ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಾಕ್ ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದೆ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ ಖಾರವಾಗಿ ಪ್ರತಿಕ್ರಿಯಿಸಿದ್ದು, ನಿಮ್ಮನ್ನು ಪಿ.ಎಂ, ಸಿ.ಎಂ ಮಾಡಿದ್ದೆ ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲಾರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ರೈತರ ಹೋರಾಟದಲ್ಲಿ ಭಾಗವಹಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಲಿಗೆ ಶಕ್ತಿ ಇಲ್ಲ, ಹೀಗಾಗಿ ಹಸಿರು ಶಾಲು ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು. ಆಗ ನಾನು ಸಾಕಷ್ಟು ತಾಳ್ಮೆಯಿಂದ ಮಾತನಾಡಿದೆ. ನಿಮ್ಮ ತಂದೆಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು. ನಾವೇ ಬಲವಂತ ಮಾಡಿಯೋ ಏನೋ ಅಂತೂ ಕುಮಾರಸ್ವಾಮಿ ಅವರನ್ನೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು ಎಂದು ಹೇಳಿದ್ದೆ. ಅವರು ನನ್ನನ್ನು ವೈಯಕ್ತಿಕವಾಗಿ ನಿಂದಿಸಲಿ, ಸಹಿಸಿಕೊಳ್ಳುತ್ತೇನೆ. ಆದರೆ ಈ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ಈ ಡಿ.ಕೆ. ಶಿವಕುಮಾರ್ ಎಂದಿಗೂ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಶಾಂತಿ : ಇವತ್ತು ಬಿಜೆಪಿಗೆ ಇಷ್ಟು ದೊಡ್ಡ ಬಹುಮತ ಬಂದಿದೆ. ಆದರೆ ದೇಶದಲ್ಲಿ ರೈತರು, ಕಾರ್ಮಿಕರ ವಿಚಾರದಲ್ಲಿ ಎಷ್ಟು ಅಶಾಂತಿ ಮೂಡಿದೆ. ನನ್ನ ಜಿಲ್ಲೆಯಲ್ಲಿ ಟೊಯೊಟಾ ಕಂಪನಿ ಇದೆ. ಇಂದು ಸಾವಿರಾರು ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆ ಏನು ಅಂತಾ ಕೇಳಲು ತಯಾರಿಲ್ಲ. ಕಂಪನಿಯವರು ಕಾರ್ಮಿಕರ ಜತೆ ಮಾತನಾಡಲು ತಯಾರಿಲ್ಲ ಅಂತಿದ್ದಾರೆ. ಈ ಪರಿಸ್ಥಿತಿ ಯಾಕೆ ಬಂತು? ಈ ದೇಶದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆ ಸಡಿಲ ಮಾಡಿದ್ದರ ಪರಿಣಾಮ ಇದು. ಮಲ್ಲಿಕಾರ್ಜುನ ಖರ್ಗೆ ಹಾಗೂ ಆಸ್ಕರ್ ಫರ್ನಾಂಡಿಸ್ ಅವರು ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಪರ ಕಾನೂನುಗಳನ್ನು ತಂದಿದ್ದರು. ಆದರೆ ಈ ಸರ್ಕಾರದ ನೋಟು ರದ್ಧತಿ, ಜಿಎಸ್ಟಿ, ಆರ್ಟಿಕಲ್ 370 ಸೇರಿದಂತೆ ಯಾವುದೇ ನಿರ್ಧಾರಗಳಿಂದ ರಾಜ್ಯದಲ್ಲಿ ನೆಮ್ಮದಿ ಸಿಕ್ಕಿದೆಯಾ? ಎಂದು ಪ್ರಶ್ನಿಸಿದ್ದಾರೆ.