ಕಾಂಗ್ರೆಸ್, ಜೆಡಿಎಸ್ ಶಾಸಕರ ವಿರುದ್ಧ ಮುಖಂಡರ ಆಕ್ರೋಶ
ಮೈಸೂರು : ಬಿಜೆಪಿ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಜೆಡಿಎಸ್ ಗೆ ಮೇಯರ್ ಸ್ಥಾನಕ್ಕೆ ಬೆಂಬಲ ನೀಡಿ ಹಳೆ ದೋಸ್ತಿಯನ್ನು ಕಾಂಗ್ರೆಸ್ ಮುಂದುವರೆಸಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಕೈ ನಾಯಕರಿಂದ ಭಿನ್ನರಾಗ ಕೇಳಿ ಬಂದಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಸದಸ್ಯ ಅಯೂಬ್ ಖಾನ್ ಅವರು, ಹಿಂದಿನಿಂದಲೂ ಸಿದ್ದರಾಮಯ್ಯನವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಸದಸ್ಯರೇ ಮೇಯರ್ ಆಗಬೇಕೆಂದು ತಿಳಿಸುತ್ತಾ ಬಂದಿದ್ದರು. ಆದರೆ ತನ್ವೀರ್ ಸೇಠ್ ನಮ್ಮ ನಾಯಕರ ವಿರುದ್ಧವೇ ತೀರ್ಮಾನ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು ಜೆಡಿಎಸ್ಗೆ ಅಡ ಇಟ್ಟು ಚುನಾವಣೆ ಮಾಡಬೇಕಾದ ಅನಿವಾರ್ಯತೆ ನಮಗೆ ಇರಲಿಲ್ಲ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಚುನಾವಣೆ ನಡೆಯುವ ವೇಳೆಯಲ್ಲಿ ಸಿದ್ದರಾಮಯ್ಯ ಅವರು ತನ್ವೀರ್ ಸೇಠ್ ಅವರಿಗೆ ಬರೋಬ್ಬರಿ 12 ಬಾರಿ ಕಾಲ್ ಮಾಡಿದ್ದಾರೆ. ಆದರೆ ಅವರು ರಿಸೀವ್ ಮಾಡಲಿಲ್ಲ. ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬುದು ನಮ್ಮ ನಾಯಕರ ತೀರ್ಮಾನವಾಗಿರಲಿಲ್ಲ. ತನ್ವೀರ್ ಅವರು ಸಿದ್ದರಾಮಯ್ಯ ಋಣ ತೀರಿಸಬೇಕಿತ್ತು. ಆದರೆ ಅವರು ಕಾಂಗ್ರೆಸ್ ಮೇಯರ್ ಅಭ್ಯರ್ಥಿಗೆ ಒಬ್ಬರೂ ಮತ ಹಾಕದಂತೆ ಮಾಡಿ ಕೈ ಕಟ್ಟಿದ್ದರು ಎಂದರು. ಹಾಗಾಗಿ ತನ್ವೀರ್ ಸೇಠ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಇದರ ಬೆನ್ನಲ್ಲೆ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ಜೆಡಿಎಸ್ ಮುಖಂಡರು, ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಭಾಗಿಯಾಗದೇ ದೂರ ಉಳಿದ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಇಬ್ಬರೂ ಕೂಡಾ ಉದ್ದೇಶಪೂರ್ವಕವಾಗಿ ದೂರ ಉಳಿದಿದ್ದಾರೆ. ಮನೆಯಲ್ಲಿಯೇ ಇದ್ದುಕೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಜಿ.ಟಿ. ದೇವೇಗೌಡರು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಪಕ್ಷವೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ತಾಕತ್ತಿದ್ದರೆ ಜಿಟಿಡಿ ಸ್ವಂತ ಶಕ್ತಿ ಮೇಲೆ ಗೆದ್ದು ತೋರಿಸಲಿ ಅಂತ ಸವಾಲು ಹಾಕಿದ್ರು. ಕಳೆದ ಹಲವು ದಿನಗಳಿಂದ ಜಿಟಿಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಜೆಡಿಎಸ್ ಪಕ್ಷದ ಸಿದ್ಧಾಂತವನ್ನ ಗಾಳಿಗೆ ತೂರಿದ್ದಾರೆ. ಕೂಡಲೇ ಜಿ.ಟಿ.ದೇವೇಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ಸ್ಪರ್ಧಿಸಿ ತಮ್ಮ ಶಕ್ತಿ ತೋರಿಸಲಿ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಜಿಟಿಡಿ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡರೆ ನಾವೆಲ್ಲರೂ ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಚೆಲುವೇಗೌಡ ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗತ್ತೆ ಅನ್ನೋದೆ ಸದ್ಯದ ಕುತೂಹಲ. ಮೈತ್ರಿ ಉಳಿಯುತ್ತಾ ಎನ್ನುವ ಪ್ರಶ್ನೆಗಳು ಈಗ ಏಳುತ್ತಿವೆ.