ಗದಗ : ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಈಗಾಗಲೇ ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಾದ್ಯಂತ ಹಳ್ಳಿಗಳಲ್ಲಿ ಚುನಾವಣೆ ಕಾವು ಬಲು ಜೋರಾಗಿ ಸಾಗಿದೆ.
ಹಳ್ಳಿ ಕಟ್ಟೆ, ಚಹಾ ಅಂಗಡಿ, ಜನಸಂದಣಿ ಸ್ಥಳಗಳಲ್ಲಿ ಚುನಾವಣೆಯದ್ದೆ ಸದ್ದು ಮಾಡುತ್ತಿದೆ. ಈಗಾಗಲೇ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದಿದ್ದು, ಎರಡನೆ ಹಂತದ ಚುನಾವಣೆ ನಡೆಯುವ ಗ್ರಾಮ ಪಂಚಾಯ್ತಿಗಳಲ್ಲಿ ಡಿ.11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಕೆಲವು ಸದಸ್ಯರು ಮತ್ತೆ ಸ್ಪರ್ಧೆಗೆ ಇಳಿದಿದ್ದು, ಕೆಲವರು ಈ ಬಾರಿ ವಾರ್ಡ್ ಬದಲಾಯಿಸಿ ಗೆಲುವಿನ ಲೆಕ್ಕಾಚಾರದಲ್ಲಿ ತಂತ್ರಗಾರಿಕೆ ರೂಪಿಸಿದ್ದಾರೆ.
ಗದಗ ಜಿಲ್ಲೆಯ ತಾಲೂಕಾದ ನಂತರ ಮೊದಲ ಬಾರಿಗೆ ಗಜೇಂದ್ರಗಡ ತಾಲ್ಲೂಕಿನ ಒಟ್ಟು 11 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27 ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆ ನಡೆಯಲಿದೆ.
ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮ ಪಂಚಾಯ್ತಿ 17 ಸದಸ್ಯ ಬಲ, ಮುಶಿಗೇರಿ 14, ಗುಳಗುಳಿ 13, ಲಕ್ಕಲಕಟ್ಟಿ 15, ರಾಜೂರ 21, ಗೋಗೇರಿ 14, ರಾಮಾಪೂರ 14, ಹಾಳಕೇರಿ 10, ನಿಡಗುಂದಿ 16 ಸದಸ್ಯ ಬಲ ಹೊಂದಿವೆ. 9 ಗ್ರಾಮ ಪಂಚಾಯ್ತಿಗಳ ಒಟ್ಟು 134 ಸ್ಥಾನಗಳಿಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಚುನಾವಣಾ ಕಣ ರಂಗೇರಿದೆ. ಡಿ.16 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಡಿ.17 ನಾಮಪತ್ರ ಪರಿಶೀಲನೆ, ಡಿ.19 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.
ಈಗಾಗಲೇ ರಾಜೂರ ಗ್ರಾಮ ಪಂಚಾಯ್ತಿಯಲ್ಲಿ 20, ಲಕ್ಕಲಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ 2 ಹಾಗೂ ಗೋಗೇರಿ, ಗುಳಗುಳಿ, ಮುಶಿಗೇರಿ, ಸೂಡಿ ಗ್ರಾಮ ಪಂಚಾಯ್ತಿಗಳಲ್ಲಿ ತಲಾ ಒಂದು ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿವೆ. ರಾಜೂರ ಗ್ರಾಮ ಪಂಚಾಯ್ತಿಯಲ್ಲಿ 4, ಗುಳಗುಳಿ, ಲಕ್ಕಲಕಟ್ಟಿ, ಮುಶಿಗೇರಿ, ಸೂಡಿ ಗ್ರಾಮ ಪಂಚಾಯ್ತಿಗಳಲ್ಲಿ ತಲಾ ಒಂದು ಒಟ್ಟು 8 ನಾಮಪತ್ರಗಳು ಸಲ್ಲಿಕೆಯಾಗಿವೆ.
ಪಂಚಾಯ್ತಿಗಳ ಪೈಕಿ ಶಾಂತಗೇರಿ ಹಾಗೂ ಕುಂಟೋಜಿ ಗ್ರಾಮ ಪಂಚಾಯ್ತಿಗಳ ಅಧಿಕಾರಾವಧಿ ಇನ್ನೂ 9 ತಿಂಗಳ ಬಾಕಿ ಉಳಿದಿದೆ. ಸದ್ಯ ಹಳ್ಳಿ ಅಖಾಡದಲ್ಲಿ ರಾಜಕೀಯ ಚಟುವಟಿಕಗಳು ಬಿರುಸಿನಿಂದ ನಡೆಯುತ್ತಿವೆ. ನಾಮಪತ್ರ ಸಲ್ಲಿಸಲು ಜನಬೆಂಬಲದೊಂದಿಗೆ ತೆರಳುತ್ತಿದ್ದಾರೆ. ಇನ್ನು ಯಾವ ವಾರ್ಡ್ ನಲ್ಲಿ ಸ್ಪರ್ಧೆ ಮಾಡಿದರೆ ಗೆಲ್ಲಬಹುದು ಎನ್ನುವ ಲೆಕ್ಕಾಚಾರವೂ ಜೋರಾಗಿದೆ. ಈಗ ಎಷ್ಟೇ ಲೆಕ್ಕಾಚಾರ ಹಾಕಿದರೂ ಅಂತಿಮ ಗೆಲುವು ಯಾರದ್ದು ಎಂಬುದನ್ನು ತಿಳಿಯಲು ಫಲಿತಾಂಶದ ವರೆಗೆ ಕಾಯಬೇಕಿದೆ.