ಬೆಂಗಳೂರು, ಜ.11: ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿರುವ ಸುಗ್ರೀವಾಜ್ಞೆ ಹಾಗೂ ಅದಕ್ಕೆ ರಾಜ್ಯಪಾಲರು ಹಾಕಿರುವ ಅಂಕಿತ ಅಸಿಂಧು ಆಗಿದ್ದು, ಇದರ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ಸುಪ್ರೀಂಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ, ವಿ.ಗೋಪಾಲಗೌಡ ತಿಳಿಸಿದ್ದಾರೆ.
ರವಿವಾರ ಕರ್ನಾಟಕ ರಾಜ್ಯ ರೈತ ಸಂಘ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸರಕಾರದ ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯ ಕಾನೂನು ರೈತರ ಪಾಲಿಗೆ ಮರಣಶಾಸನ ಆಗಲಿದೆಯೇ ಎಂಬುದರ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನದ ಮೂಲಭೂತ ಹಕ್ಕುಗಳು, ನಿರ್ದೇಶನ ತತ್ವಗಳು ಹಾಗೂ ಮಾನವೀಯ ಮೌಲ್ಯಗಳ ವಿರುದ್ಧ ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ತಂದಿದೆ ಅದಕ್ಕೆ ರಾಜ್ಯಪಾಲರು ಸಂವಿಧಾನದ ಕಾನೂನುಗಳನ್ನು ಮೀರಿ ಅಂಕಿತ ಹಾಕಿದ್ದಾರೆ. ಹೀಗಾಗಿ ಈ ಕಾಯ್ದೆಯು ನ್ಯಾಯಾಲಯದಲ್ಲಿ ಅಸಿಂಧುಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಸುಗ್ರೀವಾಜ್ಞೆಯಿಂದ ಪಾಸಾದ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಬೇಕಾದರೆ, ತುರ್ತು ಪರಿಸ್ಥಿತಿಯ ಸಂದರ್ಭ ಇರಬೇಕು. ಆದರೆ, ಸದ್ಯ ರಾಜ್ಯದಲ್ಲಿ ಅಂತಹ ಯಾವುದೇ ಪರಿಸ್ಥಿತಿಯಿರಲಿಲ್ಲ. ಹಾಗೂ ಈ ಕಾಯ್ದೆಯು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಆದರೆ, ಪರಿಷತ್‍ನಲ್ಲಿ ಈ ಕಾಯ್ದೆಗೆ ಅಂಗೀಕಾರ ಸಿಗಲಾರದೆಂಬ ಕಾರಣದಿಂದ ಅದನ್ನು ಮಂಡಿಸಲು ಬಿಜೆಪಿ ಹಿಂದೇಟು ಹಾಕಿದೆ. ಹೀಗಾಗಿ ರಾಜ್ಯಪಾಲರು ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಸುಗ್ರಿವಾಜ್ಞೆಗೆ ಅಂಕಿತ ಹಾಕಿದ್ದು ಕಾನೂನು ಬಾಹಿರವೆಂದು ಅವರು ತಿಳಿಸಿದ್ದಾರೆ.
ನಮ್ಮ ಸಂವಿಧಾನವು ಸಾರ್ವಭೌಮತೆಯನ್ನು ಶಾಸಕಾಂಗಕ್ಕಾಗಲಿ, ಕಾರ್ಯಾಂಗಕ್ಕಾಗಲಿ ಹಾಗೂ ನ್ಯಾಯಾಂಗಕ್ಕಾಗಲಿ ನೀಡಲಿಲ್ಲ. ಬದಲಿಗೆ, ಈ ಅಧಿಕಾರವನ್ನು ದೇಶದ ಸಾಮಾನ್ಯ ಜನತೆಗೆ ನೀಡಲಾಗಿದೆ. ಹೀಗಾಗಿ ಜನವಿರೋಧಿಯಾದ ಯಾವುದೇ ಕಾನೂನು ದೇಶದಲ್ಲಿ ನೆಲೆಯೂರಲೂ ಸಾಧ್ಯವೇ ಇಲ್ಲವೆಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಜನವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಗಳು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹೀಗೆ ಎಲ್ಲ ಅಪಾಯಕಾರಿ ಕಾನೂನುಗಳ ವಿರುದ್ಧ ರಾಜ್ಯದ ಪಂಚಾಯತ್ ಮಟ್ಟದಲ್ಲಿ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವೀರಸಂಗಯ್ಯ ಮಾತನಾಡಿದರು, ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷೆ ಸಿರಿ ಗೌರಿ ಪ್ರಸ್ತಾವನೆ ಮಾಡಿದರು. ಆಹಾರ ತಜ್ಞ ಕೆ.ಸಿ.ರಘು, ವಿ.ಗಾಯತ್ರಿ ವಿಷಯ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು.