ಚರ್ಚೆಗೆ ಬರದಿದ್ದರೆ ಘೇರಾವ್ ಎಚ್ಚರಿಕೆ
ಬೆಳಗಾವಿ ಜ 16: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಈ ಕಾಯ್ದೆಗಳ ಕುರಿತು ಲಾಭ ಹಾಗೂ ಹಾನಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಹಿರಂಗ ಚರ್ಚೆಗೆ ಬರಬೇಕು, ಇಲ್ಲವಾದಲ್ಲಿ ಅವರಿಗೆ ಘೇರಾವ್ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 52 ದಿನಗಳಿಂದ ದೆಹಲಿಯಲ್ಲಿ ಕೃಷಿ, ಕಾರ್ಮಿಕ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ 109 ಜನ ರೈತರು ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ಮಾತ್ರ ತನ್ನ ಮೊಂಡುತನ ಪ್ರದರ್ಶನ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.
ರೈತರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯದಿಂದಾಗಿ ಸುಪ್ರೀಂಕೋರ್ಟ್ ಸಮಿತಿ ರಚಿಸಿ ವರದಿ ನೀಡುವಂತೆ ಕಾಲಾವಕಾಶ ನೀಡಿದೆ ಆದರೆ, ಸಮಿತಿಯಲ್ಲಿ ನಾಲ್ಕು ಜನರನ್ನು ತಮಗೆ ಬೇಕಾದವರನ್ನು ನೇಮಿಸಿದೆ ಎಂದು ದೂರಿದರು. ಇಲ್ಲಿವರೆಗೆ 9 ಸುತ್ತಿನ ಮಾತುಕತೆಗಳನ್ನು ಸರಕಾರ ರೈತರ ಜೊತೆ ನಡೆಸಿದೆ. ಆದರೆ ಅದು ಫಲಪ್ರದವಾಗಿಲ್ಲ. ಕಾಯ್ದೆ ರದ್ದು ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಚೂನಪ್ಪ ಪೂಜೇರಿ ತಿಳಿಸಿದ್ದಾರೆ.
ಜ.17ರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರು ಕೃಷಿ, ಕಾರ್ಮಿಕ, ಎಪಿಎಂಸಿ ಕಾಯ್ದೆ ಜಾರಿ ಹಾಗೂ ವಿದ್ಯುತ್ ಖಾಸಗೀಕರಣ ಮಾಡುವುದರಿಂದ ಆಗುವ ಲಾಭ ಹಾಗೂ ನಷ್ಟಗಳ ಬಗ್ಗೆ ರೈತರೊಂದಿಗೆ ಚರ್ಚೆಗೆ ಬರಬೇಕು. ಇಲ್ಲವೇ ರೈತರೇ ನಗರದ ಚನ್ನಮ್ಮ ವೃತ್ತದಲ್ಲಿ ವೇದಿಕೆ ಸಿದ್ಧಪಡಿಸುತ್ತೇವೆ. ಈ ಸ್ಥಳಕ್ಕೆ ಆಗಮಿಸಿ ಬಹಿರಂಗ ಚರ್ಚೆ ನಡೆಸಬೇಕು. ಇಲ್ಲವಾದಲ್ಲಿ ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.