ಬೆಂಗಳೂರು; ಜ 19: ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ಸಿಪಿಐಎಂ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಜಾಥ ಆರಂಭಗೊಂಡಿದೆ. ಜಾಗೃತಿ ಹಾಡುಗಳ ಮೂಲಕ ಆರಂಭವಾದ ಜಾಥವು “ರೈತರು, ಕಾರ್ಮಿಕರ ಜೊತೆ ನಾವು, ಆಹಾರ- ಉದ್ಯೋಗದ ಉಳುವಿಗಾಗಿ, ಸಂವಿಧಾನ ಸಂರಕ್ಷಣಗೆ ನಾವು, ಜನತೆಯ ಹಕ್ಕುಗಳ ರಕ್ಷಣೆಗಾಗಿ, ಮತ್ತು ನಾಗರೀಕ ಸೌಲಭ್ಯಗಳಿಗಾಗಿ ನಾವು, ನೆಮ್ಮದಿಯ ಬೆಂಗಳೂರಿಗಾಗಿ, ಹಾಗೂ ಬೆಲೆ ಏರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ತಡೆಗಾಗಿ” ಎಂಬ ಘೋಷಣೆಯಡಿಯಲ್ಲಿ ನಡೆಯುತ್ತಿದೆ.
ಈ ಜಾಥವು ಬೆಂಗಳೂರಿನ ಹಲವು ಭಾಗಗಳಲ್ಲಿ ಸಂಚರಿಸಿಸುತ್ತಿದ್ದು, ಕೃಷಿ ಕಾಯ್ದೆ ವಿರೊಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದೆ. ಇದೇ ಜನವರಿ 26ರ ಗಣರಾಜ್ಯೋತ್ಸವದಂದು ರೈತ, ಕಾರ್ಮಿಕರ ಪರ್ಯಾಯ ಪೆರೇಡ್ ನಡೆಯುತ್ತಿದ್ದು ಆ ಪೆರೇಡ್ ನಲ್ಲಿ ರೈತ, ಕಾರ್ಮಿಕರ ಮಕ್ಕಳಾದ ನಾವೇಲ್ಲರೂ ಭಾಗವಹಿಸಬೇಕು, ರೈತರ ಪರವಾಗಿ ನಿಲ್ಲಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಕೆ.ವಿಮಲಾ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಈ ಜಾಥದ ಆಶಯಗಳನ್ನು ಕುರಿತು ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯಉಪಾಧ್ಯಕ್ಷೆ ಕೆ.ಎಸ್ ಲಕ್ಷ್ಮೀ ಮಾತನಾಡುತ್ತ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಜಾಥವು ಹಾಡುಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಮೂರು ಅಪಾಯಕಾರಿ ಕೃಷಿ ಮಸೂದೆಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ. ಬೆವರು ಸುರಿಸ ಬೆಳೆಯನ್ನು ಬೆಳೆದ ರೈತ ತನ್ನ ಬೇವರಿನ ಪಾಲನ್ನು ಸಹ ತೆಗೆದುಕೊಳ್ಳಲಾಗದ ಸ್ಥಿತಿಗೆ ಇಂದು ತಲುಪಿದ್ದಾನೆ. ಮಳೆ ಬಿಸಿಲು ಎನ್ನದೇ ಬೆಳೆ ಬೆಳದ ರೈತನು ಸಾಲದಿಂದ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದರೆ, ರೈತ ಬೆಳೆದ ತರಕಾರಿ, ಬೆಳೆ ಕಾಳು ಇತ್ಯಾದಿ ಬೆಳೆಯ ಲಾಭವನ್ನು ಅದಾನಿ, ಅಂಬಾನಿಯಂತಹ ಕಬಂಧ ಬಾಹುಗಳು ಬೇವರೇ ಸುರಿಸದೇ ಸಾರಾಸಗಟಾಗಿ ಲಾಭವನ್ನು ಕಬಳಿಸುತ್ತಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ಬೆಂಬಲ ಬೆಲೆ ನೀಡಿಬೇಕು ಎಂಬುದು ನಮ್ಮೆಲ್ಲರ ಒತ್ತಾಯ. ರೈತ ಉಳಿದರೆ ದೇಶ ಉಳಿತದೆ, ದೇಶ ಉಳಿದರೆ ನಾವು ಉಳಿಯುತ್ತೇವೆ ಎಂದು ಹೇಳಿದರು.
ದಕ್ಷಿಣ ಜಿಲ್ಲಾ ಸಮಿತಿಯ ಜಾಥದ ನೇತ್ವತ್ವವನ್ನು ಸಿಪಿಐಎಂ ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಉಮೇಶ್ ವಹಿಸಿದ್ದರು. ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ, ಕರಪತ್ರಗಳನ್ನು ಹಂಚಿ ಹೋರಾಟದ ಬಗ್ಗೆ ತಿಳುವಳಿಕೆ ಮೂಡಿಸುವ ದೇಶ್ಯಗಳು ಅಲ್ಲಲ್ಲಿ ಕಾಣುತ್ತಿದ್ದವು. ಈ ಜಾಥದಲ್ಲಿ ವಿದ್ಯಾರ್ಥಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು
ಇನ್ನು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಭಾಗವಾಗಿ ಎರಡನೇ ದಿನದ ಜಾಥಾ, ಉತ್ತರ (ದಾಸರಹಳ್ಳಿ ಪ್ರದೇಶ) ಹಾಗು ಪೂರ್ವ ವಲಯಗಳಲ್ಲಿ (ಕೆ.ಆರ್.ಪುರಂ). ನಡೆಯಿತು. ಈ ಜಾಥದ ಉಸ್ತುವಾರಿಯನ್ನು ಸಿಪಿಐಎಂನ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರತಾಪ್ ಸಿಂಹ, ಮುಖಂಡರಾದ ಹೆಚ್ ಎನ್ ಗೋಪಾಲ ಗೌಡ, ಗೌರಮ್ಮ, ಟಿ. ಲೀಲಾವತಿ, ನಾಗರಾಜ್ ನಂಜುಂಡಯ್ಯ, ಹುಳ್ಳಿ ಉಮೇಶ್ ವಹಿಸಿದ್ದರು. ಮತ್ತು ಈ ಜಾಥದ ಕುರಿತು ಮಾತನಾಡಿದರು.