ಜಾನುವಾರು ಹತ್ಯಾ ನಿಷೇಧ ಭಾಗ-2
ಯಾವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರಾಜ್ಯದ ಜನತೆ ವ್ಯಾಪಕವಾಗಿ ವಿರೋಧಿಸಿದ್ದರೋ ಮತ್ತು ಎಲ್ಲಾ ವಿರೋಧ ಪಕ್ಷಗಳು ವಿರೋಧಿಸಿದ್ದವ ಮತ್ತು ಸಿದ್ಧರಾಮಯ್ಯ ನೇತೃತ್ವದ ಸರಕಾರ ಹಿಂಪಡೆದಿತ್ತೋ, ಅದನ್ನು ರಾಜ್ಯದ ಜನತೆಯ ಮುಂದೆ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸದೇ, ಮಂತ್ರಿ ಮಂಡಲದ ಸದಸ್ಯರಿಗೂ ತಿಳಿಸದೇ, ವಿಧಾನ ಸಭೆಯಲ್ಲಿ ಶಾಸಕರು ಚರ್ಚಿಸಲು ಅವಕಾಶ ನೀಡದೇ, ವಿಧಾನ ಪರಿಷತ್ ಕಲಾಪ ನಡೆಸಿ ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸದೇ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಅಗತ್ಯ ಮತ್ತು ಅವಸರವಾದರೂ ಏನಿತ್ತು
ಈ ಮೊದಲು ಪ್ರಕಟವಾಗಿರುವಈ ಲೇಖನದ ಭಾಗ-1 ರಲ್ಲಿ ಕರ್ನಾಟಕದ ಜಾನುವಾರು ಸಾಕಾಣೆ ಸ್ಥಿತಿಯ ಸ್ಥೂಲ ವಿವರ ನೀಡಲಾಗಿದೆ.. ಈ ಭಾಗ 2 ತಿದ್ದುಪಡಿಗಳ ಉದ್ದೇಶ ಜಾನುವಾರು ಸಂರಕ್ಷಣೆಯೇ ಅಥವಾ ಉಪಕಸುಬು ಆಧಾರಿತ ಉದ್ಯಮಗಳ ನಾಶವೇ ಎಂಬುದನ್ನು ವಿಶ್ಲೇಷಿಸುತ್ತದೆ. ಈ ತಿದ್ದುಪಡಿಗಳು ಜಾರಿಗೆ ಬಂದರೆ ಅದರ ಪರಿಣಾಮಗಳು, ಅಪಾಯಗಳು ಏನು ಎಂಬುದನ್ನೂ ತಿಳಿಸುತ್ತದೆ.
– ಯು. ಬಸವರಾಜ
ಜಾನುವಾರು ಸಂರಕ್ಷಣೆಯೇ ? ಉಪಕಸುಬು ಆಧಾರಿತ ಉದ್ಯಮಗಳ ನಾಶವೇ ?
ಇಲ್ಲಿಯವರೆಗೆ ಜಾನುವಾರು ಅಥವಾ ಗೋವುಗಳ ಸಂತತಿಯನ್ನು ಮತ್ತು ದೇಶೀಯ ತಳಿ ರಕ್ಷಣೆಯನ್ನು ಮತ್ತು ಅವುಗಳ ಅಭಿವೃದ್ಧಿಯನ್ನು ರೈತರು, ಕೂಲಿಕಾರರು, ಕಸುಬುದಾರರು ಹಾಗೂ ಇತರೇ ಉಪಕಸುಬುದಾರರು ಮಾಡುತ್ತಾ ಬಂದಿದ್ದಾರೆ. ಈ ದಿನ ಅವರ ಉಪ ಕಸುಬು ಸರಕಾರಗಳ ದಿವಾಳಿಕೋರ ನೀತಿಗಳಿಂದಾಗಿ ಅಳಿವಿನಂಚಿಗೆ ತಲುಪಿದೆ. ಜಾನುವಾರು ಸಂರಕ್ಷಣೆ ಅಥವಾ ದೇಶೀಯ ತಳಿಗಳ ರಕ್ಷಣೆಯೆಂದರೇ, ಉಪ ಕಸುಬಿನ ಅಭಿವೃದ್ಧಿ ಮತ್ತು ದೇಶೀಯ ತಳಿಯ ಇಳುವರಿ ಹೆಚ್ಚಳಕ್ಕೆ ಕೈಗೊಳ್ಳುವ ಕ್ರಮಗಳಾಗಿರುತ್ತವೆ. ಆದರೇ ಮಸೂದೆಯಲ್ಲಿ ಅಂತಹ ಯಾವುದೇ ಕ್ರಮಗಳು ಕಂಡು ಬರುತ್ತಿಲ್ಲ. ಬದಲಿಗೆ, ಸಂಕಷ್ಠದಲ್ಲಿರುವ ಉಪಕಸುಬನ್ನು ಮತ್ತಷ್ಠು ಸಂಕಷ್ಠಕ್ಕೆ ದೂಡುವ ಅಂಶಗಳೇ ರಾಚುತ್ತವೆ.
ಜಾನುವಾರುಗಳ ಉಪಯುಕ್ತತೆಯ ಕಾರಣದಿಂದ ಅವುಗಳ ಸಂತತಿಯನ್ನು ಜಗತ್ತಿನಾದ್ಯಂತ ಮಾನವ ಅಥವಾ ಉಪಕಸುಬುದಾರ ಹೆಚ್ಚಿಸುತ್ತಾ ಬಂದಿರುವುದು ನಮಗೆ ತಿಳಿದಿದೆ. ಅವುಗಳ ಉಪಯುಕ್ತತೆಯಲ್ಲಿ ಮಾಂಸೋದ್ಯಮವು ಪ್ರಧಾನವಾಗಿದೆ. ಆದರೆ, ಸರಕಾರದ ಜಾನುವಾರು ಹತ್ಯೆ ನಿಷೇಧವು, ಮಾಂಸೋದ್ಯಮಕ್ಕೆ ದೊಡ್ಡ ಅಡಚಣೆ ಉಂಟು ಮಾಡುವಂತಹದ್ದಾಗಿದೆ.
ಇದನ್ನು ಓದಿ : ಜಾನುವಾರು ಹತ್ಯಾ ನಿಷೇಧ : ಕಾರ್ಪೋರೇಟ್ ಲೂಟಿಯನ್ನು ವಿಸ್ತರಿಸಿ ವೇಗಗೊಳಿಸುವ ಹುನ್ನಾರ: ಭಾಗ-1
ಅದರಲ್ಲೂ, ಉಪ ಕಸುಬುದಾರರೂ ಮತ್ತು ಮಾಂಸೋದ್ಯಮದ ಕಾರ್ಮಿಕರು, ವ್ಯಾಪಾರಿಗಳು ಖಂಡಿತಾ ಇದರಿಂದ ಭಾರೀ ತೊಂದರೆಗೊಳಗಾಗುತ್ತಾರೆ.
ಈಗಾಗಲೇ ಹೊರೆಯಾಗಿರುವ ಜಾನುವಾರು ಸಾಕಾಣಿಕೆಯ ಉಪಕಸುಬನ್ನು ಇದು ಮತ್ತಷ್ಠು ಹೊರೆಯನ್ನಾಗಿಸಲಿದೆ. ಸಾಮಾನ್ಯವಾಗಿ, ನಿರುಪಯುಕ್ತ ಜಾನುವಾರುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವುದು ವಾಡಿಕೆಯಾಗಿದೆ. ಅದರಿಂದ ಸ್ವಲ್ಪವಾದರೂ ಆದಾಯವನ್ನು ಉಪಕಸುಬುದಾರರು ಗಳಿಸುತ್ತಾರೆ. ಇನ್ನು ಮುಂದೆ ಈ ಕಾಯ್ದೆಯಿಂದಾಗಿ ಆಂತಹ ನೆರವು ಅವರಿಗೆ ಸಿಗುವುದಿಲ್ಲ ಬದಲಿಗೆ, 13 ವರ್ಷದವರೆಗೆ ಯಾವುದೇ ಆದಾಯದ ನಿರೀಕ್ಷೆ ಇಟ್ಟು ಕೊಳ್ಳದೇ ಅವುಗಳಿಗಾಗಿ ಲಕ್ಷಾಂತರ ರೂ ವೆಚ್ಚ ಮಾಡ ಬೇಕಾಗುತ್ತದೆ. ಇಲ್ಲವೇ, ಅವುಗಳನ್ನು ಬೀದಿಗೆ ದೂಡ ಬೇಕಾಗುತ್ತದೆ. ಹೀಗೆ ಬೀದಿಗೆ ಬರುವ ದನಗಳು ಮುಂದೆ ರೈತರ ಬೆಳೆಗಳನ್ನು ಹಾಳು ಮಾಡುವ ಸಂಭವಗಳಿವೆ. ಹೀಗಾಗಿ, ರೈತರು ಮತ್ತು ಉಪಕಸುಬುದಾರರು ಈ ಹೊರೆ ಮತ್ತು ಉಸಾಬರಿ ತಮಗೇಕೆಂದು ಉಪಕಸುಬನ್ನು ಅನ್ಯ ಮಾರ್ಗವಿಲ್ಲದೇ ಕೈ ಬಿಡುವ ಸಂಭವಗಳೇ ಹೆಚ್ಚಾಗಿವೆ. ಆದ್ದರಿಂದಲೇ, ಇದರಿಂದ ಅತಂಕಿತರಾದ ಉಪಕಸುಬುದಾರರು, ಮಾಂಸೋದ್ದಮದವರು ಈ ಮಸೂದೆ ಬೇಡವೆನ್ನುತ್ತಿದ್ದಾರೆ. ಇವರ ಕೇಳಿಕೆಯಲ್ಲಿ ಖಂಡಿತಾ ನ್ಯಾಯವಿದೆ.
ಮೋದಿ ಅವರ ‘ಗುಲಾಬಿ ಕ್ರಾಂತಿ’!
ಒಂದೆಡೆ ಗೋಹತ್ಯೆ ನಿಷೇಧ, ಇನ್ನೊಂದೆಡೆ ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನ ! ಪ್ರಮುಖ ಗೋಮಾಂಸ ರಫ್ತುದಾರರಿಗೆ ಬಲವಾದ ಬಿಜೆಪಿ ಕನೆಕ್ಶನ್ !ಆದರೇ, ಸರಕಾರ ಅದು ಏನೇ ಇದ್ದರೂ, ಈ ಮಸೂದೆಯನ್ನು ಶಾಸನವಾಗಿಸಿ, ಜಾರಿಗೊಳಿಸಲು ಬದ್ಧವಾಗಿದೆ.
ಶಾಸನವಾದರೆ ಸಂಭವಿಸುವ ಅಪಾಯಗಳೇನು?
ಒಂದು, ಕಸುಬುದಾರರು ನಷ್ಠ ಭರಿಸಲಾಗದೇ ಉಪ ಕಸುಬನ್ನು ಕೈಬಿಡುತ್ತಾರೆ. ಎರಡು, ಇದರಿಂದ ಇವರೇ ರಚಿಸಿಕೊಂಡಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ರಾಜ್ಯದಾದ್ಯಂತ ಇರುವ ಅವುಗಳ ದೊಡ್ಡ ದೊಡ್ಡ ಒಕ್ಕೂಟಗಳು, ನಿಧಾನವಾಗಿ ಹಾಲಿನ ಕೊರತೆ ಮತ್ತು ಖಾಸಗೀ ಹೈನೋದ್ಯಮದ ಸ್ಪರ್ಧೆಗಳಿಂದ ನಾಶವಾಗಲಿವೆ.
ಇದನ್ನೇ ಖಾಸಗೀ ಸಂಸ್ಥೆಗಳು ಬೇಡುತ್ತಿವೆ.
ಜನತೆಯ ಹಾಲು ಒಕ್ಕೂಟಗಳು ನಶಿಸಿ ಹೋದರೆ, ಹಾಲು ಮತ್ತು ಹಾಲು ಆಧಾರಿತ ಉತ್ಪನ್ನಗಳ ಉತ್ಪಾದನೆಯು ಲೂಟಿಕೋರ ಖಾಸಗೀ ವಲಯಕ್ಕೆ ದೊಡ್ಡ ಕೊಡುಗೆಯಾಗಿ ದೊರೆಯಲಿದೆ.
ಮೂರು, ಸಾರ್ವಜನಿಕ ಹಾಲು ಉತ್ಪಾದಕ ಸಹಕಾರ ಸಂಘಗಳು ಮತ್ತು ಒಕ್ಕೂಟಗಳಲ್ಲಿ ದುಡಿಯುವ ಲಕ್ಷಾಂತರ ನೌಕರರು, ಕೆಲಸಗಾರರು, ಸಹಕಾರ ಸಂಘಗಳ ನಿರ್ವಾಹಕರು ಉಪಕಸುಬುದಾರರಂತೆ, ಮಾಂಸೋದ್ಯಮದ ಕೆಲಸಗಾರರಂತೆ ಉದ್ಯೋಗ ಕಳೆದುಕೊಂಡು ಬೀದಿಗೆ ದೂಡಲ್ಪಡುತ್ತಾರೆ.
ಹೀಗೆ ಈ ಉಪಕಸುಬುದಾರರ ಆಧಾರಿತ ಹೈನೋದ್ಯಮ, ಮಾಂಸೋದ್ಯಮ ಮತ್ತು ಅವುಗಳೊಂದಿಗೆ ಚರ್ಮ ಮತ್ತಿತರೆ ಉದ್ಯಮಗಳು ಸಂಕಷ್ಠಕ್ಕೀಡಾಗಿ ನಶಿಸಿ ಹೋಗುತ್ತವೆ.
ಈ ಎಲ್ಲಾ ಉದ್ಯಮಗಳ ಆಧಾರ ಮತ್ತು ಬೆನ್ನೆಲುಬಾಗಿದ್ದ ಉಪಕಸುಬಿಗೆ ಬಲವಾದ ಏಟು ನೀಡಿ ಅದನ್ನು ಅದರ ಆಧಾರಿತವಾದವುಗಳನ್ನು ಉರುಳಿಸಿ ಮಣ್ಣು ಮುಕ್ಕಿಸಿ ಕಾರ್ಪೊರೇಟ್ ಉದ್ಯಮಗಳಿಗೆ ನೆರವಾಗುವುದೇ ಮಸೂದೆಯ ಗುರಿಯಾಗಿದೆ ಎಂಬುದು ಈ ವಿಶ್ಲೇಷಣೆಯಿಂದ ಕಂಡು ಬರುತ್ತದೆ.
ಆದರೇ, ಯಾರೂ ಹೆದರಬೇಕಿಲ್ಲ ದೇಶೀಯ ಖಾಸಗೀ ಉದ್ಯಮಗಳನ್ನು ನುಂಗಿ, ಕಾರ್ಪೋರೇಟ್ ಹೈನೊದ್ಯಮಗಳು, ಮಾಂಸೋದ್ಯಮಗಳು, ಚರ್ಮೋದ್ಯಮಗಳು ತಲೆ ಎತ್ತಲಿವೆ. ಹಾಲು, ಹಾಲು ಉತ್ಪನ್ನಗಳು, ಅದೇ ರೀತಿ, ಇನ್ನಷ್ಠು ಮೌಲ್ಯವರ್ಧಿತ ಇತರೇ ಉತ್ಪನ್ನಗಳು ನಿಮಗೆ ಸಿಗಲಿವೆ. ಆದರೆ ದುಬಾರಿ ಬೆಲೆ ತೆರಬೇಕಷ್ಠೇ !? ಮಾಂಸವು ದೊರೆಯಲಿದೆ. ಇದೇ ಕಾರ್ಪೋರೇಟ್ ಉದ್ಯಮಗಳು ವಿದೇಶಗಳಿಂದ ಆರಂಭದಲ್ಲಿ ನಂತರ ಇಲ್ಲಿಯೆ ಉತ್ಪಾದಿಸಿಕೊಡಲಿದ್ದಾರೆ ಆದರೇ, ದುಬಾರಿ ಬೆಲೆ ನೀಡಬೇಕಷ್ಠೇ? ಚಿಂತಿಸ ಬೇಕಿಲ್ಲ. ಕಾರ್ಪೋರೇಟ್ ಕಂಪನಿಗಳ ಪರವಾಗಿ ಇದೇ ಸರಕಾರಗಳೇ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಹಿಂಪಡೆಯಲಿವೆ.
ಜಾನುವಾರು ಸಾಕಾಣೆಯ ಉಪಕಸುಬು ಇದ್ದರೆ ತಾನೇ ಅವುಗಳ ನಾಶಕ್ಕಾಗಿ ಗೋ ಸಂರಕ್ಷಕರು ಬರುವುದು !
ಬೀಡಾಡಿ ದನಗಳ ಚಿಂತೆ ಬೇಕಿಲ್ಲ!
ಉಪ ಕಸುಬುಗಳಿಂದ ಹೊರ ಬಿದ್ದ ಬೀಡಾಡಿ ದನಗಳು ಮೊದ ಮೊದಲು ರೈತರಿಗೆ ತೊಂದರೆ ನೀಡಲಿವೆ . ರೈತರೇನಾದರೂ ಅವುಗಳ ಹಿಂಸೆಗೆ ಮುಂದಾದರೇ ಗೋ ರಕ್ಷಕರು ಇರುತ್ತಾರಲ್ಲಾ ರೈತರನ್ನು ಹಿಂಸಿಸಲು!?
ಅಷ್ಠರೊಳಗೆ ಕಾರ್ಪೋರೇಟ್ ಕೃಷಿ ಕಾಯ್ದೆಗಳು ಜಾರಿಗೆ ಬಂದು ವ್ಯವಸಾಯವು ಕಾರ್ಪೋರೇಟ್ ಹಿಡಿತಕ್ಕೆ ಸಿಕ್ಕರೆ, ಖಂಡಿತಾ ಅವುಗಳಿಗೆ ಮುಕ್ತಿ ಸಿಗಲಿದೆ. ಆಹಾರ ಮತ್ತಿತರೇ ಕೃಷಿ ಉತ್ಪನ್ನಗಳಿಗೆ ತೊಂದರೆ ನೀಡುವ ಅವುಗಳನ್ನು ಗುಂಡು ಹೊಡೆದು ಕೊಲ್ಲಲು ಇಲ್ಲವೇ, ಅವುಗಳನ್ನು ಹಿಡಿದು ಮಾಂಸೋದ್ಯಮಕ್ಕೆ ಸಾಗಿಸುವ ಆದೇಶ ಬರಲಿವೆ. ಭಯಪಡುವುದು ಅಗತ್ಯವಿಲ್ಲಾ! ಹೌದು,
ದೇಶೀ ತಳಿಗಳು ಕೂಡಾ ನೋಡಲು ಸಿಗುತ್ತವೆ ನಿಮಗೆ ಮತ್ತು ನಿಮ್ಮ ಮಕ್ಕಳು ಮೊಮ್ಮಕ್ಕಳಿಗೆ, ಆದರೇ ಅವು ಇರುವುದು ಮ್ಯುಸಿಯಂಗಳಲ್ಲಿ.
ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಕುಮ್ನಕ್ಕು
ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೇ, ಈ ಎಲ್ಲರ ಜೊತೆ ತೀವ್ರ ಸಂಕಷ್ಠಕ್ಕೊಳಗಾಗುವ ಸಮುದಾಯಗಳಲ್ಲಿ, ಅಲ್ಪ ಸಂಖ್ಯಾತರು ಮತ್ತು ಪರಿಶಿಷ್ಠ ಜಾತಿ ಮತ್ತು ಪಂಗಡಗಳ ದಲಿತರು ಮುಖ್ಯವಾಗಿದ್ದಾರೆ. ಅದಾಗಲೇ ಕರ್ನಾಟಕ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಗೋರಕ್ಷಕ ಅಪರಾಧಿಗಳಿಂದ ತೀವ್ರ ರೀತಿಯ ದೈಹಿಕ ಧಾಳಿಗಳಿಗೆ ತುತ್ತಾಗಿದ್ದಾರೆ.
ಈ ಸಮುದಾಯಗಳಲ್ಲಿ ಬಹುತೇಕರು ಜಾನುವಾರು ಮಾಂಸಹಾರಿಗಳಾಗಿದ್ದಾರೆ. ಅದರಲ್ಲೂ ದಲಿತರು ತಾರತಮ್ಯದ ಕಾರಣದಿಂದಾಗಿ ಪೌಷ್ಠಿಕ ಸಸ್ಯಹಾರದ ಕೊರತೆಯಿಂದ ನಲುಗಿದ್ದಾರೆ. ಕಳೆದ ಒಂದೆರೆಡು ದಶಕಗಳವರೆಗೆ, ಗ್ರಾಮೀಣ ಪ್ರದೇಶದ ಮೇಲ್ಜಾತಿಗಳ ಮೇಲ್ವರ್ಗದ ಭೂಮಾಲಕರ ಮನೆಗಳಲ್ಲಿ ಜೀತದಾಳುಗಳಾಗಿ ಮತ್ತು ಸಂಬಳದಾಳುಗಳಾಗಿ ದುಡಿದಿದ್ದಾರೆ. ಆದರೆ ಅಲ್ಲಿಯೂ ಅವರು ಬಹುತೇಕ ತಂಗಳು ತಿಂದು ಕಾರ್ಯ ನಿರ್ವಹಿಸಿದ್ದಾರೆ.
ಕೂಲಿಕೆಲಸ, ಕೂಲಿಯ ಮೊತ್ತ ಅಷ್ಠಕ್ಕಷ್ಟೇ ಪಡೆದಿದ್ದಾರೆ. ಇಂತಹ ಎಲ್ಲರೂ ಕೂಡಾ ಜಾನುವಾರು ಮಾಂಸ ಸೇವನೆಯಿಂದಲೇ ಬದುಕುಳಿದಿದ್ದಾರೆ. ಈಗಲೂ ಈ ಕುಟುಂಬಗಳ ಬಹುತೇಕರಿಗೆ, ತಲಾ ಆದಾಯದಲ್ಲಿ ಪೌಷ್ಠಿಕ ಆಹಾರವಲ್ಲಾ, ಸರಕಾರ ನೀಡುವ ಅಕ್ಕಿ-ಗೋದಿಯ ನಡುವೆಯೂ ಕನಿಷ್ಠ ಸಾಮಾನ್ಯ ಆಹಾರವನ್ನು ಪಡೆಯಲಾಗುತ್ತಿಲ್ಲ. ಪೌಷ್ಟಿಕತೆಗಾಗಿ ಈಗಲೂ ಜಾನುವಾರು ಮಾಂಸವನ್ನು ಅವಲಂಬಿಸಿದ್ದಾರೆ.
ಇದೀಗ ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೇ, ಅದೂ ಕೂಡಾ ಅವರಿಗೆ ದೊರೆಯುವುದಿಲ್ಲ. ಜಾತಿ ತಾರತಮ್ಯ ಹಾಗೂ ಅಸ್ಪೃಸ್ಯಾಚರಣೆಯ ಕಾರಣದಿಂದಲೂ ಮತ್ತು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಹೆಚ್ಚಳದಿಂದಲೂ ಕೂಲಿ ಕೆಲಸವೂ ಇಲ್ಲದಂತಾಗುತ್ತಿದೆ. ಅದರಿಂದಾಗಿಯೂ ಅವರ ಆದಾಯ ಮತ್ತಷ್ಠು ಕುಸಿದಿದೆ. ಮಾತ್ರವಲ್ಲಾ, ಜಾಗತೀಕರಣ ಹಾಗೂ ಖಾಸಗೀಕರಣ ಮತ್ತು ಉದಾರೀಕರಣದ ಭಾಗವಾಗಿ, ಅವರ ಮಕ್ಕಳಿಗೆ ಸಿಗುವ ಅಂಗನವಾಡಿಗಳ ಪೌಷ್ಠಿಕ ಆಹಾರಕ್ಕೂ ಮತ್ತು ಶಿಕ್ಷಣದ ಖಾಸಗೀಕರಣದಿಂದ ಮಕ್ಕಳಿಗೆ ಸಿಗುತ್ತಿದ್ದ ಶಿಕ್ಷಣ ಮಾತ್ರವಲ್ಲಾ, ಅಲ್ಲಿ ದೊರೆಯುತ್ತಿದ್ದ ಆಹಾರಕ್ಕೂ ಮತ್ತು ರೇಷನ್ ಕಾರ್ಡ ಮೂಲಕ ಪಡೆಯುತ್ತಿದ್ದ ಪಡಿತರಕ್ಕೂ ಸಂಚಕಾರ ಬರುತ್ತಿರುವಾಗ, ಈ ಕಾಯ್ದೆಯು ದಲಿತ ಸಮುದಾಯಗಳ ಮೇಲೆ ಎಂತಹ ಗಂಭೀರ ಪರಿಣಾಮ ಬೀರಬಹುದೆಂದು ಊಹಿಸಬಹುದಾಗಿದೆ. ಸತ್ತ ಜಾನುವಾರುಗಳ ಚರ್ಮ ಸುಲಿದು ಮಾರಾಟ ಮಾಡುತ್ತಿದ್ದ ಉದ್ಯೋಗವು ಅದರೊಂದಿಗೆ ಇಲ್ಲವಾಗುತ್ತದೆ.
ಅಲ್ಪ ಸಂಖ್ಯಾತರು, ಧಾರ್ಮಿಕ ದ್ವೇಶಕ್ಕೆ, ಮತಾಂದತೆ, ಭಯೋತ್ಪಾದನೆಗೆ ಈಗಾಗಲೇ ನಲುಗಿದ್ದಾರೆ. ಯಾವಾಗ, ಜನತೆಯ ಒಗ್ಗಟ್ಟು ಮುರಿಯಲು ಮತ್ತು ಮುಖ್ಯ ವಾಹಿನಿಯಿಂದ ಅವರ ಗಮನವನ್ನು ಬೇರೆಡೆ ಸೆಳೆಯಲು ಆಳುವ ವರ್ಗಗಳು ಬಯಸುತ್ತವೋ ಅಂತಹ ಎಲ್ಲಾ ಸಂದರ್ಭಗಳಲ್ಲೂ, ಅಲ್ಪಸಂಖ್ಯಾತರ ಮೇಲೆ ಧಾಳೆ ಎಸಗಲು ಈ ಕಾಯ್ದೆಯ ದುರುಪಯೋಗವನ್ನು ಮಾಡುವ ಸಂಭವಗಳು ಇದ್ದೇ ಇವೆ.
ಮೇಲಾಗಿ, ಇದು ಜನತೆಯ ಆಹಾರದ ಹಕ್ಕು, ಬದುಕುವ ಹಕ್ಕು, ಉದ್ಯೋಗದ ಹಕ್ಕುಗಳ ಮೇಲಿನ ಧಾಳಿಯಾಗಿದೆ. ಹೀಗೆ ಈ ಮಸೂದೆ ಭಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ಸಂವಿದಾನದ ವಿರೋಧಿಯೂ ಆಗಿದೆ.
ಗೋವುಗಳ ಪೂಜಿಸುವುದು ನಮ್ಮ ಸಂಸ್ಕೃತಿ?
ಹೌದು, ಗೋವುಗಳನ್ನು ಅಥವಾ ಜಾನುವಾರುಗಳನ್ನು ಪೂಜಿಸುವುದು ಖಂಡಿತಾ, ನಮ್ಮ ಸಂಸ್ಕೃತಿಯ ಭಾಗ.
ಆದ್ದರಿಂದ, ಗೋಮಾತೆಯನ್ನು ಹತ್ಯೆ ಮಾಡುವುದು ನ್ಯಾಯವೆ? ಅಪರಾಧವಲ್ಲವೇ? ನಿಮ್ಮನ್ನು ಪೊರೆದವಳಲ್ಲವೇ? ಕೊಲ್ಲುವುದು ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ವಿರುದ್ದವಲ್ಲವೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟು,
ಆದ್ದರಿಂದಲೇ ಅವುಗಳ ರಕ್ಷಣೆಗಾಗಿ ಈ ಮಸೂದೆ, ಎಂಬ ವಾದವನ್ನು ಈ ಮಸೂದೆಯೊಂದಿಗೆ ಹರಿಬಿಡಲಾಗಿದೆ. ನಾವು ಮಾತ್ರವೇ ಸಂಸ್ಕೃತಿಯ ರಕ್ಷಕರು ಎಂದು ಹೇಳಿಕೊಳ್ಳಲಾಗುತ್ತದೆ ಮತ್ತು ಆ ಮೂಲಕ ತಮಗೆ ಹಾಗೂ ಈ ಮಸೂದೆಗೆ ಬೆಂಬಲ ಕ್ರೋಢೀಕರಿಸುವುದು ನಡೆದಿದೆ!
ಅದಾಗಲೇ ಮೇಲಿನ ವಿಶ್ಲೇಷಣೆಯ ಮೂಲಕ, ಈ ಮಸೂದೆಯ ಪರಿಣಾಮಗಳನ್ನು ಮತ್ತು ಅದರ ಉದ್ದೇಶವನ್ನು ಗಮನಿಸಿದ್ದೇವೆ. ಅದರಂತೆ, ಈ ಮಸೂದೆಯ ಒಟ್ಟು ಸಾರಾಂಶ, ಹೈನುಗಾರಿಕೆಯ ಉಪಕಸುಬನ್ನು ನಾಶ ಮಾಡಿ ಕಾರ್ಪೊರೇಟ್ ಉದ್ಯಮಗಳಿಗೆ ವೇಗವಾಗಿ ಹಾದಿ ಮಾಡಿಕೊಡುವುದೇ ಆಗಿದೆ. ದೇಶೀಯ ಹೈನೋದ್ಯಮ, ಮಾಂಸೋದ್ಯಮ, ಚರ್ಮೋದ್ಯಮಗಳನ್ನು ನಾಶ ಮಾಡಿ ಅವುಗಳ ಸ್ಥಾನಗಳಲ್ಲಿ ಕಾರ್ಪೋರೇಟ್ ಕಂಪನಿಗಳು ತಲೆ ಎತ್ತಲು ವೇಗವಾಗಿ ಅವಕಾಶ ಮಾಡಿಕೊಡುವುದೇ ಆಗಿದೆ. ಇದರಿಂದ ಸಂಕಷ್ಠಕ್ಕೀಡಾಗುವ ಜನತೆ ಕಾರ್ಪೋರೇಟ್ ಕಂಪನಿಯ ವಿರುದ್ದ ಮತ್ತು ಸರಕಾರಗಳ ವಿರುದ್ದ ನಿಲ್ಲುವುದನ್ನು ತಡೆಯಬೇಕಲ್ಲವೆ ?
ಅದಕ್ಕಾಗಿ, ಸಂಸ್ಕೃತಿ ರಕ್ಷಣೆಯ ವಿಚಾರವನ್ನು ಮುಂದೆ ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಇದು ಜನಗಳ ತಲೆಯಲ್ಲಿ ಬಲವಾಗಿ ಹೊಕ್ಕರೇ, ಮಾಂಸಹಾರಿಗಳು ಮತ್ತು ಸಸ್ಯಹಾರಿಗಳ ನಡುವೆ ವಿಭಜನೆ ಬರಲಿದೆ. ಮಾತ್ರವಲ್ಲಾ, ದನದ ಮಾಂಸ ಸೇವಿಸುವವರು ಮತ್ತು ಇತರೆ ಮಾಂಸ ಸೇವಿಸುವವರ ನಡುವೆ ವಿಭಜನೆ ಉಂಟು ಮಾಡಬಹುದಾಗಿದೆ.
ಹೀಗೆ ಕಾರ್ಪೋರೇಟ್ ಕಂಪನಿಗಳ ವಿರುದ್ದ ಹಾಗೂ ಅವುಗಳ ಪರವಾಗಿ ಕಾರ್ಯ ನಿರ್ವಹಿಸುವ ಸರಕಾರಗಳ ವಿರುದ್ದ ಏಳುವ ಜನಗಳ ವ್ಯಾಪಕ ಅಸಮಾಧಾನಗಳನ್ನು ಅವರವರ ನಡುವೆಯ ತಿರುಗಿಸಿ ಪರಸ್ಪರರ ವಿರುದ್ಹದವೇ ಹರಿಯುವಂತೆ ಮಾಡಲಿದೆ.
ಹಾಗಾದರೇ ಗೋಮಾತೆ ಪೂಜಿಸುವುದು ನಮ್ಮ ಸಂಸ್ಕೃತಿಯಲ್ಲವೇ ?
ಖಂಡಿತಾ ನಿಜಾ! ಅದು ನಮ್ಮ ಸಂಸ್ಕೃತಿಯ ಭಾಗವೇ. ಅದರಲ್ಲಿ ಯಾವುದೇ ಅನುಮಾನ ಬೇಡಾ ! ಆದರೇ ಅದಷ್ಠೇ ಅಲ್ಲ. ಮುಂದುವರೆದು, ಇನ್ನೂ ಇದೆ. ಆದರೇ ಅದನ್ನು ಜಾಣತನದಿಂದ ಮರೆ ಮಾಚಲಾಗುತ್ತಿದೆ.
ನಾವು ರೈತರು, ಗ್ರಾಮೀಣ ಜನರು ಯಾವ ಯಾವುದರಿಂದ ಪ್ರಯೋಜನ ಅಥವಾ ಉಪಯೋಗ ಪಡೆದಿದ್ದೇವೋ ಅವುಗಳಿಗೆ ಕೃತಜ್ಞರಾಗಿದ್ದೇವೆ. ಅದಕ್ಕಾಗಿ ನಮಸ್ಕರಿಸುತ್ತೇವೆ. ಪೂಜಿಸುತ್ತೇವೆ.
ಕಾರಹುಣ್ಣಿಮೆ, ಮಣ್ಞೆತ್ತಿನ ಅಮವಾಸ್ಯೆ, ಸಂಕ್ರಾಂತಿ ಮುಂತಾದ ಹಬ್ಬಗಳಲ್ಲಿ ನಮ್ಮ ಜಾನುವಾರುಗಳನ್ನು ವಿಶೇಷವಾಗಿ ಪೂಜಿಸುತ್ತೇವೆ. ಸ್ಮರಿಸುತ್ತೇವೆ. ಜಾನುವಾರುಗಳನ್ನು ಮಾತ್ರವಲ್ಲಾ, ಭೂಮಿ ತಾಯಿಯನ್ನು, ಬೆಳೆಯನ್ನು, ಕೃಷಿ ಉತ್ಪಾದನಾ ಸಲಕರಣೆಗಳನ್ನು ಮತ್ತು ಬೆಳೆರಾಸಿಗಳನ್ನು, ಗಂಗೆ ಅಂದರೆ ಜಲವನ್ನು…ಇನ್ನು ಮುಂತಾಗಿ ಪೂಜುತ್ತಾ ಬಂದಿದ್ದೇವೆ!
ಗಮನಿಸ ಬೇಕಾದುದು ಏನೆಂದರೇ, ನಮಗೆ ಯಾವುದು ಉಪಯುಕ್ತವೋ ಅದನ್ನು ಉತ್ಪಾದಿಸಿದ್ದೇವೆ ಯಾವುದನ್ನು ಉತ್ಪಾದಿಸಿದ್ದೇವೋ, ಯಾವುದನ್ನು ಉತ್ಪಾದಿಸಲು ನೆರವಾದ ಸಾಧನಗಳಿವೆಯೋ ಅವುಗಳನ್ನು ಪೂಜಿಸಿದ್ದೇವೆ! ಅವುಗಳಿಗೆ ಕೃತಜ್ಞರಾಗಿದ್ದೇವೆ. ಮಾತ್ರವಲ್ಲಾ ! ಯಾವುದನ್ನು ಉತ್ಪಾದಿಸಿದ್ದೇವೋ ಅವುಗಳನ್ನು ಕೇವಲ ಪೂಜಿಸಲಷ್ಠೇ ಉತ್ಪಾದಿಸಿದ್ದಲ್ಲ! ಉತ್ಪಾದನೆಯ ಅನುಭವ ಇಲ್ಲದವರು ಮತ್ತು ನಿಜವನ್ನು ತಿರುಚುವವರು ಮಾತ್ರವೇ ಹಾಗೆ ಹೇಳುವುದು.
ನಾವು ಉತ್ಪಾದಿಸಿದ್ದನ್ನು ಸೇವಿಸಿದ್ದೇವೆ. ಇದು ನಮ್ಮ ಒಟ್ಟು ಸಂಸ್ಕೃತಿಯಾಗಿದೆ.
ಜಾನುವಾರುಗಳನ್ನು ಪೂಜಿಸುತ್ತಿದ್ದೇವೆಂಬ ಕಾರಣಕ್ಕೆ ಅವುಗಳನ್ನು ಉಳುಮೆಯಲ್ಲಿ ತೊಡಗಿಸದೇ ಬಿಟ್ಟಿಲ್ಲ? ಭೂಮಿಯನ್ನು ತಾಯಿಯೆಂದು ಪೂಜಿಸುತ್ತೇವೆ ಎಂಬ ಕಾರಣಕ್ಕೆ ಉಳುವುದನ್ನು ಬಿಟ್ಡಿಲ್ಲ. ಸುಗ್ಗಿ ಸಂದರ್ಭದಲ್ಲಿ ಪೈರನ್ನು ಪೂಜಿಸುತ್ತೇವೆಂಬ ಕಾರಣಕ್ಕೆ ಕೊಯ್ಲು ಮಾಡುವುದನ್ನು ಬಿಟ್ಟಿಲ್ಲ. ರಾಶಿಯನ್ನು ಪೂಜಿಸುತ್ತೇವೆಂಬ ಕಾರಣಕ್ಕೆ ಧಾನ್ಯಗಳನ್ನು ಸೇವಿಸುವುದನ್ನು ನಿಲ್ಲಿಸಿಲ್ಲ.
ಮಾತ್ರವಲ್ಲಾ, ಮೂಲ ಮಾನವ ಅವುಗಳನ್ನು ಕಾಡಿನಿಂದ ನಾಡಿಗೆ ತಂದು ಅಭಿವೃದ್ಧಿ ಪಡಿಸಿರುವುದೇ ತನ್ನ ಉಪಯೋಗಕ್ಕಾಗಿ ಎಂಬುದನ್ನು ಮರೆಯಬಾರದು! ಆದ್ದರಿಂದ ಅವುಗಳನ್ನು ಆಹಾರವಾಗಿಯೂ ಬಳಸುತ್ತಾ ಬಂದಿದ್ದಾನೆ. ಈಗಿನ ಸಸ್ಯ ಹಾರಿಗಳು ಮಾಜಿ ಮಾಂಸಹಾರಿಗಳೇ ಆಗಿದ್ದಾರೆ. ಇದೇ
ನಮ್ಮ ನಿಜ ಸಂಸ್ಕೃತಿಯಾಗಿದೆ.
ಮಾಂಸಾಹಾರವೇಕೆ? ಪ್ರಾಣಹಿಂಸೆ ಅಲ್ಲವೇ?
ಜಾನುವಾರು ಹತ್ಯೆ ನಿಷೇದ ಮಸೂದೆ ಸಮರ್ಥನೆಗೆ ಮತ್ತೊಂದು ವಾದವನ್ನು ಹರಿಬಿಡಲಾಗಿದೆ.
ಮಾಂಸಹಾರಿಗಳು ಮಾಂಸ ಸೇವಿಸುವುದರಿಂದ ಪ್ರಾಣಿ ಹತ್ಯೆಯಾಗುತ್ತದೆ. ಪ್ರಾಣಿ ಹಿಂಸೆ ಮಹಾ ಪಾಪವಲ್ಲವೇ? ನಮ್ಮ ಹಾಗೆ ಅವುಗಳು ಜೀವಿಗಳಲ್ಲವೇ? ಅವುಗಳನ್ನು ಬದುಕಲು ಬಿಡಿ!ಎನ್ನಲಾಗುತ್ತದೆ.
ಈ ಪ್ರಶ್ನೆ ವಿದ್ಯಾವಂತ ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿಯೂ ವ್ಯಾಪಕವಾಗಿ ಕೇಳುವಂತಹ ರೀತಿಯಲ್ಲಿ ಅದನ್ನು ವ್ಯಾಪಕವಾಗಿ ವಿಸ್ತರಿಸಲಾಗಿದೆ. ಇದೂ ಕೂಡಾ ಜಾನುವಾರು ಹತ್ಯೆ ಮಸೂದೆಗೆ/ ಕಾಯ್ದೆಗೆ ಸಮರ್ಥನೆಯಾಗಿ ಮುಂದೆ ಬಂದಿದೆ.
ಮತ್ತೊಮ್ಮೆ ಇಲ್ಲಿ ನೆನಪಿಸುತ್ತೇನೆ. ಈ ಮುಂಚೆಯೇ ವಿಶ್ಲೇಷಿಸಿದಂತೆ ಈ ಮಸೂದೆ/ ಕಾಯ್ದೆಯ ನಿಜವಾದ ಉದ್ದೇಶ ಉಪಕಸುಬಾಗಿದ್ದ ಜಾನುವಾರು ಸಾಕಾಣೆ ಬೆನ್ನೆಲುಬಾಗಿದ್ದ ಹೈನು, ಮಾಂಸ ಹಾಗೂ ಚರ್ಮ ಮತ್ತಿತರೇ ಉದ್ಯಮಗಳನ್ನು ಕಾರ್ಪೋರೇಟ್ ಲೂಟಿಗೊಳಪಡಿಸುವುದೇ ಆಗಿದೆ.
ಇದಕ್ಕೂ ಈ ವಾದಕ್ಕೂ ಸಂಬಂಧವಿಲ್ಲವಾದರೂ, ಸಂಬಂದವನ್ನು ತಳಕು ಹಾಕಲಾಗಿದೆ.
ಯಾರಿಗಾದರೂ, ಮಾಂಸಹಾರ ಸೇವನೆ ಪ್ರಾಣಿ ಹಿಂಸೆ ಅನಿಸಿದರೇ ಅವರು ಮಾಂಸಹಾರ ಸೇವನೆಯಿಂದ ದೂರವಿರಬಹುದು! ಯಾರು, ಯಾವ ಆಹಾರ ಸೇವಿಸ ಬೇಕೆಂಬುದು ಅವರಿಗೆ ಬಿಟ್ಟ ವಿಚಾರವಾಗಿದೆ. ಅದವರ ಹಕ್ಕಾಗಿದೆ.
ಯಾರ ಮೇಲೂ ಇಂತಹದ್ದೇ ಆಹಾರ ಸೇವಿಸಿ ಎಂದು ಬಲವಂತ ಮಾಡುವುದು ಅಪರಾಧವಾಗುತ್ತದೆ.
ಅದೇ ರೀತಿ, ಮಾಂಸಾಹಾರ ಸೇವಿಸುವವರನ್ನು ಕಡೆಗಣಿಸಿ ನೋಡುವುದು ಕೂಡಾ ಅಪರಾಧವಾಗುತ್ತದೆ. ಮಾಂಸಾಹಾರ ಯಥೇಚ್ಛ ಪ್ರೋಟೀನ್ ನಿಂದ ಕೂಡಿದ ಪೌಷ್ಠಿಕ ಆಹಾರವಾಗಿದೆ.
ಆದಿಮಾನವನಿಗೆ ಪ್ರಾಣಿ ಮಾಂಸವೇ ಆಗಲಿ ಅಥವಾ ಸಸ್ಯಾಹಾರವೇ ಆಗಲಿ ದೊರೆಯದೇ ಇದ್ದಾಗ ಅವನು ನರಭಕ್ಷಕನೂ ಆಗಿದ್ದನು. ಅದಕ್ಕೆ ನಮ್ಮ ಸಂಪ್ರದಾಯಗಳ ಆಚರಣೆಗಳಲ್ಲಿ, ಉತ್ಖನನಗಳಲ್ಲಿ, ಪುರಾಣಗಳಲ್ಲಿ ವೇದೋಪನಿಷತ್ತುಗಳಲ್ಲಿ ಸಾಕ್ಷಿಗಳು ದೊರೆಯುತ್ತವೆ.
ಯಾವಾಗ ಮಾನವನಿಗೆ ಪ್ರಾಣಿ ಮಾಂಸ ಮತ್ತು ಸಸ್ಯಹಾರ ಸಾಕಷ್ಟು ದೊರೆಯಿತೋ, ಆಗ ಅದನ್ನು ಬಿಟ್ಟಿದ್ದಾನೆ. ಅದೇ ರೀತಿ, ಮುಂದೆ ಸಸ್ಯಾಹಾರ ಹೇರಳವಾಗಿ ದೊರಕಿತಂತೆ
ಮಾಂಸಾಹಾರವನ್ನು ತ್ಯಜಿಸಿ ಕೇವಲ ಸಸ್ಯಾಹಾರಕ್ಕೆ ಅಂಟಿಕೊಂಡಿದ್ದು ಇದೆ. ಆದರೇ ಅಗತ್ಯಕ್ಕೆ ಬೇಕಾದಷ್ಠು ಸಸ್ಯಾಹಾರ ದೊರೆಯದಾದಾಗ ಮತ್ತು ಮಾಂಸಾಹಾರ ದೊರೆಯುವಾಗ ಎರಡನ್ನೂ ಉಪಯೋಗಿಸುವುದು ನಡೆದಿದೆ.
ಮೇಲಾಗಿ, ಮಾನವನಿಗೆ ಮಾಂಸಾಹಾರವು ಅವನ ಪೌಷ್ಠಿಕತೆಗೆ ಸಹಾಯ ಮಾಡುತ್ತಿರುವುದರಿಂದ, ಮಾಂಸಾಹಾರ ಸೇವನೆಯು ಸಾಮಾಜಿಕವಾಗಿ ಮತ್ತು ಸಾರ್ವಜನಿಕವಾಗಿ ನಿಷಿದ್ದವಲ್ಲದೇ ಇರುವುದರಿಂದ ಅದನ್ನು ಈಗಲೂ ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಸುತ್ತಿರುವುದರಿಂದ ಮಾಂಸಾಹಾರವು ಆಹಾರದ ಪಟ್ಟಿಗಳಲ್ಲಿ ಈಗಲೂ ಮುಂದುವರೆಯುತ್ತಿರುವುದರಿಂದ ಮಾಂಸಾಹಾರ ಸೇವನೆ ಅಯೋಗ್ಯವೂ, ಅನಾರೋಗ್ಯಕರವೂ ಆಗಿಲ್ಲದಿರುವುದರಿಂದ ಅದನ್ನು ಆಹಾರವಾಗಿ ಸೇವಿಸುವವರು ಸೇವಿಸಬಹುದು.
ಇನ್ನು ಪ್ರಾಣಿ ಅಥವಾ ಪ್ರಾಣಹಿಂಸೆ ಥರವೇ? ಎಂಬ ಪ್ರಶ್ನೆಯೂ ಇದೆ.
ನಾವು ಯಾವುದೇ ಆಹಾರವನ್ನು ಅದರ ಮೂಲದಿಂದ ಬೇರ್ಪಡಿಸದೇ ದೊರೆಯದಾಗಿದೆ.
ಮಾಂಸಾಹಾರಕ್ಕಾಗಿ ಸಂಬಂದಿಸಿದ ಪ್ರಾಣಿಗಳನ್ನು ಹತ್ಯೆ ಮಾಡಲೇ ಬೇಕಾಗುತ್ತದೆ. ಅದೇ ರೀತಿ, ಸಸ್ಯಾಹಾರವನ್ನು ಪಡೆಯಲು ಕೂಡಾ ಸಸ್ಯವನ್ನು ಕಟಾವು ಮಾಡಲೇ ಬೇಕಾಗುತ್ತದೆ. ಉದಾಹರಣೆಗೆ, ಜೋಳದ ಸಸ್ಯದಿಂದ ಜೋಳದ ತೆನೆಯನ್ನು ಬೇರ್ಪಡಿಸಲು ಕೊಯ್ಲು ಮಾಡಲೇಬೇಕು. ಇದು ಸಹಜ ನಿಯಮವಾಗಿದೆ.
ಪ್ರಾಣಿಯಲ್ಲೂ ಮತ್ತು ಸಸ್ಯದಲ್ಲೂ ಪ್ರಾಣಗಳಿವೆ. ಈಗ ಪ್ರಾಣ ಹಿಂಸೆ ಎಂದು ಸುಮ್ಮನಾದರೇ ನೀವು ಆಹಾರ ಸೇವನೆಯನ್ನು ನಿಲ್ಲಿಸ ಬೇಕಾಗುತ್ತದೆ.
ಪ್ರಾಣಿ ಹಿಂಸೆ ಅಥವಾ ಸಸ್ಯದ ಜೀವ ಹಿಂಸೆ ಎಂದು ಯೋಚಿಸುತ್ತಾ ಕುಳಿತರೇ, ಸ್ಚಯಂ ಹತ್ಯೆಗೊಳಗಾಗಬೇಕಾಗುತ್ತದೆ. ಅಥವಾ ಮಾನವ ಹತ್ಯೆಯಾಗುತ್ತದೆ.