ಅನ್ನದಾತರ ಹೋರಾಟ ಬೆಂಬಲಿಸಿ ಸಾಹಿತಿ, ಕಲಾವಿದರ ಧರಣಿ

ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದು ಹದಿಮೂರನೇ ದಿನಕ್ಕೆ ಕಾಲಿಟ್ಟಿತು

ಇಂದಿನಿ ಹೋರಾಟದಲ್ಲಿ ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದು, ಧರಣಿಯನ್ನು ಕರ್ನಾಟಕ ಜಾನಪದ ಅಕಾಡೆಮಿ, ಮಾಜಿ ಅಧ್ಯಕ್ಷರಾಗಿರುವ ಪ್ರಖ್ಯಾತ ಹಾಡುಗಾರ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್ ರವರು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಎಸ್ ಜಿ ವಾಸುದೇವರವರ ರೈತ ಹೋರಾಟ ಕುರಿತ ಚಿತ್ರವುಳ್ಳ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು ಕೊರೋನಾ ಭಯದ ಜೊತೆಗೆ ಪ್ರಜಾಪ್ರಭುತ್ವ ಅಭಿವ್ಯಕ್ತಿಯು ಪ್ರಸ್ತುತ ಸರ್ಕಾರದಲ್ಲಿ ದಬ್ಬಾಳಿಕೆಗೆ ತುತ್ತಾಗುತ್ತಿರುವ ಭಯವೂ ಸೇರಿರುವುದರಿಂದ ಈ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಆದರೂ ರೈತರು, ಕಾರ್ಮಿಕರು ಕಲಾವಿದರು, ಸಾಹಿತಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೀದಿಗಳಿದಿರುವುದು ಅಭಿನಂದನಾರ್ಹ ಎಂದು ಹೇಳಿದರು.

ದೆಹಲಿಯ ನಾಲ್ಕು ಡಿಗ್ರಿಗಿಂತ ಕಡಿಮೆ ಉಷ್ಣಾಂಶದ ಕೊರೆಯುವ ಚಳಿಯಲ್ಲಿ ಮಕ್ಕಳು, ವೃದ್ದರೂ ಸೇರಿದಂತೆ ಲಕ್ಷಾಂತರ ರೈತರು ಪ್ರತಿಭಟಿಸುತ್ತಿದ್ದಾರೆ. ದೇಶದಾದ್ಯಂತ ತಮ್ಮದೇ ಆದ ಅಭಿವ್ಯಕ್ತಿಗಳಲ್ಲಿ ಸಾಹಿತಿ, ಕಲಾವಿದ, ಪ್ರಜ್ಞಾವಂತರ ಬೆಂಬಲ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದರು.

ಇದನ್ನು ಓದಿ : ಮೋದಿ ಸರಕಾರದಿಂದ ಸಂವಿಧಾನ ದುರ್ಭಲ – ಹೆಚ್.ಎಸ್. ದೊರೆಸ್ವಾಮಿ

ಪ್ರಸಿದ್ಧ ಸಿನಿಮಾ ನಿರ್ದೇಶಕ, ನಿರ್ಮಾಪಕ ಬಿ ಸುರೇಶ್ ಮಾತನಾಡಿ ರಂಗಭೂಮಿಯ ಬಹುತ್ವ ಧರ್ಮ, ಜಾತ್ಯತೀತ ಚೈತನ್ಯ ಹಾಗೂ ಪ್ರತಿಭಟನಾ ಧೋರಣೆಗಳನ್ನು ಬಳಸಿಕೊಂಡೇ ಈಗ ನಡೆಯುತ್ತಿರುವ ರೈತ ಹೋರಾಟದ ಜೊತೆ ನಿಲ್ಲಬೇಕು ಎಂದು ಕರೆ ನೀಡಿದರು.

ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆಯ ಡಾ.ಸುಕನ್ಯಾ ಮಾರುತಿ, ಆರ್.ಜಿ.ಹಳ್ಳಿ ನಾಗರಾಜ್, ರಂಗಾರೆಡ್ಡಿ ಕೋಡಿರಾಂಪುರ, ಲೇಖಕರಾದ ಡಾ.ಬಿ.ಆರ್ ಮಂಜುನಾಥ್ ಸಮುದಾಯದ ಸಿ.ಕೆ.ಗುಂಡಣ್ಣ, ಕೆ.ಎಸ್ ವಿಮಲಾ, ಶಶಿಧರ್ ಜೆ.ಸಿ ಆವಿಷ್ಕಾರದ ಡಾ.ಸುನೀತ್ ಮುಂತಾದವರು ಮಾತನಾಡಿದರು.

ಇಂದಿನ ಪ್ರತಿಭಟನಾ ಧರಣಿಯಲ್ಲಿ ರಂಗ ಗೀತೆಗಳು, ರೈತರ ಬಾಳಿನ ಕುರಿತ ಹಾಡುಗಳನ್ನು ಹಾಡಿದರು ಹಾಗೂ ‘ಒಳಿತು ಮಾಡು ಮನಸಾ’ ಎಂಬ ಬೀದಿನಾಟಕವನ್ನು ಸಮುದಾಯ ಬೆಂಗಳೂರು ತಂಡ ಪ್ರಸ್ತುತ ಪಡಿಸಿತು.

ಇಂದಿನ ಪ್ರತಿಭಟನಾ ಧರಣಿಯ ನೇತೃತ್ವವನ್ನು ಸಮುದಾಯದ ಟಿ. ಸುರೇಂದ್ರ ರಾವ್, ಕಾವ್ಯ ಅಚ್ಯುತ್, ಜಿ.ಸಿ.ಶಶಿಧರ್, ಶಶಿಕಾಂತ್ ಯಡಹಳ್ಳಿ, ಕಾರುಣ್ಯದ ಎ ಗೋಪಿನಾಥ್, ಶೇಖರಗೌಡ ಮಾಲಿ ಪಾಟೀಲ್  ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ.ಭಟ್ , ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ,ಆರ್ ಕೆ ಎಸ್ ಮುಖಂಡ ಶಿವಪ್ರಕಾಶ್ , ಕರ್ನಾಟಕ ಜನ ಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್ ,ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ ಮುಂತಾದವರು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *