ಬೆಂಗಳೂರು : ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಧರಣಿ ಇಂದು ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ ಸಿಖ್ ಸಮುದಾಯ ಭಾಗವಹಿಸಿದ್ದ ಇಂದಿನ ಧರಣಿಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಉದ್ಘಾಟಿಸಿ ,ಈಗ ಸಾಲು ಸಾಲಾಗಿ ಬರುತ್ತಿರುವ ಎಲ್ಲಾ ಕಾನೂನುಗಳು ಸಂವಿಧಾನದ ಆಶಯಕ್ಕೆ ಹಾಗೂ ಉದ್ದೇಶಕ್ಕೆ ವಿರುದ್ಧವಾಗಿ ಇದ್ದು ,ಸಂವಿಧಾನವನ್ನು ಮುಟ್ಟದೇ ಸಂವಿಧಾನ ವಿರೋಧಿ ಕಾನೂನುಗಳ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ವಿಶ್ಲೇಷಿಸಿದರು.
ಕಲ್ಯಾಣ ರಾಜ್ಯ ಪರಿಕಲ್ಪನೆಯ ಭಾರತವನ್ನು ಕಾರ್ಪೊರೇಟ್ ಪ್ರಭುತ್ವವನ್ನಾಗಿ ಬದಲಾಯಿಸುವ ಉದ್ದೇಶವನ್ನು ಈ ಹೊಸ ಕೃಷಿ ಕಾಯ್ದೆಗಳು ಹೊಂದಿದ್ದು ರೈತರಿಗೆ ಮಾತ್ರವಲ್ಲ ಪ್ರತಿಯೊಬ್ಬ ಪ್ರಜೆಗೂ ಮಾರಕವಾಗಿದೆ.ದೇಶದ ವಿವಿಧ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸದಲ್ಲಿ ನಿರತವಾಗಿರುವ ಸರ್ಕಾರ ,ಸಾಮರಸ್ಯ ಹಾಳು ಮಾಡಲು ಜನಾದೇಶ ದೊರೆತಿದೆ ಎಂಬಂತೆ ವರ್ತಿಸುತ್ತಿರುವುದು ದುರಂತ .ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿ ಇದ್ದು ಇದರ ಬಗ್ಗೆ ಎಲ್ಲರಲ್ಲೂ ಅರಿವು ಮಾಡಿಸಬೇಕು ಎಂದು ಕರೆ ನೀಡಿದರು.
ಜಮಾತ್ ಇಸ್ಲಾಂ ಮುಖಂಡ ಮೊಹಮ್ಮದ್ ಯೂಸಫ ಖಾನಿ ಕೂಡ ಮಾತಾನಾಡಿದರು
ಇಂದಿನ ಪ್ರತಿಭಟನೆಯ ನೇತೃತ್ವವನ್ನು ಸಿಖ್ ಸಮುದಾಯದ ಮೊಹಿಂದರ್ ಜೀತ್ ಸಿಂಗ್ ,ಪುನೀತ್ ಸಿಂಗ್ ,ಡಾ.ಸೌಮ್ಯ , ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ.ಭಟ್ ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್, ವರದರಾಜ್ ಆರ್ ಕೆ ಎಸ್ ನ ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ್ ಬಾಬು ,ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ ಮುಂತಾದವರು ವಹಿಸಿದ್ದರು.