ಇಲಾಖೆಯ ಸಿಬ್ಬಂದಿ ಮೇಲೆ ಶಿಶು ಅಭಿವೃದ್ಧಿ ಅಧಿಕಾರಿಯಿಂದ ನಿತ್ಯ ಕಿರುಕುಳ, ಸಂಬಂಧಿಕರ ಹಸ್ತಕ್ಷೇಪ
ಹಾಸನ; ಜ, 08 : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಸನ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಕಾರಿ (ಸಿಡಿಪಿಒ) ಜಯಕಿರಣರವರ ಕರ್ತವ್ಯಲೋಪ, ಅವರ ಕಚೇರಿ ಮತ್ತು ಇಲಾಖೆಯಲ್ಲಿನ ನೌಕರರ ಮೇಲಿನ ನಿರಂತರ ಅನುಮಾನ, ಸೇಡಿನಕ್ರಮ, ಕಿರುಕುಳ ಮತ್ತು ದೌರ್ಜನ್ಯ ಹಾಗೂ ದಬ್ಬಾಳಿಕೆ ವಿರುದ್ಧ CITU ನಿಂದ ಪ್ರತಿಭಟನೆ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಸನ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಜಯಕಿರಣರವರ ಮೇಲೆ ಕರ್ತವ್ಯಲೋಪದ ಆರೋಪವಿದೆ. ಕೈಕೆಳಗಿನ ನೌಕರರನ್ನುನಿರಂತರವಾಗಿ ಅನುಮಾನದಿಂದ ನೋಡುತ್ತಾರೆ. ದಿನನಿತ್ಯದ ಕೆಲಸಗಳಲ್ಲಿ ಅವರ ಸಂಬಂಧಿಕರ ಹಸ್ತಕ್ಷೇಪ, ನೌಕರರ ಮೇಲೆ ವಿನಾಕಾರಣ ಸೇಡಿನಕ್ರಮ, ಕಿರುಕುಳ, ನೌಕರರೊಂದಿಗಿನ ಸಂವಹನದ ಕೊರತೆ ಮತ್ತು ಇತ್ಯಾದಿ ದೌರ್ಜನ್ಯಗಳಿಂದ ಇಲಾಖೆಯ ನೌಕರರು ರೋಸಿ ಹೋಗಿದ್ದಾರೆ.
ಹಾಸನ ತಾಲ್ಲೂಕು ಸಿಡಿಪಿಒ ಶ್ರೀಮತಿ ಜಯಕಿರಣರವರು ಸಂಪೂರ್ಣ ದೃಷ್ಟಿದೋಷ ಹೊಂದಿರುವ ಅಂಧ ಮಹಿಳೆಯಾಗಿದ್ದರೂ ಸಹ ಅವರ ಪರಿಶ್ರಮ ಮತ್ತು ಸಾಮಥ್ರ್ಯದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ, ಅವರ ವ್ಯಕ್ತಿತ್ವದ ಸ್ವಭಾವ ಮತ್ತು ನಡವಳಿಕೆಗಳು ಅತ್ಯಂತ ಜವಾಬ್ದಾರಿಯುತ ಸಿಡಿಪಿಒ ಹುದ್ದೆಗೆ ಪೂರಕವಾಗಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಆರೋಪಿಸಿದ್ದಾರೆ.
ಜಯಕಿರಣರವರು ಸಿಡಿಪಿಒ ಆಗಿ ತಮ್ಮ ಕಚೇರಿ ಹಾಗೂ ಇಲಾಖೆಯ ನೌಕರರೊಂದಿಗೆ ಪ್ರೀತಿ ವಿಶ್ವಾಸಗಳೊಂದಿಗೆ ನಡೆದುಕೊಳ್ಳುತ್ತಿಲ್ಲ. ಬದಲಿಗೆ ಅವರು ಅಂಧರಾಗಿರುವುದರಿಂದ ತಮ್ಮ ಕಚೇರಿ ಮತ್ತು ಇಲಾಖೆಯ ಯಾವ ನೌಕರರ ಮೇಲೂ ವಿಶ್ವಾಸವಿಡದೆ ನಿರಂತರ ಅನುಮಾನ ಮತ್ತು ಸಂಶಯಗಳಿಂದ ನೋಡುತ್ತಿರುತ್ತಾರೆ. ಯಾರ ಮೇಲೂ ವಿಶ್ವಾಸವಿಡದ ಅವರ ಈ ವರ್ತನೆಯಿಂದ ಕಚೇರಿ ಮತ್ತು ಇಲಾಖೆಯಲ್ಲಿ ನಿರಂತರವಾದ ಸಂಶಯದ ವಾತಾವರಣ ನೆಲೆಗೊಂಡಿದ್ದು ನೌಕರರ ವಿಶ್ವಾಸಾರ್ಹತೆಗೆ ದಕ್ಕೆಯುಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಡಿಪಿಒ ಜಯಕಿರಣರವರು ಅಂಧರಾಗಿರುವುದರಿಂದ ಅವರ ಸಹಾಯಕ್ಕೆ ಇಲಾಖೆಯು ಕಚೇರಿಯ ಒಬ್ಬ ನೌಕರರನ್ನು ನೇಮಿಸಿದ್ದರೂ, ಇಲಾಖೆಗೆ ಯಾವುದೇ ಸಂಬಂಧವಿರದ ಖಾಸಗಿ ವ್ಯಕ್ತಿಗಳಾದ ಅವರ ತಾಯಿ, ಸಹೋದರ ಮತ್ತು ಸ್ನೇಹಿತ ಇವರ ಸಹಾಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಡಿಪಿಒರವರ ಸಂಬಂಧಿಕರು ಈ ಅವಕಾಶ ಬಳಸಿಕೊಂಡು ಇಲಾಖೆಯ ಎಲ್ಲಾ ಕೆಲಸಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರಿ ಕಚೇರಿಯಾದ ಹಾಸನ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿದೆ. ಖಾಸಗಿ ವ್ಯಕ್ತಿಗಳು ಇಲಾಖೆಯ ನೌಕರರ ಕರ್ತವ್ಯದ ಮೇಲೆ ನಿಗಾವಹಿಸುವುದು, ಅನಗತ್ಯ ತನಿಖೆ ನಡೆಸುವುದು ಹಾಗೂ ಅನಧಿಕೃತ ಆದೇಶ ನೀಡುವುದು ನಡೆಯುತ್ತಿದೆ. ಸರ್ಕಾರದ ಕಡತಗಳು ಹಾಗೂ ಉಗ್ರಾಣದ ದಾಸ್ತಾನುಗಳು ಖಾಸಗಿ ಹಿಡಿತದಲ್ಲಿವೆ. ಇದು ಇಡೀ ಇಲಾಖೆಯ ವಿಶ್ವಾಸಾರ್ಹತೆ ಹಾಗೂ ಘನತೆಗೆ ದಕ್ಕೆ ತರುವಂತಾಗಿದೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.
ಕಚೇರಿ ಮತ್ತು ಇಲಾಖೆಯಲ್ಲಿನ ಇಂತಹ ಪರಿಸ್ಥಿತಿಯನ್ನು ಪ್ರಶ್ನಿಸುವ ನೌಕರರ ಮೇಲೆ ಸಿಡಿಪಿಒರವರು ಕಿರುಕುಳ ನೀಡುವುದು ಹಾಗೂ ಸೇಡಿನಕ್ರಮ ಜರುಗಿಸುವುದು ನಡೆಯುತ್ತಿದೆ. ಸಿಡಿಪಿಒರವರ ವರ್ತನೆ ಹಾಗೂ ಕರ್ತವ್ಯ ನಿರ್ವಹಣೆಯ ರೀತಿಯನ್ನು ಪ್ರಶ್ನಿಸುವ ಇಲಾಖೆಯ ಮೇಲಾಧಿಕಾರಿಗಳ ಮೇಲೆಯೂ ಕೂಡ ಲೈಂಗಿಕ ಕಿರುಕುಳದಂತಹ ಆರೋಪ ಹೊರಿಸಿ ಅವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಸಿಡಿಪಿಒ ಜಯಕಿರಣರವರು ತಾನು ಅಂದ ಮಹಿಳೆ ಎನ್ನುವ ಅಂಶವನ್ನು ತನ್ನ ರಕ್ಷಣೆಗೆ ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಪತ್ರಿಕಾಗೋಷ್ಟಿ ನಡೆಸಿದರೂ ಸಹ ಸರ್ಕಾರ ಅವರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂಬುದು ಪ್ರತಿಭಟನೆಕಾರರ ಆರೋಪವಾಗಿದೆ.
ಹಾಸನ ತಾಲ್ಲೂಕಿನ ಅಂಗನವಾಡಿ ನೌಕರರ ಕುಂದುಕೊರತೆ ಸಭೆ ನಡೆಸುತ್ತಿಲ್ಲ, ಅಂಗನವಾಡಿ ನೌಕರರ ಸಮಸ್ಯೆಗಳ ಕಡೆಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಎಂ.ಬಿ. ಪುಷ್ಪಾ ಆರೋಪಿಸಿದ್ದಾರೆ. ಅಂಗನವಾಡಿ ಕೇಂದ್ರಗಳ ತಪಾಸಣೆಯನ್ನು ಸಿಡಿಪಿಒರವರ ತಾಯಿ, ಸಹೋದರ ಮತ್ತು ಅವರ ಕಾರಿನ ಚಾಲಕರಿಂದ ನಡೆಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ, ತರಕಾರಿ ಮತ್ತಿತರೆ ಸಾದಿಲ್ವಾರು ಹಣವನ್ನು ನೀಡುತ್ತಿಲ್ಲ. ಫಲಾನುಭವಿಗಳಿಗೆ ಪೂರಕ ಆಹಾರ ಮತ್ತು ಪೋಷಕಾಂಶಗಳನ್ನು ವಿತರಿಲಾಗುತ್ತಿಲ್ಲ. ನೌಕರರಿಗೆ ಮುಂಬಡ್ತಿ ನೀಡುತ್ತಿಲ್ಲ. ಇಲಾಖೆಯ ಆದೇಶಗಳು ಜಾರಿಯಾಗುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಸಮಸ್ಯೆಗಳಾದಾಗ ಸಿಡಿಪಿಒರವರು ಬೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಹಾಗೂ ಯಾವುದೇ ಅಂಗನವಾಡಿ ನೌಕರರೊಂದಿಗೆ ಸೌಜನ್ಯ ಹಾಗೂ ವಿಶ್ವಾಸದೊಂದಿಗೆ ವರ್ತಿಸುವುದಿಲ್ಲ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತುಂಬಾ ಕಷ್ಟದಲ್ಲಿ ಕೆಲಸ ಮಾಡುವಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಅಧಿಕಾರಿಯಂದಲೇ ಮಹಿಳಾ ನೌಕರರು ದೌಜ್ಯನ್ಯ ಅನುಭವಿಸುವಂತಾಗಿದೆ ಎಂಬುದು ಪುಷ್ಪಾ ಅವರ ಆರೋಪವಾಗಿದೆ.
ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುಮಾಸ್ತರೊಬ್ಬರು ಸಿಡಿಪಿಒ ಕಿರುಕುಳ ತಾಳಲಾರದೆ 4 ತಿಂಗಳಿಂದ ರಜೆಗೆ ತೆರಳಿದ್ದು ಇದರಿಂದ ಇಲಾಖೆಯ ಕೆಲಸಗಳು ಕುಂಠಿತಗೊಂಡಿವೆ. ಅಂಗನವಾಡಿ ನೌಕರರ ಸೇವಾ ಮುಂಬಡ್ತಿ ಕಡತಗಳು ನೆನೆಗುದಿಗೆ ಬಿದ್ದಿವೆ. ಸಿಡಿಪಿಒರವರು ಅವರ ಕರ್ತವ್ಯ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಹಾಗೂ ನೌಕರರನ್ನು ಅವರ ಅಧಿಕಾರ ವ್ಯಾಪ್ತಿಯನ್ನು ಮೀರಿ ಅವರ ವಯಕ್ತಿಕ ಹಿತಾಸಕ್ತಿಗಾಗಿ ಏಕಾಏಕಿಯಾಗಿ ಕರ್ತವ್ಯದಿಂದ ವಜಾಗೊಳಿಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ಇಲಾಖೆಯ ಮೇಲಾಧಿಕಾರಿಗಳ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗಿರುವ ಗುತ್ತಿಗೆ ನೌಕರರ ಮೇಲೆ ಅವರ ಸಹೋದರನ ಮುಖಾಂತರ ದೈಹಿಕ ಹಲ್ಲೆ ನಡೆಸಿರುವುದಲ್ಲದೆ ಆ ನೌಕರರ ಮೇಲೆ ಪೋಲೀಸು ಠಾಣೆಯಲ್ಲಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂಬ ಆರೋಪಗಳು ಜಯಕಿರಣರವರ ಮೇಲಿವೆ.
ಜಯಕಿರಣರವರ ಸ್ವಭಾವ ಹಾಗೂ ವರ್ತನೆಗಳಿಂದಾಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾವುಗಳು ತೀವ್ರ ನೊಂದಿದ್ದು ಈ ರೀತಿಯ ವ್ಯಕ್ತಿತ್ವ ಹೊಂದಿರುವ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಂತಹ ಜವಾಬಾಧರಿಯುತ ಹುದ್ದೆಗೆ ಸೂಕ್ತವಲ್ಲ ಎಂಬುದು ಪ್ರತಿಭಟನೆಕಾರರ ವಾದವಾಗಿದೆ. ಇಲಾಖೆಯ ನೌಕರರು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯ ಮತ್ತು ವಿಶ್ವಾಸದಿಂದ ವರ್ತಿಸದ ಶ್ರೀಮತಿ ಜಯಕಿರಣರವರಿಂದ ಇಲಾಖೆಯ ಕೆಲಸ ಕಾರ್ಯಗಳು ಕುಂಠಿತವಾಗಿರುವುದಲ್ಲದೆ ಇಲಾಖೆಯ ವಿಶ್ವಾಸಾರ್ಹತೆಗೆ ದಕ್ಕೆ ಉಂಟಾಗಿದೆ. ಕಚೇರಿ ಹಾಗೂ ಇಲಾಖೆಯನ್ನು ಸಂಪೂರ್ಣವಾಗಿ ತಮ್ಮ ಕುಟುಂಬದ ಹಿಡಿತಕ್ಕೆ ತೆಗೆದುಕೊಂಡಿರುವ ಹಾಸನ ಸಿಡಿಪಿಒ ಜಯಕಿರಣರವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಿ ಅವರ ದುರ್ವರ್ತನೆ, ಕರ್ತವ್ಯಲೋಪ ಮತ್ತು ಅವ್ಯವಹಾರದ ಕುರಿತು ಇಲಾಖಾ ಮಟ್ಟದ ತನಿಖೆ ನಡೆಸಬೇಕೆಂದು ಸಿಐಟಿಯು ಒತ್ತಾಯಿಸಿದೆ.