ಬೆಂಗಳೂರು, ಜ 9: ‘ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜ್ಯದಿಂದ ನಾವು ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಅಂತಿಮ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಈ ಭಾಗದ ಮುಖಂಡರ ಜತೆ ಶನಿವಾರ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿ, ‘ಬೆಳಗಾವಿ, ಬಸವ ಕಲ್ಯಾಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಈ ಭಾಗದ ಮುಖಂಡರ ಸಭೆ ಕರೆದು, ಅವರ ಅಭಿಪ್ರಾಯ ಪಡೆದಿದ್ದೇವೆ. ಅನೇಕ ಸಲಹೆಗಳು ಬಂದಿದ್ದು, ನಾನು ಹುಬ್ಬಳ್ಳಿ ಹೋಗಿ ಬಂದ ಮೇಲೆ ಮಸ್ಕಿ ಸೇರಿದಂತೆ ಮೂರು ಕ್ಷೇತ್ರದ ಅಭ್ಯರ್ಥಿಗಳ ಶಿಫಾರಸ್ಸನ್ನು ದೆಹಲಿಗೆ ಕಳುಹಿಸಿಕೊಡುತ್ತೇವೆ. ಯಾರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅಂತಿಮ ಪಟ್ಟಿಯನ್ನು ನಾನು ಮಾಡುವುದಿಲ್ಲ. ನಾನು ಹೆಸರುಗಳನ್ನು ಶಿಫಾರಸು ಮಾತ್ರ ಮಾಡುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಸಂಭಾವ್ಯ ಅಭ್ಯರ್ಥಿಗಳು : ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಶಾಸಕ ದಿವಂಗತ ನಾರಾಯಣ ರಾವ್ ಪತ್ನಿ ಮಲ್ಲಮ್ಮ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಹೆಸರು ಕೇಳಿಬಂದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮೂರು ಹೆಸರು ಕೇಳಿಬಂದಿದೆ. ಶಾಸಕ ಸತೀಶ್ ಜಾರಕಿಹೋಳಿ, ಪ್ರಕಾಶ್ ಹುಕ್ಕೇರಿ ಹಾಗೂ ಚನ್ನರಾಜು ಹೆಸರು ಕೇಳಿಬಂದಿದೆ. ಸತೀಶ್ ಜಾರಕಿಹೋಳಿ ಅವರನ್ನೇ ಅಭ್ಯರ್ಥಿಯನ್ನಾಗಿಸಲು ರಾಜ್ಯದ ಹೆಚ್ಚಿನ ನಾಯಕರು ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.