ಬೆಂಗಳೂರು, ಜ.30: ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ. ದೇಶಭಕ್ತ ಗಾಂಧಿಯನ್ನು ಕೊಂದವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಫ್ರೀಡಂಪಾರ್ಕನಲ್ಲಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಶಾಂತಿಯುತ ಸಂಘರ್ಷ ಸಂಕಲ್ಪ ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡುತ್ತಾ, ಗಾಂಧೀಜಿ ಯಾರನ್ನೂ ಶತ್ರುಗಳು ಎಂದು ತಿಳಿದು ಅವರ ವಿರುದ್ಧ ಹೋರಾಡಿದರೋ, ಅವರು ಗಾಂಧೀಜಿಯನ್ನು ಹತ್ಯೆ ಮಾಡಲಿಲ್ಲ. ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೋಡ್ಸೆ ಎಂಬ ದೇಶದ್ರೋಹಿ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದು ಎಂಬುದನ್ನು ನಾವು ಮರೆಯಬಾರದು ಎಂದು ಸಿದ್ದರಾಮಯ್ಯ ನುಡಿದರು.
ಇದನ್ನೂ ಓದಿ : ಕೇಂದ್ರದ ಕೃಷಿ ಕಾನೂನು ವಿರುದ್ಧ ರೈತರಿಂದ ಟ್ರ್ಯಾಕ್ಟರ್ ಮೆರವಣಿಗೆ
ಗಾಂಧೀಜಿ ಜೀವನ ಮತ್ತು ಸಾಧನೆ ಹೇಗೆ ನಮ್ಮ ಆದರ್ಶಪ್ರಾಯವೋ, ಅದೇ ರೀತಿ ಅವರ ಸಾವು ಕೂಡಾ ನಮಗೆ ಪಾಠವಾಗಿದೆ. ಗಾಂಧೀಜಿ ಕೇವಲ ಸ್ವಾತಂತ್ರ್ಯಕ್ಕಾಗಿ, ಅಸ್ಪೃರ್ಶತೆಯ ನಿವಾರಣೆಗಾಗಿ, ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಮಾತ್ರ ಹೋರಾಡಲಿಲ್ಲ. ಅವರು ಬಹುಮುಖ್ಯವಾದ ಕೋಮು ಸಾಮರಸ್ಯಕ್ಕಾಗಿ ಕೂಡಾ ತನ್ನ ಕೊನೆ ಉಸಿರಿರುವ ತನಕ ಹೋರಾಡಿದರು. ಈ ತನ್ನ ಹೋರಾಟಕ್ಕಾಗಿಯೇ ತನ್ನ ಪ್ರಾಣವನ್ನು ಕಳೆದುಕೊಂಡರು. ಆದರೆ ಗಾಂಧೀಜಿ ಅವರು ಯಾವ ಉದ್ದೇಶಕ್ಕಾಗಿ ಹೋರಾಡಿದರೋ, ಆ ಕೋಮುಸೌಹಾರ್ದತೆಯ ಸ್ಥಾಪನೆಯ ಕಾರ್ಯ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಅದನ್ನು ಪೂರ್ಣಗೊಳಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಿದ್ಧರಾಮಯ್ಯ ಕರೆ ನೀಡಿದರು.
ರೈತ ನಾಯಕ ಬಡಗಲಪುರ ನಾಗೇಂದ್ರ ಮಾತನಾಡಿ ಕೃಷಿಕಾಯ್ದೆ ರದ್ದಾಗಬೇಕು ಎಂದು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ, ಹಿಂಸೆ ನಡೆಸಿದ್ದಾರೆ. ಅದನ್ನು ದಿಕ್ಕುತಪ್ಪಿಸುವುದಕ್ಕಾಗಿ ಸಿಖ್ ಧ್ವಜ್ ಹಾರಿಸಿ ಮಾಧ್ಯಮದ ಮೂಲಕ ಹೋರಾಟದ ಶಾಂತಿಯನ್ನು ಕದಡುವ ಪ್ರಯತ್ನ ಮಾಡಿದರು. ನಾವು ಇದ್ಯಾವುದಕ್ಕೂ ಜಗ್ಗುವವರಲ್ಲ, ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ. ಕೃಷಿಕಾಯ್ದೆ ರದ್ದಗುವವರೆಗೂ ಹೋರಾಟ ನಿಲ್ಲದು ಎಂದರು.
