ಬೆಂಗಳೂರು, ಜ.6: ರಾಜ್ಯ ಬಜೆಟ್ ಮಂಡನೆ ನಂತರ ಪಡಿತರದ ಜೊತೆಗೆ ಮೈಸೂರು ಸ್ಯಾಂಡಲ್ ಸೋಪು, ಅಡುಗೆ ಎಣ್ಣೆ, ಉಪ್ಪು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಂತ ಹಂತವಾಗಿ ರಾಜ್ಯಾದ್ಯಂತ ಈ ಯೋಜನೆಯನ್ನು ವಿತರಿಸಲಾಗುವುದು. ಸದ್ಯದಲ್ಲೇ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಂಡು ಮುಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಕೊರೊನಾ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳು ಕೆಲವೊಂದು ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಪಡಿತದಾರರಿಗೆ ಪಡಿತರ ವಿತರಣೆ ಮಾಡಿವೆ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊರ ರಾಜ್ಯ, ಹೊರ ಜಿಲ್ಲೆಯಿಂದ ಜೀವನೋಪಾಯಕ್ಕಾಗಿ ಬಂದಿರುತ್ತಾರೆ. ಅಂಥವರಿಗೆ ಪಡಿತರವನ್ನು ನೀಡಿ. ಒಂದು ದೇಶ, ಒಂದು ಪಡಿತರಚೀಟಿ ಎಂಬುದಾಗಿದೆ. ಪಡಿತರ ವಿತರಣೆಯಲ್ಲಿ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಎಚ್.ಅನಿಲ್ಕುಮಾರ್, ಆಯುಕ್ತರಾದ ಶ್ಯಾಮ್ಲ ಇಕ್ಬಾಲ್, ಜಂಟಿ ಆಯುಕ್ತರಾದ ಎನ್.ಶ್ರೀನಿವಾಸ್, ವಿಜಿಕುಮಾರ್, ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ, ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.