2002ರಲ್ಲಿ ಗುಜರಾತ್ನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಯುತ್ತಿದ್ದ ವೇಳೆ ಅಂದಿನ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರನ್ನು ನಿಯೋಗವೊಂದು ಭೇಟಿಯಾಗಿ ಮಧ್ಯಪ್ರವೇಶಕ್ಕೆ ಮನವಿ ಮಾಡಿತ್ತು. ಆಗ ನಾರಾಯಣನ್ ಹೇಳಿದ ಒಂದು ಮಾತಿದು: “ಗುಜರಾತ್ನಲ್ಲಿ ಸಂವಿಧಾನ ಕೆಲಸ ಮಾಡುತ್ತಿಲ್ಲ’. ಆಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದರು.
ಅದಾಗಿ, ಸುಮಾರು ಎರಡು ದಶಕ ಹಾಗೂ ಪ್ರಧಾನಿಯಾಗಿ ಮೋದಿಯವರ ಸುಮಾರು ಏಳು ವರ್ಷದ ಅಧಿಕಾರದ ನಂತರ, ಭಾರತದ ಬಹುತೇಕ ಭಾಗಗಳಲ್ಲಿ ಹಾಗೂ ರಾಜಕೀಯದ ವಿವಿಧ ವಿಭಾಗಗಳಲ್ಲಿ ಸಂವಿಧಾನ ಕೆಲಸ ಮಾಡುತ್ತಿಲ್ಲ.
ನಾವು 72ನೇ ಗಣರಾಜ್ಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಂಘಟನೆ ಕಟ್ಟುವ ಹಾಗೂ ಸಭೆ ಸೇರುವ ಸ್ವಾತಂತ್ರ್ಯ ಸಹಿತ ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಏನಾಗಿದೆ ಎನ್ನುವುದನ್ನು ಗಮನಿಸುವುದು ಅಗತ್ಯವಾಗಿದೆ.
ನೂರಾರು ಜನರು ಜಾಮೀನು ಸಿಗದೆ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅನ್ವಯ ದೇಶದ್ರೋಹದಂಥ ಆರೋಪಗಳಡಿ ಇವರನ್ನು ಬಂಧಿಸಲಾಗಿದೆ. ಅವರ್ಯಾರೂ ಕ್ರಿಮಿನಲ್ಗಳಲ್ಲ, ಭಯೋತ್ಪಾದಕರೂ ಅಲ್ಲ. ಅವರೆಲ್ಲ ರಾಜಕೀಯ ಅಥವಾ ಸಾಮಾಜಿಕ ಕಾರ್ಯಕರ್ತರು. ವಿಖ್ಯಾತ ಕಾಮಿಡಿಯನ್ಗಳೂ ಆಗಿದ್ದಾರೆ. ಅವರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ 16 ಬುದ್ಧಿಜೀವಿಗಳು, ವಕೀಲರು ಮತ್ತು ಅಧ್ಯಯನ-ಅಧ್ಯಾಪನಗಳಲ್ಲಿ ತೋಡಗಿದವರಿದ್ದಾರೆ. ಈಶಾನ್ಯ ದೆಹಲಿಯ ಕೋಮು ಗಲಭೆ ಸಂಬಂಧ ಸುಳ್ಳು ಕೇಸ್ ಅಡಿ ಬಂಧಿತರಾದ 19 ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಮತ್ತು ಕಾರ್ಯಕರ್ತರಾಗಿದ್ದಾರೆ. ಉತ್ತರ ಪ್ರದೇಶದ “ಲವ್ ಜಿಹಾದ್’ ಸುಗ್ರೀವಾಜ್ಞೆ ಅನ್ವಯ 49 ಜನರ ಬಂಧನವಾಗಿದ್ದು ಅವರಲ್ಲಿ ಮಥುರಾದಲ್ಲಿ ಬಂಧಿತರಾದ ಕಪ್ಪನ್ರಂಥ ಪತ್ರಕರ್ತರಿದ್ದಾರೆ. ಮಣಿಪುರದಲ್ಲಿ ಯುಎಪಿಎ ಅಡಿ ಮೂವರು ಹಿರಿಯ ಪತ್ರಕರ್ತರನ್ನು ಬಂಧಿಸಿಡಲಾಗಿದೆ. ಹಾಸ್ಯ ಕಲಾವಿದ (ಕಾಮಿಡಿಯನ್) ಮುನವರ್ ಫಾರೂಕಿ ಅವರನ್ನು ಇಂದೋರ್ ಜೈಲಿನಲ್ಲಿ ಕೂಡಿ ಹಾಕಲಾಗಿದೆ.
- ಹಿಂದುತ್ವ-ನವಉದಾರವಾದಿ ವ್ಯವಸ್ಥೆಯನ್ನು ಮುಂದೊತ್ತಲು ನಾಗರಿಕರ ಪ್ರತಿಯೊಂದು ಸಾಂವಿಧಾನಿಕ ಹಕ್ಕನ್ನು ದಮನಿಸಲಾಗುತ್ತಿದೆ. “ಸಂವಿಧಾನ ಎಷ್ಟೇ ಉತ್ತಮವಾದರೂ ಅದನ್ನು ಅನುಷ್ಠಾನಗೊಳಿಸಬೇಕಾದವರು ಕೆಟ್ಟವರಾದರೆ ಸಂವಿಧಾನವೂ ಅಷ್ಟೇ ಕೆಟ್ಟದಾಗುವುದು ಖಚಿತ” ಎಂದು ಡಾ. ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದ್ದರು. “ಈ ಕೆಟ್ಟ ಜನರ ಕೂಟ’ ಸಂವಿಧಾನವನ್ನು ನಾಶ ಮಾಡುತ್ತಿದೆ.
- ನಾಗರಿಕರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಗಾಗಿ ಹೋರಾಡಲು ಪಣ ತೊಡಲು ಗಣತಂತ್ರ ದಿನ ಒಂದು ಸಂದರ್ಭವಾಗಬೇಕು. ಅಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಕಿಸಾನ್ ಟ್ರ್ಯಾಕ್ಟರ್ ರ್ಯಾಲಿ ಈ ಹೋರಾಟದ ಒಂದು ಉತ್ಕೃಷ್ಟ ಉದಾಹರಣೆ ಆಗಲಿದೆ.
ಸಂವಿಧಾನದತ್ತವಾಗಿರುವ ವೈಯಕ್ತಿಕ ಸ್ವಾತಂತ್ರ್ಯವನ್ನು ತುಳಿದು ಹಾಕಲಾಗಿದೆ. ಯುಎಪಿಎ ಒಂದು ಕರಾಳ ಕಾನೂನಾಗಿದ್ದು ಜಾಮೀನು ಸಿಗುವುದು ಬಹಳ ಕಷ್ಟಕರವಾಗಿದೆ. 2008ರ ನವೆಂಬರ್ನಲ್ಲಿ ಮುಂಬಯಿ ಮೇಲೆ ನಡೆದ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಜಾಮೀನಿಗೆ ಸಂಬಂಧಿಸಿದ ಕರಾಳ ನಿಯಮಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಕಾನೂನಿಗೆ ಸೇರಿಸಿತ್ತು ಎನ್ನುವುದನ್ನು ಗಮನಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ರಾಜ್ಯಗಳ ಹಕ್ಕುಗಳ ಮೇಲೆ ಸವಾರಿ ಮಾಡುವ ರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆ (ಎನ್ಐಎ) ಕೂಡ ಯುಪಿಎ ಸರ್ಕಾರದ ಉತ್ಪನ್ನವಾಗಿದೆ. ಮೋದಿ ಸರ್ಕಾರವು ಯುಎಪಿಎ ಮತ್ತು ಎನ್ಐಎ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಬಹಳಷ್ಟು ತಿದ್ದುಪಡಿಗಳ ಮೂಲಕ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ಕಲ್ಪಿಸಿದೆ.
ಸಂವಿಧಾನದಲ್ಲಿ ಕಂಡರಿಸಿದ ಅಧಿಕಾರಗಳ ವಿಂಗಡಣೆಯು ನ್ಯಾಯಾಂಗಕ್ಕೆ ಸ್ವತಂತ್ರವಾದ ಪಾತ್ರವನ್ನು ಕಲ್ಪಿಸಿದೆ. ಆದರೆ ಅದು ಈಗ ಗಂಭೀರ ದಾಳಿಗೆ ಒಳಗಾಗಿದೆ. ನ್ಯಾಯಾಂಗದ ಸ್ವತಂತ್ರ ಪಾತ್ರ ಕುಸಿಯುತ್ತಿದೆ. ಸಾಂವಿಧಾನಿಕ ಕೋರ್ಟ್ ಎಂದೇ ಪರಿಗಣಿಸಲಾಗುವ ಸುಪ್ರೀಂ ಕೋರ್ಟ್ ನಿಂದ ಆರಂಭಿಸಿ ಇಡೀ ನ್ಯಾಯಾಂಗವೇ ನಾಗರಿಕರ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಲ್ಲಿ ಪಾತ್ರಧಾರಿ ಆಗುತ್ತಿದೆ.
ಸರ್ವೋಚ್ಚ ನ್ಯಾಯಾಲಯ ಹೆಚ್ಚೆಚ್ಚಾಗಿ ಕಾರ್ಯಾಂಗೀಯ ಕೋರ್ಟ್ ಆಗುತ್ತಿದೆ. 2019ರ ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ವಾಟಾಳಿ ಪ್ರಕರಣದ ತೀರ್ಪನ್ನು ಇಲ್ಲಿ ಗಮನಿಸಬೇಕು. ಯುಎಪಿಎ ಅಡಿ ಬಂಧಿತರಾದವರು ಸಲ್ಲಿಸಿದ ಜಾಮೀನು ಅರ್ಜಿ ಪರಿಶೀಲಿಸುವಾಗ, ಪ್ರಥಮ ಮಾಹಿತಿ ವರದಿ, ಅಂದರೆ ಎಫ್ಐಆರ್ನಲ್ಲಿ ಮಾಡಲಾಗಿರುವ ಆರೋಪಗಳೇ ಸರಿ ಎಂದು ಕೋರ್ಟ್ ಗಳು ಭಾವಿಸಬೇಕು. ಆರೋಪ ತಪ್ಪೆಂದು ಸಾಬೀತುಪಡಿಸುವ ಹೊಣೆ ಆರೋಪಿಯದ್ದಾಗಿರುತ್ತದೆ ಎಂದು ಈ ತೀರ್ಪು ಹೇಳಿದೆ. ಇದರಿಂದಾಗಿ ಯುಎಪಿಎ ಅಡಿ ಆರೋಪ ಹೊತ್ತಿರುವವರು ಜಾಮೀನು ಪಡೆಯುವುದು ಅಕ್ಷರಶಃ ಕಷ್ಟವಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್, ಸುಪ್ರೀಂ ಕೋರ್ಟ್ ನ ಈ ತೀರ್ಪನ್ನೇ ಉಲ್ಲೇಖಿಸಿದೆ.
ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಂಥ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಂವಿಧಾನದ ಸಿದ್ಧಾಂತಗಳು ಅನ್ವಯವಾಗುವುದೇ ಇಲ್ಲ. ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಪಾಡಂತೂ ಇನ್ನೂ ಸಂಕಟಮಯ. ಮುಸ್ಲಿಂ ಹುಡುಗನೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಹಿಂದೂ ಹುಡುಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದರೆ ಆತನನ್ನು ಸುತ್ತುವರಿದು ಕಿರುಕುಳ ನೀಡಲಾಗುತ್ತದೆ. ಯಾವುದೇ ಹಿಂದುತ್ವ ಸಂಘಟನೆ ದೂರು ನೀಡಿದರೆ ಆತನನ್ನು ಜೈಲಿಗೆ ತಳ್ಳಲಾಗುತ್ತದೆ. ಮುನಾವರ್ ಫಾರೂಕಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಅಥವಾ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಪೊಲೀಸರು ಅಧಿಕೃತವಾಗಿ ಹೇಳಿದ್ದರೂ ಫಾರೂಕಿಯವರನ್ನು ಮೂರು ವಾರಗಳಿಂದ ಜೈಲಿನಲ್ಲಿಡಲಾಗಿದೆ. ಸ್ಥಳೀಯ ಬಿಜೆಪಿ ಶಾಸಕನ ಮಗ ಫಾರೂಕಿ ವಿರುದ್ಧ ದೂರು ನೀಡಿದ್ದಾನೆ ಎನ್ನುವುದಷ್ಟೆ ಇಲ್ಲಿ ಮುಖ್ಯ ಅಂಶವಾಗಿದೆ. ರಾಜ್ಯದಲ್ಲಿ ಇಂಥ ಅಂಧಾದುಂಧಿ ಆಡಳಿತವೇ ನಡೆಯುತ್ತಿರುವುದು. ಹಿಂದುತ್ವ ಗುಂಪು, ಪೊಲೀಸರು ಮತ್ತು ನ್ಯಾಯಾಲಯ -ಈ ಮೂರೂ ಏಕತ್ರವಾಗಿ ಕಾರ್ಯ ನಿರ್ವಹಿಸುತ್ತವೆ.
ನಾಗರಿಕರ ಹಕ್ಕುಗಳ ಮೇಲಿನ ಈ ದಾಳಿಯು ಜೀವನ ಮತ್ತು ಸ್ವಾತಂತ್ರ್ಯದ ಪರಿಧಿಯಾಚೆಗೂ ಕೆಲಸ ಮಾಡುತ್ತಿದೆ. ಆಹಾರದ ಹಕ್ಕು, ಉದ್ಯೋಗದ ಹಕ್ಕು ಮತ್ತು ಆರೋಗ್ಯ ಹಾಗೂ ಶಿಕ್ಷಣದ ಸಮಾನ ಅವಕಾಶಗಳು ಕೂಡ ಭೀಕರ ದಾಳಿಗೆ ಒಳಗಾಗಿವೆ. ಕೊರೊನಾ ಸಾಂಕ್ರಾಮಿಕತೆ ಮತ್ತು ಮೋದಿ ಸರ್ಕಾರ ಅದನ್ನು ನಿಭಾಯಿಸಿದ ರೀತಿಯು ಅಸಮಾನತೆ, ಹಸಿವು ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆಯೇ ಹೊರತು ಬೇರೇನನ್ನೂ ಮಾಡಿಲ್ಲ.
2020ರಲ್ಲಿ 107 ದೇಶಗಳ ಪೈಕಿ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನಕ್ಕೆ ಕುಸಿದಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ 1.7 ಕೋಟಿ ಕಡಿಮೆ ಜನರು ಉದ್ಯೋಗ ಪಡೆದಿದ್ದಾರೆ. 2020 ಡಿಸೆಂಬರ್ನಲ್ಲಿ ನಿರುದ್ಯೋಗ ದರ ಶೇಕಡ 9.1ಕ್ಕೆ ಏರಿದೆ ಎಂದು ಸಿಎಂಐಇ ಅಂಕಿಸಂಖ್ಯೆ ತಿಳಿಸಿದೆ.
ಅನಾರೋಗ್ಯ ಮತ್ತು ದಾರಿದ್ರ್ಯವು ಜನರನ್ನು ಕಿತ್ತು ತಿನ್ನುತ್ತಿದ್ದರೂ ಮೋದಿ ಸರ್ಕಾರ ಮಾನಮರ್ಯಾದೆ ಬಿಟ್ಟು ಬೆರಳೆಣಿಕೆಯ ದೊಡ್ಡ ಉದ್ಯಮಿಗಳ ಹಿತವನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ನಡೆಸಿದೆ. 2020ರಲ್ಲಿ ಭಾರತದ ಬಿಲಿಯಾಧಿಪತಿಗಳ ಸಂಖ್ಯೆ ಅತ್ಯಂತ ಹೆಚ್ಚು, ಅಂದರೆ 90ಕ್ಕೆ ಏರಿದೆ. 2020 ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ಕಾರ್ಪೊರೇಟ್ ವಲಯ ಬಂಪರ್ ಫಲ ಗಳಿಸಿದೆ. ಲಾಕ್ಡೌನ್ ನಡುವೆಯೂ 4,234 ಕಂಪೆನಿಗಳ ಲಾಭದಲ್ಲಿ ಅಪಾರವಾದ ಏರಿಕೆ ದಾಖಲಾಗಿದೆ. ಒಟ್ಟಾರೆ ಲಾಭ ಶೇಕಡ 569ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 50ರಷ್ಟು ಕಂಪೆನಿಗಳು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಉದ್ಯೋಗಿಗಳ ವೇತನವನ್ನು ಕಡಿತ ಮಾಡಿವೆ. ಶೇಕಡ 70ರಷ್ಟು ಲಿಸ್ಟೆಡ್ ಕಂಪೆನಿಗಳ ಉದ್ಯೋಗಿಗಳ ವೇತನವು ಹಣದುಬ್ಬರ-ಹೊಂದಾಣಿಕೆ ವಿಚಾರದಲ್ಲಿ ಕುಸಿತವಾಗಿದೆ.
ಒಂದೆಡೆ ಅಪಾರ ಲಾಭ, ಇನ್ನೊಂದೆಡೆ ವೇತನದಲ್ಲಿ ಗಣನೀಯ ಕುಸಿತ-ಇದು ವರ್ಗ ಶೋಷಣೆ ತೀವ್ರಗೊಳ್ಳುತ್ತಿರುವುದರ ಕೊಳಕು ಮುಖವಾಗಿದೆ.
ಈ ಹಿಂದುತ್ವ-ನವಉದಾರವಾದಿ ವ್ಯವಸ್ಥೆಯನ್ನು ಮುಂದೊತ್ತಲು ನಾಗರಿಕರ ಪ್ರತಿಯೊಂದು ಸಾಂವಿಧಾನಿಕ ಹಕ್ಕನ್ನು ದಮನಿಸಲಾಗುತ್ತಿದೆ. “ಸಂವಿಧಾನ ಎಷ್ಟೇ ಉತ್ತಮವಾದರೂ ಅದನ್ನು ಅನುಷ್ಠಾನಗೊಳಿಸಬೇಕಾದವರು ಕೆಟ್ಟವರಾದರೆ ಸಂವಿಧಾನವೂ ಅಷ್ಟೇ ಕೆಟ್ಟದಾಗುವುದು ಖಚಿತ” ಎಂದು ಡಾ. ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದ್ದರು. “ಈ ಕೆಟ್ಟ ಮಂದಿ’ ಸಂವಿಧಾನವನ್ನು ನಾಶ ಮಾಡುತ್ತಿದ್ದಾರೆ.
ನಾಗರಿಕರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಗಾಗಿ ಹೋರಾಡಲು ಪಣ ತೊಡಲು ಗಣತಂತ್ರ ದಿನ ಒಂದು ಸಂದರ್ಭವಾಗಬೇಕು. ಅಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಕಿಸಾನ್ ಟ್ರ್ಯಾಕ್ಟರ್ ರ್ಯಾಲಿ ಈ ಹೋರಾಟದ ಒಂದು ಉತ್ಕೃಷ್ಟ ಉದಾಹರಣೆ ಆಗಲಿದೆ. ಸಂವಿಧಾನವನ್ನು ನಾಶ ಮಾಡುತ್ತಿರುವ ಹಿಂದುತ್ವವಾಲಾಗಳನ್ನು ಸೋಲಿಸಲು ರಾಜಕೀಯ ಸಂಘರ್ಷವನ್ನು ಮುಂದಕ್ಕೊಯ್ಯುವುದು ಅನಿವಾರ್ಯವಾಗಿದೆ.
ಕನ್ನಡಕ್ಕೆ: ವಿಶ್ವ