10 ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಬೆಂಗಳೂರು: ಚಾರಿತ್ರಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ ಹತ್ತನೇ ದಿನಕ್ಕೆ ಕಾಲಿಟಿದೆ. ಅನ್ನದಾತರ ಹೋರಾಟವನ್ನು ಬೆಂಬಲಿಸಿ ರಾಜ್ಯದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸಿದ್ದಾರೆ.
ಈ ಧರಣಿಯನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ ಎನ್ ಉಮೇಶ್ ಮಾತಾನಾಡಿ, ಕೇಂದ್ರದ ಮೋದಿ ಸರ್ಕಾರ ದೇಶದ ರಾಜಧಾನಿ ಗೆ ರೈತರು ಬರದಂತೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ನಡೆಸಿದರೂ ಆ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ಕಳೆದ ಮೂವತ್ತು ದಿನದಿಂದ ಲಕ್ಷಾಂತರ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿರೋಧ ಈಗಾಗಲೇ ಇತಿಹಾಸ ನಿರ್ಮಿಸಿದ್ದು ಇದಕ್ಕೆ ದೇಶವ್ಯಾಪಿ ಎಲ್ಲಾ ಜನ ವಿಭಾಗಗಳಿಂದ ಬೆಂಬಲ ಸಿಗುತ್ತಿದ್ದು ಈ ಹೋರಾಟ ಜಯಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತ್ರಿವಳಿ ತಲಾಖ್ ನಿಷೇಧಿಸಿ ದೊಡ್ಡ ಪ್ರಚಾರ ಮಾಡಿಕೊಂಡ ಪ್ರಧಾನಿ ಮೋದಿ ಈಗ ಈ ತ್ರಿವಳಿ ಕೃಷಿ ಕಾನೂನುಗಳ ಮೂಲಕ ಇಡೀ ಕೃಷಿ ಯಿಂದ ರೈತರಿಗೆ ತಲಾಖ್ ಕೊಡಿಸುತ್ತಿದೆ. ಇದು ಕಾರ್ಪೊರೇಟ್ ಪರ ಇರುವ ಕಾನೂನು ಇದರಿಂದ ದುಡಿಯುವ ಜನರು ದಿವಾಳಿಯಾಗುತ್ತಾರೆ. ಸಂಸತ್ತಿನಲ್ಲಿ ಇರುವ ಬಹುಮತವನ್ನು ದುರುಪಯೋಗ ಮಾಡಿಕೊಂಡು ಜನ ದ್ರೋಹಿ ಕಾನೂನು ಅಂಗೀಕರಿಸಿದ್ದರೂ ಬೀದಿಯಲ್ಲಿ ನಡೆಯುವ ಜನ ಹೋರಾಟದಲ್ಲಿ ತಿರಸ್ಕರಿಸಲಾಗಿದೆ ಎಂದರು.
ಟಿಯುಸಿಸಿ ರಾಷ್ಟ್ರೀಯ ನಾಯಕ ಜಿ ಆರ್ ಶಿವಶಂಕರ್, INTUC ಮುಖಂಡ ಶಾಮಣ್ಣರೆಡ್ಡಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರು ಕೂಡ ಧರಣಿ ಉದ್ದೇಶಿಸಿ ಮಾತಾನಾಡಿದರು.
ಇಂದಿನ ಪ್ರತಿಭಟನಾ ಧರಣಿಯ ನೇತೃತ್ವವನ್ನು JCTU ರಾಜ್ಯ ಸಂಚಾಲಕ ಕೆ.ವಿ.ಭಟ್ , INTUC ರಾಜ್ಯ ಅಧ್ಯಕ್ಷ ಪ್ರಕಾಶ್ HMS ನ ನಾಯಕ ನಾಗನಾಥನ್ , AICCTU ಅಪ್ಪಣ್ಣ ಹಾಗೂ ಮಣಿ, ಕಟ್ಟಡ ಕಾರ್ಮಿಕರ ಸಂಘಟನೆ ರಾಜ್ಯ ಅಧ್ಯಕ್ಷ ಕೆ.ಮಹಾಂತೇಶ್, ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಲೀಲಾವತಿ, AIUTUC ಯ ಷಣ್ಮುಖ NCL ನ ಲೀಲಾವತಿ RKS ನ ದಿವಾಕರ್, ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ, ಕರ್ನಾಟಕ ಜನ ಶಕ್ತಿ ಯ ಸಿರಿಮನೆ ನಾಗರಾಜ್, ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ್ ಮುಂತಾದವರು ವಹಿಸಿದ್ದರು. ಇಂದಿನ ಧರಣಿಯಲ್ಲಿ CITU, INTUC, AIUTUC, HMS, NCL, AICCTU, UTUC ಸೇರಿದಂತೆ ಹಲವು ಕೇಂದ್ರ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.