ಶ್ರೀಲಂಕಾದ ಅಂತರ್ಯುದ್ಧದ ತಲ್ಲಣಗಳ ‘ಇರಾ ಮದಿಯಾಮ’

‘ಇರಾ ಮದಿಯಾಮ’ ಅಂದರೆ ‘ದಿ ಆಗಸ್ಟ್ ಸನ್’ ನಲ್ಲಿ ಮೂರು ಕಥೆಗಳನ್ನು ಹೆಣೆಯಲಾಗಿದೆ. ಇಂತಹ ಚಲನಚಿತ್ರಗಳನ್ನು ಸಿನಿಮಾ ಪರಿಭಾಷೆಯಲ್ಲಿ ‘ಅಂಥಾಲಜಿ ಫಿಲ್ಮ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇಂತಹ ಚಲನಚಿತ್ರಗಳಲ್ಲಿ ಒಂದು ಸಮಾನ ಎಳೆಯಿರುತ್ತದೆ. ಇಲ್ಲೂ ಅದು ಇದೆ. ಅದೆಂದರೆ ಮಾನವ ಘನತೆ, ಅಸ್ಮಿತೆ ಮತ್ತು ಉತ್ತಮ ನಾಳೆಗಳಿಗಾಗಿ ಹುಡುಕಾಟ. ಇದು ಈ ಚಲನಚಿತ್ರದ ಸ್ಥಾಯಿ ಭಾವ. ಎಲ್.ಟಿ.ಟಿ.ಇ ಮತ್ತು ಶ್ರೀಲಂಕಾ ಮಿಲಿಟರಿ ಜೊತೆ ಜರಗುವ ಅಂತರ್‌ ಯುದ್ಧದಿಂದ ಇಂತಹ ಹುಡುಕಾಟಗಳು ಜರುಗುತ್ತಿರುತ್ತವೆ. ಅಂದರೆ ಯುದ್ಧ, ಅದು ಯಾವುದೇ ಬಗೆಯಾಗಿರಲಿ, ಅದು ಸಾಮಾನ್ಯ ಜನರ ಮೇಲೆ ಎಂತಹ ಭೀಕರ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ದಾಟಿಸಲಾಗಿದೆ. ಆದರೆ ಈ ಚಲನಚಿತ್ರದಲ್ಲಿ ಅಂತರ್‌ಯುದ್ಧದ ಒಂದೇ ಒಂದು ಬೀಭತ್ಸ ದೃಶ್ಯವಿಲ್ಲ. ಆದರೂ ವೀಕ್ಷಕರಲ್ಲಿ ಯುದ್ಧ ಸಂಬಂಧಿತ ನಾನಾ ಹಿಂಸೆಗಳ ತಲ್ಲಣಗಳ ಅರಿವಾಗುತ್ತದೆ! ಇದರ ಜೊತೆ ಪ್ರಸನ್ನ ವಿತನಾಗೆ ನಿರ್ದೇಶಿಸಿದ ‘ಡೆತ್ ಆನ್ ಎ ಫುಲ್ ಮೂನ್ ಡೇ’ ಮತ್ತು ‘ವಿತ್ ಯೂ, ವಿತೌಟ್ ಯೂ’ ಚಲನಚಿತ್ರಗಳನ್ನು ‘ವಾರ್ ಟ್ರಯಾಲಜಿ’ ಅಂದರೆ ಯುದ್ಧಕ್ಕೆ ಸಂಬಂಧಿತ ತ್ರಿವಳಿ ಚಲನಚಿತ್ರಗಳೆಂದು ಗುರುತಿಸಲಾಗುತ್ತದೆ.

 – ಮ ಶ್ರೀ ಮುರಳಿ ಕೃಷ್ಣ

ಶ್ರೀಲಂಕಾದ ಸಿಂಹಳಿ ಭಾಷೆಯ ‘ಇರಾ ಮದಿಯಾಮ’ 2003ರಲ್ಲಿ ಲೋಕಾರ್ಪಣೆಯಾಯಿತು. ಇದರ ನಿರ್ದೇಶಕರು ಪ್ರಸನ್ನ ವಿತನಾಗೆ. ಈ ಬರಹದಲ್ಲಿ ಮೂರು ವಿಭಾಗಗಳಿವೆ. ಮೊದಲನೆಯzರÀಲ್ಲಿ ಶ್ರೀಲಂಕಾ ಚಲನಚಿತ್ರದ ಚರಿತ್ರೆ, ಎರಡನೆಯದರಲ್ಲಿ ನಿರ್ದೇಶಕ ಪ್ರಸನ್ನ ವಿತನಾಗೆಯ ಫಿಲ್ಮೋಗ್ರಫಿ ಹಾಗೂ ಕೊನೆಯ ವಿಭಾಗದಲ್ಲಿ ‘ಇರಾ ಮದಿರಾಮ’ದ ಕಥೆ ಮತ್ತು ನನ್ನ ಅನಿಸಿಕೆಗಳು ಇರುತ್ತವೆ.

ಶ್ರೀಲಂಕಾ ಚಲನಚಿತ್ರರಂಗಕ್ಕೂ ನಮ್ಮದಕ್ಕೂ ಅವಿನಾಭಾವ ಸಂಬAಧ ಎನ್ನಬಹುದು. 1947ರಲ್ಲಿ ಅದರ ಪ್ರಥಮ ಫೀಚರ್ ಫಿಲ್ಮ್ ನಿರ್ಮಿಸಿದವರು ಎಸ್ ಎಮ್ ನಾಯಗಮ್. ಇದು ಮಧುರೈನ ಸ್ಟೂಡಿಯೊ ಒಂದರಲ್ಲಿ ತಯಾರಾಯಿತು. ತಮಿಳುನಾಡಿನವರಾಗಿದ್ದ ನಾಯಗಮ್ ಒಬ್ಬ ವ್ಯಾಪಾರಿಯಾಗಿದ್ದರು. ನಂತರ ಅವರು ಶ್ರೀಲಂಕಾದಲ್ಲಿ ಶ್ರೀ ಮುರುಗನ್ ನವಕಲಾ ಸ್ಟೂಡಿಯೊ ಸ್ಥಾಪಿಸಿದರು. ಸುಮಾರು ಒಂದು ದಶಕದ ಕಾಲ ಶ್ರೀಲಂಕಾದ ಚಲನಚಿತ್ರಗಳ ಹೂರಣದ ಮೇಲೆ ತಮಿಳು ಮತ್ತು ತೆಲುಗು ಚಲನಚಿತ್ರಗಳ ವಸ್ತುಗಳ ದಟ್ಟ ಪ್ರಭಾವಗಳು ಇದ್ದವು. ನಂತರ ಕ್ರಮೇಣ ದೇಶೀಯ ವಸ್ತುಗಳು ಅಲ್ಲಿನ ಚಲನಚಿತ್ರಗಳಲ್ಲಿ ಪ್ರತಿಫಲನಗೊಂಡವು. ಕೆಲವು ನಟ-ನಟಿಯರು, ತಂತ್ರಜ್ಞರ ಕೊಡುಕೊಳುವಿಕೆಗಳು ಜರುಗಿವೆ.

ಪ್ರಸನ್ನ ವಿತನಾಗೆ ಶ್ರೀಲಂಕಾದ ಮೂರನೇ ಪೀಳಿಗೆಗೆ ಸೇರಿದ ಚಲನಚಿತ್ರ ನಿರ್ದೇಶಕರು. ಇವರ ಪ್ರಥಮ ಚಲನಚಿತ್ರ 1991ರಲ್ಲಿ ಬಿಡುಗಡೆಯಾಯಿತು. ಇದುವರೆಗೆ ಅವರು 11 ಫೀಚರ್ ಫಿಲ್ಮ್ಗಳನ್ನು ಮತ್ತು ಒಂದು ಡಾಕ್ಯುಮೆಂಟರಿ ಫಿಲ್ಮ್ನ್ನು ನಿರ್ದೇಶಿಸಿದ್ದಾರೆ. ಸಮಕಾಲೀನ ವಿಷಯಗಳ ಬಗೆಗೆ ಕ್ಷಕಿರಣವನ್ನು ಬೀರುವ ಅವರ ಚಲನಚಿತ್ರಗಳು ವೀಕ್ಷಕರನ್ನು ತಟ್ಟುತ್ತವೆ; ಯೋಚಿಸುವಂತೆ ಮಾಡುತ್ತವೆ; ಕೆಲವು ಗಹನವಾದ ಪ್ರಶ್ನೆಗಳನ್ನು ಎತ್ತುತ್ತವೆ. ಲಿಯೊ ಟಾಲ್ಸ್ಟಾಯ್, ದೋಸ್ತೊವಸ್ಕಿ ಮತ್ತು ಇತರ ಕೆಲವು ಸಾಹಿತಿಗಳ ಕೃತಿಗಳನ್ನು ಆಧರಿಸಿವೆ ಅವರ ಕೆಲವು ಚಲನಚಿತ್ರಗಳು. ಅವರು ಸತ್ಯಜಿತ್ ರೇ, ಅಕಿರಾ ಕುರೋಸಾವ, ಶ್ರೀಲಂಕಾದ ಲೆಸ್ಟರ್ ಜೇಮ್ಸ್ ಪೆರೀಸ್, ಕ್ರಿಸ್ಟಾಫ್ ಕಿಸ್ಲೌಸ್ಕಿ, ರ‍್ಕೋವ್‌ಸ್ಕಿ ಇತ್ಯಾದಿ ಚಲನಚಿತ್ರ ನಿರ್ದೇಶಕರಿಂದ ಪ್ರಭಾವಿತರಾಗಿದ್ದಾರೆ. ಅವರ ಕೆಲವು ಚಲನಚಿತ್ರಗಳು ಕೋರ್ಟುಗಳ ಕಟಕಟ್ಟೆಯನ್ನು ಏರಿ ನಂತರ ಬಿಡುಗಡೆಯಾಗಿವೆ. ಒಂದರ್ಥದಲ್ಲಿ ಅವರು ‘‘ಕ್ರಿಟಿಕಲ್ ಇನ್ ಸೈಡರ್’ ’ ಆಗಿದ್ದಾರೆ. ದಿಟ್ಟ ಚಲನಚಿತ್ರಗಳನ್ನು ನೀಡಿದ್ದಾರೆ. ಹೀಗಾಗಿ, ಅವರು ಏಷ್ಯಾದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅನೇಕ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

‘ಇರಾ ಮದಿಯಾಮ’ ಅಂದರೆ ‘ದಿ ಆಗಸ್ಟ್ ಸನ್’ ನಲ್ಲಿ ಮೂರು ಕಥೆಗಳನ್ನು ಹೆಣೆಯಲಾಗಿದೆ. ಇಂತಹ ಚಲನಚಿತ್ರಗಳನ್ನು ಸಿನಿಮಾ ಪರಿಭಾಷೆಯಲ್ಲಿ ‘ಅಂಥಾಲಜಿ ಫಿಲ್ಮ್ಸ್’ ಅಥವಾ ‘ಪ್ಯಾಕೇಜ್ ಫಿಲ್ಮ್ಸ್’ ಅಥವಾ ‘ಆಮ್ನಿಬಸ್ ಫಿಲ್ಮ್ಸ್’ ಎಂದು ಕರೆಯಲಾಗುತ್ತದೆ. ಮೊದಲ ಕಥೆಯಲ್ಲಿ ಕೊಲೊಂಬೊದಲ್ಲಿ ವಾಸ ಮಾಡುತ್ತಿರುವ ಒಬ್ಬ ಯುವ ಮಹಿಳೆ ಚಾಮರಿ, ಏರ್ ಫೋರ್ಸ್ ಪೈಲಟ್ ಆಗಿರುವ, ತಾನಿನ್ನು ಮದುವೆಯಾಗಿರದ ಸಂಗಾತಿಯನ್ನು ಹುಡುಕಲು ಒಬ್ಬ ಪತ್ರಕರ್ತ ಸಮನ್‌ನ ಸಹಾಯದಿಂದ ಮುಂದಾಗುತ್ತಾಳೆ. ಆಕೆ ತನ್ನ ಗಂಡನಾಗುವವ ಯುದ್ಧಾಚರಣೆಯಲ್ಲಿ ಎಲ್‌ಟಿಟಿಇಯವರ ಬಳಿ ಸೆರೆಯಲ್ಲಿರುವನೆಂದು ನಂಬಿದ್ದಾಳೆ. ಒಂದು ದೊಡ್ಡ ವ್ಯಾನ್‌ನಲ್ಲಿ ಅವರು ಎಲ್.ಟಿ.ಟಿ.ಇ ಪ್ರಾಬಲ್ಯವಿರುವ ಉತ್ತರ ಶ್ರೀಲಂಕಾಗೆ ಪಯಣಿಸುತ್ತಾರೆ. ಮಧ್ಯದಲ್ಲಿ ಒಂದು ಚೆಕ್‌ಪೋಸ್ಟ್ ಬಳಿ ಇಡೀ ರಾತ್ರಿ ಕಳೆಯಬೇಕಾಗುತ್ತದೆ. ಆಗ ಅವರರ‍್ವರು ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಬೆಳಿಗ್ಗೆ ಒಂದು ಸಮುದ್ರ ಕಿನಾರೆಯ ಸಮೀಪದ ಸ್ಥಳವನ್ನು ತಲುಪುತ್ತಾರೆ. ಆದರೆ ಅವರು ಅಲ್ಲಿಂದ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ. ಈ ನಡುವೆ ಚಾಮರಿಗೆ ಸಮನ್‌ನ ಮೇಲೆ ಒಂದು ಬಗೆಯ ನವಿರು ಭಾವನೆ ಬೆಳೆದಿರುತ್ತದೆ. ಆದರೆ ಆತ ಅದಕ್ಕೆ ಸ್ಪಂದಿಸುವುದಿಲ್ಲ.

