ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ಜಾರಿಯ ಕುರಿತು ಇಂದು(ಡಿ.01-ಮಂಗಳವಾರ) ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ನಡೆದ ಸಭೆ ವಿಫಲವಾಗಿದೆ. ಡಿ.3ರಂದು ಮೂರನೇ ಸುತ್ತಿನ ಮಾತುಕತೆಗೆ ಎರಡೂ ಬಣ ಒಪ್ಪಿಗೆ ಸೂಚಿಸಿವೆ.
ಈ ಮಧ್ಯೆ ಸಭೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ನಾಯಕ ಚಂದಾ ಸಿಂಗ್, ನಾವು ಸರ್ಕಾರದಿಂದ ಎದೆಗೆ ಗುಂಡನ್ನಾದರೂ ಅಥವಾ ರೈತ ಸಮುದಾಯಕ್ಕೆ ನ್ಯಾಯವನ್ನಾದರೂ ಎರಡರಲ್ಲಿ ಒಂದನ್ನು ಪಡೆಯುವುದಾಗಿ ಹೇಳಿದರು.
ಇಂದಿನ ಸಭೆ ವಿಫಲವಾಗಿರುವುದು ನಿಜವಾದರೂ, ಡಿ.3ರ ಸಭೆಯಲ್ಲಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ. ಕೊನೆಗೆ ಕೇಂದ್ರ ಸರ್ಕಾರ ನಮ್ಮ ಎದೆಗೆ ಗುಂಡು ಹೊಡೆದರೂ ಸರಿ ಎಂದು ಚಂದಾ ಸಿಂಗ್ ಮಾರ್ಮಿಕವಾಗಿ ನುಡಿದಿದ್ದಾರೆ.
ಇಂದಿನ ಸಭೆ ನಿರ್ದಿಷ್ಟ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿರುವುದರಿಂದ, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ಎಷ್ಟೇ ಸಂಕಷ್ಟಗಳು ಎದುರಾದರೂ ನಾವು ನಮ್ಮ ಹೋರಾಟವನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಚಂದಾ ಸಿಂಗ್ ಸ್ಪಷ್ಟಪಡಿಸಿದರು.
ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಇತರ ರೈತ ನಾಯಕರೂ, ಕೃಷಿ ಕಾನೂನು ರದ್ದಾಗುವವರೆಗೂ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಡಿ.3ರ ಮೂರನೇ ಸುತ್ತಿನ ಸಭೆಗೆ ರೈತ ಸಂಘಟನೆಗಳು ಎದುರು ನೋಡುತ್ತಿದ್ದು, ಗುರುವಾರದ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.