- ಪುರುಷೋತ್ತಮ ಬಿಳಿಮಲೆ
ಕುಮಾರವ್ಯಾಸನ ʼತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲʼ ಎಂಬ ಸಾಲನ್ನು ನೆನಪಿಸಿಕೊಂಡರೆ, ನಮ್ಮಲ್ಲಿ ಎಷ್ಟೊಂದು ರಾಮಾಯಣಗಳಿದ್ದುವು ಎಂಬ ಬಗ್ಗೆ ಒಂದು ತಿಳಿವಳಿಕೆ ಮೂಡುತ್ತದೆ. ವಾಲ್ಮೀಕಿಯು ಇಂಥ ಅಸಂಖ್ಯ ರಾಮಾಯಣಗಳನ್ನು ಕೇಳಿ ತನ್ನ ರಾಮಾಯಣ ಬರೆದನೋ ಅಥವಾ ವಾಲ್ಮೀಕಿಯ ರಾಮಾಯಣವೇ ಅಸಂಖ್ಯ ರಾಮಾಯಣಗಳಾಗಿ ಮರು ಹುಟ್ಟು ಪಡೆದವೋ ಹೇಳುವುದು ಸಾಧ್ಯವಿಲ್ಲ. ಕಾಲಾಂತರದಲ್ಲಿ ರಾಮಾಯಣವು ಕೇವಲ ಒಂದು ಮಹಾಕಾವ್ಯವಾಗಿಯಷ್ಟೇ ಉಳಿಯದೆ, ಆಚರಣೆಯಾಗಿ, ನಂಬುಗೆಯಾಗಿ, ಪ್ರದರ್ಶನಗಳಾಗಿ ಒಂದು ದೊಡ್ಡ ಪರಂಪರೆಯೇ ಆಯಿತು. ರಾಮಪ್ಪ ಅಂದಾಗ ಅಪ್ಪನೊಡನೆಯೂ, ರಾಮಣ್ಣ ಅಂದಾಗ ಅಣ್ಣನೊಡನೆಯೂ, ರಾಮಕ್ಕ ಅಂದಾಗ ಅಕ್ಕನೊಡನೆಯೂ ಸಂಬಂಧ ಸಾಧಿಸಿದ ರಾಮನು ಸಹಜವಾಗಿಯೇ ಗಾಂಧೀಜಿಗೆ ಒಂದು ಆದರ್ಶ ವ್ಯಕ್ತಿಯಾಗಿ ಕಂಡು ಬಂದ. ಅಗಸನ ಮಾತಿಗೆ ಕಿವಿಗೊಡುವ ರಾಜಾರಾಮ, ಕಡಲ ಬದಿಯಲ್ಲಿ ನಿಂತು ಸೀತೆಗಾಗಿ ರೋಧಿಸುವ ಸೀತಾರಾಮನನ್ನು ಕಂಡ ಗಾಂಧೀಜಿಗೆ ರಾಮ ಕೇಂದ್ರಿತವಾದ ಒಂದು ಶಕ್ತಿ ರಾಜಕಾರಣವಾಗಲೀ, ಧರ್ಮ ರಾಜಕಾರಣವಾಗಲೀ ಬೇಕಾಗಿರಲಿಲ್ಲ. ಆದರೆ ಗಾಂಧೀಜಿಯ ಕೊಲೆಯೊಂದಿಗೆ ಅವರ ಆದರ್ಶ ರಾಮನ ಪರಿಕಲ್ಪನೆಯೂ ನಿರ್ನಾಮವಾಯಿತು. ಮುಂದೇನಿದ್ದರೂ ಅಧಿಕಾರ ರಾಜಕಾರಣದ ಕೊಳಕು ನಡೆಗಳು ಅಷ್ಟೆ.
೧೯೭೦-೮೦ರ ದಶಕದ ರಾಜಕೀಯ ಬೆಳವಣಿಗೆಗಳು ರಾಮನ ಕಲ್ಪನೆಯನ್ನೇ ಕಲುಷಿತಗೊಳಿಸಿದುವು. ೧೮೮೫ರ ಶಾ ಬಾನು ಪ್ರಕರಣದಲ್ಲಿ ಹಿಂದುಗಳ ಮನ ಒಲಿಸಲು ಹೊರಟ ರಾಜೀವ್ ಗಾಂಧಿ, ಅಯೋಧ್ಯೆಯಲ್ಲಿ ಬೀಗ ಹಾಕಿದ್ದ ದೇವಳದ ಬಾಗಿಲು ತೆರೆದರು. ಆದರೆ ಅದರಿಂದ ಕಾಂಗ್ರಸ್ಸಿಗೇನೂ ಲಾಭವಾಗಲಿಲ್ಲ, ಲಾಭವಾದದ್ದು ವಿಶ್ವ ಹಿಂದೂ ಪರಿಷತ್ ಮೊದಲಾದ ಸಂಘಟನೆಗಳಿಗೆ. ೧೯೮೭ರಲ್ಲಿ ಪ್ರಸಾರವಾದ ಟಿ ವಿ ರಾಮಾಯಣವು ರಾಮನಿಗೆ ಒಮ್ಮತದ ಅಧಿಕೃತತೆಯನ್ನೂ ತಂದುಕೊಟ್ಟಿತು. ಇದರ ಪೂರ್ಣ ಪ್ರಯೋಜನ ಪಡೆದ ಅದ್ವಾನಿಯವರು ರಾಮ ರಥದ ಹೆಸರಿನಲ್ಲಿ ರಥದ ಮೇಲೆ ತಾವೇ ಕುಳಿತು ರಾಮನನ್ನು ಸಂಪೂರ್ಣ ರಾಜಕೀಯಗೊಳಿಸಿದರು. ಇಟ್ಟಿಗೆಯು ದೇಶಕ್ಕೆ ಆಳವಾದ ಗಾಯಗಳನ್ನುಂಟು ಮಾಡಿತು. ಕೋಮುವಾದದ ತಳಹದಿಯ ಮೇಲೆ ಹಿಂದುತ್ವದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲಾಯಿತು. ಬಿಜೆಪಿಯ ಈ ತಂತ್ರಕ್ಕೆ ಅಮಾಯಕ ಭಾರತೀಯರು ಸುಲಭವಾಗಿ ಬಲಿ ಬಿದ್ದರು. ೧೯೯೨ರ ದಶಂಬರ ಆರರಂದು ಬಾಬ್ರಿ ಮಸೀದಿ ಧರೆಗುರುಳಿತು. ಯೋಜಿಸಿದಂತೆಯೇ ಭಾಜಪ ಅದಿಕಾರಕ್ಕೆ ಬಂತು. ೧೯೯೦ ರ ಆನಂತರ ಹುಟ್ಟಿದ ಬಹುತೇಕರಿಗೆ ರಾಮ ಅಂದರೆ ಅಯೋಧ್ಯೆ, ಅಯೋಧ್ಯೆ ಅಂದರೆ ಬಾಬ್ರಿ ಮಸೀದಿ, ಬಾಬ್ರಿ ಮಸೀದಿ ಎಂದರೆ ಬಿ ಜೆ ಪಿ, ಬಿಜೆಪಿ ಅಂದರೆ ಹಿಂದುತ್ವ ಅಷ್ಟೇ ಗೊತ್ತು.
