ಮೈಸೂರು ಜ12 : ಕೆಲವರು ಸಿಎಂ ಆಗುತ್ತೇನೆ ಎಂದು ಹಗಲುಗನಸು ಕಾಣುತ್ತಿರುತ್ತಾರೆ. ಅದೇ ರೀತಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರೆ ನಾನು ಮುಖ್ಯಮಂತ್ರಿ ಆಗ್ತಿನಿ ಅಂತಿದ್ದಾರೆ. ಅವರ ಪಕ್ಷದವರು ಯಾರಾದರು ಹೇಳಿದ್ದಾರಾ? ಕುಮಾರಸ್ವಾಮಿ ಅವರು ಕೂಡ ಅದೇ ರೀತಿ ಮಾತನಾಡುತ್ತಿದ್ದಾರೆ. ಇವರಿಬ್ಬರದು ಹಗಲು ಕನಸು. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಜೆ.ಡಿ.ಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023 ಕ್ಕೆ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳಿರುವ ವಿಚಾರಕ್ಕೆ ವ್ಯಂಗ್ಯ ಮಾಡಿದರು. ಇದೇ ವೇಳೆ ಸಿಎಂ ಸ್ಥಾನ ಬದಲಾವಣೆ ಆಗುವುದಿಲ್ಲ ಎಂದು ಸಹ ಹೇಳಿದರು. ಮುಖ್ಯಮಂತ್ರಿ ಬದಲಾವಣೆ ಅಂತ ಸುಮ್ಮನೆ ಮಾತನಾಡ್ತಾರೆ. ಇದು ಕೇವಲ ಸೃಷ್ಟಿ ಮಾಡಿರುವುದು ಅಷ್ಟೆ. ಕೇಂದ್ರ ನಾಯಕರು, ಶಾಸಕರು ಯಾರೂ ಹೇಳಿಲ್ಲ. ಇದನ್ನ ಹೇಳುತ್ತಿರುವುದು ಸಿದ್ದರಾಮಯ್ಯನವರು ಒಬ್ಬರೇ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಅವರಿಗೆ ಸಿಎಂ ಸ್ಥಾನದ ಮೇಲೆ ಕಣ್ಣು ಇದೆ. ಹಾಗಾಗಿ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ಹೇಳಿ ಅಭ್ಯಾಸ ಆಗಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಹತ್ತತ್ತು ಬಾರಿ ಹೇಳಿದರೆ ಜನ ನಂಬುತ್ತಾರೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಆದರೆ ಇದು ಸುಳ್ಳು, ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿರುವ ಸುದ್ದಿ ಅಷ್ಟೆ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟರು.
ಗೆದ್ದವರು ಸ್ವಾಭಾವಿಕವಾಗಿ ಮಂತ್ರಿ ಆಗಬೇಕು ಅಂತ ಅಪೇಕ್ಷೆ ಪಡುತ್ತಾರೆ. ಮಂತ್ರಿಯಾಗಬೇಕು ಎಂದು ಅಪೇಕ್ಷೆ ಪಡುವುದರಲ್ಲಿ ತಪ್ಪಿಲ್ಲ. ಮಂತ್ರಿಯಾದವರಿಗೆ ಆಗದವರು ಸಹಕಾರ ಕೊಡುತ್ತಾರೆ. ಜನರು ಬಿಜೆಪಿ ಆಡಳಿತ ಮಾಡಲಿ ಅಂದರು. ಆದರೆ ಅಷ್ಟು ಸ್ಥಾನ ಸಿಗಲಿಲ್ಲ. ಮುಖ್ಯಮಂತ್ರಿಗಳು ಭರವಸೆ ಕೊಟ್ಟಿರುವಂತೆ ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕಿದೆ. ಅದರಂತೆ ಅವರಿಗೆ ಕೊಟ್ಟು ಉಳಿದಿರುವುದರಲ್ಲಿ ಮೂಲ ಶಾಸಕರಿಗೆ ಕೊಡಲಾಗುತ್ತೆ ಎಂದು ಹೇಳಿದರು.
ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಸಿಎಂ ನನ್ನನ್ನ ಮಂತ್ರಿ ಮಾಡುವುದಿಲ್ಲ ಅಂತ ಹೇಳಿದ್ದಾರೆ. ಅವರನ್ನ ಮಂತ್ರಿ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಒಂದು ವೇಳೆ ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿ ಮಂತ್ರಿ ಮಾಡುತ್ತೇವೆ ಅಂದ್ರೆ ,ಅದನ್ನ ಯತ್ನಾಳ ಒಪ್ಪಿಕೊಳ್ಳಬೇಕು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಲವು ಬಾರಿ ಅವರು ಬಹಿರಂಗವಾಗಿ ಏನೇನೋ ಟೀಕೆ ಮಾಡಿ ಬಿಡುತ್ತಾರೆ. ಅದು ತಪ್ಪು, ಅದರ ಬಗ್ಗೆ ನಾವು ಹೇಳಿದ್ದೇವೆ. ಆದರೆ ಮಂತ್ರಿ ಮಾಡಬೇಕು ಅಂತ ನಿರ್ಧಾರ ಕೈಗೊಂಡರೆ ಅವರು ಒಪ್ಪಿಕೊಳ್ಳಬೇಕು. ಅವರನ್ನ ಮಂತ್ರಿ ಮಾಡ್ತಾರಾ, ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ತಿಳಿಸಿದರು.
ಕುರುಬ ಜಾತಿಯನ್ನು ST ಗೆ ಸೇರಿಸುವ ಹೋರಾಟಕ್ಕೆ ಬರುವುದು ಬಿಡುವುದು ಸಿದ್ದರಾಮಯ್ಯಗೆ ಬಿಟ್ಟಿದ್ದು, ಅವರನ್ನು ಕರಿಯೋಕೆ ನಮ್ಮ ಕುಟುಂಬದ ಮದುವೆ ಅಲ್ಲ, ನಮ್ಮಸಮಾಜದ ಇಬ್ಬರೂ ಸ್ವಾಮೀಜಿಗಳು ಅವರನ್ನು ಕರೆದಿದ್ದಾರೆ ಅವರ ಆಹ್ವಾನವನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.