ಮೋದಿ ಸರಕಾರದ ನಾಚಿಕೆಗೇಡಿನ ನಡೆ–ಸಿಐಟಿಯು ಖಂಡನೆ
ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಮತ್ತೆ ಸಾರ್ವಜನಿಕ ವಲಯದ ಭಾರತ ಉಕ್ಕು ಪ್ರಾಧಿಕಾರ (ಸೇಯ್ಲ್)ದ 10ಶೇ. ಶೇರುಗಳ ಮಾರಾಟಕ್ಕೆ ಹೊರಟಿದೆ. ಈಗಾಗಲೇ ಈ ‘ಮಹಾರತ್ನ’ ಕಂಪನಿಯ 25%ದಷ್ಟು ಶೇರುಗಳನ್ನು ಮಾರಾಟ ಮಾಡಿಯಾಗಿದೆ. ಇದನ್ನು ಸಿಐಟಿಯು ಬಲವಾಗಿ ಖಂಡಿಸಿದೆ.
ಈ ಬಾರಿಯ ವಿಶೇಷವೆಂದರೆ ಈ ಸಂಸ್ಥೆ ಹಣಕಾಸಿನ ದೃಷ್ಟಿಯಿಂದ ಕಷ್ಟಕರ ಸ್ಥಿತಿಯಲ್ಲಿರುವಾಗ, ಇದರಿಂದಾಗಿ ಅದರ ಶೇರು ಬೆಲೆ 74ರೂ.ಗೆ ಇಳಿದಿರುವಾಗ ಈ ಮಾರಾಟವನ್ನು ಮಾಡಲಾಗುತ್ತಿದೆ. ಭಾರತ ಸರಕಾರದ ಖಾಸಗೀಕರಣ ಇಲಾಖೆ ಇದಕ್ಕೆ ಇಟ್ಟಿರುವ ಕನಿಷ್ಟ ಮಾರಾಟ ಬೆಲೆ ಅದಕ್ಕಿಂತಲೂ ಕಡಿಮೆ, ಅಂದರೆ 64ರೂ. ಪ್ರತಿ ಶೇರಿಗೆ.
ಆದ್ದರಿಂದ ಇದು ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ, ಖಾಸಗಿ ಕಾರ್ಪೊರೇಟ್ಗಳ ಪ್ರಯೋಜನಕ್ಕಾಗಿ ಅಮೂಲ್ಯ ರಾಷ್ಟ್ರೀಯ ಆಸ್ತಿಗಳನ್ನು ಹರಾಜಿಗಿಡುವ ನಾಚಿಕೆಗೇಡಿ ಕೃತ್ಯವಲ್ಲದೆ ಬೇರೇನೂ ಅಲ್ಲ ಎಂದು ಅದು ಹೇಳಿದೆ. ತನ್ನದೇ ಒಂದು ಮಹಾರತ್ನ ಕಂಪನಿಯನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಈ ಸರಕಾರ ಇಳಿದಿದೆ, ಇದು ಈ ಸಾರ್ವಜನಿಕ ವಲಯದ ಕಂಪನಿಯನ್ನು ಖಾಸಗೀಕರಣದತ್ತ ತಳ್ಳಿ, ಅತ್ಯಂತ ಅಗ್ಗ ಬೆಲೆಯಲ್ಲಿ ದೇಶೀ -ವಿದೇಶಿ ಕಾರ್ಪೊರೇಟ್ ಗಳಿಗೆ ಕೊಡುವ ಹುನ್ನಾರವಲ್ಲದೆ ಬೇರೇನೂ ಅಲ್ಲ ಎಂದು ಸಿಐಟಿಯು ಹೇಳಿದೆ.
ದೇಶದ ಸಮಸ್ತ ಕಾರ್ಮಿಕ ಆಂದೋಲನ ಈ ರೀತಿ ಸರಕಾರ ಎರಾಬಿರಿ ಖಾಸಗೀಕರಣದ ಮೂಲಕ ಸಾರ್ವಜನಿಕ ವಲಯವನ್ನು ಬುಡಮೆಲು ಮಾಡುವುದನ್ನು, ಈ ಮೂಲಕ ಅಮೂಲ್ಯ ರಾಷ್ಟ್ರೀಯ ಆಸ್ತಿಗಳನ್ನು ಲೂಟಿ ಹೊಡೆಯಲು ದೇಶಿ-ವಿದೇಶಿ ಖಾಸಗಿ ಕುಳಗಳಿಗೆ ಅನುಕೂಲ ಮಾಡಿಕೊಡುತ್ತಿರುವುದನ್ನು ವಿರೋಧಿಸುತ್ತದೆ ಎಂದು ಅದು ಹೇಳಿದೆ.
ಮಾರುಕಟ್ಟೆ ಬೆಲೆಗಿಂತಲೂ ಕೆಳಗಿನ ಬೆಲೆಯಲ್ಲಿ ಸೇಯ್ಲ್ ನ ಶೇರುಗಳ ಮಾರಾಟದ ನಿರ್ಧಾರ ಖಾಸಗೀಕರಣದ ಧಾವಂತದ ದಿಕ್ಕಿನಲ್ಲಿ ಇನ್ನೊಂದು ಹತಾಶ ಪ್ರಯತ್ನ. ಈ ವಿನಾಶಕಾರಿ ನಡೆಯನ್ನು ದುಡಿಯುವ ಜನಗಳು ಒಟ್ಟಾಗಿ ವಿರೋಧಿಸಬೇಕು ಎಂದಿರುವ ಸಿಐಟಿಯು, ಕಾರ್ಮಿಕ ಆಂದೋಲನ, ನಿರ್ದಿಷ್ಟವಾಗಿ ಉಕ್ಕು ಕಾರ್ಮಿಕರ ಆಂದೋಲನ ಸರಕಾರದ ಈ ನಿರ್ಧಾರದ ವಿರುದ್ಧ ತಮ್ಮ ಐಕ್ಯ ಪ್ರತಿಭಟನೆಯ, ಖಂಡನೆಯ ದನಿ ಎತ್ತಬೇಕು ಎಂದು ಕರೆ ನಿಡಿದೆ.