ಬಾಬ್ರಿ ಮಸೀದಿ ಪ್ರಕರಣದ ಪರಿಣಾಮ ದೀರ್ಘಕಾಲೀನವಾಗಿರುತ್ತದೆ. ಸೀತೆ ಮತ್ತು ಲಕ್ಷ್ಮಣರನ್ನು ಅಕ್ಕ ಪಕ್ಕದಲ್ಲಿ ನಿಲ್ಲಿಸಿಕೊಂಡು ಮುಗುಳ್ನಗುತ್ತಾ ನಿಂತಿದ್ದ ಕೋದಂಡರಾಮ ಉಗ್ರರೂಪಿಯಾಗಿ ಪರಿವರ್ತನೆಗೊಂಡ. ರಾಮನ ಪದತಲದಲ್ಲಿ ವಿನೀತನನಾಗಿ ಕುಳಿದ ಹನುಮಂತನೂ ರೌದ್ರಾವತಾರಿಯಾದ. ಇಡೀ ದೇಶದ ಸಾವಿರಾರು ಸಮುದಾಯಗಳ ಭಾಗವಾಗಿ, ಬಹುರೂಪಿಯಾಗಿದ್ದ ಶ್ರೀರಾಮ ಏಕರೂಪಿಯಾಗಿ, ಸಮಕಾಲೀನ ರಾಜಕಾರಣದಲ್ಲಿ ಅವತಾರವೆತ್ತಬೇಕಾಯಿತು. ಅಷ್ಟರ ಮಟ್ಟಿಗೆ ಸಾಂಸ್ಕೃತಿಕ ಭಾರತ ದುರ್ಬಲವಾಯಿತು.
ಸಾಮಾಜಿಕವಾಗಿ, ದ್ವೇಷ ರಾಜಕಾರಣ ಹೆಚ್ಚಿತು. ಕೋಮುವಾದವು ಅಂಗೀಕೃತ ಮೌಲ್ಯವಾಯಿತು. ತಣ್ಣಗಿದ್ದ ಊರುಗಳು ಕೂಡಾ ಪ್ರಕ್ಷುಬ್ದಗೊಂಡವು. ಒಟ್ಟಿಗೇ ಬದುಕುತ್ತಿದ್ದವರ ನಡುವೆ ಸಂಶಯದ ಬೀಜಗಳನ್ನು ಬಿತ್ತಲಾಯಿತು. ಗುಂಪು ಹಲ್ಲೆಗಳ ಸಂದರ್ಭದಲ್ಲಿ ಕೂಡಾ ಜೈ ಶ್ರೀ ರಾಮ್ ಅಂತ ಕೂಗಲಾಯಿತು. ಸಂವಿಧಾನದ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಣ ನಂಬುಗೆ ಕೂಡಾ ಕಡಿಮೆಯಾಗುತ್ತಾ ಹೋಯಿತು.
ಬಾಬ್ರಿಯಂಥ ಘಟನೆಯಿಂದ ಅಧಿಕಾರ ಹಿಡಿಯುವುದು ಸುಲಭ ಎಂಬ ಸತ್ಯ ಈಗ ರಾಜಕಾರಣಿಗಳಿಗೆ ಮನವರಿಕೆಯಾಗಿದೆ. ಕೃಷ್ಣ ಜನ್ಮ ಭೂಮಿ ಆಗಲೇ ಸದ್ದು ಮಾಡಲಾರಂಭಿಸಿದೆ. ಬಾಬಾ ಬುಡಾನ್ ಗಿರಿ, ಆನೆಕೆರೆ ಬಸದಿ ಇತ್ಯಾದಿ ಘಟನೆಗಳು ಬಾಬ್ರಿ ಘಟನೆಯ ಮರಿಗಳೇ ಆಗಿವೆ. ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಒತ್ತುಕೊಡದೆ, ಭಾಗ್ಯನಗರ, ನವಾಬ ಸಂಸ್ಕೃತಿಯಂಥ ಪದಗಳನ್ನು ಬಳಸಿಯೇ ಅಧಿಕಾರಕ್ಕೇರಬಹುದೆಂಬ ನಂಬುಗೆಯು ಪ್ರಜಾಪ್ರಭುತ್ವವನ್ನು ನಗೆಪಾಟಲಿಗೊಳಪಡಿಸಿದೆ.
ಇದು ಇನ್ನೂ ಬಹಳ ಕಾಲ ಮುಂದುವರೆಯಲಿದೆ. ರಾಮನಿಗೆ ಈ ಸಂಕಟಗಳಿಂದ ಸದ್ಯಕ್ಕಂತೂ ಬಿಡುಗಡೆಯಿಲ್ಲ.