ದೆಹಲಿ; ಜ, 05 : ಒಂದು ಮತಾಧರಿತ ಮತ್ತು ಫ್ಯಾಸಿಸ್ಟ್ ಪ್ರಭುತ್ವವನ್ನು ತರಲು ನಡೆಸಿರುವ ಭಾರತೀಯ ಜನತಾ ಪಕ್ಷದ ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ಪರ್ಯಾಯ ರಾಜಕೀಯದ ಮೂಲಕ ಪ್ರತಿ-ದಾಳಿ ನಡೆಸುವ ಅಗತ್ಯವಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಮೋದಿ ರಾಮಮಂದಿರ ಮತ್ತು ದಿಲ್ಲಿಯ ಸೆಂಟ್ರಲ್ ವಿಸ್ತಾ ಪರಿಯೋಜನೆಯನ್ನು ಒಂದು ಹೊಸ ಪ್ರಭುತ್ವ ವ್ಯವಸ್ಥೆಯ ಲಾಂಛನವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಭಾರತೀಯ ಸಂವಿಧಾನದಲ್ಲಿ ಕಂಡರಿಸಿದ ಪ್ರಭುತ್ವದ ಜಾತ್ಯಾತೀತ ಕಲ್ಯಾಣಕಾರಿ ಲಕ್ಷಣಗಳಿಗೂ ಇದಕ್ಕೂ ಅಜಗಜಾಂತರವಿದೆ ಎಂದು ಅವರು ಬಂಗಾಳೀ ದೈನಿಕ ‘ಗಣಶಕ್ತಿ’ಯ 55ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತಾಡುತ್ತ ಹೇಳಿದರು.
ಒಂದು ಮತಾಧಾರಿತ ಮತ್ತು ಫ್ಯಾಸಿಸ್ಟ್ ಪ್ರಭುತ್ವ ವ್ಯವಸ್ಥೆಯನ್ನು ತರುವ ಮತ್ತು ದ್ವೇಷ ಹಾಗೂ ಹಿಂಸಾಚಾರವನ್ನು ಹರಡಿಸುವ ಮೂಲಕ ತನ್ನದೊಂದು ಸಾಮಂತಗಿರಿಯನ್ನು ಕಟ್ಟುವ ಪ್ರಧಾನಿ ಮೋದಿಯ ಪ್ರಯತ್ನದ ಮೇಲೆ ಪರ್ಯಾಯ ರಾಜಕೀಯದ ಶಕ್ತಿಯ ಆಧಾರದಲ್ಲಿ ಪ್ರತಿಧಾಳಿ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಲದ ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ, ಕಾರ್ಪೊರೇಟ್ ಮಾಧ್ಯಮಗಳು ಅದನ್ನು ಕೇವಲ ಬಿಜೆಪಿ vs ಟಿಎಂಸಿ ಚುನಾವಣೆ ಎಂದೇ ಬಿಂಬಿಸುವ ಪ್ರಯತ್ನವನ್ನು ನಡೆಸಿವೆ. ಆದರೆ ವಾಸ್ತವವಾಗಿ ಇವೆರಡೂ ಸಮಾನ ಧೋರಣೆಗಳನ್ನು ಹೊಂದಿರುವಂತವು. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಅಥವ ಕೋಮುವಾದದ ಪ್ರಶ್ನೆಗಳ ಮೇಲೆ ಅವುಗಳ ನಿಲುವುಗಳು ಸುಮಾರಾಗಿ ಒಂದೇ ಆಗಿವೆ. ಆದ್ದರಿಂದ ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯನ್ನು ಸೋಲಿಸಬೇಕಾದರೆ ಟಿಎಂಸಿಯನ್ನೂ ಸೋಲಿಸಬೇಕಾಗುತ್ತದೆ ಎಂದು ಯೆಚುರಿ ಹೇಳಿದರು.
ಕೃಷಿ ಕಾಯ್ದೆಗಳು-ಲೂಟಿಯ ಒಂದು ಮಾರ್ಗ
ರೈತರ ಪ್ರತಿಭಟನೆಗಳ ಬಗ್ಗೆ ಮಾತಾಡುತ್ತ, ಭಾರತದಲ್ಲಿ ಈಗ ಜನಗಳ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ, ಆದರೆ ವಾಸ್ತವವಾಗಿ ತದ್ವಿರುದ್ಧವಾದುದನ್ನೇ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಜನಗಳ ಕೈಗಳಲ್ಲಿ ಹಣವನ್ನು ಇಡುವ ಬದಲು ಅವರಿಂದಲೇ ಅದನ್ನು ಲೂಟಿ ಮಾಡಲಾಗುತ್ತಿದೆ. ಇತ್ತೀಚಿನ ಕೃಷಿ ಕಾಯ್ದೆಗಳನ್ನು ಲೂಟಿಯ ಮೂಲಕ ಕಾರ್ಪೊರೇಟ್ಗಳ ಕೈಗಳಲ್ಲಿ ಹಣದ ಸಂಗ್ರಹಕ್ಕೆ ದಾರಿ ಮಾಡಿಕೊಡಲಿಕ್ಕಾಗಿ ತರಲಾಗಿದೆ ಎಂದು ಅವರು ಹೇಳಿದರು.
ಸಣ್ಣ ಮತ್ತು ಮಧ್ಯಮ ರೈತರಂತೂ ಈ ಕಾಯ್ದೆಗಳಿಂದ ಸಂಕಟಗಳಿಗೆ ಒಳಗಾಗುತ್ತಾರೆ. ದೊಡ್ಡ ರೈತರು ಕೂಡ ಈ ಕಾಯ್ದೆಗಳಿಂದಾಗಿ ದೊಡ್ಡ ಕಾರ್ಪೊರೇಟ್ಗಳ ಮರ್ಜಿಗೆ ಒಳಪಡುತ್ತಾರೆಯಾದ್ದರಿಂದ ಅವರೂ ದಿಗ್ಭ್ರಾಂತರಾಗಿದ್ದಾರೆ. ಇಂತಹ ಸದ್ಯದ ಸನ್ನಿವೇಶದಲ್ಲಿ ಕಾರ್ಮಿಕ-ರೈತ ಮೈತ್ರಿಯನ್ನು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.