ದಲಿತರಿಗೆ ಮೀಸಲಿಟ್ಟ ಹಣ ‘ ಇತರ ಯೋಜನೆಗೆ’ ಬಳಕೆ : ನ್ಯಾ. ನಾಗಮೋಹನ ದಾಸ್ ಕಳವಳ

ಬೆಂಗಳೂರು ಜ12 : ದಲಿತರ ಉದ್ಧಾರಕ್ಕಾಗಿ ಮೀಸಲಾಗಿರುವ 28 ಸಾವಿರ ಕೋಟಿ ರೂ. 38 ಇಲಾಖೆಯಲ್ಲಿ ಹರಿದು ಹಂಚಿ ಹೋಗುತ್ತಿರುವುದಕ್ಕೆ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಗಮೋಹನದಾಸ್ ಖೇದ ವ್ಯಕ್ತಪಡಿಸಿದ್ದಾರೆ.

ಅವರು ಬೆಂಗಳೂರಿನಲ್ಲಿ ಗಾಂಧಿ ಭವನದಲ್ಲಿ ‘ದಲಿತ ಹಕ್ಕುಗಳ ಸಮಿತಿ’ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ದಲಿತರು ಅಭಿವೃದ್ಧಿ ಪಥದೆಡೆಗೆ ಸಾಗಬೇಕಾದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳು ಒಂದೇ ಸೂರಿನಡಿ ಏಕಗವಾಕ್ಷಿ ಪದ್ಧತಿಯಂತೆ ಜಾರಿಗೋಳಿಸಿದರೆ ಮಾತ್ರ ಸಾಧ್ಯ ಎಂದರು. ದಲಿತರು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಇದೊಂದೇ ಸಮರ್ಪಕವಾದ ಮಾರ್ಗ ಎಂದರು. ಸರ್ಕಾರಗಳು ಮನಸ್ಸಿಗೆ ಬಂದಂತೆ ಕಾರ್ಯ ಯೋಜನೆಗಳನ್ನು ರೂಪಿಸಿ 38 ಇಲಾಖೆಯಲ್ಲಿ ದಲಿತರು ಅಲೆದಾಡುವಂತೆ ಮಾಡುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ 2020-21ನೆ ಸಾಲಿನ ಬಜೆಟ್‍ನಲ್ಲಿ ಶೇಕಡ 24.5 ರಷ್ಟು ಅನುದಾನ ದಲಿತ ಸಮುದಾಯಕ್ಕೆ ಮೀಸಲಿಡಲಾಗಿತ್ತು. ಅಂದರೆ, 27 ಸಾವಿರದ 500 ಕೋಟಿ ರೂ. ಕೆಲ ದಿನಗಳ ನಂತರ ಇದರಲ್ಲಿ 1 ಸಾವಿರ ರೂ. ತಗ್ಗಿಸಲಾಯಿತು. ಆ ನಂತರ, ಇಲ್ಲಿಯವರೆಗೂ ಖರ್ಚು ಮಾಡಿದ್ದು, 8.5 ಸಾವಿರ ಕೋಟಿ ರೂ.ಮಾತ್ರ. ಇನ್ನುಳಿದ ಹಣವನ್ನು ನಮ್ಮ ಮೆಟ್ರೋ, ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಇನ್ನು, ಅಲ್ಪಸ್ವಲ್ಪ ಹಣವೂ ಶೋಷಿತ ಸಮುದಾಯಕ್ಕೆ ದಕ್ಕುತ್ತಿಲ್ಲ ಎಂದು ದಾಸ್ ಬೇಸರ ವ್ಯಕ್ತಪಡಿಸಿದರು.

ದಲಿತರ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆ, ಕೊಳವೆ ಬಾವಿ ಯೋಜನೆ, ಉದ್ಯೋಗ ಹಾಗೂ ಎಸ್.ಸಿ. ಎಸ್.ಟಿ./ ಟಿ.ಎಸ್.ಪಿ. ಸಮರ್ಪಕವಾಗಿ ಜಾರಿಗೊಳಿಸಲು ದುಂಡು ಮೇಜಿನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಈ ದುಂಡು ಮೇಜಿನ ಸಭೆಯಲ್ಲಿ ಎಸ್.ಸಿ. ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಕೆ. ಶಿವಶಂಕರ, ಅಲೆಮಾರಿ ಜನಾಂಗದ ಮುಖಂಡ ಚಂದ್ರಶೇಖರ, ಬಿ.ಎಸ್.ಎಂ.ಎಂ.ನ ಕೇಂದ್ರ ಸಮಿತಿ ಸದಸ್ಯ ನಾಗರಾಜ ನಂಜುಂಡಯ್ಯ, ರಾಜ್ಯ ಮುಖಂಡ ಬಿ.ರಾಜಶೇಖರ ಮೂರ್ತಿ ಅತಿಥಿಗಳಾಗಿ ಭಾಗವಹಿಸಿದ್ದರು.

ಡಿ.ಹೆಚ್.ಎಸ್. ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *