ಕೋಲಾರ,ಫೆ.09 : ಬೆಮಲ್ ಆಡಳಿತ ವರ್ಗ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮೃತಪಟ್ಟ ಬೆಮೆಲ್ ಗುತ್ತಿಗೆ ಕಾರ್ಮಿಕನಿಗೆ ಕನಿಷ್ಠ 20 ಲಕ್ಷ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಕೆಲಸ ನೀಡುವಂತೆ ಸಿಐಟಿಯು ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಾರ್ಖಾನೆಗಳಲ್ಲಿ ಕೆಲಸ ಮಾಡುವರಿಗೆ ಸರಿಯಾದ ಭದ್ರತೆ ಇಲ್ಲವಾಗಿದೆ ಅದರಿಂದಲೇ ಬೆಮೆಲ್ ಕಾರ್ಖಾನೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ್ ಭಾನುವಾರ ಕಾರ್ಖಾನೆಯಲ್ಲಿ ಯಂತ್ರ ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿರುವುದು ಅತ್ಯಂತ ನೋವಿನ ವಿಷಯವಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಸುರಕ್ಷತೆ ಒದಗಿಸದೇ ನಿರ್ಲಕ್ಷ್ಯ ವಹಿಸಿದ ಬೆಮೆಲ್ ಆಡಳಿತ ವರ್ಗ ಮತ್ತು ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಒತ್ತಾಯಿಸಿದರು.
ಬೆಮೆಲ್ ಕಾರ್ಖಾನೆಯಲ್ಲಿ ಖಾಯಂ ನೌಕರರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ಕಾರ್ಮಿಕರು ದುಡಿಯುತ್ತಿದ್ದಾರೆ. ಆಡಳಿತ ಮಂಡಳಿ ಮತ್ತು ಗುತ್ತಿಗೆದಾರರು ಕನಿಷ್ಠ ಪ್ರಮಾಣದಲ್ಲಿ ಸುರಕ್ಷತೆ ಒದಗಿಸದೇ ಗುತ್ತಿಗೆ ನೌಕರರಿಂದ ದುಡಿಸಿಕೊಳ್ಳುತ್ತಿದ್ದರಿಂದ ಈ ದುರ್ಘಟನೆ ನಡೆದಿದ್ದು, ಇದಕ್ಕೆ ಆಡಳಿತ ವರ್ಗ ಮತ್ತು ಗುತ್ತಿಗೆದಾರರು ನೇರ ಹೊಣೆಯಾಗಿದ್ದಾರೆ ಎಂದರು.
ಕಾರ್ಖಾನೆಗಳಲ್ಲಿ ಖಾಯಂ ನೌಕರರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದರೂ ಗುತ್ತಿಗೆ ನೌಕರರಿಗೆ ನೀಡುವ ವೇತನ, ಸುರಕ್ಷತೆ, ಇತರೇ ಸೌಲಭ್ಯಗಳು ಅತ್ಯಂತ ಕಡಿಮೆಯಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಕೆಲಸದ ಸ್ಥಳದಲ್ಲಿ ಸುರಕ್ಷತೆ ಒದಗಿಸಬೇಕೆಂದು ಕಾನೂನು ಇದ್ದರೂ ಸಹ ನೀಡದೇ ಗುತ್ತಿಗೆ ನೌಕರರನ್ನು ಅತ್ಯಂತ ಅಮಾನವೀಯ ನಡೆಸಿಕೊಳ್ಳಲಾಗಿದೆ. ಜಿಲ್ಲೆಯ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಲ್ಲಿ ಗುತ್ತಿಗೆ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇವರೆಲ್ಲರೂ ಇದೇ ರೀತಿ ಯಾವುದೇ ಸುರಕ್ಷತೆ ಇಲ್ಲದೇ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಅಗತ್ಯ ಸುರಕ್ಷತೆಯನ್ನು ಒದಗಿಸಬೇಕು ಎಂದರು
ಜಿಲ್ಲಾಡಳಿತ ಕೂಡಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮೃತಪಟ್ಟ ಕುಟುಂಬಕ್ಕೆ 20 ಲಕ್ಷ ಪರಿಹಾರ ಮತ್ತು ಅವರ ಕುಟುಂಬಕ್ಕೆ ಬೆಮೆಲ್ ಕಾರ್ಖಾನೆಯಲ್ಲಿ ಕೆಲಸ ನೀಡಬೇಕು. ಬೆಮೆಲ್ ಮತ್ತು ಖಾಸಗಿ ಕಾರ್ಖಾನೆಗಳಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿಗೆ ಅಗತ್ಯ ಸುರಕ್ಷತೆ ಒದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಮುಖಂಡರಾದ ಭೀಮರಾಜ್, ಆಶಾ, ಪ್ರಸನ್ನ ಇದ್ದರು