ಚಿಂತಕರಾದ ಜಿ.ಎನ್. ನಾಗರಾಜ ಮಾತನಾಡುತ್ತಾ, ಗಾಂಧೀಜಿಯವರು ಹಲವು ಆಯಾಮಗಳ ವ್ಯಕ್ತಿತ್ವವಾಗಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಆರಂಭವಾಗಿದ್ದೆ ರೈತ ಹೋರಾಟದಿಂದ ಎಂದು ಗಾಂಧೀಯವರ ಚಂಪಾರಣ್ಯ ಹೋರಾಟವನ್ನು ಸ್ಮರಿಸಿದರು. ಈ ಕಾರ್ಯಕ್ರಮದಲ್ಲಿ ಚಿಂತಕರಾದ ವಿಜಯಮ್ಮ, ಮಾಜಿ ಸಚಿವ ಆಂಜನೇಯ,ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಚಾಮರಸ್ ಮಾಲೀಪಾಟೀಲ್, ಯಶವಂತ್ ಟಿ, ಗೋಪಾಲ್, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೋಡು, ನಿತ್ಯಾನಂದ ಸ್ವಾಮಿ ಕಾರ್ಮಿಕ ಮುಖಂಡರಾದ ಮೀನಾಕ್ಷಿ ಸುಂದರಂ, ಕೆ.ಎನ್.ಉಮೇಶ್, ಡಾ. ಕೆ.ಪ್ರಕಾಶ್, ಕೆ.ವಿ.ಭಟ್, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಡಾ. ವಾಸು, ಕೆ.ಎಸ್. ವಿಮಲಾ, ಡಾ. ಬಿ.ಆರ್. ಮಂಜುನಾಥ್, ಗೌರಮ್ಮ ಸೇರಿದಂತೆ ಅನೇಕರಿದ್ದರು.
ದೆಹಲಿ ವರದಿ : ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದ ಭಾಗವಾಗಿ ಇಂದು ದೇಶವ್ಯಾಪಿ ರೈತರು ಕೃಷಿ ಕಾಯ್ದೆ ರದ್ದತಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ದೆಹಲಿ, ಬೆಂಗಳೂರು, ಆಂದ್ರಪ್ರದೇಶ ಸೇರಿದಂತೆ ಇತರೆಡೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೆಹಲಿಯಲ್ಲಿ ರೈತರು ಉಪವಾಸ ಸತ್ಯಾಗ್ರಹ ಶಾಂತಿಯುತವಾಗಿ ನಡೆದಿದ್ದು, ಕಾಯ್ದೆ ರದ್ದಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಉಪವಾಸ ಸತ್ಯಾಗ್ರಹ : ಮೈಸೂರಿನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವನವರು ಭಾಗವಹಿಸಿದ್ದರು. ಹಾವೇರಿಯಲ್ಲೂ ರೈತರು ಉಪವಾಸ ಸತ್ಯಾಗ್ರಹಕ್ಕೆ ಉತ್ತಮ ಬೆಂಬಲ ವ್ಯಕ್ತವಾಗದೆ. ಕೋಲಾರದಲ್ಲಿ ರೈತರು, ಕಾರ್ಮಿಕರು, ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು. ಬೆಳಗಾವಿಯಲ್ಲೂ ರೈತರ ಉಪವಾಸ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ದೊರತಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜನಪರ ಸಂಘಟನೆಗಳು ಭಾಗಿಯಾಗಿದ್ದವು.
ಕೊಪ್ಪಳದಲ್ಲೂ ರೈತರ ಉಪವಾಸ ಸತ್ಯಾಗ್ರಹಕ್ಕೆ ಉತ್ತಮ ಬೆಂಬಲವ್ಯಕ್ತವಾಗಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಕೂಲಿಕಾರ ಸಂಘಟನೆಗಳು ಭಾಗವಹಿಸಿದ್ದವು. ಸಿದ್ದಾಪುರದಲ್ಲಿ ನಡೆದ ರೈತರ ಉಪವಾಸ ಸತ್ಯಾಗ್ರಹಕ್ಕೆ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದವು, ಕಾರ್ಮಿಕ ಮುಖಂಡರಾದ ಯಮುನಾ ಗಾಂವ್ಕರ್ ಮಾತನಾಡಿದರು.
ಈ ವಿಡಿಯೋ ನೋಡಿ