70ರ ದಶಕದಲ್ಲಿ ಸುಮಾರು 24 ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು, ಈಗ ಆ ವಸತಿಗೃಹಗಳು ಸಂಪೂರ್ಣ ಶಿಥಿಲಾವಸ್ಥೆಗೊಂಡಿವೆ
ಅಫಜಲಪುರ ಫೆ 05: ದೇಶದ ಗಡಿ ಕಾಯುವ ಸೈನಿಕರು ರಾಷ್ಟ್ರದ ಭದ್ರತೆಗೆ ಎಷ್ಟು ಮುಖ್ಯವೋ ಅದರಂತೆ ದೇಶದ ಆಂತರಿಕೆ ಒಳ ಭದ್ರತೆಯಲ್ಲಿ ನಾಡ ರಕ್ಷಣೆ ಮಾಡುವ ಪೊಲೀಸರ ಪಾತ್ರವು ಅಷ್ಟೇ ಪ್ರಧಾನವಾಗಿದೆ.
ದಿನದ ೨೪ ಗಂಟೆಯೂ ಸಮಾಜ ಸೇವೆ ಮತ್ತು ಕರ್ತವ್ಯ ಪಾಲನೆಯಲ್ಲಿ ಸದಾ ಸಿದ್ಧರಿರುವ ಪೊಲೀಸರು ಪ್ರತಿಭಟನೆಗಳನ್ನು ನಿಯಂತ್ರಿಸಲು, ನಾಗರಿಕ ಜೀವನ ನಿರ್ಭೀತಿಯಿಂದ ಬದುಕಲು, ರಾಜಕಾರಣಿಗಳಿಗೆ ಭದ್ರತೆ, ನಿರಪರಾಧಿಗಳನ್ನು ರಕ್ಷಿಸಿ ಅಪರಾಧಿಗಳನ್ನು ಜೈಲಿಗಟ್ಟಲು, ಗೂಂಡಾಗಿರಿ ಮಟ್ಟ ಹಾಕಲು, ಅಕ್ರಮಗಳನ್ನು ತಡೆಗಟ್ಟಲು, ಕೌಟುಂಬಿಕ ಕಲಹಗಳನ್ನು ಬಗೆಹರಿಸಲು, ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹೀಗೆ ನೂರಾರು ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸ್ ಇಲಾಖೆ ಸಮಾಜದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಹೀಗೆ ಜೀವದ ಹಂಗು ತೊರೆದು ರಕ್ಷಣೆಯಲ್ಲಿರುವ ಪೊಲೀಸರ ಕುಟುಂಬಗಳಿಗೆ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಬಹುತೇಕರಲ್ಲಿ ಉದ್ಭವಿಸದೆ ಇರುವುದು ವಿಷಾದದ ಸಂಗತಿಯಾಗಿದೆ.
ಪ್ರಸ್ತುತ ಅಫಜಲಪುರ ಪೊಲೀಸ್ ಠಾಣೆಯಲ್ಲಿ 52 ಜನ ಪೊಲೀಸ್ ಸಿಬ್ಬಂದಿಗಳಿದ್ದು ಇಲ್ಲಿನ ಠಾಣೆಯನ್ನು ಸ್ವತಂತ್ರ ಪೂರ್ವದಲ್ಲಿ ಅಂದರೆ 1939ರಲ್ಲಿ ನಿರ್ಮಾಣ ಮಾಡಲಾಗಿದೆ. ಅದರಂತೆ 70ರ ದಶಕದಲ್ಲಿ ಸುಮಾರು 24 ವಸತಿ ಗೃಹಗಳನ್ನು ನಿರ್ಮಿಸಲಾದ ಮನೆಗಳು ಸಂಪೂರ್ಣ ಶಿಥಿಲಾವಸ್ಥೆಗೊಂಡಿದ್ದು ವಾಸಿಸಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. 2005 ಮತ್ತು 2012 ರಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ 18 ಮನೆಗಳು ಸಹ ಕಳಪೆ ಮಟ್ಟದಿಂದ ಕೂಡಿದ್ದು ಪ್ರಸ್ತುತ ೨೪ ಕುಟುಂಬಗಳ ಸದಸ್ಯರು ವಾಸವಾಗಿದ್ದು ಇನ್ನುಳಿದ ಕುಟುಂಬಗಳು ಬಾಡಿಗೆ ಮನೆಗೆ ಮೊರೆ ಹೋಗಿದ್ದಾರೆ. ಹೀಗಾಗಿ ಸರ್ಕಾರ ಮತ್ತು ರಾಜ್ಯದ ಗೃಹ ಸಚಿವರು ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಕಡೆ ಒಮ್ಮೆ ಸ್ಥಳ ಪರಿಶೀಲನೆ ನಡೆಸಿ ನೂತನ ವಸತಿ ಗೃಹಗಳ ನಿರ್ಮಾಣ ಕಾರ್ಯದ ಕಾಯಕಲ್ಪಕ್ಕೆ ಮುಂದಾಗುವರೇ ಎಂದು ಕಾದು ನೋಡಬೇಕಾಗಿದೆ.
ಪುರಸಭೆಯಿಂದ ನಿರ್ಲಕ್ಷ್ಯ: ನಗರವನ್ನು ಸ್ವಚ್ಛವಾಗಿರಿಸುವ ಕಾರ್ಯದಲ್ಲಿ ತೊಡಗಬೇಕಾದ ಪುರಸಭೆಯ ಅಧಿಕಾರಿಗಳು ಪೊಲೀಸ್ ವಸತಿ ಗೃಹಗಳನ್ನು ನಿರ್ಲಕ್ಷಿಸಿದಂತಿದೆ. ಸುಮಾರು 85 ಜನ ಪೌರ ಕಾರ್ಮಿಕರಿದ್ದರೂ ಸಹ ವಸತಿ ಗೃಹಗಳ ಆವರಣದಲ್ಲಿ ಕಸ ಕಡ್ಡಿ ಬೇಕಾಬಿಟ್ಟಿಯಾಗಿ ಬಿದ್ದಿದ್ದು ಹಂದಿಗಳು, ಕ್ರಿಮಿ ಕೀಟಗಳು ಹೆಚ್ಚಿದ್ದು ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ಎದುರಿಸಲಾಗುತ್ತಿದೆ.
ಅಫಜಲಪುರ ನೂತನ ಪೊಲೀಸ್ ಠಾಣಾ ಹಾಗೂ ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಹಾಗೂ ಕರಜಗಿಯಲ್ಲಿ ಹೊಸದಾಗಿ ಪ್ರಾರಂಭಿಸಲು ನೂತನ ಪೊಲೀಸ್ ಠಾಣೆ ಮಂಜೂರಾತಿಗೆ ಮತ್ತು ಫರಹತಾಬಾದ್ನ ನೂತನ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ವೈ. ಪಾಟೀಲ್ ತಿಳಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಪೊಲೀಸ್ ವಸತಿ ಗೃಹಗಳು ಅವನತಿ ಅಂಚಿನಲ್ಲಿ ಬಂದಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಹಾಗೂ ಈಗಾಗಲೇ ಪತ್ರವು ಕೂಡ ಬರೆದಿದ್ದೇನೆ. ಇನ್ನೊಮ್ಮೆ ಇವರ ಮೇಲೆ ಒತ್ತಡ ಹಾಕಿ ಹಣದ ಮಂಜೂರಾತಿಗಾಗಿ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು
ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಮಾಲೀಕಯ್ಯಾ ಗುತ್ತೇದಾರ್ ತಿಳಿಸಿದ್ದಾರೆ.
ವರದಿ:ಗುಂಡೂರಾವ್ ಅಫಜಲಪುರ