ಹಾಸ್ಟೇಲ್ ಸಿಬ್ಬಂದಿಗಳನ್ನು ನಿವೃತ್ತಿವರೆಗೂ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು, ಫೆ. 17 : ಸರ್ಕಾರಿ ಹಾಸ್ಟೆಲ್ ಹಾಗೂ ಸರ್ಕಾರಿ ವಸತಿ ಶಾಲೆಗಳ `ಡಿ’ ವರ್ಗದ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ಹಾಗೂ ಲಾಕ್‌ಡೌನ್ ಅವಧಿಯ ವೇತನವನ್ನು ಸಂದಾಯ ಮಾಡಲು ಮತ್ತು ಸೇವೆಯಿಂದ ಬಿಡುಗಡೆಗೊಳಿಸಲಾದ ಹೊರಸಂಪನ್ಮೂಲ ಸಿಬ್ಬಂದಿಗಳನ್ನು ನಿವೃತ್ತಿ ವರೆಗೆ ಸೇವೆಯಲ್ಲಿ ಮುಂದುವರೆಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಮೂಹಿಕ ಧರಣಿ ನಡೆಸಿದ್ದಾರೆ.

ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ, ಆಶ್ರಮ ಶಾಲೆಗಳಲ್ಲಿ, ಮೊರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ಮತ್ತು ಡಾ. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ `ಡಿ’ ವರ್ಗದ ಸಿಬ್ಬಂದಿಗಳಾಗಿ ಹತ್ತಾರು ವರ್ಷಗಳಿಂದ ಅಡುಗೆ, ಸ್ವಚ್ಛತೆ, ಕಾವಲು ಮೊದಲಾದ ಕೆಲಸ ಮಾಡಿಕೊಂಡು ಬಂದಿರುವವರಿಗೆ ಕೊರೊನಾ ಪೂರ್ವದ ಕೆಲವು ತಿಂಗಳುಗಳ ವೇತನ ಹಾಗೂ ಲಾಕ್‌ಡೌನ್ ಅವಧಿಯ ವೇತನ ಸಂದಾಯವಾಗಿಲ್ಲ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಇಲಾಖೆಗಳ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಲಾಕ್‌ಡೌನ್ ಅವಧಿಯ ವೇತನ ದೊರೆತಿದೆ. ಇವರಿಗೆ ಮಾತ್ರ ಅದು ಬಾಕಿ ಇದೆ. ಆಹಾರ ಸಾಮಗ್ರಿಗಳ ಕಿಟ್ ಸಹ ವಿತರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾದ  ನಿತ್ಯಾನಂದಸ್ವಾಮಿ ಆಗ್ರಹಿಸಿದರು.

ಇವರು ಆರ್ಥಿಕವಾಗಿ ಅತೀ ಹಿಂದುಳಿದವರು. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಈ ಮಹಿಳೆಯರಲ್ಲಿ ಹಲವರು ವಿಧವೆಯರು, ಸಣ್ಣ ಸಣ್ಣ ಮಕ್ಕಳನ್ನು ಸಾಕುವ ಜವಾಬ್ದಾರಿ ಉಳ್ಳವರು. ಅವರು ಈಗ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಒದ್ದಾಡುತ್ತಿದ್ದಾರೆ. ಇವರಿಗೆ ಆದಾಯದ ಬೇರೆ ಮೂಲಗಳಿಲ್ಲ. ಹಾಸ್ಟೆಲ್‌ನಲ್ಲಿ ಕೆಲಸ ಮಾಡುವುದನ್ನೇ ಅವಲಂಭಿಸಿರುವ ಇವರು ಕೊರೊನಾ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದವರಾಗಿದ್ದಾರೆ. ಇವರಿಗೆ ಬಾಕಿ ಇರುವ ವೇತನವನ್ನು ಸಂದಾಯಮಾಡಿ ಅವರಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲಾದ ಎಲ್ಲ ಹೊರಸಂಪನ್ಮೂಲ ಸಿಬ್ಬಂದಿಗಳನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರೆಸಲು ಒತ್ತಾಯಿಸಿ ಮುಖ್ಯಮಂತ್ರಿಗಳು, ಸಚಿವರು, ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘ, ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ, ಸಹ ಕಾರ್ಯದರ್ಶಿ ಕೆ. ಹನುಮೇಗೌಡ, ಖಜಾಂಚಿ ಚಂದ್ರಪ್ಪ ಹೊಸ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *