ವಿಜ್ಞಾನಿ ರೊದ್ದಂ ನರಸಿಂಹ ಇನ್ನಿಲ್ಲ

ಬೆಂಗಳೂರು : ಹೆಸರಾಂತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ರವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವೈಮಾನಿಕ ವಿಜ್ಞಾನ, ಫ್ಲೂಯಿಡ್‌ ಡೈನಮಿಕ್ಸ್‌ ಮತ್ತು ಮೋಡಗಳ ರಚನೆಯ ಕುರಿತು ಅಂತರ ರಾಷ್ಟ್ರೀಯ ಮಟ್ಟದ ಸಂಶೋಧನೆಗಳನ್ನು ನಡೆಸಿದ್ದ ಖ್ಯಾತಿಯನ್ನು ರೊದ್ದಂ ಪಡೆದಿದ್ದರು.

ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿನ ರಕ್ತ ಸ್ರಾವದಿಂದ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾತ್ರಿ 9.30ರ ವೇಳೆಗೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

1933 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ರೊದ್ದಂ ರವರು ಬಾಲ್ಯದಲ್ಲೇ ವಿಜ್ಞಾನದ ಬಗ್ಗೆ ತಮ್ಮ ತಂದೆ ಹಾಗೂ ವಿಜ್ಞಾನದ ಹೆಸರಾಂತ ಲೇಖಕರಾಗಿದ್ದ ಆರ್‌. ಎಲ್‌. ನರಸಿಂಹಯ್ಯ ಅವರಿಂದ ಪ್ರಭಾವಿತರಾಗಿದ್ದರು. 1953 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.1955 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದರು. 1962 ರಿಂದ 1999 ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1984 ರಿಂದ 1993 ರವರೆಗೆ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್‌ಎಎಲ್‌) ದ ನಿರ್ದೇಶಕರಾಗಿದ್ದರು. 2000 ರಿಂದ 2014 ರವರೆಗೆ ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಎಂಜಿನಿಯರಿಂಗ್‌ ಮೆಕ್ಯಾನಿಕ್ಸ್‌ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜೀವ್‌ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 1992–1994ರವರೆಗೆ ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಅಧ್ಯಕ್ಷರಾಗಿದ್ದರು. ಇಸ್ರೊ ಮತ್ತು ನಿಯಾಸ್‌ನಲ್ಲೂ ಸೇವೆ ಸಲ್ಲಿಸಿದ್ದರು. ಪದ್ಮವಿಭೂಷಣ ಗೌರವಕ್ಕೆ ಅವರು ಪಾತ್ರರಾಗಿದ್ದರು.

ರೊದ್ದಂ ನರಸಿಂಹ ರವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದು, ವಿಜ್ಞಾನ ಲೋಕಕ್ಕೆ ತುಂಬಲಾರದ ನಷ್ಟ ಎಂದು ಸಂತಾಪಗಳನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *