ರೈತರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಪಂಜಿನ ಮೆರವಣಿಗೆ

ಗಜೇಂದ್ರಗಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ವಿರೋಧಿ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಕಾಯ್ದೆ, ಸೇರಿದಂತೆ ಜನವಿರೋಧಿ ಕಾಯ್ದೆಗಳ ವಾಪಾಸ್ಸಾತಿಗೆ ಒತ್ತಾಯಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿ ಡಿವಾಯ್ಎಫ್ಐ ಹಾಗೂ ಎಸ್.ಎಫ್.ಐ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಘಟಕಗಳಿಂದ ನಗರದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಡಿವಾಯ್ಎಫ್ಐ ರಾಜ್ಯ ಸಮಿತಿ ಸದಸ್ಯ ಫಯಾಜ್ ತೋಟದ ಮಾತನಾಡಿ ದೇಶದ ಬೆನ್ನೆಲುಬಾದ ದೇಶದ ರೈತನ ಬನ್ನಿಗೆ ಕೇಂದ್ರದ ಮೋದಿ ಸರ್ಕಾರ ಚೂರಿ ಹಾಕುತ್ತಿದೆ. ಹೋರಾಟ ಮಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿದಾನಾತ್ಮಕ ಹಕ್ಕು. ಆದರೆ, ಕೇಂದ್ರ ಸರ್ಕಾರಕ್ಕೆ ಹೋರಾಟವನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಹೋರಾಟಗಾರರು ದೆಹಲಿ ಪ್ರವೇಶ ಮಾಡದಂತೆ ರಸ್ತೆ ಅಗೆದು, ಬ್ಯಾರಿಕೇಡ್ ನಿಲ್ಲಿಸಿ ತಡೆಯುತ್ತಿದ್ದಾರೆ. ಜಲ ಪಿರಂಗಿ ಸಿಡಿಸುತ್ತಿದ್ದಾರೆ. ಲಾಠಿ ಚಾರ್ಜ್‌ ಮಾಡುತ್ತಿದ್ದಾರೆ. ಈ ಮೂಲಕ ಹೋರಾಟ ಮಾಡುವ ಹಕ್ಕು ಕಿತ್ತುಕೊಳ್ಳುವಂತಹ ಕುತಂತ್ರ ಬುದ್ದಿ ತೋರಿಸುತ್ತಿದೆ ಎಂದರು.

ಆಡಳಿತಕ್ಕೆ ಮುನ್ನುವ ನೀಡಿದ್ದ ಎಲ್ಲ ಭರವಸೆಯನ್ನು ಬಿಜೆಪಿ ಹುಸಿಗೊಳಿಸಿದ್ದು ರೈತ ಕಾರ್ಮಿಕರಿಗೆ ಕೊಡಲಿ ಪೆಟ್ಟು ನೀಡಿ, ಭೂ ಮಾಲೀಕರ, ಬಂಡವಾಳ ಶಾಹಿಗಳ ಹಿತಕಾಯುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ. ಇಂತಹ ದೂರಾಡಳಿತದ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುವ ಮೂಲಕ ಕಾರ್ಪೊರೇಟ್ ಶಾಹಿಗಳ ಕಪಿಮುಷ್ಟಿಯಿಂದ ದೇಶವನ್ನು ರಕ್ಷಣೆ ಮಾಡಬೇಕಿದೆ ಎಂದರು.

ಎಸ್.ಎಫ್.ಐ ಜಿಲ್ಲಾ ಮುಖಂಡ ಗಣೇಶ ರಾಠೋಡ ಮಾತಾನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಸ್ಕಾಲರ್ ಶಿಪ್ ಗಳನ್ನು ಕಡಿತ ಮಾಡಿ ಇದರಿಂದ ಬಡ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಶಿಕ್ಷಣದಿಂದ ದೂರು ಉಳಿಯುವಂತೆ ಮಾಡುತ್ತಿದ್ದಾರೆ. ರೈತ ವಿರೋಧಿ ಕಾರ್ಪೊರೇಟ್ ಕಂಪನಿಗಳ ಪರವಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಈ ಎಲ್ಲ ರೈತ ವಿರೋಧಿ ಜನ ವಿರೋಧಿ ಕಾಯ್ದೆಗಳ ವಿರುದ್ದ ಜನತೆ ಸಿಡಿದೇಳಬೇಕಿದೆ ಎಂದರು.

ಕೆ.ಕೆ.ಸರ್ಕಲ್ ನಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ದುರ್ಗಾ ಸರ್ಕಲ್ ಅಂಬೇಡ್ಕರ್ ಸರ್ಕಲ್ ಮೂಲಕ ಮರಳಿ ಕೆ.ಕೆ.ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆಸಿತು. ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ಎಮ್.ಎಸ್. ಹಡಪದ, ಕಾರ್ಮಿಕ ಮುಂಖಡರಾದ ಬಾಲು ರಾಠೋಡ, ಮಾರುತಿ ಚಿಟಗಿ, ಪೀರು ರಾಠೋಡ, ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ಕರಿಯಪ್ಪ ಕಲ್ಗುಡಿ, ರೇಣಪ್ಪ ಕಲ್ಗುಡಿ, ಶಾರವ್ವ ನಾಯಕ, ಚೌಡಮ್ಮ ಯಲ್ಪು, ಗೀತಾ ರಾಠೋಡ, ವಿರೇಶ ಬೆನಹಾಳ, ಸೇರಿದಂತೆ ಇತರರು ಭಾಗಿಯಾಗಿದ್ದರು

Donate Janashakthi Media

Leave a Reply

Your email address will not be published. Required fields are marked *