ಬೆಂಗಳೂರು : ಸಾರಿಗೆ ನೌಕರರು ವಿವಿಧ ಬೇಡಿಕೆಗಾಗಿ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ಮುಂದುವರೆಸುವ ಅಥವಾ ಹಿಂತೆಗೆದುಕೊಳ್ಳುವ ಕುರಿತು ಸಾರಿಗೆ ನೌಕರರ ಪದಾಧಿಕಾರಿಗಳು ಸಭೆ ನಡೆಸಿ ನಿರ್ಧಾರವನ್ನು ತಿಳಿಸಲಿದ್ದಾರೆ. ಒಂದು ಮಾಹಿತಿಯ ಪ್ರಕಾರ ಮಧ್ಯಾಹ್ನ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಸ್ ಸಂಚಾರ ಆರಂಭ : ಕೆಲ ಜಿಲ್ಲೆಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ರಜೆ ಹಾಕಿದ ಕಾರಣ ಸಂಚಾರ ವಿರಳವಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಸುಗಳು ನಿಧಾನಕ್ಕೆ ಸಂಚಾರ ಆರಂಭಿಸಿವೆ.
ದಾವಣಗೆರೆ, ಕೊಪ್ಪಳ, ಚಿತ್ರದುರ್ಗ, ರಾಯಚೂರು, ತುಮಕೂರು, ಬೆಳಗಾವಿ, ಕಲಬುರ್ಗಿ, ಬಿಜಾಪುರ, ಹಾಗೂ ಇತರೆಡೆ ಹಂತ ಹಂತವಾಗಿ ಬಸ್ ಸಂಚಾರ ಆರಂಭ ಗೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಬಸ್ ಸಂಚಾರ ಯಾವುದೇ ಅಡೆತಡೆಯಿಲ್ಲದೆ ಆರಂಭವಾಗಿದೆ. ಬಸ್ ಸಂಚಾರ ಆರಂಭವಾದ ಬೆನ್ನಲ್ಲೇ, ದಿನನಿತ್ಯ ಸಂಚಾರಕ್ಕೆ ಸಾರಿಗೆಯನ್ನೇ ನಂಬಿಕೊಂಡಿರುವ ಜನಸಾಮಾನ್ಯರು ಆಯಾ ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗುತ್ತಿದ್ದಾರೆ.
ಮುಖ್ಯಮಂತ್ರಿ ಸಭೆ : ಬೇಡಿಕೆ ಈಡೇರುವವರೆಗೂ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡುದು ಕುಳಿತ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಾಲು ಸಾಲು ಸಭೆಗಳನ್ನು ನಡೆಸಿದ್ದಾರೆ. ಉಪಮುಖ್ಯಮಂತ್ರಿ , ಸಾರಿಗೆ ಸಚಿವ ಲಕ್ಷ್ಮಣ ಸವದಿ, ಉಪಮುಖ್ಯಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್, ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದಾರೆ.