ಜ.30-ಹುತಾತ್ಮ ದಿನದಂದು ದೇಶಾದ್ಯಂತ ರೈತರ ಉಪವಾಸ ಕಾರ್ಯಕ್ರಮ
ನವದೆಹಲಿ ಜ 28 : ಕಳೆದ ಏಳು ತಿಂಗಳುಗಳ ಒಂದು ಶಾಂತಿಯುತ ಚಳುವಳಿಯ ಹೆಸರುಗೆಡಿಸುವ ಪಿತೂರಿ ಈಗ ಸಾರ್ವಜನಿಕರ ಎದುರು ಬಯಲಾಗಿದೆ. ಕೆಲವು ದೀಪ್ ಸಿಧುನಂತಹ ವ್ಯಕ್ತಿಗಳು ಮತ್ತು ಎಸ್.ಸತ್ನಾಮ್ ಸಿಂಗ್ ಪನ್ನು ನೇತೃತ್ವದ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿಯಂತಹ ಸಂಘಟನೆಗಳ ಜೊತೆಗೆ ಸರಕಾರ ಈ ಚಳುವಳಿಯನ್ನು ಹಿಂಸಾತ್ಮಕಗೊಳಿಸಿದೆ. ಕೆಂಪು ಕೋಟೆ ಮತ್ತು ದಿಲ್ಲಿಯ ಇತರ ಭಾಗಗಳಲ್ಲಿ ನಡೆದಿರುವ ಹಿಂಸಾಚಾರಗಳಿಗೂ ನಮಗೂ ಸಂಬಂಧವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ಜನವರಿ 27ರಂದು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೆ ಮೊದಲು ಮೋರ್ಚಾದ ಮುಖಂಡರ ಸಭೆ ನಡೆಯಿತು. ಈ ಕುರಿತು ಮೋರ್ಚಾದ ಮುಖಂಡರು ಒಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸಾರ್ವಜನಿಕರ ಮುಂದೆ ತೋರಿಸಿರುವಂತದ್ದು ಒಂದು ಸಂಚು. ರೈತರ ಪರೇಡ್ ಬಹುಪಾಲು ಶಾಂತಿಯುತವಾಗಿತ್ತು, ಮತ್ತು ಒಪ್ಪಿದ್ದ ಮಾರ್ಗಗಳಲ್ಲೇ ಸಾಗಿತ್ತು ಎಂದಿರುವ ಈ ಪತ್ರಿಕಾ ಹೇಳಿಕೆ ರಾಷ್ಟ್ರೀಯ ಸಂಕೇತಗಳಿಗೆ ಅವಮಾನ ಅಗಿರುವುದನ್ನು ಬಲವಾಗಿ ಖಂಡಿಸಿದೆ, ಆದರೆ, ಇದಕ್ಕಾಗಿ ರೈತರು ‘ಹಿಂಸಾಚಾರ’ ನಡೆಸಿದರು ಎಂದು ಬಣ್ಣ ಹಚ್ಚಲು ಸಾಧ್ಯವಿಲ್ಲ, ಏಕೆಂದರೆ, ಹಿಂಸಾಚಾರವನ್ನು ನಡೆಸಿದವರು ನಮ್ಮ ಜೊತೆಗಿರುವವರು ಅಲ್ಲ ಎಂದು ಅದು ಹೇಳಿದೆ. ಎಲ್ಲ ರೈತರೂ ತಂತಮ್ಮ ಪರೇಡ್ಗಳನ್ನು ಪೂರ್ಣಗೊಳಿಸಿ ದಿಲ್ಲಿಯ ಗಡಿಗಳಲ್ಲಿ ಸ್ವಸ್ಥಳಗಳಿಗೆ ಮರಳಿದ್ದಾರೆ.
ಇದನ್ನು ಓದಿ : ಅನ್ನದಾತನ ಪರ್ಯಾಯ ಪರೇಡ್ ಗೆ ವ್ಯಾಪಕ ಬೆಂಬಲ
ಪ್ರತಿಭಟನಾಕಾರರೊಂದಿಗೆ ಪೋಲೀಸರು ಅಮಾನುಷವಾಗಿ ವರ್ತಿಸಿದರು. ಪೋಲಿಸರು ಮತ್ತು ಇತರ ಏಜೆನ್ಸಿಗಳನ್ನು ಬಳಸಿ ಈ ಚಳುವಳಿಯನ್ನು ಕೊಲ್ಲುವ ಸರಕಾರದ ಪ್ರಯತ್ನಗಳು ಬಯಲಾಗಿವೆ. ಪರೇಡಿನಲ್ಲಿದ್ದ ಟ್ರಾಕ್ಟರುಗಳು ಮತ್ತು ಇತರ ವಾಹನಗಳನ್ನು ಜಖಂ ಮಾಡಲು, ಅವನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದಾರೆ. ಇಂತಹ ಪ್ರಯತ್ನಗಳನ್ನು ಖಂಡಿಸಿರುವ ಮೋರ್ಚಾ ಜನವರಿ 26ರಂದು ಬಂಧಿಸಿದ ಎಲ್ಲ ಶಾಂತಿಯುತ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಈ ಘಟನೆಗಳಲ್ಲಿ 110 ಪೋಲಿಸ್ ಸಿಬ್ಬಂದಿ ಮತ್ತು 215 ರೈತರು ಗಾಯಗೊಂಡಿದ್ದಾರೆ. 200 ಮಂದಿಯನ್ನು ಬಂಧಿಸಲಾಗಿದೆ ಮತ್ತು ದರ್ಶನ್ಪಾಲ್, ಬುಟ್ಟಾಸಿಂಗ್ ಬುರ್ಜ್ ಗಿಲ್, ರಾಜೇವಾಲ್, ರಾಕೇಶ್ ಟಿಕಾಯಿತ್, ಜೊಗಿಂದರ್ ಉಗ್ರಹಾನ್, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ ಸೇರಿದಂತೆ 37 ಮುಖಂಡರ ಮೇಲೆ ಎಫ್. ಐ.ಆರ್ ಹಾಕಲಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಸಂಕೇತಗಳಿಗೆ ಅಗೌರವ ತೋರಿಸಿರುವವರು ಮತ್ತು ಅಪವಿತ್ರಗೊಳಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೂಡ ಆಗ್ರಹಿಸಿರುವ ಅದು ರೈತರು ಅತಿ ದೊಡ್ಡ ರಾಷ್ಟ್ರೀಯವಾದಿಗಳು, ಅವರು ರಾಷ್ಟ್ರದ ಸುಪ್ರತಿಷ್ಠೆಯ ರಕ್ಷಕರು ಎಂದು ಹೇಳಿದೆ.
ಜನವರಿ 26ರ ಕೆಲವು ವಿಷಾದಕರ ಘಟನೆಗಳಿಗೆ ನೈತಿಕ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತ ಸಂಯುಕ್ತ ಕಿಸಾನ್ ಮೋರ್ಚಾ ಫೆಬ್ರುವರಿ 1ರಂದು ನಡೆಸಬೇಕೆಂದಿದ್ದ ಸಂಸದ್ ಚಲೋ ಕಾರ್ಯಕ್ರಮವನ್ನು ಮುಂದೂಡಿರುವುದಾಗಿ ಪ್ರಕಟಿಸಿದೆ, ಮತ್ತು ಜನವರಿ 30ರಂದು, ಗಾಂಧೀಜಿಯವರು ಹುತಾತ್ಮರಾದ ದಿನದಂದು ಶಾಂತಿ ಮತ್ತು ಅಹಿಂಸೆಗೆ ಒತ್ತು ನೀಡಲು ದೇಶಾದ್ಯಂತ ಒಂದು ದಿನದ ಉಪವಾಸ ನಡೆಸಲಾಗುವುದು ಎಂದು ಹೇಳಿದೆ.
ದೀಪ್ ಸಿಧುನಂತಹ ವ್ಯಕ್ತಿಗಳ ಸಾಮಾಜಿಕ ಬಹಿಷ್ಕಾರ ನಡೆಸಬೇಕು ಎಂದು ಅದು ಸಾರ್ವಜನಿಕರಿಗೆ ಮನವಿ ಮಾಡಿದೆ.
ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ಹಾರಿಸಿದ್ದು ಯಾರು?! ಗೋದಿ ಮೀಡಿಯಾಗಳೇಕೆ ದಾರಿ ತಪ್ಪಿಸುತ್ತಿವೆ?!
ದಿಲ್ಲಿ ಮಾತ್ರವಲ್ಲ, ರೈತರ ಸಂಘಟನೆಗಳು ಕರೆ ನೀಡಿದ್ದ ಕಿಸಾನ್ ಗಣತಂತ್ರ ಪರೇಡ್ ಹಲವು ರಾಜ್ಯಗಳಲ್ಲಿ ನಡೆದಿವೆ. ಬಿಹಾರದಲ್ಲಿ ರೈತರು ಪಾಟ್ನಾ ಸೇರಿದಂತೆ ಹಲವು ಸ್ಥಳಗಳಲ್ಲಿ ಗಣತಂತ್ರ ದಿನಾಚರಣೆ ನಡೆಸಿದರು. ಮಧ್ಯಪ್ರದೇಶದಲ್ಲಿ ಪೂರ್ಣ ಉತ್ಸಾಹದಿಂದ ಈ ಭವ್ಯ ದಿನವನ್ನು ರೈತರು ಆಚರಿಸಿದರು. ದಿಲ್ಲಿಯಲ್ಲಿ ಜನವರಿ 26ರಂದು ಎನ್.ಎ.ಪಿ.ಎಂ. ಕಾರ್ಯಕರ್ತರು ರೈತರ ಪರೇಡಿನಲ್ಲಿ ಸೇರಿಕೊಂಡರು. ಮುಂಬೈಯಲ್ಲಿ ಆಜಾದ್ ಮೈದಾನದಲ್ಲಿ ಒಂದು ಬೃಹತ್ ರ್ಯಾಲಿ ನಡೆದಿದೆ. ಬೆಂಗಳೂರಿನಲ್ಲಿ ಸಾವಿರಾರು ರೈತರು ಕಿಸಾನ್ ಪರೇಡಿನಲ್ಲಿ ಭಾಗವಹಿಸಿದರು, ಅದು ಸಂಫೂರ್ಣ ಶಾಂತಿಯುತವಾಗಿ ನಡೆಯಿತು. ತಮಿಳುನಾಡು, ಕೇರಳ, ಹೈದರಾಬಾದ್, ಒಡಿಶ, ಪಶ್ಚಿಮ ಬಂಗಾಲ, ಛತ್ತಿಸ್ಗಡ ಮತ್ತು ಉತ್ತರಪ್ರದೇಶದಲ್ಲಿ ರೈತರು ಗಣತಂತ್ರ ಪರೇಡಿನಲ್ಲಿ ಭಾಗವಹಿಸಿದರು ಎಂದಿರುವ ಈ ಪತ್ರಿಕಾ ಹೇಳಿಕೆ ಮುಂಬರುವ ದಿನಗಳಲ್ಲಿ ಇತರ ಯೋಜನೆಗಳು ಮತ್ತು ಚಟುವಟಿಕೆಗಳನ್ನು ಪ್ರಕಟಿಸಲಾಗುವುದು ಎಂದಿದೆ.
ಇದನ್ನು ಓದಿ : ರೈತರ ಪರ್ಯಾಯ ಪರೇಡ್ ಗೆ ವ್ಯಾಪಕ ಜನ ಬೆಂಬಲ
“ನಮ್ಮ ಚಳುವಳಿ ಶಾಂತಿಯುತವಾಗಿಯೇ ಇರುತ್ತದೆ ಎಂದು ನಾವು ಸ್ಪಷ್ಟಪಡಿಸ ಬಯಸುತ್ತೇವೆ. ರೈತರು ವಿಶ್ವಾಸದಿಂದಿದ್ದಾರೆ, ಈ ಸರಕಾರದೊಂದಿಗೆ ಭಿನ್ನಮತವನ್ನು ಶಾಂತಿಯುತವಾಗಿ ತೋರಿಸುತ್ತಾರೆ. ಪರೇಡಿನಲ್ಲಿ ದಿಲ್ಲಿಯ ನಾಗರಿಕರ ಪ್ರೀತಿಯನ್ನು ಕಂಡು ನಾವು ಗದ್ಗದಿತರಾಗಿದ್ದೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆಯ ಕೊನೆಯಲ್ಲಿ ಜನಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎ.ಐ.ಕೆ.ಎಸ್.ಸಿ.ಸಿ.)ಯ ರಾಷ್ಟ್ರೀಯ ಕಾರ್ಯಕಾರೀ ಗುಂಪು ಇದರ ಒಬ್ಬ ಸದಸ್ಯರಾಗಿದ್ದ ವಿಎಂ ಸಿಂಗ್ ಹೋರಾಟದಿಂದ ಹಿಂತೆಗೆದುಕೊಳ್ಳುವುದಾಗಿ ನೀಡಿರುವ ಹೇಳಿಕೆ ಎ.ಐ.ಕೆ.ಎಸ್.ಸಿ.ಸಿ. ಯ ಅಧಿಕೃತ ಹೇಳಿಕೆಯಲ್ಲ, ಅದಕ್ಕೂ ಎ.ಐ.ಕೆ.ಎಸ್.ಸಿ.ಸಿ. ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.