ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ
ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯ ಗಡಿಭಾಗದಲ್ಲಿರು ಶಹಜಾನ್ ಪುರ್ ಗಡಿ ದೆಹಲಿಯಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ. ಇಂದು ಬೆಳಗ್ಗೆ ನವದೆಹಲಿಯಿಂದ ಹೊರಟವರು ನೇರವಾಗಿ ಬಂದು ಶಹಜಾನ್ ಪುರ ಬಾರ್ಡರ್ ತಲುಪಿದೆವು. ಸಿಂಗು ಗಡಿಯ ರೀತಿಯಲ್ಲಿಯೇ ಇಲ್ಲಿಯೂ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಟ್ರಕ್ ಗಳನ್ನೇ ನಿಲ್ಲಿಸಲಾಗಿದೆ. ಮಾತ್ರವಲ್ಲ ಮನುಷ್ಯರು ಸುಲಭವಾಗಿ ಅತ್ತಿ ಇಳಿಯದಂತೆ ರಾಷ್ಟ್ರೀಯ ಹೆದ್ದಾರಿಗಳನ್ನೇ ಜೆಸಿಬಿಗಳಲ್ಲಿ ಅಗೆದು ಆಳವಾದ ಗುಂಡಿಗಳನ್ನು ನಿರ್ಮಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ಅದೇ ಹೆದ್ದಾರಿಯನ್ನೇ ತಮ್ಮ ಪ್ರತಿಭಟನಾ ವೇದಿಕೆಯನ್ನಾಗಿ ರೈತರು ಮಾರ್ಪಡಿಸಿಕೊಂಡಿದ್ದಾರೆ. ಈ ಗಡಿಯಲ್ಲಿ ಹರಿಯಾಣ, ಪಂಜಾಬ್, ರಾಜಸ್ಥಾನ್, ಒಡಿಸ್ಸಾ, ಕೇರಳ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂದ್ರಪ್ರದೇಶ, ಕರ್ನಾಟಕ ರಾಜ್ಯಗಳಿಂದ ರೈತರು ಮತ್ತು ಕೂಲಿಕಾರರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ನಾವು ಸ್ಥಳಕ್ಕೆ ಆಗಮಿಸಿದಾಗ ಕೇರಳದಿಂದ ಬಸ್ಸುಗಳಲ್ಲಿ ನಾಲ್ಕು ದಿನಗಳ ಕಾಲ ಪ್ರಯಾಣ ಮಾಡಿ ಆಗಮಿಸಿದ್ದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ತಂಡದ ನೇತೃತ್ವ ವಹಿಸಿದ್ದ ಅಖಿಲ ಭಾರತ ಕಿಸಾನ್ ಸಭಾದ ಕೇರಳದ ಪ್ರಧಾನ ಕಾರ್ಯದರ್ಶಿ ಬಾಲಗೋಪಲ್ ಮಾತನಾಡುತ್ತ ಸಾವಿರಾರು ಸಂಖ್ಯೆಯಲ್ಲಿ ದೆಹಲಿಯತ್ತ ಹೊರಟ ನಮ್ಮನ್ನ ಕರ್ನಾಟಕದ ಬಿಜೆಪಿ ಸರ್ಕಾರ ಗಡಿಗಳಲ್ಲಿ ತೊಂದರೆ ಕೊಡುವುದರ ಮೂಲಕ ತಡೆಯಲು ಪ್ರಯತ್ನಿಸಲಾಯಿತು… ಆದರೆ ನಾವು ಅವುಗಳನ್ನೆಲ್ಲ ಎದುರಿಸಿ ಇಲ್ಲಿಗೆ ಬಂದು ಸೇರಿದ್ದೇವೆ.
ಈ ಪ್ರತಿಭಟನೆ ಉತ್ತರ ಭಾರತದ ರೈತರ ಪ್ರತಿಭಟನೆ ಮಾತ್ರವಲ್ಲ ಇದು ಇಡೀ ದೇಶದ ಪ್ರತಿಭಟನೆ ಕೇಳವು ಇದೇ ದೇಶದಲ್ಲಿರುವುದರಿಂದ ನಾವು ಇಲ್ಲಿಗೆ ಬಂದಿದ್ದೇವೆ. ಈ ಚಳುವಳಿ ನಿರ್ಣಾಯಕ ಹಂತಕ್ಕೆ ತಲುಪುವುವ ವರೆಗೆ ನಾವುಗಳು ಇಲ್ಲಿಯೇ ಇರುತ್ತೇವೆ ಎಂದು ಘೋಷಿಸಿದರು. ಜೊತೆಯಲ್ಲಿದ ರಾಜ್ಯಸಭಾ ಸದಸ್ಯರು ಮತ್ತು ಕೇರಳ ಕಿಸಾನ್ ಸಭಾದ ಅಧ್ಯಕ್ಷರಾದ ಕೆ.ಕೆ.ರಾಘೇಶ್ ರವರು ಪ್ರತಿಭಟನೆ ಪ್ರಾರಂವಾದಾಗಿನಿಂದ ಇಲ್ಲಿಯೇ ಉಳಿದಿದ್ದಾರೆ. ಮತ್ತೊಬ್ಬ ರೈತನಾಯಕ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಕೇರಳದ ರೈತರನ್ನ ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.
ಇದನ್ನು ಓದಿ : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ
ಈ ಗಡಿಯಲ್ಲಿ ನಮಗೆ ಸಿಂಗು ಗಡಿಯಲ್ಲಿರುವ ವಾತಾವರಣಕ್ಕಿಂತ ಸ್ವಲ್ಪ ಭಿನ್ನವಾದ ವಾತಾವರಣ ಕಾಣುತ್ತದೆ. ಏಕೆಂದರೆ ಅದು ದೆಹಲಿ ನಗರಕ್ಕೆ ಅಂಟಿಕೊಂಡಂತೆ ಅತ್ಯಂತ ಸಮೀಪದಲ್ಲಿರುವ ಗಡಿ. ಮಾತ್ರವಲ್ಲ ಅದು ಅತ್ಯಂತ ಜನವಸತಿ ಪ್ರದೇಶ. ಆದರೆ ಶಹಜಾನ್ ಪುರ್ ಬಾರ್ಡರ್ ದೆಹಲಿಯಿಂದ ತುಂಬ ದೂರವಿರುವುದರಿಂದ ಅಕ್ಕಪಕ್ಕ ಹಳ್ಳಿಗಳೂ ದೂರವಿರುವುದರಿಂದ ಇಲ್ಲಿ ಪ್ರತಿಭಟನಾಕಾರರನ್ನು ಹೊರತುಪಡಿಸಿ ಉಳಿದವರು ಕಡಿಮೆ. ಸುತ್ತಲೂ ಅಚ್ಚಹಸಿರಿನಿಂದ ಕೂಡಿದ ವಿಶಾಲವಾದ ಸಾಸಿವೆಯ ಹೊಲಗಳು ಅದರಲ್ಲಿನ ಹಳದಿಯ ಹೂವುಗಳು ನೋಡಲು ಕಣ್ಣಿಗೆ ಆನಂದ. ಇಂತಹ ಹೊಲಗಳಲ್ಲಿ ಕೆಲಸ ಮಾಡಬೇಕಾಗಿದ್ದ ರೈತರು ಅದೇ ಹೊಲಗಳ ಪಕ್ಕದ ಹೆದ್ದಾರಿಗಳಲ್ಲಿ ಹಗಲು ರಾತ್ರಿ ಪ್ರತಿಭಟನೆ ನಡೆಸಬೇಕಾಗಿ ಬಂದ ಕೇಂದ್ರ ಸರ್ಕಾರದ ನೀತಿಗಳನ್ನು ರೈತರು ಶಪಿಸುತ್ತಿದ್ದಾರೆ.
ಸುತ್ತಲಿನ ಹಸಿರು ಪರಿಸರದ ಮಧ್ಯೆ ಕೆಂಬಾವುಟಗಳ ಹಾರಾಟ ಜೋರಾಗಿಯೇ ಇತ್ತು.
ಕರ್ನಾಟಕದ ಮಂತ್ರಿ ಬಸವನ ಗೌಡ ಪಾಟೀಲ್ ಯತ್ನಾಳ್ ದೆಹಲಿ ರೈತ ಚಳುವಳಿಯ ಬಗ್ಗೆ ಪ್ರತಿಕ್ರಿಯಿಸುತ್ತ ಅಲ್ಲಿ ಭಾಗವಹಿಸಿರುವವರೆಲ್ಲಾ ಶ್ರೀಮಂತರು, ಅವರು ಶೋಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಗತ್ಯ ಬಿದ್ದರೆ ನಾವುಗಳೆ ಚಂದ ಎತ್ತಿ ಯತ್ನಾಳ್ ಗೆ ಟಿಕೇಟ್ ಮಾಡಿಕೊಡೋಣ ಆತ ಒಮ್ಮೆ ಶಹಜಾನ್ ಪುರ ಗಡಿಗೆ ಬಂದು ಇಲ್ಲಿರುವ ಪ್ರತಿಭಟನಾ ನಿರತ ರೈತರನ್ನು ಮಾತನಾಡಿಸಿ ಅವರ ಹಿನ್ನೆಲೆಯನ್ನು ಒಮ್ಮೆ ಕೇಳಲಿ, ಇಲ್ಲ ತನ್ನ ಮಾತನ್ನು ವಾಪಸ್ ತೆಗೆದುಕೊಳ್ಳಲ್ಲಿ. “ಇದೊಂದು ಮಿನಿ ಇಂಡಿಯಾದಂತಿದೆ” ಎಂದು ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಹೇಳಿದರು. ಮಾತನಾಡಿಸುವಾಗ ಅವರನ್ನ ಒಂದು ಮಾತು ಕೇಳಿದೆ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಊಟ, ತಿಂಡಿ ಉಳಿಯುವ ವ್ಯವಸ್ಥೆ, ಇತ್ಯಾಧಿಗಳನ್ನು ಕಳೆದ ಒಂದುವರೆ ತಿಂಗಳುಗಳಿಂದ ಹೇಗೆ ನಡೆಸುತ್ತಿದ್ದೀರ ಇದಕ್ಕೆಲ್ಲ ನೀವು ಹಣವನ್ನ ಹೇಗೆ ಹೊಂದಿಸಿದಿರಿ ಎಂದು ಕೇಳಿದೆ ಅದಕ್ಕೆ ಅವರು ಹೇಳಿದರು “ಈ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಪ್ರತಿಭಟನೆಗೆ ದೇಶಾಧ್ಯಂತ ವ್ಯಾಪಕ ಸಹಾಯ, ನೆರವು ಹರಿದು ಬರುತ್ತಿದೆ. ಈ ಪ್ರದೇಶದ ಸುತ್ತ ಮುತ್ತಲಿನ ರೈತರು, ತಾವು ಬೆಳೆದ ತರಕಾರಿಗಳನ್ನು, ಪ್ರತಿ ನಿತ್ಯ ಬೇಕಾಗುವಷ್ಟು ಹಾಲನ್ನು ಸರಬರಾಜು ಮಾಡುತ್ತಿದ್ದಾರೆ. ಕೆಲವರು ಗೋಧಿ, ಅಕ್ಕಿ, ಹಾಸಿಗೆ ಮತ್ತು ಹೊದಿಕೆಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಉಳಿದ ಅಗತ್ಯತೆಗಳನ್ನು ಸಂಘಟನೆಗಳು ಪೂರೈಸುತ್ತಿವೆ”.
ಸಿಂಗು ಬಾರ್ಡರ್ ನಲ್ಲಿ ಅಡುಗೆ ಲಂಗರ್ ಗಳನ್ನು ಸಿಕ್ ಸಮುದಾಯದ ಗುರುದ್ವಾರಗಳು ವಹಿಸಿಕೊಂಡಿದ್ದವು. ಆದರೆ ಇಲ್ಲಿ ರೈತ ಸಂಘಟನೆಗಳು ಅಡುಗೆ ಲಂಗರ್ ಗಳನ್ನು ನಿರ್ಮಾಣ ಮಾಡಿದ್ದವು. ಅವರ ಅಡುಗೆಯ ಸ್ಟೋರ್ ರೂಂನ ಟೆಂಟ್ ಗಳಲ್ಲಿ ಸಂಗ್ರಹವಾಗಿರುವ ದಾಸ್ತಾನನ್ನು ಗಮನಿಸಿದರೆ ಕನಿಷ್ಟ 6 ತಿಂಗಳುಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಪ್ರತಿಭಟನೆಯನ್ನ ಮುಂದುವರೆಸುವ ಸೂಚನೆ ಕಾಣುತ್ತಿದೆ.
ಇಲ್ಲಿನ ಮತ್ತೊಂದು ವಿಶೇಷವೆಂದರೆ ರಾಜಸ್ಥಾನದ ಮುಸ್ಲಿಂ ಸಮುದಾಯದ ಸಂಘಟನೆಯೊಂದು ಈ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಪ್ರತಿಭಟನಾ ನಿರತ ರೈತರಿಗೆ ಹಣ್ಣುಗಳು ಮತ್ತು ಊಟ, ತಿಂಡಿ ಹಾಗೂ ಚಹಾದ ಲಂಗರನ್ನ ನಡೆಸಿಕೊಂಡು ಬಂದಿದ್ದಾರೆ. ಇದನ್ನ ನೋಡಿದಾಗ ರೈತರು ದುಡಿಯುವ ವರ್ಗವಾಗಿ ಒಂದುಗೂಡಿದರೆ ಅವರಿಗೆ ಸಹಾಯಕ್ಕೆ ನಿಲ್ಲಲು ಯಾವುದೇ ಧರ್ಮದ ಬೇಧಗಳಿಲ್ಲದೆ ಎಲ್ಲರೂ ಬಂದು ಕೈಜೋಡಿಸುತ್ತಾರೆ ಎನ್ನುವುದಕ್ಕೆ ಇದೊಂದು ಜೀವಂತ ಉದಾಹರಣೆ.
ಇಲ್ಲಿ ಟ್ರ್ಯಾಕ್ಟರ್ ಗಳಿಂದ ನಿರ್ಮಾಣವಾಗಿರುವ ಮನೆಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ಟಾರ್ಪಲ್ ಗಳಿಂದ ನಿರ್ಮಾಣವಾಗಿರುವ ಟೆಂಟ್ ಗಳ ಸಂಖ್ಯೆಯೇ ಹೆಚ್ಚು. ಪ್ರತಿ ಟೆಂಟುಗಳಲ್ಲೂ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಮಾತ್ರವಲ್ಲ ಪ್ರತಿ ಟೆಂಟಿಗೂ ವಿದ್ಯುತ್ ದೀಪಗಳು ಮತ್ತು ಚಾರ್ಜರ್ ಪಾಯಿಂಟ್ ಗಳನ್ನು ಅಳವಡಿಸಲಾಗಿದೆ. ಈ ಕುರಿತು ಸಂಘಟನೆಯ ಜವಾಬ್ದಾರಿ ಹೊತ್ತವರನ್ನು ವಿಚಾರಿಸಿದಾಗ ಅವರು ಹೇಳಿದ ವಿಷಯ ನಿಜಕ್ಕೂ ಆಶ್ಚರ್ಯವಾಗಿತ್ತು. ಅವರು ಹೇಳಿದ ಮಾತಿದು “ನಾವು ನಮಗೆ ಬೇಕಿರುವ ಅಗತ್ಯ ವಿದ್ಯುತ್ತನ್ನು ಎಲ್ಲಿಂದಲೂ ಕಳ್ಳತನ ಮಾಡಿಲ್ಲ… ನಾವು ಹೆದ್ದಾರಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರಬಹುದು ಆದರೆ ನಾವು ಸ್ವಾಭಿಮಾನಿಗಳು. ಯಾವುದೇ ವಿದ್ಯುತ್ ಕಂಪನಿಯಿಂದ ಬೇಕಾದರು ಯಾರಾದರೂ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆಯುವ ಅವಕಾಶಗಿದೆ. ಅದಕ್ಕೆ ಬೇಕಾದ ಮುಂಗಡ ಹಣವನ್ನು ಕಟ್ಟಿದರೆ ಇಲಾಖೆಯವರೇ ತಾತ್ಕಾಲಿಕ ಸಂಪರ್ಕವನ್ನು ಕಲ್ಪಸಿ ಮೀಟರ್ ಅಳವಡಿಸುತ್ತಾರೆ. ಅಂತಿಮವಾಗಿ ನಾವುಗಳು ಬಳಸಿದಷ್ಟು ವಿದ್ಯುತ್ ಗೆ ಬಿಲ್ ಪಾವತಿ ಮಾಡುತ್ತೇವೆ” ಇವರ ಮಾತುಗಳನ್ನು ಕೇಳಿ ನನಗೆ ಮಾತುಗಳು ಹೊರಡಲೇ ಇಲ್ಲ. ಈ ಪ್ರತಿಭಟನೆ ಇಷ್ಟೊಂದು ಶಿಸ್ತುಬದ್ದವಾಗಿ ಮತ್ತು ಪ್ರಾಮಾಣಿಕವಾಗಿ ನಡೆಯುತ್ತಿರುವ ಕಾರಣಗಳಿಂದಲೇ ಒಂದುವರೆ ತಿಂಗಳು ಕಳೆದರು ರೈತರು ಚಳಿ, ಮಳೆ, ದೂಳು, ಬಿಸಿಲಿನಲ್ಲಿ ರಸ್ತೆಯ ಮೇಲೆ ಹಗಲು ರಾತ್ರಿ ಕುಳಿತರೂ ದೈತ್ಯ ಮೋದಿ ಸರ್ಕಾರದಿಂದ ಈ ಚಳುವಳಿಯನ್ನು ಹೊಡೆಯಲು ಎಷ್ಟೇ ಕುತಂತ್ರ, ಅಪಪ್ರಚಾರಗಳನ್ನು ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ಅಡುಗೆ ಲಂಗರನ್ನು ದಾಟಿ ಹಾಗೆ ಮುಂದೆ ಹೋದರೆ ಊಟಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದ ಹಾಕೆಯೇ ಶಿಸ್ತುಬದ್ಧವಾಗಿ ಅಲ್ಲಿಯೂ ಪ್ರತಿಭಟನಾಕಾರರು ಸರದಿ ಸಾಲಿನಲ್ಲಿ ನಿಂತಿದ್ದರು. ಅಲ್ಲಿ ಏನನ್ನೂ ಹಂಚಲಾಗುತ್ತಿತ್ತು ಕುತೂಹಲದಿಂದ ಅತ್ತ ಕಡೆ ನೋಡಿದೆವು. ಪ್ರತಿಭಟನೆಗೆ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಕಾಲಿಗೆ ಶೂಸ್ ಮತ್ತು ಸಾಕ್ಸ್ ಗಳನ್ನು ಕೊಡಲಾಗುತ್ತಿತ್ತು…ಕುತುಹಲ ಇನ್ನಷ್ಟು ಹೆಚ್ಚಾಗಿ ಆ ಟೆಂನ್ ನ ಒಳಗೆ ಪ್ರವೇಶ ಪಡೆದರೆ ಇಲ್ಲಿ ಒಂದು ದೊಡ್ಡ ಸಾಮಾನುಗಳ ಗೋದಾಮೇ ನಿರ್ಮಾಣವಾಗಿತ್ತು. ಅಲ್ಲಿ ಶೂ, ಸಾಕ್ಸ್ ಮಾತ್ರವಲ್ಲ ಪೇಸ್ಟ್, ಬ್ರಷ್, ಬಟ್ಟೆ ಸೋಪು, ಮೈಸೋಪು, ಮಹಿಳೆಯದ ಸ್ಯಾನಿಟೈಸರ್ ಪ್ಯಾಡ್, ಚಳಿಯಿಂದ ರಕ್ಷಣೆ ಪಡೆಯಲು ಟೆಂಟ್ ನ ಸಾಮಗ್ರಿಗಳು, ಹಾಸಿಗೆಗಳು, ಬ್ಲಾಂಕೆಡ್ಸ್, ಟೋಪಿಗಳು ಜೊತೆಗೆ ಇನ್ನರ್ ವೇರ್ಸ್ ಹೀಗೆ ಒಬ್ಬ ಮನುಷ್ಯನಿಗೆ ಅಗತ್ಯವಿರುವ ಎಲ್ಲಾ ರೀತಿಯ ವಸ್ತುಗಳ ಸಂಗ್ರಹ ಅಲ್ಲಿತ್ತು. ಇವುಗಳಲ್ಲಿ ಯಾವುದು ಯಾರಿಗೆ ಅಗತ್ಯವಿದೆಯೋ ಅದೆಲ್ಲವನ್ನು ಉಚಿತವಾಗಿ ನೀಡುತ್ತಿದ್ದರು. ಅಂದರೆ ಪ್ರತಿಭಟನೆಗೆ ಭಾಗವಹಿಸಿದ ಯಾರೊಬ್ಬರಿಗೂ ಯಾವುದೇ ರೀತಿಗ ತೊಂದರೆಯಾಗದಂತೆ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.
ರೈತ ಸಂಘಟನೆಗಳನ್ನೊಳಗೊಂಡ ಸರ್ಕಾರದ ಜೊತೆಗಿನ 9 ನೇ ಸುತ್ತಿನ ಮಾತುಕತೆ ಯಾವುದೇ ಪ್ರಯೋಜನ ವಿಲ್ಲದೆ ಮುಗಿದಿದೆ.
ಇಂದು ಈ ಗಡಿಯಲ್ಲಿ ಎಲ್ಲರೂ ಸೇರಿ ಪಂಜಿನ ಮೆರವಣಿಗೆಯನ್ನು ಸಂಜೆ 6 ಗಂಟೆಗೆ ಆರಂಬಿಸಿ ಸಾವಿರಾರು ರೈತರು ಉರಿಯುವ ಪಂಜುಗಳನ್ನು ಕೈಯಲ್ಲಿಡಿದು ಕೇಂದ್ರ ಸರ್ಕಾರದ ವಿರುದ್ದ ಮತ್ತು ರೈತ ವಿರೋಧಿ ಕಾನೂನುಗಳು ರದ್ದುಮಾಡಬೇಕೆಂದು ಆಗ್ರಹಿಸಿದರು. ಒಂದೆಡೆ ಕೊರೆವ ಚಳಿಯಲ್ಲಿ ಕಯ್ಯಲ್ಲಿ ನಿಗಿನಿಗಿ ಬೆಂಕಿಯ ಉಂಟೆಯ ಪಂಜನ್ನಿಡಿದು ಮುಷ್ಟಿಕಟ್ಟಿ ಎಲ್ಲರೂ ಒಟ್ಟಿಗೆ ಘೋಷಣೆಗಳನ್ನು ಕೂಗುತ್ತಿದ್ದರೆ ಎದುರು ಯಾರು ಉಳಿಯಲು ಸಾಧ್ಯವಿಲ್ಲವೇನೋ ಎಂದೆನಿಸುತ್ತಿತ್ತು.
ಈ ಗಡಿಯಲ್ಲಿ ಇನ್ನೂ ಹತ್ತು ಹಲವು ವಿಶೇಷಗಳಿವೆ. ಇದು ಇಡೀ ಚಳುವಳಿಯ ಭವಿಷ್ಯವನ್ನು ಸೂಚಿಸುತ್ತಿತ್ತು. ಮತ್ತು ದೇಶದ ಎಲ್ಲ ರಾಜ್ಯಗಳಿಂದಲೂ ರೈತರು ಆಗಮಿಸಿ ಇದನ್ನು ದೇಶದ ಪ್ರತಿಭಟನೆಯನ್ನಾಗಿ ಪರಿವರ್ತಿಸಿದ್ದಾರೆ.