ಎರಡನೇ ಕಥೆಯಲ್ಲಿ, ಉತ್ತರ ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ನಿಯಂತ್ರಣದಲ್ಲಿರುವ ಒಂದು ಹಳ್ಳಿಯಿರುತ್ತದೆ. ಅದರಲ್ಲಿರುವ ಮುಸಲ್ಮಾನರನ್ನು ಉಗ್ರರು ಬಲವಂತವಾಗಿ ಎತ್ತಂಗಡಿ ಮಾಡಲು ಮುಂದಾಗುತ್ತಾರೆ. ಏಕೆಂದರೆ ಮುಸಲ್ಮಾನರು ಆ ಪ್ರದೇಶದಲ್ಲಿ ಅಲ್ಪಸಂಖ್ಯಾತರಾಗಿರುತ್ತಾರೆ. ಉಗ್ರರು ಅವರಲ್ಲಿದ್ದ ಹೆಚ್ಚಿನ ಹಣವನ್ನು ಕಸಿದುಕೊಳ್ಳುತ್ತಾರೆ. ಒಂದು ಕುಟುಂಬದ ಒಬ್ಬ ಸಣ್ಣ ವಯಸ್ಸಿನ ಹುಡುಗ ತಾನು ಇಷ್ಟಪಡುವ ನಾಯಿಯಿಂದ ದೂರಾಗಲು ಬಯಸದೆ ತುಂಬ ಆತಂಕಕ್ಕೆ ಒಳಗಾಗುತ್ತಾನೆ. ಆದರೆ ಆತನ ತಂದೆ ಈ ಬೆಳವಣಿಗೆಯನ್ನು ಉದಾಸ ದೃಷ್ಟಿಯಿಂದ ಕಾಣುತ್ತಾನೆ. ಕೊನೆಗೆ ಈ ಕುಟುಂಬ ಇತರರೊಡನೆ ಚಾಮರಿ ಮತ್ತು ಸಮನ್ ಇರುವ ಸ್ಥಳವನ್ನು ತಲುಪುತ್ತಾರೆ. ನಂತರ ದೋಣಿಯಲ್ಲಿ ತೆರಳುತ್ತಾರೆ. ಚಲನಚಿತ್ರದ ಈ ವಿಭಾಗದಲ್ಲಿ ತಮಿಳು ಭಾಷೆ ಬಳಸಲ್ಪಟ್ಟಿದೆ.

ಮೂರನೆಯ ಕಥೆಯಲ್ಲಿ, ಅಂತರ್‌ಯುದ್ಧದಲ್ಲಿ ನಿರತನಾಗಿರುವ ಒಬ್ಬ ಯುವ ಸೈನಿಕ ದುಮಿಂದ ರಜೆಯನ್ನು ಪಡೆದು ತನ್ನ ಊರಿಗೆ ವಾಪಸ್ಸಾಗುವ ಸಂದರ್ಭದಲ್ಲಿ ಅನುರಾಧಪುರದ ಒಂದು ವೇಶ್ಯಾಗ್ರಹಕ್ಕೆ ತನ್ನ ಕೆಲವು ಸಂಗಡಿಗರೊಡನೆ ಹೋಗುತ್ತಾನೆ. ಊಟ ಮತ್ತು ಗುಂಡಿನ ಸೇವನೆಯ ತರುವಾಯ ಅವರು ತಮ್ಮ ಸಂಗಾತಿಗಳೊಡನೆ ಮಹಡಿಯತ್ತ ಸಾಗುತ್ತಾರೆ. ಅಲ್ಲಿ ದುಮಿಂದ ತನ್ನ ತಂಗಿಯನ್ನು ನೋಡಿ ಹೌಹಾರುತ್ತಾನೆ. ಆಕೆಗೆ ಹೊಡೆಯುತ್ತಾನೆ. ಆಕೆ ಅಲ್ಲಿಂದ ಕಾಲ್ತೆಗೆಯುತ್ತಾಳೆ. ದುಮಿಂದ ಆಕೆಯನ್ನು ಹುಡುಕಲು ಶುರುಮಾಡುತ್ತಾನೆ.

ಇಂತಹ ಅಂಥಾಲಜಿ ಫಿಲ್ಮ್ನ್ನು ನಿರ್ದೇಶಿಸುವುದು ಸವಾಲಿನ ಕೆಲಸವೇ ಸರಿ. ಸಾಮಾನ್ಯವಾಗಿ ಇಂತಹ ಚಲನಚಿತ್ರಗಳಲ್ಲಿ ಒಂದು ಸಮಾನ ಎಳೆಯಿರುತ್ತದೆ. ಇಲ್ಲೂ ಅದು ಇದೆ. ಅದೆಂದರೆ ಮಾನವ ಘನತೆ, ಅಸ್ಮಿತೆ ಮತ್ತು ಉತ್ತಮ ನಾಳೆಗಳಿಗಾಗಿ ಹುಡುಕಾಟ. ಇದು ಈ ಚಲನಚಿತ್ರದ ಸ್ಥಾಯಿ ಭಾವ. ಎಲ್.ಟಿ.ಟಿ.ಇ ಮತ್ತು ಶ್ರೀಲಂಕಾ ಮಿಲಿಟರಿ ಜೊತೆ ಜರಗುವ ಅಂತರ್ ಯುದ್ಧದಿಂದ ಇಂತಹ ಹುಡುಕಾಟಗಳು ಜರುಗುತ್ತಿರುತ್ತವೆ. ಅಂದರೆ ಯುದ್ಧ, ಅದು ಯಾವುದೇ ಬಗೆಯಾಗಿರಲಿ, ಅದು ಸಾಮನ್ಯ ಜನರ ಮೇಲೆ ಎಂತಹ ಭೀಕರ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ದಾಟಿಸಲಾಗಿದೆ. ಇದು, ನಮ್ಮಲ್ಲಿರುವ ರಣೋನ್ಮಾದದಿಂದ ಉನ್ಮತ್ತರಾದ ಮಂದಿ ಮಾತೆತ್ತಿದರೇ ನಮ್ಮ ನೆರೆಯ ದೇಶದೊಡನೆ ಯುದ್ಧ ಮಾಡಬೇಕೆಂದು ಚೀರಾಡುತ್ತಾರಲ್ಲ, ಅವರಿಗೆ ಒಂದು ವಿವೇಚನೆಯ ಪಾಠವನ್ನು ಕಲಿಸುತ್ತದೆ.

