ಭೋಪಾಲ್ ವಿಷಾನಿಲ ದುರಂತ (ಕೈಗಾರಿಕಾ ಸುರಕ್ಷತಾ ದಿನ) : ಡಿಸೆಂಬರ್ 3, 1984

ವಿಶ್ವದ ಅತಿ ಭಯಾನಕ ಕೈಗಾರಿಕಾ ದುರಂತ ಭೋಪಾಲ್ ಅನಿಲ ಸೋರಿಕೆ ನಡೆದದ್ದು 1984ರ ಡಿಸೆಂಬರ್ 2-3ರ ರಾತ್ರಿ. ಯೂನಿಯನ್ ಕಾರ್ಬೈಡ್ ರಸಗೊಬ್ಬರ ಕಾರ್ಖಾನೆಯಿಂದ 40 ಸಾವಿರ ಕೆ.ಜಿ.ಯಷ್ಟು ವಿಷಯುಕ್ತ ಅನಿಲ ಸೋರಿಕೆಯಾಯಿತು. ಇದರಿಂದ ತಕ್ಷಣ ನಾಲ್ಕು ಸಾವಿರ ಮಂದಿ ಪ್ರಾಣ ಬಿಟ್ಟರು. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡರು. ದುರಂತದ ಸಾವಿನ ಸಂಖ್ಯೆ ನಿಖರವಾಗಿ ಹೇಳಲಿಕ್ಕೆ ಆಗದಿದ್ದರೂ, ಒಂದು ಲೆಕ್ಕದ ಪ್ರಕಾರ ಇದುವರೆಗೆ ಈ ದುರಂತದಲ್ಲಿ ಸುಮಾರು 20 ಸಾವಿರ ಮಂದಿ ಮೃತಪಟ್ಟಿದ್ದಾರೆ,  ಈ ದುರಂತ ಆರು ಲಕ್ಷ ಮಂದಿಗೆ ಜೀವನ ಪರ್ಯಂತ ಅಂಗವೈಕಲ್ಯದ ಬಹುಮಾನವನ್ನು ನೀಡಿದೆ. ಇಂದಿಗೂ ಸಂತ್ರಸ್ತರ ಎರಡನೇ ಮೂರನೇ ಪೀಳಿಗೆಯಲ್ಲಿ ಸಹ ಅದರ ದುಷ್ಪರಿಣಾಮಗಳು ಕಾಣುತ್ತಿವೆ. ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಅತ್ಯಂತ ಅಸಮರ್ಪಕವಾಗಿದೆ. ಈ ದಿನವನ್ನು ಈಗ ಕೈಗಾರಿಕಾ ಸುರಕ್ಷತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಇತ್ತೀಚಿನ ವಿಶಾಖಪಟ್ಟಣದ ಅನಿಲ ಸೋರಿಕೆ ದುರಂತ ತೋರಿಸಿದಂತೆ ಇದರ ಪರಿಣಾಮ ಏನೇನೂ ಆಗಿಲ್ಲ.

