ತಿರುವನಂತಪುರಂ: ಆರ್ಯ ರಾಜೇಂದ್ರನ್ ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಆಗಿ ಇಂದು ಅಧಿಕಾರ ಸ್ವೀಕರಿಸಿದರು.
ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಮೊದಲ ಗೆಲುವಿನಲ್ಲೇ ಮೇಯರ್ ಆಗುವ ಅವಕಾಶ ಆರ್ಯ ಅವರಿಗೆ ಲಭಿಸಿದ್ದು, ಗೆಲುವು ಕಂಡಿದ್ದ ಎಲ್‌ಡಿಎಫ್‌ನ ಆರ್ಯ ರಾಜೇಂದ್ರನ್ ಅವರು ತಿರುವುನಂತಪುರಂ ಕಾರ್ಪೋರೇಷನ್‌ನ ಮೇಯರ್ ಭಾರತದ ಅತೀ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
21 ವರ್ಷ ಪ್ರಾಯದ ಆರ್ಯ ಭಾರತದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ದಾಖಲೆ ಬರೆದಿದ್ದಾರೆ. ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿ. ಜೊತೆಗೆ ಬಾಲಸಂಘಂ ಸಂಘಟನೆಯ ರಾಜ್ಯಾಧ್ಯಕ್ಷರು.
ಅವರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ರಾಜ್ಯ ಸಮಿತಿ ಸದಸ್ಯೆ ಮತ್ತು ಸಿಪಿಐ (ಎಂ) ನ ಶಾಖಾ ಸಮಿತಿ ಸದಸ್ಯೆಯೂ ಆಗಿದ್ದಾರೆ.
“ವಿದ್ಯಾರ್ಥಿ ಸಂಘಟನೆಯಿಂದ ಬಂದ ಹಿನ್ನಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವುದರ ಜೊತೆಯಲ್ಲಿ ಇತರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದು ಹಾಗೂ ಪ್ರಾಥಮಿಕ ಶಾಲೆಯನ್ನು ನವೀಕರಿಸುವತ್ತ ಗಮನ ಹರಿಸುತ್ತೇನೆ” ಎಂದು ಆರ್ಯ ತಿಳಿಸಿದ್ದಾರೆ.