ಪಠ್ಯಪುಸ್ತಕ ಮುದ್ರಣವಗಿಲ್ಲ, ಪಾಠಗಳು ನಡೆದಿಲ್ಲ ಆದರೆ ಪರೀಕ್ಷೆ ಮಾತ್ರ ನಿಗದಿಯಾಗಿದೆ?!

ಬೆಂಗಳೂರು ಜ 10 : ಅತಿಥಿ ಉಪನ್ಯಾಸಕರನ್ನು ನೇಮಿಸದೆ, ಪಾಠಪ್ರವಚನ ನಡೆಸದೆ, ಪಠ್ಯಪುಸ್ತಕ ಮುದ್ರಿಸದೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಸುವುದು ಸರಿಯಾದ ಕ್ರಮವಲ್ಲ, ಸೆಮಿಸ್ಟರ್ ಪರೀಕ್ಷೆ ಬದಲು ವಾರ್ಷಿಕ ಪರೀಕ್ಷೆ ನಡೆಸಿ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್  (ಎಸ್.ಎಫ್.ಐ) ಒತ್ತಾಯಿಸಿದೆ.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ತರಗತಿಗಳಿಗೆ ಸೆಮಿಸ್ಟರ್ ಪರೀಕ್ಷೆಯನ್ನು ತಕ್ಷಣ ನಡೆಸಲು ಮುಂದಾಗುತ್ತಿರುವುದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ. ಕರ್ನಾಟಕ ವಿಶ್ವವಿದ್ಯಾಲಯವು ಫೆಬ್ರುವರಿ ಮೊದಲ ವಾರದಲ್ಲಿ ಎಲ್ಲಾ ಪದವಿ ತರಗತಿಗಳಿಗೆ (1,3&5ನೇ ಸೆಮಿಸ್ಟರ್) ಪರೀಕ್ಷೆ ನಡೆಸಲು ತಿರ್ಮಾನಿಸಿ ಸುತ್ತೋಲೆ ಹೊರಡಿಸಿದೆ. ಅತಿಥಿ ಶಿಕ್ಷಕರ ನೇಮಿಸದೆ, ಪಾಠಪ್ರವಚನ ನಡೆಸದೆ, ಪಠ್ಯಪುಸ್ತಕ ಮುದ್ರಿಸದೆ ವಿದ್ಯಾರ್ಥಿಗಳ ಜೊತೆ, ಅಧ್ಯಾಪಕರ ಸಂಘದ ಜೊತೆಗೆ ಯಾವುದೇ ಸಮಾಲೋಚನೆ ಮಾಡದೇ ಏಕಾಏಕಿ ಪದವಿ ಕಾಲೇಜು ಶಿಕ್ಷಣ ಇಲಾಖೆ/ವಿಶ್ವವಿದ್ಯಾಲಯ ತೆಗೆದುಕೊಂಡ ನಿರ್ಧಾರವನ್ನು SFI ಬಲವಾಗಿ ಖಂಡಿಸುತ್ತದೆ. ಮತ್ತು ತಕ್ಷಣ ಈ ಸುತ್ತೋಲೆ ವಾಪಸು ಪಡೆದು ಸೆಮಿಸ್ಟರ್ ಪರೀಕ್ಷೆ ಬದಲು ವಾರ್ಷಿಕ ಪರೀಕ್ಷೆ ನಡೆಸಬೇಕು ಎಂದು ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಆಗ್ರಹಿಸಿದ್ದಾರೆ.

ಹಾವೇರಿಯಲ್ಲಿ ಎಸ್.ಎಫ್.ಐ ನಿಂದ ನಡೆದ ಪ್ರತಿಭಟನೆ

ಕೋವಿಡ್-19 ರ ಕಾರಣದಿಂದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಹಲವಾರು ಬದಲಾವಣೆಗಳು ಆಗಿರುವ ಹಿನ್ನಲೆಯಲ್ಲಿ ಈ ವರ್ಷದ ಮಟ್ಟಿಗೆ ಸೆಮಿಸ್ಟರ್ ಪದ್ದತಿ ರದ್ದು ಮಾಡಿ ವಾರ್ಷಿಕ ಪರೀಕ್ಷೆ ಮಾಡಬೇಕು. ರಾಜ್ಯದ ಯಾವುದೇ ಸರ್ಕಾರಿ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಇನ್ನೂ ಮಾಡಿಕೊಂಡಿಲ್ಲ. ಹಲವಾರು ಕಾಲೇಜುಗಳು ಖಾಯಂ ಉಪನ್ಯಾಸಕರು ಇಲ್ಲದೇ ಅತಿಥಿ ಉಪನ್ಯಾಸಕರ ಸೇವೆಯ ಮೇಲೆ ನಡೆಯುತ್ತಿವೆ. ಹಾಗಾಗಿ ಕನಿಷ್ಠ ಶೇ 20% ಪಾಠಗಳು ನಡೆದಿಲ್ಲ. ಇನ್ನೂ ಹಲವಾರು ಖಾಸಗಿ ಅನುದಾನಿತ ಕಾಲೇಜುಗಳಲ್ಲಿಯೂ ಅತಿಥಿ ಉಪನ್ಯಾಸಕರು ನೇಮಕ ಆಗಿಲ್ಲ. ಅಧ್ಯಾಪಕರ ಕೊರತೆ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೊಬೈಲ್, ನೆಟ್ವರ್ಕ್ ಸಮಸ್ಯೆಗಳಿಂದ ಪಾಠ ತಲುಪಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಹಲವಾರು ವಿಭಾಗಗಳ ಪುಸ್ತಕಗಳೇ ಇನ್ನೂ ಮುದ್ರಣಗೊಂಡಲ್ಲಿ. ಆನ್ಲೈನ್ ತರಗತಿ ಇರುವುದರಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ ಕೂಡ ನಡೆದಿಲ್ಲ ಹಾಗಾಗಿ ಸೆಮಿಸ್ಟರ್ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳು ಮಾನಸಿಕವಾಗಿ ಸಿದ್ಧರಾಗಿಲ್ಲ  ಎಂದು ಹಾವೇರಿ ಜಿಲ್ಲೆಯ ಎಸ್.ಎಫ.ಐ ಮುಖಂಡ ಬಸವರಾಜ ಭೊವಿ ಆರೋಪಿಸಿದ್ದಾರೆ.

ಇಷ್ಟೆಲ್ಲಾ ಅವ್ಯವಸ್ಥೆಯಿದ್ದು ತರಾತುರಿಯಿಂದ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವವಿದ್ಯಾಲಯದ ಕ್ರಮ ಅವೈಜ್ಞಾನಿಕವಾದದ್ದು ಮತ್ತು ಅಪ್ರಾಯೋಗಿಕವಾದದ್ದು. ಪಾಠ ಕೇಳದೆ, ಪಠ್ಯವಿಲ್ಲದೆ  ನಾವು ಪರೀಕ್ಷೆಗಳನ್ನು ಹೇಗೆ ಬರೆಯಬೇಕು ಎಂದು ವಿದ್ಯಾರ್ಥಿನಿ ದಿಲ್ಶಾದ್ ಚೂಡಿವಾಲೆ ಪ್ರಶ್ನಿಸಿದ್ದಾರೆ. ಇತ್ತ ಪಾಠಗಳು ನಡೆಯದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ನೈತಿಕವಾಗಿ ನಮಗೆ ಒಪ್ಪಿತವಾಗುತ್ತಿಲ್ಲ ಎಂದು ಉಪನ್ಯಾಸಕರು ಸಹ  ವಿರೊಧಿಸುತ್ತಿದ್ದಾರೆ. ಸರಕಾರ ಹಾಗೂ ವಿ.ವಿ ಆಡಳಿತ ಮಂಡಳಿ ಸರಿಯಾದ ನಿಲುವಿನ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *