ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಬಿಡೆನ್ ಅವರು, ಆಂತರಿಕವಾಗಿಯೂ ಅಂತರ್ರಾಷ್ಟ್ರೀಯವಾಗಿಯೂ ಟ್ರಂಪ್ ತೆಗೆದುಕೊಂಡ 17 ‘ವಿನಾಶಕಾರಿ’ ನಿರ್ಣಯಗಳನ್ನು ಹಿಂತೆಗೆದುಕೊಳ್ಳುವ ಮತ್ತು ತಪ್ಪು ಧೋರಣೆಗಳನ್ನು ಬದಲಿಸುವ ಆದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಅಧ್ಯಕ್ಷ ಬಿಡೆನ್ ದೇಶವು ಎದುರಿಸುತ್ತಿರುವ ಪ್ರಮುಖ ನಾಲ್ಕು ಬಿಕ್ಕಟ್ಟುಗಳನ್ನು ಪರಿಹರಿಸುವುದನ್ನು ಆದ್ಯತೆಯಾಗಿ ಪರಿಗಣಿಸಿದ್ದು, ಅದಕ್ಕೆ ಬೇಕಾದ ತುರ್ತು ಕ್ರಮಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ. ಕೊವಿದ್ ಮಹಾಸೋಂಕು, ಕುಸಿಯುತ್ತಿರುವ ಆರ್ಥಿಕತೆ, ಹದಗೆಡುತ್ತಿರುವ ಜನಾಂಗೀಯ ಸಂಬಂಧಗಳು ಮತ್ತು ಹವಾಮಾನ ಬದಲಾವಣೆ, ಬಿಡೆನ್ ಗುರುತಿಸಿರುವ ನಾಲ್ಕು ಬಿಕ್ಕಟ್ಟುಗಳು.
‘ಹವಾಮಾನ ಬದಲಾವಣೆ’ ಯ ಕುರಿತಾದ ಐತಿಹಾಸಿಕ ಪ್ಯಾರಿಸ್ ಒಪ್ಪಂದವನ್ನು ಮರುಪ್ರವೇಶದ ಪ್ರಕ್ರಿಯೆ ಆರಂಭಿಸುವ ಆದೇಶ ಅದರಲ್ಲಿ ಪ್ರಮುಖವಾದ್ದು. ಇದು ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಭರವಸೆಯಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆಯೇ ಜಾರಿಗೆ ಬಂದಿದ್ದ ಈ ಒಪ್ಪಂದದಿಂದ ಮಾಜಿ ಅಧ್ಯಕ್ಷ ಟ್ರಂಪ್ ನಿರ್ಣಯದಂತೆ ಯು.ಎಸ್ ಹೊರಗೆ ಬಂದಿತ್ತು. ಈ ಒಪ್ಪಂದವು ಯುಎಸ್ಗೆ ಅನಾನುಕೂಲವಾಗಿದೆ ಎಂದು ಟ್ರಂಪ್ ವಾದಿಸಿದ್ದರು. ಇದು ಚೀನಾ, ರಷ್ಯಾ ಮತ್ತು ಭಾರತ ದಂತಹ ದೇಶಗಳಿಗೆ ಪ್ರಯೋಜವಾಗುತ್ತದೆಯೇ ಹೊರೆತು ಅಮೆರಿಕಾಕ್ಕೆ ಅಲ್ಲ ಎಂದಿದ್ದರು. ಈ ಒಪ್ಪಂದದಿಂದಾಗಿ ಅಮೆರಿಕಾಕ್ಕೆ ಆರ್ಥಿಕವಾಗಿ ಹಾನಿಕಾರಕವಾಗುತ್ತದೆ ಮತ್ತು 2025 ರ ವೇಳೆಗೆ 25 ಲಕ್ಷ ಅಮೆರಿಕನ್ ಉದ್ಯೋಗಗಳು ನಷ್ಟ ಹೊಂದಬಹುದು ಎಂದು ಟ್ರಂಪ್ ರ ವಾದವಾಗಿತ್ತು.
ಪ್ಯಾರಿಸ್ ಒಪ್ಪಂದವು ಯುಎಸ್ ಮತ್ತು 187 ಇತರ ದೇಶಗಳನ್ನು ಒಳಗೊಂಡಿತ್ತು. ಜಾಗತಿಕ ತಾಪಮಾನ ವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಸೆಂ. ಗಿಂತ ಹೆಚ್ಚಾಗುತ್ತಿರುವುದನ್ನು, ತಡೆಗಟ್ಟಿ, 1.5 ಸೆಂ. ಒಳಗೆ ಸೀಮಿತಗೊಳಿಸಲು ಈ ಒಪ್ಪಂದದ ಉದ್ದೇಶಿಸಿತ್ತು. ಈ ಕಾರ್ಯ ಜಾರಿಗೊಳಿಸಲು, ಅಭಿವೃದ್ಧಿ ಹೊಂದಿರುವ ದೇಶಗಳು ಹಾಗೂ, ಪ್ರಮುಖವಾಗಿ, ಅಮೆರಿಕಾವು ಬದ್ದರಾಗಿರಬೇಕೆಂಬ ಪ್ರಸ್ತಾಪಕ್ಕೆ ಟ್ರಂಪ್ ಒಪ್ಪಿರಲಿಲ್ಲ. ಹಾಗಾಗಿ ಒಪ್ಲಂದದಿಂದ ಹೊರಗೆ ಬರುವ ಟ್ರಂಪ್ ರ ಈ ಏಕಪಕ್ಷೀಯ ಕ್ರಮವನ್ನು ಅವರ ಅನೇಕ ಮಿತ್ರ ದೇಶಗಳೂ ಕೂಡಾ ಟೀಕಿಸಿದ್ದವು. ಇದರಿಂದ ಅಮೆರಿಕಾದ ವರ್ಚಸ್ಸಿಗೆ ಕುಂದು ಉಂಟಾಗಿತ್ತು. ಇದೇ ರೀತಿಯಾಗಿ, ಇರಾನ್ ನೊಂದಿಗಿನ ನ್ಯೂಕ್ಲಿಯರ್ ಒಪ್ಪಂದ ಮತ್ತು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಯಿಂದ ವಾಪಾಸಾತಿ, ಮೆಕ್ಸಿಕೊ ಗಡಿ ಗೋಡೆ ನಿರ್ಮಾಣ – ಹೀಗೆ ಅಂತರ್ರಾಷ್ಟ್ರೀಯ ವಲಯದಲ್ಲಿ ಹಲವಾರು ಏಕಪಕ್ಷೀಯವಾದ ನಿಲುವನ್ಮು ಟ್ರಂಪ್ ರು ಕೈಗೊಂಡಿದ್ದರು.
ಅಮೆರಿಕಾಕ್ಕೆ ಬಂದಿದ್ದ ಕಳಂಕವನ್ನು ಹೋಗಲಾಡಿಸುವ ಪ್ರಯತ್ನ ಗಳಲ್ಲಿ ಇದು ಮೊದಲನೆಯ ಹೆಜ್ಜೆ. ಇದರಿಂದಾಗಿ, ಬಿಡನ್ ರವರು, ಅಮೆರಿಕದ ವಿಶ್ವಾಸಾರ್ಹತೆ ಮತ್ತು ಬದ್ಧತೆಯನ್ನು ಪುನಃ ಸ್ಥಾಪಿಸುವ ಮತ್ತು ಟ್ರಂಪರ ನಡೆಯಿಂದ, ಕುಂದು ಹೋಗಿದ್ದ ಅಮೆರಿಕಾದ ವರ್ಚಸ್ಸನ್ನು ಮೇಲೆತ್ತಲು ಬಿಡನ್ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಪ್ಯಾರಿಸ್ ಒಪ್ಪಂದವು ಫೆಬ್ರವರಿ 19 ರಿಂದ ಯುಎಸ್ನಲ್ಲಿ ಜಾರಿಗೆ ಬರಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಅವರ ಆಡಳಿತ, ಅಮೆರಿಕಾದ ಜನರು ಮತ್ತು ಜಾಗತಿಕ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿಕೆ ತಿಳಿಸಿದೆ.
“ಕಾರ್ಬನ್ ಡೈಆಕ್ಸೈಡ್ ಅನಿಲಗಳ ಹೊರಸೂಸುವ ವಿಶ್ವದ ಅತಿದೊಡ್ಡ ದೇಶಗಳಲ್ಲಿ ಯುಎಸ್ ಮೊದಲನೆ ಸ್ಥಾನದಲ್ಲಿದೆ. ಹಾಗಾಗಿಯೇ, ಅದನ್ನು ಪರಿಹರಿಸಲು ನಾವೇ ಮೊದಲಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂಬುದು ಬಿಡೆನ್ ರ ಚುನಾವಣಾ ಭಾಷಣಗಳ ಒಟ್ಟಾರೆಯ ಸಾರಾಂಶವಾಗಿತ್ತು. ಹಸಿರು ಮನೆ ಅನಿಲ ಹೊರಸೂಸುವಿಕೆ ಕಡಿತ ಮತ್ತು ಶುದ್ಧ ಇಂಧನ ಪರಿಹಾರಗಳಿಗೆ ಸಾಮೂಹಿಕ ಬದ್ಧತೆ ಸೇರಿದಂತೆ, ಜಾಗತಿಕ ತಾಪಮಾನ ಏರಿಕೆಗೆ ಜಾಗತಿಕ ಪರಿಹಾರದ ಅಗತ್ಯವಿದೆ ಎಂದು ಪ್ಯಾರಿಸ್ ಒಪ್ಪಂದವು ಗುರುತಿಸುತ್ತದೆ. ಆದಾಗ್ಯೂ, ಹವಾಮಾನ ಬದಲಾವಣೆಯ ಕುರಿತು ಪ್ಯಾರಿಸ್ ಒಪ್ಪಂದಕ್ಕೆ ಮತ್ತೆ ಸೇರುವ ಕ್ರಮವನ್ನು ಕೆಲವು ರಿಪಬ್ಲಿಕನ್ ಸೆನೆಟರ್ಗಳು ವಿರೋಧಿಸಿದ್ದಾರೆ.
ಪ್ಯಾರೀಸ್ ಒಪ್ಪಂದವಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯನ್ನು (WHO) ಮರುಪ್ರವೇಶ ಮಾಡುವ ಪ್ರಕ್ರಿಯೆ ಆರಂಭಿಸುವ ಆದೇಶವನ್ನು ಬಿಡೆನ್ ಹೊರಡಿಸಿದ್ದಾರೆ. ಕೊವಿದ್ ಪರಿಸ್ಥಿತಿಗೆ ವೇಗವಾಗಿ ಸ್ಪಂದಿಸಲು ಮತ್ತು ವ್ಯಾಕ್ಸೀನ್ ವಿತರಣೆ ಸೇರಿದಂತೆ ಎಲ್ಲ ಕೊವಿದ್ ಸಂಬಂಧಿತ ಕೆಲಸಗಳ ಸಂಯೋಜನೆಗೆ ವಿಶೇಷ ಸಂಯೋಜಕರನ್ನು ನೇಮಿಸಿದ್ದಾರೆ. ಫೆಡರಲ್ ಸರಕಾರದ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಆದೇಶ ಸಹ ಹೊರಡಿಸಿದ್ದಾರೆ. ಬಾಡಿಗೆ ಅಥವಾ ಸಾಲ ಕಂತು ಕಟ್ಟದ್ದಕ್ಕೆ ಮನೆಯಿಂದ ಹೊರ ಹಾಕುವುದಕ್ಕೆ ಮಾರ್ಚ್ 31ರ ವರೆಗೆ ತಡೆಯಾಜ್ಞೆ ನೀಡಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣ ಸಾಲದ ಕಂತು ಮತ್ತು ಬಡ್ಡಿ ಕಟ್ಟುವುದಕ್ಕೆ ಮಾಫಿಯನ್ನು ಸೆಪ್ಟೆಂಬರ್ 30 ರೆ ವರೆಗೆ ಮಾಫಿ ನೀಡಲಾಗಿದೆ. ಏಳು ಮುಸ್ಲಿಂ ದೇಶಗಳವರಿಗೆ ವೀಸಾ ನಿಷೇಧ ಹಿಂತೆಗೆದುಕೊಳ್ಳಲು ಸಹ ಆಜ್ಞೆ ಮಾಡಿದ್ದಾರೆ. ಮೆಕ್ಸಿಕೊ ಗೋಡೆ ಕಟ್ಟುವ ಕೆಲಸಕ್ಕೆ ತಕ್ಷಣ ತಡೆ ಹಾಕಿದ್ದಾರೆ. ಪರಿಸರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳಿಂದ ರಿಯಾಯಿತಿ ನೀಡುವ ಮತ್ತು ನಿಬಂಧನೆಗಳನ್ನು ಸಡಿಲಿಸುವ ಅಥವಾ ವಿವಾದಿತ ಪ್ರಾಜೆಕ್ಟುಗಳಿಗೆ ಸಮ್ಮತಿ ನೀಡುವ ಸುಮಾರು 100 ಟ್ರಂಪ್ ನಿರ್ಣಯಗಳನ್ನು ಸಹ ಬಿಡೆನ್ ರದ್ದು ಮಾಡಿದ್ದಾರೆ.