ಈ ದುರಂತದ ಸಾಧ್ಯತೆ ಕುರಿತು ಮೊದಲೇ ಎಚ್ಚರಿಕೆ ನೀಡಲಾಗಿದ್ದರೂ ಕಂಪೆನಿಯ ಆಡಳಿತದ ನಿರ್ಲಕ್ಷ್ಯ ಮತ್ತು ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ಭಯಾನಕ ದುರಂತಕ್ಕೆ ಕಾರಣ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಭೋಪಾಲ್ ದುರಂತದ ನಾಲ್ಕು ದಿನಗಳ ಬಳಿಕ ಯೂನಿಯನ್ ಕಾರ್ಬೈಡ್ ಕಂಪೆನಿಯ ಅಧ್ಯಕ್ಷ ವಾರೆನ್ ಆಂಡರ್ಸನ್ ಕಾರ್ಖಾನೆಗೆ ಭೇಟಿ ನೀಡಿದಾಗ ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆದರೆ, 25 ಸಾವಿರ ರೂ. ವೈಯಕ್ತಿಕ ಬಾಂಡ್ ಮೇಲೆ ಶೀಘ್ರ ಆತನನ್ನು ಬಿಡುಗಡೆ ಮಾಡಲಾಯಿತು. ಅಷ್ಟೇ ಅಲ್ಲ, ಸರ್ಕಾರಿ ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ದು, ಅಮೇರಿಕಕ್ಕೆ ತೆರಳಿ ತಪ್ಪಿಸಿಕೊಳ್ಳುವಲ್ಲಿ ನೆರವು ನೀಡಲಾಯಿತು.  ಪ್ರಕರಣದ ವಿಚಾರಣೆಯ ವೇಳೆ ಅಗತ್ಯಬಿದ್ದಾಗ ನ್ಯಾಯಾಲಯ ಸಮ್ಮನ್ಸ್ ನೀಡಿದರೆ, ಭಾರತಕ್ಕೆ ಬಂದು ಕೋರ್ಟ್ ಕಲಾಪಕ್ಕೆ ಹಾಜರಾಗುತ್ತೇನೆ ಎಂದು ಆಂಡರ್ಸನ್ ತನ್ನ ಬಾಂಡ್ ನಲ್ಲಿ ಭರವಸೆ ನೀಡಿದ್ದ. ಆದರೆ, ಕೇಂದ್ರ ಸರ್ಕಾರ 2014ರಲ್ಲಿ ಆತ ಸಾಯುವವರೆಗೆ ಇದುವರೆಗೆ ಭಾರತಕ್ಕೆ ಕರೆತರುವಲ್ಲಿ ವಿಫಲವಾಗಿದೆ.

ಕಂಪೆನಿ ಮೇಲೆ ಹಾಕಲಾದ ಎಲ್ಲ ಕ್ರಿಮಿನಲ್ ಆರೋಪಗಳನ್ನು ತೆಗೆದುಹಾಕಿದಾಗಲೇ ಭಾರತ ಸರ್ಕಾರ ಮತ್ತು ಅದರ ನ್ಯಾಯಾಂಗ ವ್ಯವಸ್ಥೆ ಮೇಲೆ ಅನುಮಾನದ ಕಾರ್ಮೋಡಗಳು ದಟ್ಟವಾಗಿ ಮೂಡಿದ್ದವು. ಸಾರ್ವಜನಿಕರ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ 1991ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಿತು. ಆದರೆ, 1996ರಲ್ಲಿ ಸುಪ್ರೀ ಕೋರ್ಟ್ ಪ್ರಕರಣದಲ್ಲಿನ ಆರೋಪಗಳನ್ನು ಮಾನವ ಹತ್ಯೆ (10ವರ್ಷಗಳ ಗರಿಷ್ಟ ಸಜೆ)ಯ ಬದಲು ನಿರ್ಲಕ್ಷ್ಯದಿಂದ ಸಾವು (2 ವರ್ಷಗಳ ಶಿಕ್ಷೆ) ಬದಲಾಯಿಸುವಂತೆ ನಿರ್ದೇಶನ ನೀಡಿತು. ಈ ಆರೋಪಪಟ್ಟಿಯಂತೆ 15 ವರ್ಷಗಳ ಬಳಿಕ, 2010ರಲ್ಲಿ ಬಂದ ತೀರ್ಪು ಸಹ ಅಸಮರ್ಪಕವಾಗಿತ್ತು. ದುರಂತದ ಪ್ರತಿ ಸಂತ್ರಸ್ತ ಜುಜುಬಿ ಎನ್ನಬಹುದಾದ 12,410 ರೂಪಾಯಿಗಳ ಪರಿಹಾರವನ್ನು ಒಪ್ಪಿಕೊಂಡಿತ್ತು.

ಭೋಪಾಲ್ ವಿಷಾನಿಲ ದುರಂತದಲ್ಲಿ ಯೂನಿಯನ್ ಕಾರ್ಬೈಡ್ ಸಂಸ್ಥೆಯು ಸಾಕಷ್ಟು ಕಾನೂನು ಕಚ್ಚಾಟದ ನಂತರ 713 ಕೋಟಿ ಪರಿಹಾರ ನೀಡಿತ್ತು.  ಅಮೇರಿಕಾ ಮತ್ತಿತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಅಪಘಾತಗಳು ಸಂಭವಿಸಿದಲ್ಲಿ ಯಾವುದೇ ಹೊಣೆಗಾರಿಕೆಯೂ ಇಲ್ಲದೇ ಯಥೇಚ್ಛ ಲಾಭವನ್ನು ಬಾಚಿಕೊಂಡು ಹೋಗಬಹುದು ಎಂಬ ಸಂದೇಶವನ್ನು ಈ ವರೆಗಿನ ಎಲ್ಲ ಸರಕಾರಗಳ ವರ್ತನೆಗಳು ಮತ್ತು  ಕೋರ್ಟಿನ ತೀರ್ಪುಗಳು ರವಾನಿಸಿವೆ. ಯೂನಿಯನ್ ಕಾರ್ಬೈಡ್ ಸಂಸ್ಥೆಯು ಈಗ ಡೋ ಕೆಮಿಕಲ್ಸ್ ಎಂಬ ಬಹುರಾಷ್ಟ್ರೀಯ ಸಂಸ್ಥೆಯ ಅಧೀನ ಸಂಸ್ಥೆಯಾಗಿದ್ದು ಅದರ ಮೇಲೆ ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳಲು ಅಮೇರಿಕಾ ನಿರಾಕರಿಸಿದೆ.

ದುರಂತದ ಪ್ರಮುಖ ಆರೋಪಿ ಯೂನಿಯನ್ ಕಾರ್ಬೈಡ್ ಕಂಪೆನಿಯ ಅಧ್ಯಕ್ಷ ವಾರೆನ್ ಆಂಡರ್ಸನ್ 2014ರಲ್ಲಿ ನಿಧನವಾಗುವರೆಗೆ ನೆಮ್ಮದಿಯ ಜೀವನ ನಡೆಸಿದ. ಯೂನಿಯನ್ ಕಾರ್ಬೈಡ್ ನ ಇತರ ಎಂಟು ಭಾರತೀಯ ಕಾರ್ಯಕಾರಿ ಅಧಿಕಾರಿಗಳು (ಈ ಪೈಕಿ ಒಬ್ಬ ಮೃತಪಟ್ಟಿದ್ದಾನೆ) ಎರಡು ವರ್ಷಗಳ ಜೈಲು ಶಿಕ್ಷೆಗೆ ಮಾತ್ರ ಗುರಿಯಾಗಿದ್ದಾರೆ. ಸ್ಥಳೀಯ ನ್ಯಾಯಾಲಯ ಅವರಿಗೆ ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಹಾಗೂ ಕಂಪೆನಿಗೆ ಐದು ಲಕ್ಷ ರೂಪಾಯಿಯ ದಂಡ ವಿಧಿಸಿದೆ. ಹಾಗಾಗಿ, 25 ಸಾವಿರ ರೂಪಾಯಿಯ ವೈಯಕ್ತಿಕ ಬಾಂಡ್ ಮೇಲೆ ಎಲ್ಲರೂ ಬಿಡುಗಡೆಗೊಂಡಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳ ಮೇಲೆ ನಿರ್ಬಂಧಗಳಿರದಿದ್ದರೆ ತಮ್ಮ ಲಾಭಕ್ಕಾಗಿ ಕೈಗಾರಿಕೆಯ, ಕಾರ್ಮಿಕರ ಮತ್ತು ಜನತೆಯ ಸುರಕ್ಷಿತತೆ, ಜೀವಹಾನಿ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ.  ಅವು ಎಂತಹ ಸಾವು-ನೋವುಗಳಿಗೆ ಕಾರಣವಾಗಿಯೂ ನರಮೇಧ ಸಹ ನಡೆಸಿಯೂ ಯಾವುದೇ ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುತ್ತವೆ. ಭಾರತದಂತಹ ಮೂರನೇ ಜಗತ್ತಿನ ಸರಕಾರಗಳು ಈ ಬಗ್ಗೆ ಕಿರಿಬೆರಳು ಎತ್ತಲೂ ಶಕ್ತವಾಗಿರುವುದಿಲ್ಲ. ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಅಸಮರ್ಪಕವಾಗಿರುತ್ತದೆ, ಎಂಬುದರ ಪ್ರತೀಕವಾಗಿದೆ ಇಂದಿಗೂ ಭೋಪಾಲ್ ವಿಷಾನಿಲ ದುರಂತ,

 

Donate Janashakthi Media

Leave a Reply

Your email address will not be published. Required fields are marked *