ಕೊಡಗು ಫೆ 15 : ಶಾಲೆಗೆ ಹೋಗಬೇಕಾದ ಬಾಲಕ ಕೂಲಿ ಮಾಡಿ ತಾಯಿಯನ್ನು ಸಾಕುತ್ತಿದ್ದರೆ, ಅಂತಹ ಕುಟುಂಬಕ್ಕೆ ಆವಾಸ್ ಯೋಜನೆ ಮನೆ ಕಟ್ಟಿಸಿಕೊಡಲು ಪಂಚಾಯಿತಿ ಅಧಿಕಾರಿಗಳು 30 ಸಾವಿರ ಲಂಚ ಕೇಳಿದ್ದಾರೆ. ಅಂಗವಿಕಲರ ಶಿಷ್ಯವೇತನ ಕೊಡಿಸಲು ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರು 3 ಸಾವಿರ ಲಂಚ ಕೊಡುವಂತೆ ಒತ್ತಾಯಿಸಿದ್ದಾರೆ. ಕೂಲಿ ಮಾಡಿ ಬದುಕುವ ಮಹಿಳೆಗೆ ಈ ರೀತಿ ಚಿತ್ರಹಿಂಸೆ ಕೊಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಜೇನುಕಲ್ಲುಬೆಟ್ಟ ಗ್ರಾಮದ ನಿವಾಸಿ ಮಲ್ಲಿಗೆ ಎಂಬ ಮಹಿಳೆ ತನ್ನ 14 ವರ್ಷದ ಮಗನೊಂದಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ತನ್ನ ಬಲಗೈ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಮಲ್ಲಿಗೆಗೆ, ಸರಿಯಾಗಿ ನಡೆದಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ 8 ನೇ ತರಗತಿಗೆ ಹೋಗಬೇಕಾಗಿರುವ ಆಕೆಯ 14 ವರ್ಷದ ಮಗ ವಾರದಲ್ಲಿ ಮೂರು ದಿನ ಶಾಲೆಗೆ ಹೋದರೆ, ಮೂರು ದಿನ ಕೂಲಿಗೆ ಹೋಗುತ್ತಿದ್ದಾನೆ.
ಇದನ್ನು ಓದಿ :ಕಾರ್ಮಿಕರಿಗೆ ನೀಡಬೇಕಿದ್ದ “ಆಹಾರ ಧಾನ್ಯ ಕಿಟ್” ನ್ನು ಗೋದಾಮಿನಲ್ಲಿಟ್ಟದ ಶಾಸಕ !?
ಒಂದು ದಿನಕ್ಕೆ 150 ರೂಪಾಯಿ ಕೂಲಿ ಸಿಗುತ್ತದೆ. ಇದೇ ಹಣದಿಂದ ಮನೆಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನು ಕೊಂಡು, ತನ್ನ ತಾಯಿಯನ್ನು ಸಾಕುತ್ತಿದ್ದಾನೆ. ಈ ನಡುವೆ ಕಳೆದ ಐದಾರು ವರ್ಷಗಳಿಂದ ತಮಗೊಂದು ಮನೆ ನಿರ್ಮಿಸಿಕೊಡುವಂತೆ ಕೂಡಿಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿಮಾಡಿ ಅರ್ಜಿ ಸಲ್ಲಿಸಿದ್ದಾರಂತೆ. ಅರ್ಜಿ ಪಡೆದುಕೊಳ್ಳುವ ಅಧಿಕಾರಿಗಳು 30 ಸಾವಿರ ಕೊಟ್ಟರೆ ಮಾತ್ರವೇ ಮನೆ ನಿರ್ಮಿಸಿಕೊಡುವುದಾಗಿ ಬೇಡಿಕೆ ಇಡುತ್ತಿದ್ದಾರಂತೆ. ಕೂಲಿ ಕೆಲಸ ಮಾಡಿ ನನ್ನ ಮಗ ನನ್ನನ್ನು ಸಾಕುತ್ತಿರುವಾಗ ಅವರಿಗೆ ನಾನು ಎಲ್ಲಿಂದ ಮುವತ್ತು ಸಾವಿರ ಕೊಡೋದು ಎಂದು ಬೇಸರದಿಂದ ಮಾಧ್ಯಮದ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ ಮಲ್ಲಿಗೆಯವರು. ಕನಿಷ್ಠ ಅಂಗವಿಕಲರ ವೇತನ ಬರುವಂತೆ ಮಾಡಿಸಿಕೊಡುವಂತೆ ಕೇಳಿದರೆ, ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರು ಮೂರು ಸಾವಿರ ರೂ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದರು. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬೆಟ್ಟದ ತಪ್ಪಲಿನಲ್ಲೇ ಇರುವುದರಿಂದ ಆನೆ, ಚಿರತೆ ಕಾಡುಪ್ರಾಣಿಗಳ ಕಾಟ ಮಿತಿಮೀರಿರುವ ಈ ಸ್ಥಳದಲ್ಲಿ ಇವರ ಜೀವನ ನರಕಯಾತನೆಯೇ ಸರಿ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಇದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ.