತ್ತದೆ ಮತ್ತು ಉದ್ದಿಮೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಹೆಚ್ಚು ಲಾಭ ಬರುತ್ತದೆ. ಈ ಬಗ್ಗೆ ಮುಂದೆ ಚರ್ಚಿಸೋಣ.

ಭಾರತದ ಸ್ವಾತಂತ್ರ್ಯ, ಸ್ವಾತಂತ್ರ್ಯಾ ನಂತರದ ಬೆಳವಣಿಗೆ ಪಥ ಮತ್ತು ಸಾರ್ವಜನಿಕ ಉದ್ದಿಮೆಗಳು

ಸಾಮ್ರಾಜ್ಯಶಾಹಿ ಬ್ರಿಟಿಷ್ ವಿರೋಧಿ ಸಂಗ್ರಾಮದಲ್ಲಿ ಭಾರತದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಆದಿವಾಸಿಗಳು ಹೀಗೆ ವಿಶಾಲ ತಳಹದಿಯ ಜನಸಮೂಹಗಳ ಅಪಾರ ತ್ಯಾಗ ಬಲಿದಾನಗಳ ಫಲವಾಗಿ ಸ್ವಾತಂತ್ರ್ಯ ಲಭಿಸಿತು. ತಮ್ಮ ಬದುಕಿನ ಬಗ್ಗೆ ಅಪಾರ ಭರವಸೆಗಳ ಮಹಾಪೂರವೇ ಸೃಷ್ಟಿಯಾಗಿತ್ತು. ಭೂಮಿಯಿಲ್ಲದವರಿಗೆ ಭೂಮಿ, ಎಲ್ಲರಿಗೂ ಅಗತ್ಯವಾದಷ್ಟು ಆಹಾರ, ಸರಿಯಾದ ವೇತನ, ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗ, ಸಾರ್ವತ್ರಿಕ ಆರೋಗ್ಯ, ಬಡತನ ನಿವಾರಣೆ, ಎಲ್ಲರಿಗೂ ಸೂರು, ಇವೆಲ್ಲವೂ ತಮಗೆ ದಕ್ಕುವುದೆಂದು ಭಾವಿಸಲಾಗಿತ್ತು. ಇಂತಹ ಪರಿಸ್ಥಿತಿಯ ಜೊತೆಯಲ್ಲೇ ಜಾತಿ ತಾರತಮ್ಯ, ಕೋಮುದ್ವೇಷ ಕೊನೆಯಾಗುವುದೆಂದು ನಂಬಲಾಗಿತ್ತು. ಇವೆಲ್ಲವನ್ನೂ ಸಾಧಿಸಲು ಅಗತ್ಯವಾದ ವೈವಿಧ್ಯಮಯ ನೈಸರ್ಗಿಕ ಸಂಪತ್ತು ಮತ್ತು ಮಾನವ ಸಂಪತ್ತು ಭಾರತದಲ್ಲಿ ಹೇರಳವಾಗಿತ್ತು.

ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಆದಾಗ, ಭಾರತದ ಪ್ರಭುತ್ವದ ಅಧಿಕಾರವನ್ನು ಹಿಡಿದವರು ಅಸಲಿಗೆ ಸಾಮಾನ್ಯ ರೈತ-ಕಾರ್ಮಿಕ ಮತ್ತು ಶ್ರಮಜೀವಿ ವರ್ಗದಿಂದ ಬಂದವರಾಗಿರಲಿಲ್ಲ. ಭಾರತದ ಬೃಹತ್ ಬಂಡವಾಳದಾರರ ನೇತೃತ್ವದಲ್ಲಿ ಮತ್ತು ಗ್ರಾಮೀಣ ಜಮೀನ್ದಾರಿ ವರ್ಗಗಳು ಅಧಿಕಾರ ಹಿಡಿದವು ಮತ್ತು ಭಾರತದ ಆಳುವ ವರ್ಗಗಳಾದವು. ಈ ವರ್ಗಗಳ ನಡುವಿನ ಸಖ್ಯತೆಯ ಕಾರಣಕ್ಕೆ, ಜಮೀನ್ದಾರಿ ಪದ್ಧತಿಯ ಸಂಕೋಲೆಗಳನ್ನು ಮುರಿದು ಬಡವರಿಗೆ ಭೂಮಿ ಹಂಚುವ ಕೆಲಸ ಆಗಲಿಲ್ಲ. ಪ್ರಜಾಸತ್ತಾತ್ಮಕ ಪರಿವರ್ತನೆಗೆ ಬೇಕಾದ ಬುನಾದಿಯನ್ನು ಹಾಕಲು ಆಗಲಿಲ್ಲ. ಜೊತೆಗೆ, ದೊಡ್ಡ ಬಂಡವಾಳದಾರರು ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಅಂದರೆ ಜಮೀನ್ದಾರಿ ಪದ್ಧತಿಯೊಂದಿಗೆ ಮೈತ್ರಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡರು. ಆಳುವ ವರ್ಗಗಳ ಇಂತಹ ದ್ವಂದ್ವ ಗುಣವೇ ಮುಂದಿನ ಏಳು ದಶಕಗಳಲ್ಲಿ ಭಾರತದ ಅಭಿವೃದ್ಧಿ ಪಥದ ಸ್ವರೂಪವನ್ನು ತೀರ್ಮಾನ ಮಾಡಿದ್ದು.

ಇದರ ಪರಿಣಾಮವಾಗಿ ಈ ವರ್ಗಗಳು ದುಡಿಯುವ ಜನತೆಯ ಬದುಕಿನ ಹಕ್ಕುಗಳ ಮೇಲೆ ದಾಳಿಗಳನ್ನು ಮಾಡುತ್ತಾ ಪ್ರಭುತ್ವವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ನಿರಂತರವಾಗಿ ಪ್ರಯತ್ನಿಸಿದವು. ಮತ್ತು ಪ್ರಭುತ್ವ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಅಪಾರ ಬಂಡವಾಳವನ್ನು ಕ್ರೋಢೀಕರಿಸಿದವು. 1990 ರ ದಶಕದಲ್ಲಿ ಆರಂಭವಾದ ಎಲ್‌ಪಿಜಿ ನೀತಿಗಳ ಮೂಲಕ ದೊಡ್ಡ ಬಂಡವಾಳದಾರರು ಭಾರತದ ಆರ್ಥಿಕತೆಯನ್ನು ವಿದೇಶೀ ಹಣಕಾಸು ಬಂಡವಾಳದೊಂದಿಗೆ ಗಟ್ಟಿಯಾಗಿ ಬೆಸೆಯಲು ಪ್ರತಿಪಾದಿಸಿದರು. ಈ ದೊಡ್ಡ ಬಂಡವಾಳಶಾಹಿ ವರ್ಗವೇ ಸಾರ್ವಜನಿಕ ವಲಯವನ್ನು ಮತ್ತು ಕೈಗಾರಿಕೆ, ಕೃಷಿ ಮತ್ತು ಸೇವಾ ವಲಯಗಳನ್ನು ಒಟ್ಟಾರೆಯಾಗಿ ಆರ್ಥಿಕತೆಯನ್ನು ಖಾಸಗೀಕರಿಸಬೇಕೆಂಬ ಒತ್ತಾಯದ ಹಿಂದಿರುವ ಚಾಲಕ ಶಕ್ತಿಯಾಗಿದೆ.

ಸ್ವಾತಂತ್ರ್ಯ ಬಂದ ನಂತರದಲ್ಲಿ ಭಾರತ ಯಾವ ರೀತಿಯ ಆರ್ಥಿಕ ನೀತಿಗಳನ್ನು ಅನುಸರಿಸಬೇಕೆಂದು 1944 ರಲ್ಲೇ ‘ಬಾಂಬೆ ಪ್ಲಾನಿಂಗ್’ (ಟಾಟಾ-ಬಿರ್ಲಾ ಪ್ಲಾನಿಂಗ್) ಮೂಲಕ ಅಂದಿನ ಭಾರತ ರಾಷ್ಟ್ರೀಯ ಕಾಂಗ್ರೆಸಿಗೆ ಪ್ರಧಾನ ಪೋಷಕರಾಗಿದ್ದ ಭಾರತದ ದೊಡ್ಡ ಬಂಡವಾಳದಾರರು ಮಾರ್ಗದರ್ಶನವನ್ನು ನೀಡಿದ್ದರು. ಸ್ವಾತಂತ್ರ್ಯ ಗಳಿಸಿದ ನಂತರ ಪಾಶ್ಚಿಮಾತ್ಯ ದೇಶಗಳು ಭಾರತದ ನೆರವಿಗೆ ಬಾರದೇ ಇದ್ದಾಗ, ಅಂದಿನ ಸಮಾಜವಾದಿ ಸೋವಿಯತ್ ರಷ್ಯಾದ ಬೆಂಬಲವನ್ನು ಪಡೆಯಲಾಯಿತು. ಬಂಡವಾಳಶಾಹಿ ಬೆಳವಣಿಗೆಯ ಭಾಗವಾಗಿಯೇ ಸಮಾಜವಾದಿ ಎಂಬಂತೆ ಕಾಣುವ ಯೋಜಿತ ಆರ್ಥಿಕ ಬೆಳವಣಿಗೆಯ ದಾರಿಯನ್ನು ಅನುಸರಿಸಲಾಯಿತು. ಇದರಿಂದ ಆಳುವ ವರ್ಗಗಳಿಗೆ ಲಾಭವನ್ನು ಖಾತ್ರಿಪಡಿಸಲಾಗಿತ್ತು. ಭಾರತವನ್ನು ಅಡಿಪಾಯದಿಂದ ಕಟ್ಟಬೇಕಾದ್ದರಿಂದ ಬೃಹತ್ ಮತ್ತು ಮೂಲ ಕೈಗಾರಿಕೆಗಳಾದ ವಿದ್ಯುತ್, ಸಿಮೆಂಟ್, ಕಬ್ಬಿಣ, ಕಲ್ಲಿದ್ದಲು, ವಿಜ್ಞಾನ-ತಂತ್ರಜ್ಞಾನ ಮುಂತಾದವುಗಳನ್ನು ಸಾರ್ವಜನಿಕ ರಂಗದಲ್ಲಿ ಸ್ಥಾಪಿಸಲಾಯಿತು. ಈ ಕ್ಷೇತ್ರಗಳಲ್ಲಿ ಲಾಭ ಮಾಡಲು ದೀರ್ಘಕಾಲ ಕಾಯಬೇಕಾದ್ದರಿಂದ, ಇವುಗಳಿಗೆ ಬೇಕಾದ ಬಂಡವಾಳವನ್ನು ಒದಗಿಸಲು ಖಾಸಗಿ ಬಂಡವಾಳದಾರರು ಸಿದ್ದವಿಲ್ಲದ ಕಾರಣಕ್ಕೆ ಈ ರೀತಿ ಮಾಡಬೇಕಾಗಿ ಬಂತು. ಕಾರಣ ಇದಾದರೂ, ಸಾರ್ವಜನಿಕ ವಲಯದಲ್ಲಿ ಮೂಲ ಮತ್ತು ಬೃಹತ್ ಉದ್ದಿಮೆಗಳು ಸ್ಥಾಪನೆಯಾದ್ದರಿಂದ ಸ್ವಲ್ಪವಾದರೂ ಕೈಗಾರಿಕೀಕರಣ, ಸ್ವಾವಲಂಬನೆ ಮತ್ತು ಬೆಳವಣಿಗೆಯನ್ನು ಕಾಣಲು ಸಾಧ್ಯವಾಯ್ತು.

ಆಳುವ ವರ್ಗಗಳಿಗೆ ಇಷ್ಟವಿಲ್ಲದಿದ್ದರೂ ಅಂದಿನ ಪರಿಸ್ಥಿತಿಯ ಕಾರಣಕ್ಕೆ, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕ್ ಮತ್ತು ವಿಮೆ ಮುಂತಾದ ಹಣಕಾಸು ವಲಯ, ತೈಲ ಮತ್ತು ಕಲ್ಲಿದ್ದಲು ಉದ್ದಿಮೆಗಳ ರಾಷ್ಟ್ರೀಕರಣದಿಂದ ದೇಶದ ಜನತೆಗೆ ಸ್ವಲ್ಪ ಮಟ್ಟಿಗಿನ ಪ್ರಯೋಜನವಾಯಿತು. ಸಂಶೋಧನೆ ಮತ್ತು ಅಭಿವೃದ್ಧಿ, ನಮ್ಮ ರೈತರ ಕೃಷಿ ಉತ್ಪನ್ನಗಳನ್ನು ಕಾಪಾಡಲು ಪ್ರಮಾಣಾತ್ಮಕ ನಿರ್ಬಂಧಗಳು, ಪೇಟೆಂಟ್ ಕಾನೂನು, ಹೀಗೆ ಇವೆಲ್ಲವೂ ಒಂದಷ್ಟು ಸ್ವಾವಲಂಬೀ ಬೆಳವಣಿಗೆಗೆ ಮತ್ತು ವಿದೇಶೀ ಅವಲಂಬನೆ ತಪ್ಪಿಸಲು ಸಹಾಯವಾಗಿತ್ತು.

ಇಂತಹ ಸೀಮಿತ ಉಪಯುಕ್ತತೆಯ ಜೊತೆಯಲ್ಲೇ, ಸ್ವಾತಂತ್ರ್ಯಾ ನಂತರ ಬಂದ ಎಲ್ಲಾ ಸರ್ಕಾರಗಳ ಆರ್ಥಿಕ ನೀತಿಗಳಿಂದಾಗಿ, ಖಾಸಗಿ ಬೃಹತ್ ಬಂಡವಾಳದಾರರ ಸಂಪತ್ತು ಹೆಚ್ಚೆಚ್ಚು ಬೆಳೆಯುತ್ತಾ ಬಂಡವಾಳದ ಕೇಂದ್ರೀಕರಣ ಮತ್ತು ಏಕಸ್ವಾಮ್ಯಗಳ ವೇಗದ ಬೆಳವಣಿಗೆಯಾಯಿತು. ದೊಡ್ಡ ಬಂಡವಾಳಶಾಹಿಗಳ ನಾಯಕತ್ವದಡಿಯಲ್ಲಿ, ಪ್ರಭುತ್ವ ವಲಯವೇ ಬಂಡವಾಳಶಾಹಿಯನ್ನು ಕಟ್ಟುವ ಸಾಧನವಾಯಿತು. ಸಾರ್ವಜನಿಕ ಬ್ಯಾಂಕ್‌ಗಳ ಬಹುತೇಕ ಸಾಲ, ಕೇಂದ್ರದ ಮತ್ತು ರಾಜ್ಯಗಳ ಬಜೆಟ್ ಮತ್ತು ತೆರಿಗೆ ನೀತಿಗಳು, ತೆರಿಗೆ ವಂಚನೆಗಳು ಎಲ್ಲವೂ ಬಂಡವಾಳಿಗರಿಗೆ ಅನುಕೂಲ ಮಾಡಿತು. ಅಪಾರ ಪ್ರಮಾಣದ ತೆರಿಗೆ ವಂಚನೆಯು ಕಪ್ಪು ಹಣದ ಬೃಹತ್ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಖಾಸಗಿ ಬಂಡವಾಳದ ಕ್ರೋಢೀಕರಣಕ್ಕೆ ದಾರಿ ಮಾಡಿತು. ಬಂಡವಾಳಶಾಹಿಗಳ ಬೆಳವಣಿಗೆಯನ್ನೇ ದೇಶದ ಬೆಳವಣಿಗೆಯೆಂದು ಬಿಂಬಿಸುತ್ತಾ ಕಾರ್ಮಿಕರು, ರೈತರು, ಜನಸಾಮಾನ್ಯರು, ಮಧ್ಯಮ ವರ್ಗಗಳನ್ನು ನಿರಂತರವಾದ ಶೋಷಣೆಗೆ ಒಳಪಡಿಸಲಾಯಿತು. ಈ ರೀತಿಯ ಪ್ರಭುತ್ವ ಬಂಡವಾಳಶಾಹಿಯನ್ನು ಬೃಹತ್ ಬಾಹ್ಯ ಮತ್ತು ಆಂತರಿಕ ಸಾಲಗಳಿಂದ ಪೋಷಿಸಲಾಯಿತು. ಏಕಸ್ವಾಮ್ಯಗಳ ಬೆಳವಣಿಗೆ ಮತ್ತು ವಿದೇಶೀ ಹಣಕಾಸು ಬಂಡವಾಳದ ಪ್ರವೇಶಿಕೆಯ ಹೆಚ್ಚಳ ಈ ಪಥದ ಹೆಗ್ಗುರುತಾಯಿತು.

1950 ರ ದಶಕದಿಂದ ಭಾರತದ ಆಳುವ ವರ್ಗಗಳು ಜಾರಿಗೊಳಿಸಿದ ನಿರ್ದಿಷ್ಟವಾದ ಬಂಡವಾಳಶಾಹಿ ಬೆಳವಣಿಗೆಯ ಪಥವು ಬಿಕ್ಕಟ್ಟಿಗೆ ಸಿಲುಕಲೇಬೇಕಾಗಿತ್ತು ಮತ್ತು ಅದೇ ಕಾರಣದಿಂದ ಸ್ಥಗಿತಕ್ಕೊಳಗಾಯಿತು. ಜನರ ಕೊಳ್ಳುವ ಶಕ್ತಿ ಬೆಳವಣಿಗೆಯಾಗದೇ ಆಂತರಿಕ ಮಾರುಕಟ್ಟೆ ಬೆಳವಣಿಗೆಯಾಗಲಿಲ್ಲ. ಸರ್ಕಾರ ಸಾಲಗಳ ಮೇಲೆ ಹೆಚ್ಚು ಆಧಾರವಾಯಿತು. ಪಾವತಿ ಬಿಕ್ಕಟ್ಟು ಮತ್ತು ಹಣಕಾಸು ಕೊರತೆಗೆ ದಾರಿಯಾಯಿತು. ಇದು ಅಂತಿಮವಾಗಿ ಕಾಂಗ್ರೆಸ್ ಸರ್ಕಾರ ಐಎಂಎಫ್-ವಿಶ್ವಬ್ಯಾಂಕ್ ಸಾಲದ ಷರತ್ತುಗಳಿಗೆ ಒಪ್ಪುವಂತೆ ಮಾಡಿತು. ಭಾರತದ ದೊಡ್ಡ ಬಂಡವಾಳಶಾಹಿ ವರ್ಗ ಈ ಬಿಕ್ಕಟ್ಟನ್ನು ವಿದೇಶೀ ಹಣಕಾಸು ಬಂಡವಾಳದೊಂದಿಗೆ ಸಹಯೋಗ ಮತ್ತು ಆರ್ಥಿಕತೆಯನ್ನು ತೆರೆಯುವ ಮೂಲಕ ಬಗೆಹರಿಸಿಕೊಳ್ಳಲು ಆರಂಭಿಸಿತು.

ಸ್ವಾತಂತ್ರ್ಯದ ಆರಂಭದಲ್ಲಿ ತಮ್ಮಲ್ಲಿ ಸಾಕಷ್ಟು ಬಂಡವಾಳ ಇರಲಿಲ್ಲ ಎಂಬ ಕಾರಣಕ್ಕೆ ಎಲ್ಲಾ ಬೃಹತ್ ಮತ್ತು ಮೂಲ ಕೈಗಾರಿಕೆಗಳನ್ನು ಪ್ರಭುತ್ವವೇ ನಿರ್ಮಿಸಬೇಕೆಂಬುದರ ಪರವಾಗಿದ್ದ ಭಾರತದ ಬಂಡವಾಳಗಾರರು ಇಷ್ಟೊತ್ತಿಗೆ ಪ್ರಭುತ್ವ ಬೆಂಬಲಿತ ಬೆಳವಣಿಗೆ ಮತ್ತು ಸಬ್ಸಿಡಿಗಳ ಕಾರಣದಿಂದ ಅಪಾರ ಬಂಡವಾಳ ಸಂಗ್ರಹದೊಂದಿಗೆ ಕೊಬ್ಬಿದ್ದರು. 1980 ರ ಮಧ್ಯಭಾಗದಿಂದ ಇವರು ‘ಪ್ರಭುತ್ವ ಹಿಂತೆಗೆತ’ದ ಬಗ್ಗೆ ಒತ್ತಾಯಿಸಲು ಆರಂಭಿಸಿದರು. ಸರ್ಕಾರಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಪ್ರವೇಶಿಸಲು, ಸಾರ್ವಜನಿಕ ಉದ್ದಿಮೆಗಳನ್ನು ತೆಗೆದುಕೊಳ್ಳಲು ಮತ್ತು ವಿದೇಶೀ ಬಂಡವಾಳಿಗರೊಡನೆ ಸೇರಿಕೊಂಡು ಹೊಸ ಪ್ರದೇಶಗಳಿಗೆ ವಿಸ್ತರಣೆ ಮಾಡಿಕೊಳ್ಳಲು ಇವರು ಒತ್ತಡ ಹೇರತೊಡಗಿದರು. ಈ ಬೆಳವಣಿಗೆಗಳು ಆಂತರಿಕವಾಗಿ ಉದಾರೀಕರಣಕ್ಕೆ ನೆಲೆಯನ್ನು ಸಿದ್ಧಪಡಿಸಿದವು. ಇದೇ ಸಂದರ್ಭಕ್ಕೆ ಜಾಗತಿಕವಾಗಿ ಸಮಾಜವಾದಿ ರಷ್ಯದ ಕುಸಿತವಾಗಿತ್ತು. ‘ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ’ ಬೆಳವಣಿಗೆಯನ್ನು ಬದಲಾಯಿಸಿ, ಉದಾರೀಕರಣ-ಖಾಸಗೀಕರಣ-ಜಾಗತೀಕರಣ (ಎಲ್‌ಪಿಜಿ) ನೀತಿಗಳನ್ನು ಸಮಗ್ರವಾಗಿ ಜಾರಿಗೊಳಿಸಲು ಭಾರತದ ಆಳುವ ವರ್ಗ ಸನ್ನದ್ಧವಾಯಿತು.

ರಾಜೀವ್ ಗಾಂಧಿ ಕಾಲದಲ್ಲಿ ಆರಂಭಗೊಂಡ ಇಂತಹ ಸ್ಥಿತ್ಯಂತರವು 1991 ರಲ್ಲಿ ಹಣಕಾಸು ಬಂಡವಾಳಶಾಹಿ ಪ್ರೇರಿತ ಸಂರಚನಾ ಹೊಂದಾಣಿಕೆಯ ಸಾಲದ ಷರತ್ತುಗಳಿಗೆ ಭಾರತ ತನ್ನನ್ನು ತೆರೆದುಕೊಂಡಿತು. ನಂತರ ಬಂದ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಎಲ್‌ಪಿಜಿ ನೀತಿಗಳನ್ನು ಮತ್ತಷ್ಟು ವಿಸ್ತರಿಸಿತು. ನಂತರ ಬಂದ ಪ್ರತಿಯೊಂದು ಸರ್ಕಾರಗಳೂ ಭಾರತದ ಆರ್ಥಿಕತೆಯನ್ನು ವಿದೇಶೀ ಬಂಡವಾಳದ ಷರತ್ತುಗಳಿಗೆ ಒಪ್ಪಿಸುವ, ಸಾರ್ವಜನಿಕ ರಂಗವನ್ನು ಕಳಚಿ ಹಾಕುವ, ಆಮದು ನಿರ್ಬಂಧವನ್ನು ಇಲ್ಲವಾಗಿಸುವ ದಾರಿಯನ್ನು ಸುಗಮಗೊಳಿಸುತ್ತಾ ಬಂದವು. ಸಂಪೂರ್ಣ ಸರ್ಕಾರಿ ವಲಯವನ್ನು ಖಾಸಗೀಕರಿಸುವ ಮತ್ತು ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆತವನ್ನು ವ್ಯಾಪಕಗೊಳಿಸುವ ಮತ್ತು ಏಕಸ್ವಾಮ್ಯ ಬಂಡವಾಳದಾರರಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಯಿತು.

ವಿದೇಶೀ ಮತ್ತು ದೇಶೀ ಬೃಹತ್ ಬಂಡವಾಳದಾರರ ಒತ್ತಡಕ್ಕೆ ಮಣಿದು ಹಣಕಾಸು ಮತ್ತು ವಿಮಾ ವಲಯವನ್ನು, ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ್ದರ ಪರಿಣಾಮ ಸೇವಾ ವಲಯವನ್ನು ಖಾಸಗೀಕರಣಕ್ಕೆ ಒಡ್ಡಲಾಯಿತು. ಪೇಟೆಂಟ್ ಕಾನೂನಿನಲ್ಲಿ ತರಲಾದ ಬದಲಾವಣೆಗಳಿಂದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ಗಳಿಗೆ ಒಪ್ಪಿಸಲು ಹಾದಿ ಮಾಡಲಾಯಿತು.

ಉದಾರೀಕರಣ ಮತ್ತು ಖಾಸಗೀಕರಣದ ಹಾದಿಯು ದೊಡ್ಡ ಬಂಡವಾಳಶಾಹಿಗೆ ಅಪಾರ ಲಾಭ ತಂದಿತು. 1957 ರಲ್ಲಿ 22 ಅತಿದೊಡ್ಡ ಏಕಸ್ವಾಮ್ಯ ಮನೆತನೆಗಳ ಸಂಪತ್ತು ರೂ.312.63 ಕೋಟಿ ಇದ್ದದ್ದು 1997 ರಲ್ಲಿ 1,58,004.72 ಕೋಟಿ, ಅಂದರೆ 500 ಪಟ್ಟು ಹೆಚ್ಚಳವಾಯಿತು. 2020 ರಲ್ಲಿ ಇದು ಸುಮಾರು 23 ಲಕ್ಷ ಕೋಟಿ ರೂಗಳಾಗಿದೆ.

ಉದಾರೀಕರಣದ ಅವಧಿಯಲ್ಲಿ ಆಂತರಿಕ ಮತ್ತು ಬಾಹ್ಯ ಎರಡೂ ಸಾಲಗಳು ಹೆಚ್ಚಾಗಿವೆ. ಕಂದಾಯ ವೆಚ್ಚದ ಬಹುಪಾಲು ಬಡ್ಡಿ ಪಾವತಿಗೇ ಹೋಗುತ್ತಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಕಡಿತವಾಗುತ್ತಿದೆ. ಉದಾರೀಕರಣದಿಂದಾಗಿ ಸಾಮಾಜಿಕ, ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಗಳು ತೀವ್ರವಾಗಿ ಹೆಚ್ಚಾಗಿವೆ. ಕಾರ್ಮಿಕರ ಮೇಲಿನ ದಾಳಿಗಳು ಈ ನಿಟ್ಟಿನಲ್ಲೇ ಬರುತ್ತಿವೆ.

ಒಟ್ಟಾರೆಯಾಗಿ, ಭಾರತದ ಆಳುವ ವರ್ಗಗಳ ಬಂಡವಾಳಶಾಹಿ ಬೆಳವಣಿಗೆಯ ಇಂತಹ ದಾರಿ ಸಾರ್ವಜನಿಕ ವಲಯದ ಎಲ್ಲಾ ಉದ್ದಿಮೆಗಳನ್ನೂ ಖಾಸಗೀಕರಿಸುವುದರ ಹಿಂದಿನ ತಾತ್ವಿಕತೆಯಾಗಿ ಗಟ್ಟಿಗೊಳ್ಳುತ್ತಾ ಬಂದಿದೆ. ಆರ್ಥಿಕ ಸ್ವಾವಲಂಬನೆ ಮತ್ತು ಸಾರ್ವಭೌಮತೆ, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಕಾರ್ಮಿಕ ಹಕ್ಕುಗಳ ರಕ್ಷಣೆ ಮುಂತಾದ ಪರಿಕಲ್ಪನೆಗಳನ್ನು ಗಾಳಿಗೆ ತೂರಲಾಯಿತು. ರಾಜೀವ್‌ಗಾಂಧಿ ಕಾಲದಲ್ಲಿ ಆರಂಭಗೊಂಡು, ಪಿ.ವಿ.ನರಸಿಂಹರಾವ್ ಕಾಲದಲ್ಲಿ ಗಟ್ಟಿಗೊಂಡು, ಎ.ಬಿ.ವಾಜಪೇಯಿ ಆಡಳಿತದಲ್ಲಿ ಸಾರ್ವಜನಿಕ ವಲಯವನ್ನು ‘ಚಿಲ್ಲರೆ’ ಮಾರಾಟದ ಬದಲಿಗೆ ‘ಇಡಿಯಾಗಿ’ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ಬಂದಿತು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ‘ಬಂಡವಾಳ ಹಿಂತೆಗೆತ’ಕ್ಕೆ ಒಬ್ಬ ಮಂತ್ರಿ ನೇಮಕವಾಯಿತು.

ನಂತರ ಬಂದ ಯುಪಿಎ ಮೊದಲ ಸರ್ಕಾರದ ಸಂದರ್ಭದಲ್ಲಿ ಎಡಪಕ್ಷಗಳ ಬೆಂಬಲ ಇದ್ದದ್ದರಿಂದಾಗಿ ಈ ಪ್ರಕ್ರಿಯೆಗೆ ಸ್ವಲ್ಪ ಮಟ್ಟಿನ ತಡೆ ಉಂಟಾಯಿತು. ಈಗ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಇನ್ನೂ ಒಂದೆಜ್ಜೆ ಮುಂದೋಗಿ ಯೋಜನಾಬದ್ಧ ಅಭಿವೃದ್ಧಿ ಪರಿಕಲ್ಪನೆಯನ್ನೇ ನಾಶ ಮಾಡಿ ಯೋಜನಾ ಆಯೋಗವನ್ನು ರದ್ದು ಮಾಡಿದೆ ಮತ್ತು ನೀತಿ ಆಯೋಗವನ್ನು ಅಸ್ಥಿತ್ವಕ್ಕೆ ತಂದಿದೆ. ನೀತಿ ಆಯೋಗದ ಅತಿ ಮುಖ್ಯವಾದ ಕೆಲಸವೆಂದರೆ ಸಾರ್ವಜನಿಕ ವಲಯವನ್ನು ಸಂಪೂರ್ಣವಾಗಿ ಕಳಚಿ ಹಾಕುವುದು.

ಸಾರ್ವಜನಿಕ ಮತ್ತು ಖಾಸಗಿ ವಾದಗಳು

1). ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಪ್ರತಿಪಾದಕರು ಸಾಮಾನ್ಯವಾಗಿ ಆರೋಪಿಸುವುದು “ಅದಕ್ಷ” ಎಂಬುದು. ಹಲವಾರು ಪಿಎಸ್‌ಯುಗಳು ನಷ್ಟದಲ್ಲಿರುವುದೇ ಇದಕ್ಕೆ ಸಾಕ್ಷಿ.

– ಸಾರ್ವಜನಿಕ ವಲಯದ ಗುರಿ ಕೇವಲ ಲಾಭ ಮಾಡುವುದು ಮಾತ್ರವಲ್ಲ, ಲಾಭದಲ್ಲಿರುವುದೇ ದಕ್ಷತೆಯೂ ಎಂಬುದೂ ಸರಿಯಲ್ಲ. ಇವನ್ನು ಒಂದು ಕ್ಷಣ ಪಕ್ಕಕ್ಕಿಟ್ಟು ನೋಡಿದರೂ, ಎರಡು ಅಂಶಗಳು ಕಾಣುತ್ತವೆ. ಒಂದು, ಒಂದಾದ ನಂತರ ಒಂದು ಸರ್ಕಾರಗಳು ಲಾಭದಾಯಕ ಪಿಎಸ್‌ಯುಗಳನ್ನು ಖಾಸಗೀಕರಿಸುತ್ತಿವೆ. ಏಕೆಂದರೆ, ನಷ್ಟದಲ್ಲಿರುವ ಪಿಎಸ್‌ಯುಗಳ ಮಾರಾಟ ಯಶಸ್ಸು ಕಾಣುತ್ತಿಲ್ಲ. ಎರಡು, ಲಾಭದಾಯಕವಾಗಿರುವ ಪಿಎಸ್‌ಯುಗಳನ್ನೂ ಒಳಗೊಂಡಂತೆ, ಉದ್ದೇಶಪೂರ್ವಕವಾಗಿ ಅವುಗಳನ್ನು ಕಡೆಗಣಿಸಲಾಗಿದೆ ಮತ್ತು ಖಾಸಗಿಯವರಿಗೆ ಆದ್ಯತೆ ನೀಡಲಾಗಿದೆ.

ಉದಾಗೆ: ಓಎನ್‌ಜಿಸಿ- ಬಿಜೆಪಿ ಸರ್ಕಾರಕ್ಕೆ “ವಿಶೇಷ ಡಿವಿಡೆಂಡ್ಸ್”ನ್ನು ಒತ್ತಾಯಪೂರ್ವಕವಾಗಿ ಘೋಷಿಸುವಂತೆ ಮಾಡಿದ್ದರಿಂದ, ಅದರ ಕ್ಯಾಷ್ ಮಟ್ಟವು 2016-17 ರಿಂದ 2017-18 ರ ವ್ಯತ್ಯಾಸದಲ್ಲಿ ಶೇ.92 ರಷ್ಟು ಕಡಿತವಾಗಿದೆ. 2016-17 ರಲ್ಲಿ ರೂ.7760 ಕೋಟಿ, 2017-18 ರಲ್ಲಿ ರೂ.8470 ಕೋಟಿ ಡಿವಿಡೆಂಡ್ ಪಾವತಿಸಿದೆ. ಸಾಲದ ಸುಳಿಯಲ್ಲಿದ್ದ ಗುಜರಾತ್ ಸ್ಟೇಟ್ ಪೆಟ್ರೊಲಿಯಂ ಕಾರ್ಪೋರೇಷನ್‌ನ್ನು ಬೇಲ್ ಔಟ್ ಮಾಡಲಾಗಿದೆ. ಅದೇ ರೀತಿ 2018 ಜನವರಿಯಲ್ಲಿ ಹೆಚ್‌ಪಿಸಿಎಲ್‌ನ ಕೇಂದ್ರ ಸರ್ಕಾರದ ಶೇ.51.11 ರಷ್ಟು ಷೇರುಗಳನ್ನು ರೂ.36,915 ಕೋಟಿಗಳಿಗೆ ಕೊಂಡುಕೊಳ್ಳಲು ಮೋದಿ ಸರ್ಕಾರ ಓಎನ್‌ಜಿಸಿಯನ್ನು ಬಲವಂತ ಮಾಡಿದೆ. ಇದಕ್ಕಾಗಿ ಓಎನ್‌ಜಿಸಿ ರೂ.35,000 ಕೋಟಿ ಸಾಲ ಮಾಡಬೇಕಾಯ್ತು.

ಉದ್ದೇಶಪೂರ್ವಕವಾಗಿ ಅತ್ಯಂತ ಲಾಭದಾಯಕವಾಗಿದ್ದನ್ನು ಮಾರಾಟ ಮಾಡಲಾದ ಮತ್ತೊಂದು ಪಿಎಸ್‌ಯು ಬಿ.ಎಸ್.ಎನ್.ಎಲ್. ಆರಂಭದ ಐದು ವರ್ಷಗಳ ಕಾಲ ಮೊಬೈಲ್ ಸೇವೆಗಳನ್ನು ಒದಗಿಸಲು ಖಾಸಗಿಯವರಿಗೆ ಅವಕಾಶ ಕೊಟ್ಟು ಇದಕ್ಕೆ ಲೈಸೆನ್ಸ್ ನಿರಾಕರಿಸಲಾಯಿತು. ಸತತವಾಗಿ ಸರ್ಕಾರಗಳು ರಿಲಯನ್ಸ್ ಕಂಪನಿಗೆ ದುಷ್ಟ ಮಾರ್ಗಗಳನ್ನು ಅನುಸರಿಸಲು, ಎಲ್ಲಾ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ಕೊಟ್ಟಿದ್ದರಿಂದ ಬಿಎಸ್‌ಎನ್‌ಎಲ್ ಅಪಾರ ನಷ್ಟ ಅನುಭವಿಸುವಂತಾಯಿತು. ಬಿಎಸ್‌ಎನ್‌ಎಲ್ ಹೆಚ್ಚಿನ ಗ್ರಾಹಕರ ಬೇಡಿಕೆಯನ್ನು ಪೂರೈಸಲು ನಡೆಸಿದ ಪ್ರಯತ್ನಗಳನ್ನು ಕಡೆಗಣಿಸಲಾಯಿತು. 4ಜಿ ತರಂಗಾಂತರವನ್ನು ಹೊಂದಲು ಇಂಟರ್‌ನೆಟ್ ಸೇವೆಗಳನ್ನು ವೇಗಗೊಳಿಸಲು ರಿಲಯನ್ಸ್ ಗೆ ಅವಕಾಶ ನೀಡಲಾಯಿತು. ಬಿಎಸ್‌ಎನ್‌ಎಲ್‌ಗೆ ನಿರಾಕರಿಸಲಾಯಿತು.

ಸಾರ್ವಜನಿಕದಿಂದ ಖಾಸಗಿಗೆ ಕೇವಲ ಮಾಲೀಕತ್ವವನ್ನು ಬದಲಾವಣೆ ಮಾಡುವುದರಿಂದ ಉದ್ದಿಮೆಗಳ ದಕ್ಷತೆಯಾಗಲೀ ಅಥವಾ ಉತ್ಪಾದಕತೆಯಾಗಲೀ ಹೆಚ್ಚಾಗುವುದಿಲ್ಲ. ಆಧುನಿಕ ಕಾರ್ಪೊರೇಟ್ ನಿರ್ವಹಣಾ ವ್ಯವಸ್ಥೆಯಲ್ಲಿ ಮಾಲೀಕತ್ವದಿಂದ ನಿರ್ವಹಣೆಯನ್ನು ಬೇರ್ಪಡಿಸಲಾಗಿದೆ. ಹಾಗಿರುವಾಗ, ಸಾರ್ವಜನಿಕವಾಗಲೀ ಖಾಸಗಿಯಾಗಲೀ ದಕ್ಷತೆಯನ್ನು, ಉತ್ಪಾದಕತೆಯನ್ನು ಹೆಚ್ಚಿಸಲು ಸೂಕ್ತ ವಿಧಾನಗಳನ್ನು ಅನುಸರಿಸಲು ಸಮಸ್ಯೆಯೇನಿಲ್ಲ. ಹೀಗಾಗಿ ಆಡಳಿತದಲ್ಲಿ ವೃತ್ತಿಪರತೆಯನ್ನು ಜಾರಿಗೆ ತರಲು ಖಾಸಗೀಕರಣವೇ ಆಗಬೇಕೆಂದೇನಿಲ್ಲ.

2). ಹಣಕಾಸು ಕೊರತೆಯನ್ನು ತುಂಬಲು ಸಾರ್ವಜನಿಕ ಕ್ಷೇತ್ರದ ಬಂಡವಾಳ ಹಿಂತೆಗೆತ ಸರಿಯಾದ ದಾರಿ.

– ಹಣಕಾಸು ಕೊರತೆಯನ್ನು ತುಂಬಲು ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆತ ಎಂಬುದು ಸಮಾಜದಲ್ಲಿ ಸಂಪತ್ತಿನ ಅಸಮಾನತೆಗಳನ್ನು ಕಡಿಮೆಯೇನೂ ಮಾಡುವುದಿಲ್ಲ. ಖಾಸಗಿ ವಲಯವು ಸಾರ್ವಜನಿಕ ವಲಯದ ಈಕ್ವಿಟಿಗಾಗಿ ಸರ್ಕಾರದ ಮೇಲೆ ನೇರ ಅಥವಾ ಪರೋಕ್ಷ ಹಿಡಿತವನ್ನು ಸಾಧಿಸುತ್ತದೆ. ಹಣಕಾಸು ಕೊರತೆಯಿಂದ ಉಂಟಾಗಬಹುದಾದ ಸಂಪತ್ತಿನ ವಿತರಣೆ/ಪ್ರಮಾಣದ ಬದಲಿಗೆ ಸಂಪತ್ತಿನ ಮೇಲಿನ ಹಿಡಿತದ ಸ್ವರೂಪದಲ್ಲಿ ಬದಲಾವಣೆ ಆಗಬಹುದು ಅಷ್ಟೆ. ಹಣಕಾಸು ಕೊರತೆಯು ಸರ್ಕಾರದ ಮೇಲೆ ಬಡ್ಡಿ ಪಾವತಿಯ ಹೊಣೆಗಾರಿಕೆಯನ್ನು ವಿಧಿಸುತ್ತದೆ, ಆದರೆ ಬಂಡವಾಳ ಹಿಂತೆಗೆತವು, ಭವಿಷ್ಯದ ಆದಾಯಗಳನ್ನೇ ಒಮ್ಮೆಗೇ ಇಲ್ಲವಾಗಿಸಿಬಿಡುತ್ತದೆ. ಹೀಗಾಗಿ ಭವಿಷ್ಯದ ಹಣಕಾಸು ಬಿಕ್ಕಟ್ಟುಗಳಿಗೆ ಬಂಡವಾಳ ಹಿಂತೆಗೆತ/ಮಾರಾಟ ಪರ್ಯಾಯವಾಗಲು ಸಾಧ್ಯವೇ ಇಲ್ಲ.

ರಾಷ್ಟ್ರೀಯ ಅಭಿವೃದ್ಧಿಗೆ ಪಿಎಸ್‌ಯುಗಳ ಕೊಡುಗೆ

ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ ವ್ಯವಸ್ಥೆಯ ನಿರ್ಮಾಣದ ಪಥದಲ್ಲಿ ನಮ್ಮ ದೇಶದಲ್ಲಿ ಸಾರ್ವಜನಿಕ ವಲಯವನ್ನು ಸ್ಥಾಪಿಸಲಾಯಿತಾದರೂ, ಅದು ರಾಷ್ಟ್ರದ ಅರ್ಥಿಕತೆಗೆ ಮತ್ತು ಜನತೆಯ ಬದುಕಿಗೆ ಮತ್ತು ಸಾಮಾಜಿಕ ಬದಲಾವಣೆಗೆ ನೀಡಿರುವ ಕೊಡುಗೆಯನ್ನು ಕಡೆಗಣಿಸಲು ಅಸಾಧ್ಯ.

ನಮ್ಮ ದೇಶವು ವಸಾಹತು ಹಿಡಿತದಿಂದ ವಿಮೋಚನೆಗೊಂಡ ಬಳಿಕ ದೇಶೀಯ ಕೈಗಾರಿಕೆಯ ಭದ್ರ ಬುನಾದಿಯನ್ನು ಹಾಕುವಲ್ಲಿ ಸಾರ್ವಜನಿಕ ವಲಯದ ಪಾತ್ರ ಮಹತ್ತರವಾದುದು. ತಕ್ಷಣದ ಲಾಭಗಳಿಕೆಯ ಸಾಧ್ಯತೆಯಿಲ್ಲದ ಕ್ಷೇತ್ರಗಳಾಗಿದ್ದ ವಿದ್ಯುತ್ ಉತ್ಪಾದನೆ – ಜಲವಿದ್ಯುತ್, ಉಷ್ಣ ವಿದ್ಯುತ್, ಅಣು ವಿದ್ಯುತ್, ಇತ್ಯಾದಿ, ಸಾರಿಗೆ – ರೈಲ್ವೆ, ರಸ್ತೆ, ಇತ್ಯಾದಿ, ಮುಂತಾದ ಮೂಲರಚನಾ ರಂಗಗಳಲ್ಲಿ ಅಡಿಪಾಯ ಹಾಕಿದ್ದು ಮತ್ತು ಸಂಪರ್ಕ, ಉಕ್ಕು, ರಕ್ಷಣಾ ಉಪಕರಣಗಳು, ಹಡಗು ನಿರ್ಮಾಣ, ತೈಲ, ಕಲ್ಲಿದ್ದಲು, ವಿಜ್ಞಾನ-ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ, ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಸಾರ್ವಜನಿಕ ಉದ್ದಿಮೆಗಳು ಅಪಾರ ಕೊಡುಗೆಯನ್ನು ನೀಡಿದವು.

ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳು, ಕೀಟನಾಶಕಗಳು, ಮುಂತಾದವುಗಳ ಬೆಳವಣಿಗೆಗೆ ಸಾರ್ವಜನಿಕ ವಲಯದ ಕೃಷಿ ಸಂಶೋಧನಾ ಸಂಸ್ಥೆಗಳು ನೀಡಿದ ಕೊಡುಗೆಗಳ ಫಲವಾಗಿ ಕೃಷಿ ಉತ್ಪಾದಕತೆ ದೊಡ್ಡ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಗಿದೆ.

ಖಾಸಗಿ ಬಡ್ಡಿ ವ್ಯಾಪಾರಿಗಳ ಶೋಷಣೆಯಿಂದ ಸಾರ್ವಜನಿಕರ ಉಳಿತಾಯವನ್ನು ರಕ್ಷಿಸುವ ಸಲುವಾಗಿ ಸಾಮಾನ್ಯ ಮತ್ತು ಜೀವ ವಿಮಾ ಕಂಪನಿಗಳನ್ನು ಮತ್ತು ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದ್ದರ ಫಲವಾಗಿ, ಖಾಸಗಿಯವರಿಗೆ ಆಸಕ್ತಿ ಇಲ್ಲದಿದ್ದ ದೇಶದ ಮೂಲೆಮೂಲೆಗಳಲ್ಲಿರುವ ಜನರನ್ನು ತಲುಪಲು ಸಾಧ್ಯವಾಯಿತು. ಇದರಿಂದ ರಾಷ್ಟ್ರೀಯ ಅಭಿವೃದ್ಧಿಗೆ ಮತ್ತು ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಸಾರ್ವಜನಿಕ ಉಳಿತಾಯವನ್ನು ಹೆಚ್ಚಿಸಲು ಸಾಧ್ಯವಾಯಿತು. ಎಲ್‌ಐಸಿಯು ಮೂಲಸಂರಚನೆಯ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ಅಪಾರವಾದ ಸಾರ್ವಜನಿಕ ಬಂಡವಾಳವನ್ನು ಒದಗಿಸಿದೆ. 2008 ರಲ್ಲಿ ಬಂಡವಾಳಶಾಹಿ ಹಣಕಾಸು ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಭಾರತ ದೇಶದ ಆರ್ಥಿಕತೆಯನ್ನು ರಕ್ಷಿಸಿದ್ದು ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಪ್ರಬಲವಾಗಿ ಇದ್ದದ್ದರಿಂದ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಸಾರ್ವಜನಿಕ ವಲಯದ ಕಾರ್ಮಿಕರು ತಮ್ಮ ಹಕ್ಕುಗಳ ಪ್ರತಿಪಾದನೆ ಮತ್ತು ಸಾಮೂಹಿಕ ಚೌಕಾಶಿ ವಿಚಾರದಲ್ಲಿ ಖಾಸಗಿ ರಂಗದ ಕಾರ್ಮಿಕರಿಗಿಂತ ಉತ್ತಮವಾಗಿ ತಮ್ಮ ಜೀವನ ಮಟ್ಟಗಳನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ. ಇತರೆ ಕಾರ್ಮಿಕ ವಿಭಾಗಗಳ ಮೇಲೆ ಇದು ವ್ಯಾಪಕ ಪರಿಣಾಮ ಬೀರಿರುವುದನ್ನು ನಾವು ಮರೆಯುವಂತಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಮೀಸಲಾತಿಯನ್ನು ಜಾರಿ ಮಾಡಿದ್ದರಿಂದಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನವಿಭಾಗಗಳ ಅಭಿವೃದ್ಧಿಗೆ ಸಹಾಯಕವಾಗಿದೆ.

ಖಾಸಗೀಕರಣದಿಂದ ಪಿಎಸ್‌ಯುಗಳ ಮೇಲೆ ಒಟ್ಟಾರೆ ಪರಿಣಾಮ

ಪ್ರಭುತ್ವ ಪ್ರಾಯೋಜಿತ ಉತ್ಪಾದನಾ ಘಟಕಗಳ ಖಾಸಗೀಕರಣ, ರೈತರು, ಬಡವರು, ದುರ್ಬಲ ವರ್ಗಗಳಿಗೆ ನೀಡುವ ಸಬ್ಸಿಡಿಗಳನ್ನು ಒಳಗೊಂಡು ಪ್ರಭುತ್ವದ ವೆಚ್ಚದ ಕಡಿತ, ವಿವಿಧ ವಲಯಗಳಲ್ಲಿ ಪ್ರಭುತ್ವ ನಿಯಂತ್ರಣದ ಕಳಚುವಿಕೆ ಮುಂತಾದ ಕ್ರಮಗಳನ್ನು “ಪ್ರಭುತ್ವದ ಹಿಂತೆಗೆತ”ದ ಭಾಗವಾಗಿ ನಾವು ಕಾಣಬಹುದು. ಈ ಪ್ರಭುತ್ವ ಹಿಂತೆಗೆತವನ್ನು ಯಾವ ರಾಜಕೀಯ ಪಕ್ಷ ಹೆಚ್ಚು ಉತ್ತಮವಾಗಿ ಮಾಡಬಲ್ಲದೋ ಅಂತಹ ಪಕ್ಷಗಳನ್ನು ಪ್ರಭುತ್ವಾಧಿಕಾರಕ್ಕೆ ತಂದು ಕೂರಿಸುವಲ್ಲಿ ದೊಡ್ಡ ಬಂಡವಾಳಶಾಹಿ ವರ್ಗ ನಿರ್ಣಾಯಕ ಪಾತ್ರವನ್ನು ವಹಿಸಿದೆ. ದೊಡ್ಡ ಬಂಡವಾಳಶಾಹಿಗೆ ಇದು ಒಂದು ರೀತಿಯ ಪ್ರಭುತ್ವದ ಮಧ್ಯಪ್ರವೇಶದ ಬದಲಿಗೆ ಮತ್ತೊಂದು ರೀತಿಯ ಮಧ್ಯಪ್ರವೇಶ ಅಷ್ಟೆ.

‘ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ ಬೆಳವಣಿಗೆ’ಯಿಂದ ‘ಪ್ರಭುತ್ವ ಹಿಂತೆಗೆತದ ಬಂಡವಾಳಶಾಹಿ ಬೆಳವಣಿಗೆ’ಯ ಈ ಸ್ಥಿತ್ಯಂತರವು, ಸಾಮಾನ್ಯವಾಗಿ, ಮೂರು ಪರಿಣಾಮಗಳನ್ನು ತರುವ ಉದ್ದೇಶವನ್ನು ಹೊಂದಿದೆ. ಪ್ರೊ.ಪ್ರಭಾತ್ ಪಟ್ನಾಯಕ್ ಇದನ್ನು ಈ ರೀತಿ ವಿವರಿಸುತ್ತಾರೆ: ಮೊದಲನೆಯದು, ಬಂಡವಾಳಶಾಹಿಗಳಿಗೆ ಎದುರಾಗಿ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸುವುದು. ಎರಡನೆಯದು, ಅಪಾರವಾಗಿ ಬಂಡವಾಳದ ಕ್ರೋಢೀಕರಣ, ಅಂದರೆ, ಸಣ್ಣ ಬಂಡವಾಳದಾರರನ್ನು ನುಂಗಿ ದೊಡ್ಡ ಬಂಡವಾಳದಾರರು ಬೆಳೆಯುವುದು. ಮೂರನೆಯದು, ಬಂಡವಾಳಶಾಹಿಗಳೊಳಗೇ ಉತ್ಪಾದನಾ ಹಿತಾಸಕ್ತಿಗಳಿಗಿಂತ ಹಣಕಾಸು ಹಿತಾಸಕ್ತಿಗಳು ಬಲಿಷ್ಟಗೊಳ್ಳುವುದು. ಈ ಮೂರೂ ಪರಿಣಾಮಗಳು ಮೋದಿ ಆಡಳಿತದಲ್ಲಿ ಅತ್ಯಂತ ವೇಗವಾಗಿ ಸಂಭವಿಸುತ್ತಿವೆ. ಶ್ರಮದ ಮತ್ತು ಬಂಡವಾಳದ ನಡುವಿನ ವೈರುಧ್ಯವು ತೀವ್ರಗೊಳ್ಳುತ್ತಿರುವ ಈ ಒಟ್ಟು ಬಿಕ್ಕಟ್ಟನ್ನು ಪರಿಹರಿಸಲು ಕಾರ್ಮಿಕ ವರ್ಗ ಮತ್ತು ರೈತಾಪಿ ಸೇರಿದಂತೆ ಇತರೆ ದುಡಿಯುವ ಜನತೆ ಸಮರಶೀಲ ಹೋರಾಟಗಳಿಗೆ ಸಿದ್ಧಗೊಳ್ಳಬೇಕಾದ ಅಗತ್ಯವಿದೆ. ಕಾರ್ಮಿಕ ವರ್ಗ ಒಂದು ಸಾಮಾಜಿಕ ಏಜೆನ್ಸಿಯಾಗಿ ಈ ವೈರುಧ್ಯಗಳನ್ನು ಹೊಡೆದು ಹಾಕಲು ಮತ್ತು ಹೊಸದೊಂದು ಸಾಮಾಜಿಕ ವ್ಯವಸ್ಥೆಗೆ ದಾರಿ ಮಾಡಿಕೊಡಲು ಮುಂದಾಗುವುದು ಕಾಲದ ಅಗತ್ಯವಾಗಿದೆ.

ಸಾರ್ವಜನಿಕ ವಲಯದ ಖಾಸಗೀಕರಣವು ಕೆಲವೇ ಕೆಲವು ಖಾಸಗಿಯವರ ಕೈಯಲ್ಲಿ ಆರ್ಥಿಕ ಅಧಿಕಾರದ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ. ಈ ಆರ್ಥಿಕ ಶಕ್ತಿಯನ್ನು ಬಳಸಿ ಗ್ರಾಹಕರನ್ನು ಮತ್ತು ಕಾಮಿಕರನ್ನು ಶೋಷಿಸಲು ಕಾರಣವಾಗುತ್ತದೆ. ಕೆಲವೇ ಕೆಲವು ಖಾಸಗಿಯವರ ಕೈಯಲ್ಲಿ ಅಪಾರ ಸಂಪತ್ತಿನ ಕೇಂದ್ರೀಕರಣವಾದಾಗ, ಆದಾಯ ಮತ್ತು ಸಂಪತ್ತಿನಲ್ಲಿ ಅಸಮಾನತೆಗಳು ಹೆಚ್ಚಾಗುತ್ತವೆ. ಹೀಗಾಗಿ ಸಮಾನತೆಯನ್ನು ಸಾಧಿಸುವ ಉದ್ದೇಶಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ.

ಆಂಟಿ-ಟ್ರಸ್ಟ್ ಕಾಯ್ದೆಯೆ ಅನುಪಸ್ಥಿತಿಯಲ್ಲಿ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವು ಖಾಸಗಿ ಏಕಸ್ವಾಮ್ಯಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಸಂಪನ್ಮೂಲಗಳನ್ನು ತಪ್ಪಾಗಿ ಹಂಚಿಕೆ ಮಾಡಲಾಗುತ್ತದೆ. ಗ್ರಾಹಕರ ಕಲ್ಯಾಣವು ಕುಸಿಯುತ್ತದೆ. ಏಕಸ್ವಾಮ್ಯದ ಪರಿಣಾಮಗಳು ಬೆಲೆಗಳ ಹೆಚ್ಚಳಕ್ಕೆ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.

ಖಾಸಗೀಕರಣವು ಕಾರ್ಮಿಕರನ್ನು ತೆಗೆದುಹಾಕಲು ಪ್ರೋತ್ಸಾಹಿಸುತ್ತದೆ. ಕಾರ್ಮಿಕರ ಜೀವನಾಧಾರಗಳು ಕಷ್ಟವಾಗುತ್ತದೆ. ನಿರುದ್ಯೋಗ ಹೆಚ್ಚಾಗುತ್ತದೆ. ಸಾಮಾಜಿಕ ಸಮಸ್ಯೆ ಬಿಗಡಾಯಿಸುತ್ತದೆ.

ಸುಮಾರು 12 ಲಕ್ಷ ಕಾರ್ಮಿಕರಿರುವ ಕೇಂದ್ರ ಸಾರ್ವಜನಿಕ ಉದ್ದಿಮೆಗಳ ಹಾಗೂ ಸುಮಾರು 15 ಲಕ್ಷ ಕಾರ್ಮಿಕರಿರುವ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳ ಖಾಸಗೀಕರಣದಿಂದ ಉದ್ಯೋಗಗಳು ಮತ್ತು ಉದ್ಯೋಗದ ಪರಿಸ್ಥಿತಿ ನಾಶವಾಗುತ್ತದೆ ಮತ್ತು ವಿದೇಶೀ ಮತ್ತು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಸಾರ್ವಜನಿಕ ಸಂಸ್ಥೆಗಳು ಬಿಡಿಗಾಸಿಗೆ ಮಾರಲ್ಪಡುತ್ತವೆ. ಮೋದಿ ಆಡಳಿತದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಶೇ.25 ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಕ್ಯಾಶ್ಯುವಲ್ ಮತ್ತು ಕಾಂಟ್ರಾಕ್ಟ್ ಕಾರ್ಮಿಕರ ಸಂಖ್ಯೆ 2014 ರಲ್ಲಿ ಶೇ.36 ಇದ್ದದ್ದು 2018 ರಲ್ಲಿ ಶೇ.53 ಕ್ಕೆ ಹೆಚ್ಚಳವಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ, ಆಧುನೀಕರಣ, ಪ್ರಜಾಪ್ರಭುತ್ವೀಕರಣ, ಅಧಿಕಾರಶಾಹಿ ನಿಯಂತ್ರಣಗಳು ಮತ್ತು ಭ್ರಷ್ಟಾಚಾರದಿಂದ ಮುಕ್ತಿ, ಕಟ್ಟುನಿಟ್ಟಿನ ಹೊಣೆಗಾರಿಕೆ ದೃಢಪಡಿಸುವುದು, ಆಡಳಿತದಲ್ಲಿ ಕಾರ್ಮಿಕರ ಭಾಗವಹಿಸುವಿಕೆ ಖಾತ್ರಿಪಡಿಸುವುದು ಮತ್ತು ಹೆಚ್ಚು ಪೈಪೋಟಿಯುಕ್ತಗೊಳಿಸುವುದು, ಈ ಎಲ್ಲಾ ಕ್ರಮಗಳ ಮೂಲಕ ಆರ್ಥಿಕತೆಯಲ್ಲಿ ಸಾರ್ವಜನಿಕ ವಲಯವು ನಿರ್ಣಾಯಕ ಸ್ಥಾನವನ್ನು ಹೊಂದುವಂತೆ ಮಾಡುವ ರಾಜಕೀಯ ಪರ್ಯಾಯವನ್ನು ರೂಪಿಸಲು ಕಾರ್ಮಿಕ ವರ್ಗ ಮುನ್ನಡೆಯಬೇಕಾಗಿದೆ.

 

Donate Janashakthi Media

Leave a Reply

Your email address will not be published. Required fields are marked *