ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಎರಡು ಜಿಲ್ಲೆಗಳಲ್ಲಿ ಕನಿಷ್ಠ 10 ಮಂದಿ ಶಾಸಕರನ್ನು ತಯಾರಿ ಮಾಡುವ ಗುರುತರ ಜವಾಬ್ದಾರಿಯನ್ನು ಹೊರೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗು ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು ಕರೆ ನೀಡಿದರು.
ಅವರು ಇಂದು ಕೋಲಾರ ಜಿಲ್ಲಾ ನೂತನ ಜೆಡಿಎಸ್ ಕಟ್ಟಡದ ಗುದ್ದಲಿಪೂಜೆ ನೆರವೇರಿಸಿ ನಂತರ ನಗರದ ರತ್ನ ಕನ್ವೇಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, ಒಂದು ಕಾಲದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ 11 ಮಂದಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿ ಕೊಟ್ಟಿದ್ದನ್ನು ನಾವು ಮರೆಯುವಂತಿಲ್ಲ ಈಗ ಎರಡು ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷವು ಸೋತಿದೆ ಹೊರತು ಸತ್ತಿಲ್ಲ, ಈ ಕಾರಣದಿಂದಾಗಿ ಜೆಡಿಎಸ್ ನ ಕಾರ್ಯಕರ್ತರು ಎದೆಗುಂದದೆ ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪಕ್ಷವನ್ನು ಬಲವರ್ಧನೆಗೊಳಿಸಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೆಲೆ ಇಲ್ಲ ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ದೇಶದಲ್ಲಿ ಅದು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ, ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು 14 ತಿಂಗಳುಗಳ ಕಾಲ ನಾನು ಮುಖ್ಯಮಂತ್ರಿಯಾಗಿ ಅನುಭವಿಸಿದ ವೇದನೆ ಯಾರಿಗೂ ಬೇಡ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ, ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಗೆ ಹದಗೆಟ್ಟಿದೆ, ರಾಜ್ಯವನ್ನು ಸದೃಢವಾಗಿ ಮುಂದೆ ತರಬೇಕಾದರೆ ಅದು ಜೆಡಿಎಸ್ ನಿಂದ ಮಾತ್ರ ಸಾಧ್ಯ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿಗೆ ಒಪ್ಪಿಸಿದ್ದು, ನಿಖಿಲ್ ಕುಮಾರಸ್ವಾಮಿ ಈ ಜಿಲ್ಲೆಯ ಮೊಮ್ಮಗ, ಈ ಮೊಮ್ಮಗನ ಮೇಲೆ ಗುರುತರ ಜವಾಬ್ದಾರಿ ಹೊರೆಸಿದ್ದು, ಕಾರ್ಯ ಕರ್ತರು ಉತ್ಸಾಹಿಗಳಾಗಿ ಮುಂಬರುವ ಚುನಾವಣೆಗಳಲ್ಲಿ ಕಾಯ, ವಾಚಾ, ಮನಸ ದುಡಿಯುವ ಮೂಲಕ ಪಕ್ಷವನ್ನು ಮತ್ತೆ ಕಟ್ಟುವ ಕೆಲಸ ಮಾಡಬೇಕೆಂದು ಅವರು ವಿನಂತಿಸಿದ್ದಾರೆ. ಈ ಮೂಲಕ ಎಲ್ಲರೂ ಆತನನ್ನು ತಮ್ಮ ಮನೆ ಮಗನಾಗಿ ಸ್ವೀಕರಿಸಿ ಬೆಳೆಸಬೇಕೆಂದು ವಿನಂತಿಸಿದರು.
ತಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 2006ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಆರಂಭಿಸಿದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ, ಬದಲಿಗೆ ಅಂದಿನ ಶಾಸಕರು ಜಲಾಶಯ ನಿರ್ಮಾಣ ಮಾಡಲು ಆಸಕ್ತಿ ತೋರದೆ, ಪೈಪ್ಲೈನ್ ಗಳಲ್ಲಿ ದುಡ್ಡು ಮಾಡಲು ಹೊರಟಿದ್ದರಿಂದಾಗಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, ರಾಜ್ಯದ ಕಾರ್ಯಕರ್ತರ ನಿರೀಕ್ಷೆಗೆ ಮೀರಿ ಪಕ್ಷವನ್ನು ಬಲಪಡಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದರಲ್ಲದೆ, ಹಿರಿಯರ ಸೂಚನೆ ಮತ್ತು ಮಾರ್ಗದರ್ಶನವನ್ನು ಅನುಸರಿಸಿ ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರಲ್ಲದೆ, ಎಚ್ ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ನಮ್ಮ ಮೇಲೆ ಅತಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಅವರ ನಿರೀಕ್ಷೆ ಹುಸಿಗೊಳಿಸದೆ ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಯುವಜನತೆಗೆ ಕರೆ ನೀಡಿದರು.
ಈ ಗ್ರಾಮ ಪಂಚಾಯಿತಿ ಪಂಚಾಯ್ತಿ ಚುನಾವಣೆಗಳು ಮುಂದಿನ ಎಲ್ಲಾ ಚುನಾವಣೆಗಳಿಗೂ ಪಕ್ಷದ ತಳಹದಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಪಕ್ಷವನ್ನು ಬಲವರ್ಧನೆಗೊಳಿಸಬೇಕಾಯಿ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.
2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ತಮ್ಮ ಪಕ್ಷ ಬಹುಮತ ಬಂದರೆ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು ಆದರೆ ಕೇವಲ 37 ಶಾಸಕ ಸ್ಥಾನಗಳನ್ನು ಹೊಂದಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಸರ್ಕಾರ ಮಾಡಿದ ಕುಮಾರಸ್ವಾಮಿರವರು ರಾಜ್ಯದ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ದೇಶದ ಯಾವುದೇ ಮುಖ್ಯಮಂತ್ರಿ ಮಾಡದ ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ .
ವೇದಿಕೆಯಲ್ಲಿ ಶಾಸಕ ಕೆ. ಶ್ರೀನಿವಾಸ್ ಗೌಡ, ಮಾಜಿ ಶಾಸಕ ಜಿ. ಕೆ. ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು, ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್, ಬಂಗಾರಪೇಟೆ ಕ್ಷೇತ್ರದ ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್, ರಾಜರಾಜೇಶ್ವರಿ, ಚೌಡೇಶ್ವರಿ, ವಕ್ಕಲೇರಿ ರಾಮು, ಮತ್ತಿತರರು ಉಪಸ್ಥಿತರಿದ್ದರು.