ಮೂರು ಕಥೆಗಳೂ ಒಂದೇ ಟೈಮ್ ಫ್ರೇಮ್‌ನಲ್ಲಿ ಜರಗುತ್ತವೆ. ಇಲ್ಲಿ ಆಗಷ್ಟ್ ತಿಂಗಳಿನ ಎರಡು ದಿನಗಳಲ್ಲಿನ ಮೂರು ಕಥೆಗಳ ಘಟನೆಗಳನ್ನು ನಿರೂಪಿಸಲಾಗಿದೆ. ಆದುದರಿಂದ ‘ದಿ ಆಗಸ್ಟ್ ಸನ್’ ಎಂಬ ಶೀರ್ಷಿಕೆಯನ್ನು ಈ ಚಲನಚಿತ್ರಕ್ಕೆ ನೀಡಲಾಗಿದೆ. ಮೊದಲ ಕಥೆಯಲ್ಲಿನ ಚಾಮರಿಯ ತುಯ್ದಾಡುವ ಭಾವಗಳನ್ನು, ಪ್ರೀತಿಗಾಗಿ ಹಂಬಲಿಸುವ ಆಕೆಯ ತಹತಹವನ್ನು ತೋರಿಸುತ್ತಲೇ, ಸಂಯಮದಿಂದ ಅವುಗಳನ್ನು ನಿರ್ವಹಿಸಲಾಗಿದೆ. ಎರಡನೆಯ ಕಥೆಯಲ್ಲಿ ಅರಫತ್‌ನ ನಾಯಿಯೊಡನೆಯ ಸಂಬಂಧ ಹೇಗೆ ಮೊಟಕಾಗುತ್ತದೆ ಎಂಬುದರ ಸುತ್ತ ಹಿರಿಯರು ಸಾಮಾನ್ಯವಾಗಿ ತೋರಿಸುವ ಅಸಡ್ಡೆಯ ಭಾವದ ಜೊತೆಗೆ ಮಕ್ಕಳ ತುಡಿತಗಳು ಹೇಗೆ ಮಣ್ಣುಪಾಲಾಗುತ್ತವೆ ಎಂಬುದನ್ನು ಮಾರ್ಮಿಕವಾಗಿ ಅಭಿವ್ಯಕ್ತಿಸಲಾಗಿದೆ. ಒಂದು ದೃಶ್ಯದಲ್ಲಿ, ಹಳ್ಳಿಯನ್ನು ತೊರೆಯುವಾಗ, ಅಂತಹ ಸಂದರ್ಭದಲ್ಲೂ ಅರಫತ್‌ನ ಕುಟುಂಬದ ವೃದ್ಧೆ ಒಂದು ಪುಟ್ಟ ಸಸ್ಯದ ಕುಂಡವನ್ನು ತೆಗೆದುಕೊಂಡು ಹೋಗುವುದು ಹಾಗೂ ಅದನ್ನು ದೋಣಿಯಲ್ಲೂ ತನ್ನ ಕೈಯಲ್ಲೇ ಇರಿಸಿಕೊಳ್ಳುವುದು, ಒಂದು ಸಂಬಂಧದ ಆಪ್ತ ಭಾವವನ್ನು ಎತ್ತಿಹಿಡಿಯುತ್ತದೆ. ಇಂತಹ ಸಣ್ಣ, ಸಣ್ಣ ಸಂಗತಿಗಳು ಚಲನಚಿತ್ರಕ್ಕೆ ಒಂದು ಗಮನಾರ್ಹವಾದ ಆಯಾಮವನ್ನು ನೀಡುತ್ತವೆ. ಮೂರನೆಯ ಕಥೆಯ ದುಮಿಂದ ತನ್ನ ದೇಹದ ಬಯಕೆಗಳಿಗಾಗಿ ವೇಶ್ಯಾಗ್ರಹಕ್ಕೆ ಬಂದಿರುತ್ತಾನೆ. ಹೀಗಿರಬೇಕಾದರೇ, ತಾನು ಬಂದ ಉದ್ದೇಶವನ್ನು ಅರಿತು ಕೂಡ ತನ್ನ ತಂಗಿಯ ಮೇಲೆ ಕೈ ಮಾಡುತ್ತಾನೆ. ಅಂದರೆ ಇಲ್ಲಿ ಪುರುಷಾಧಿಪತ್ಯದ ಪೌರುಷ ಢಾಳಾಗಿ ಕಂಡು ಬರುತ್ತದೆ. ಆಕೆ ಕೆಲಸವನ್ನು ಕಳೆದುಕೊಂಡಿರುತ್ತಾಳೆ. ಸಂಸಾರದ ನಿರ್ವಹಣೆಗಾಗಿ ಆಕೆ ಅನಿವಾರ್ಯವಾಗಿ ತನ್ನ ದೇಹವನ್ನು ಮಾರಿಕೊಳ್ಳುವ ಪರಿಸ್ಥಿತಿಗೆ ದೂಡಲ್ಪಟ್ಟಿರುತ್ತಾಳೆ. ದುಮಿಂದ ಮತ್ತು ಆತನ ಸಂಗಡಿಗರು ವೇಶ್ಯಾಗ್ರಹದತ್ತ ಪಯಣಿಸುವಾಗ ಎರಡು-ಮೂರು ಬಾರಿ ಅನುರಾಧಪುರದ ಖ್ಯಾತ ಅಭಯಗಿರಿಯ ಸ್ತೂಪವನ್ನು ದೂರದಿಂದ ತೋರಿಸಲಾಗಿದೆ. ಇದು ವೀಕ್ಷಕರಲ್ಲಿ ಒಂದು ಪ್ರಜ್ಞಾ ಭಾವವನ್ನು ಉಂಟು ಮಾಡುತ್ತದೆ.

ಈ ಚಲನಚಿತ್ರದ ನಿರೂಪಣೆಯಲ್ಲಿ ಆಗಾಗ್ಗೆ ಕ್ರಿಕೆಟ್ ಕಾಮೆಂಟರಿ ಕೇಳಿ ಬರುತ್ತದೆ; ಟಿವಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಆಟದ ಕೆಲವು ವಿಶ್ಯುವಲ್ಸ್ಗಳನ್ನು ತೋರಿಸಲಾಗಿದೆ. ಒಂದೆಡೆ ಅಂತರ್‌ಯುದ್ಧದ ನೋವು, ಸಂಕಟಗಳು ಇನ್ನೊಂದೆಡೆ ಕ್ರಿಕೆಟ್ ಆಟದ ಸಂತಸದ ಕ್ಷಣಗಳು ಇವು ಪರಿಸ್ಥತಿಯ ಡೈಲೆಕ್ಟಿಕ್‌ನ್ನು ತೋರಿಸುತ್ತ ವೀಕ್ಷಕರನ್ನು ಯೋಚಿಸುವಂತೆ ಮಾಡುತ್ತವೆ. ಒಂದು ದೃಶ್ಯದಲ್ಲಿ ಎರಡನೇ ಕಥೆಯ ಮುಸಲ್ಮಾನ ಕುಟುಂಬ ಏರ್‌ರೈಡ್ ಆದಾಗ ಒಂದು ಬಂಕರ್‌ನAತಹ ಜಾಗದಲ್ಲಿ ತಾತ್ಕಾಲಿಕ ಆಶ್ರಯವನ್ನು ಪಡೆಯುತ್ತಾರೆ. ಆದರೆ ಈ ಚಲನಚಿತ್ರದಲ್ಲಿ ಅಂತರ್‌ಯುದ್ಧದ ಒಂದೇ ಒಂದು ಬೀಭತ್ಸ ದೃಶ್ಯವಿಲ್ಲ. ಆದರೂ ವೀಕ್ಷಕರಲ್ಲಿ ಯುದ್ಧ ಸಂಬಂಧಿತ ನಾನಾ ಹಿಂಸೆಗಳ ತಲ್ಲಣಗಳ ಅರಿವಾಗುತ್ತದೆ!

ಈ ಚಲನಚಿತ್ರದಲ್ಲಿ ನೀಲಿ ಬಣ್ಣದ ಆಗಸವನ್ನು ತೋರಿಸಲಾಗಿದೆ. ಚಲನಚಿತ್ರಗಳಲ್ಲಿ ನೀಲಿ ಬಣ್ಣ ಶಾಂತಿ, ಸಾಮರಸ್ಯ, ಸ್ಥಿರತೆ, ಸಂತೃಪ್ತಿ ಇತ್ಯಾದಿಗಳನ್ನು ಸೂಚಿಸುತ್ತದೆ. ಆದರೆ ಚಲನಚಿತ್ರಾದ್ಯಂತ ಪಾತ್ರಧಾರಿಗಳ ಅನುಭವಿಸುವ ನೋವು, ಸಂಕಟ, ನೆಮ್ಮದಿಯ ನಾಳೆಗಳ ಅರಸುವಿಕೆ ಮುಂತಾದವು ರಾಚುತ್ತವೆ. ಇಂತಹ ಬಣ್ಣದ ವಿನ್ಯಾಸ ಆಶಯಕ್ಕೂ, ವಸ್ತುಸ್ಥಿತಿಗೂ ಇರುವ ಅಂತರವನ್ನು ಗಮನೀಯವಾಗಿ ತಿಳಿಸುತ್ತದೆ. ಸಿನಿಮೆಟೊಗ್ರಫಿ ಮತ್ತು ಸಂಗೀತ ಎರಡೂ ಪಾತ್ರಗಳ ಭಾವನೆಗಳಿಗೆ ತಕ್ಕಂತೆ ಸೂಕ್ತವಾಗಿ ಸ್ಪಂದಿಸಿವೆ.

ಈ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಎರಡು ವಿಶೇಷ ಸಂಗತಿಗಳಿವೆ. ಇದನ್ನು ನಿರ್ಮಿಸಲು ನಾಲ್ಕು ವರ್ಷಗಳು ತೆಗೆದುಕೊಂಡಿದೆ. ಮೂರೂ ಕಥೆಗಳು 1990ರ ದಶಕದ ಕೊನೆಯ ವರ್ಷಗಳಲ್ಲಿ ಜರಗುತ್ತವೆ. ಚಿತ್ರೀಕರಣವನ್ನು ಅಂತರ್‌ಯುದ್ಧ ನಡೆಯುತ್ತಿರುವಾಗಲೇ ಮಾಡಲಾಯಿತು. ಬಹುಶಃ ಯುಗೋಸ್ಲಾವಿಯಾದ ಅಂತರ್‌ಯುದ್ಧದ ಸಮಯದಲ್ಲಿ ಕೆಲವು ಚಲನಚಿತ್ರಗಳನ್ನು ಈ ರೀತಿಯಲ್ಲಿ ನಿರ್ಮಿಸಲಾಯಿತು. ಇದನ್ನು ಬಿಟ್ಟರೆ ಬೇರೆಲ್ಲೂ ಇಂತಹ ಉದಾಹರಣೆಗಳಿಲ್ಲವೇನೋ. ಸುಮಾರು 900 ಮಂದಿ ಈ ಚಲನಚಿತ್ರದಲ್ಲಿ ನಟಿಸಿದ್ದಾರೆ. ಮುಸಲ್ಮಾನರನ್ನು ಸ್ಥಳಾಂತರಿಸುವ ಎರಡನೆಯ ಕಥೆಗೆ ಸಂಬಂಧಿಸಿದ ಎಲ್ಲ ಪಾತ್ರಧಾರಿಗಳೂ ಪ್ರಥಮ ಬಾರಿಗೆ ಕ್ಯಾಮರವನ್ನು ಎದುರಿಸಿದರು. ಈ ಚಲನಚಿತ್ರವನ್ನು ತಯಾರಿಸಲು ಅಪಾರ ವೆಚ್ಚವಾಯಿತು. ಇದರ ಜೊತೆ ಪ್ರಸನ್ನ ವಿತನಾಗೆ ನಿರ್ದೇಶಿಸಿದ ‘ಡೆತ್ ಆನ್ ಎ ಫುಲ್ ಮೂನ್ ಡೇ’ ಮತ್ತು ‘ವಿತ್ ಯೂ, ವಿತೌಟ್ ಯೂ’ ಚಲನಚಿತ್ರಗಳನ್ನು ‘ವಾರ್ ಟ್ರಯಾಲಜಿ’ ಅಂದರೆ ಯುದ್ಧಕ್ಕೆ ಸಂಬಂಧಿಸಿದ ತ್ರಿವಳಿ ಚಲನಚಿತ್ರಗಳೆಂದು ಗುರುತಿಸಲಾಗುತ್ತದೆ.

ಮಾನವನ ಅಸ್ತಿತ್ವದ ಬಗೆಗೆ ವೀಕ್ಷಕರಲ್ಲಿ ಆಲೋಚನಾ ಲಹರಿಗಳನ್ನು ಉದ್ದೀಪಿಸುವ ಈ ಚಲನಚಿತ್ರ Uಯೂಟ್ಯೂಬ್‌ನಲ್ಲಿ (https://youtu.be/46wbYY–lXs) ಲಭ್ಯವಿದೆ.

 

 

 

Donate Janashakthi Media

Leave a Reply

Your email address will not be published. Required fields are marked *