– ಪ್ರತಿ ಜಿಲ್ಲೆಯಲ್ಲೂ ಎರಡು ಹಂತದಲ್ಲಿ ಚುನಾವಣೆ – ಡಿ.22, 27ಕ್ಕೆ ಚುನಾವಣೆ, ಡಿ.30ಕ್ಕೆ ಫಲಿತಾಂಶ
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಡಿಸೆಂಬರ್ ಅಂತ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.
113 ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ಡಿ.22ರಂದು ನಡೆಯಲಿದೆ. ಡಿ. 27ರಂದು ಉಳಿದ ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 7ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.
ರಾಜ್ಯದ ಒಟ್ಟು 5,762 ಗ್ರಾಮ ಪಂಚಾಯಿತಿಗಳ 45128 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೆಲವು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಇಂದಿನಿಂದಲೇ (ನ. 30) ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ, ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.14 ನಾಮಪತ್ರ ವಾಪಸ್ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿ.30ರಂದು ಫಲಿತಾಂಶ ಪ್ರಕಟವಾಗಲಿದೆ.
ಪಂಚಾಯಿತಿಗಳು ಮತ್ತು ಸದಸ್ಯ ಸ್ಥಾನಗಳು
ಮೊದಲ ಹಂತದಲ್ಲಿ 2930 ಕ್ಷೇತ್ರಗಳಿಗೆ ಮತ್ತು ಎರಡನೆಯ ಹಂತದಲ್ಲಿ 2830 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 95,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಲ್ಲ ಕಡೆ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಕಡ್ಡಾಯ. ಚುನಾವಣಾ ಪ್ರಚಾರದ ವೇಳೆಯೂ ನಿಯಮಗಳನ್ನು ಪಾಲಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ ಬಿ ಬಸವರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಕೆಲವು ಪಂಚಾಯಿತಿಗಳಿಗೆ ಚುನಾವಣೆ ಇಲ್ಲ
ಕೆಲವು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಡಿಸೆಂಬರ್ 2020ರ ನಂತರ 162 ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ. ಇನ್ನು ನ್ಯಾಯಾಲಯದಲ್ಲಿ ಬಾಕಿ ಇರುವ ಆರು ಗ್ರಾಮ ಪಂಚಾಯಿತಿಗಳ ಪ್ರಕರಣಗಳು ಹಾಗೂ ಮೇಲ್ದರ್ಜೆಗೆ ಏರಿಸಲಾಗಿರುವ 33 ಗ್ರಾಮ ಪಂಚಾಯಿತಿ, ಭಾಗಶಃ ಮೇಲ್ದರ್ಜೆಗೆ ಏರಿಸಲಾಗಿರುವ 41 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುತ್ತಿಲ್ಲ ಎಂದು ಹೇಳಿದರು.
ಮತದಾರರು ಎಷ್ಟಿದ್ದಾರೆ?
ಚುನಾವಣೆ ನಡೆಯಲಿರುವ 5,762 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 2,96,15048 ಮತದಾರರು ಇದ್ದಾರೆ. ಅವರಲ್ಲಿ 1,49,71,676 ಪುರುಷರು ಮತ್ತು 1,47,41,964 ಮಂದಿ ಮಹಿಳಾ ಮತದಾರರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಬೀದರ್‌ನಲ್ಲಿ ಇವಿಎಂ ಬಳಕೆ
ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. ಇತರೆ ಎಲ್ಲ ಜಿಲ್ಲೆಗಳಲ್ಲಿಯೂ ಮತಪತ್ರಗಳ ಮೂಲಕ ಚುನಾವಣೆ ನಡೆಯಲಿದೆ. ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಕೊರೊನಾ ವೈರಸ್ ಸೋಂಕು ಹರಡುವುದರ ವಿರುದ್ಧ ಹೊರಡಿಸಲಾಗಿರುವ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಚುನಾವಣೆ ನಡೆಯಲಿದೆ.
ಯಾವ ಜಿಲ್ಲೆಯ ಯಾವ ತಾಲೂಕಿನಲ್ಲಿ ಯಾವ ಹಂತದಲ್ಲಿ ಮತದಾನ ನಡೆಯಲಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಜಿಲ್ಲೆ | ಮೊದಲ ಹಂತ (ತಾಲೂಕುಗಳು)ಡಿಸೆಂಬರ್ 22, 2020 | ಎರಡನೇ ಹಂತ (ತಾಲೂಕುಗಳು)ಡಿಸೆಂಬರ್ 27, 2020 |
ಬೆಂಗಳೂರು ನಗರ | 1. ಬೆಂಗಳೂರು ಉತ್ತರ 2. ಯಲಹಂಕ | 1. ಬೆಂಗಳೂರು ದಕ್ಷಿಣ 2. ಬೆಂಗಳೂರು ಪೂರ್ವ 3. ಆನೇಕಲ್ |
ಬೆಂಗಳೂರು ಗ್ರಾಮಾಂತರ | 1. ಹೊಸಕೋಟೆ 2. ನೆಲಮಂಗಲ | 1. ದೊಡ್ಡಬಳ್ಳಾಪುರ 2. ದೇವನಹಳ್ಳಿ |
ರಾಮನಗರ | 1. ರಾಮನಗರ 2. ಕನಕಪುರ | 1. ಚನ್ನಪಟ್ಟಣ 2. ಮಾಗಡಿ |
ಚಿತ್ರದುರ್ಗ | 1. ಚಿತ್ರದುರ್ಗ 2. ಹೊಸದುರ್ಗ 3. ಹೊಳಲ್ಕೆರೆ | 1. ಹಿರಿಯೂರು 2. ಚಳ್ಳಕೆರೆ3. ಮೊಳಕಾಲ್ಮೂರು |
ದಾವಣಗೆರೆ | 1. ದಾವಣಗೆರೆ 2. ಹೊನ್ನಾಳಿ 3. ಜಗಳೂರು | 1. ಹರಿಹರ 2. ಚನ್ನಗಿರಿ 3. ನ್ಯಾಮತಿ |
ಕೋಲಾರ | 1. ಕೋಲಾರ 2. ಮಾಲೂರು 3. ಶ್ರೀನಿವಾಸಪುರ | 1. ಮುಳಬಾಗಿಲು 2. ಬಂಗಾರಪೇಟೆ3. ಕೆಜಿಎಫ್ |
ಚಿಕ್ಕಬಳ್ಳಾಪುರ | 1. ಶಿಡ್ಲಘಟ್ಟ 2. ಚಿಂತಾಮಣಿ3. ಬಾಗೇಪಲ್ಲಿ | 1. ಚಿಕ್ಕಬಳ್ಳಾಪುರ 2. ಗೌರಿಬಿದನೂರು 3. ಗುಡಿಬಂಡೆ |
ಶಿವಮೊಗ್ಗ | 1. ಶಿವಮೊಗ್ಗ 2. ಭದ್ರಾವತಿ 3. ತೀರ್ಥಹಳ್ಳಿ | 1. ಸಾಗರ 2. ಶಿಕಾರಿಪುರ 3. ಸೊರಬ 4. ಹೊಸನಗರ |
ತುಮಕೂರು | 1. ತುಮಕೂರು 2. ಕುಣಿಗಲ್ 3. ಗುಬ್ಬಿ 4. ಕೊರಟಗೆರೆ 5. ಪಾವಗಡ | 1. ಮಧುಗಿರಿ 2. ಶಿರಾ 3. ತಿಪಟೂರು 4. ತುರುವೇಕೆರೆ 5. ಚಿಕ್ಕನಾಯಕನಹಳ್ಳಿ |
ಮೈಸೂರು | 1. ಹುಣಸೂರು 2. ಕೆಆರ್ ನಗರ 3. ಪಿರಿಯಾಪಟ್ಟಣ 4. ಎಚ್‌ಡಿ ಕೋಟೆ 5. ಸರಗೂರು | 1. ಮೈಸೂರು 2. ನಂಜನಗೂಡು 3. ಟಿ.ನರಸೀಪುರ |
ಚಿಕ್ಕಮಗಳೂರು | 1. ಚಿಕ್ಕಮಗಳೂರು 2. ಮೂಡಿಗೆರೆ 3. ಕೊಪ್ಪ 4. ಶೃಂಗೇರಿ | 1. ನರಸಿಂಹರಾಜಪುರ 2. ಕಡೂರು 3. ತರೀಕೆರೆ 4. ಅಜ್ಜಂಪುರ |
ದಕ್ಷಿಣ ಕನ್ನಡ | 1. ಮಂಗಳೂರು 2. ಮೂಡಬಿದರೆ 3. ಬಂಟ್ವಾಳ | 1. ಬೆಳ್ತಂಗಡಿ 2. ಪುತ್ತೂರು 3. ಸುಳ್ಯ 4. ಕಡಬ |
ಉಡುಪಿ | 1. ಉಡುಪಿ 2. ಹೆಬ್ರಿ 3. ಬ್ರಹ್ಮಾವರ 4. ಬೈಂದೂರು | 1. ಕುಂದಾಪುರ 2. ಕಾರ್ಕಳ 3. ಕಾಪು |
ಕೊಡಗು | 1. ಮಡಿಕೇರಿ 2. ಸೋಮವಾರಪೇಟೆ | 1. ವಿರಾಜಪೇಟೆ |
ಹಾಸನ | 1. ಹಾಸನ 2. ಅರಕಲಗೂಡು 3. ಚನ್ನರಾಯಪಟ್ಟಣ 4. ಸಕಲೇಶಪುರ | 1. ಅರಸೀಕೆರೆ 2. ಬೇಲೂರು 3. ಆಲೂರು 4. ಹೊಳೆನರಸೀಪುರ |
ಮಂಡ್ಯ | 1. ಮಂಡ್ಯ 2. ಮದ್ದೂರು 3. ಮಳವಳ್ಳಿ | 1. ಪಾಂಡವಪುರ 2. ಶ್ರೀರಂಗಪಟ್ಟಣ3. ಕೃಷ್ಣರಾಜಪೇಟೆ 4. ನಾಗಮಂಗಲ |
ಚಾಮರಾಜನಗರ | 1. ಚಾಮರಾಜನಗರ 2. ಗುಂಡ್ಲುಪೇಟೆ | 1. ಯಳಂದೂರು 2. ಕೊಳ್ಳೇಗಾಲ 3. ಹನೂರು |
ಬೆಳಗಾವಿ | 1. ಬೆಳಗಾವಿ 2. ಖಾನಾಪುರ 3. ಹುಕ್ಕೇರಿ 4. ಬೈಲಹೊಂಗಲ 5. ಕಿತ್ತೂರು 6. ಗೋಕಾಕ 7. ಮೂಡಲಗಿ | 1. ಸವದತ್ತಿ 2. ರಾಯದುರ್ಗ 3. ಚಿಕ್ಕೋಡಿ 4. ನಿಪ್ಪಾಣಿ 5. ಅಥಣಿ 6. ಕಾಗವಾಡ 7. ರಾಯಭಾಗ |
ವಿಜಯಪುರ | 1. ವಿಜಯಪುರ 2. ಬಬಲೇಶ್ವರ 3. ತಿಕೋಟಾ 4. ಬಸವನಬಾಗೇವಾಡಿ 5. ನಿಡಗುಂದಿ 6. ಕೊಲ್ಹಾರ 7. ಮುದ್ದೇಬಿಹಾಳ 8. ತಾಳಿಕೋಟೆ | 1. ಇಂಡಿ 2. ಚಡಚಣ 3. ಸಿಂಧಗಿ 4. ದೇವರಹಿಪ್ಪರಗಿ |
ಬಾಗಲಕೋಟೆ | 1. ಜಮಖಂಡಿ 2. ಮುಧೋಳ 3. ಬೀಳಗಿ 4. ರಬಕವಿ-ಬನಹಟ್ಟಿ | 1. ಬಾಗಲಕೋಟೆ 2. ಹುನಗುಂದ 3. ಬಾದಾಮಿ 4. ಇಳಕಲ್ 5. ಗುಳೇದಗುಡ್ಡ |
ಧಾರವಾಡ | 1. ಧಾರವಾಡ 2. ಅಳ್ನಾವರ್ 3. ಕಲಘಟಗಿ | 1. ಹುಬ್ಬಳ್ಳಿ 2. ಕುಂದಗೋಳ 3. ನವಲಗುಂದ 4. ಅಣ್ಣಿಗೇರಿ |
ಗದಗ | 1. ಗದಗ 2. ಶಿರಹಟ್ಟಿ 3. ಲಕ್ಷ್ಮೇಶ್ವರ | 1. ಮುಂಡರಗಿ 2. ರೋಣ 3. ಗಜೇಂದ್ರಗಡ 4. ನರಗುಂದ |
ಹಾವೇರಿ | 1. ರಾಣೆಬೆನ್ನೂರು 2. ಹಾವೇರಿ 3. ಹಿರೇಕೆರೂರು 4. ರಟ್ಟಿಹಳ್ಳಿ | 1. ಹಾನಗಲ್ 2. ಶಿಗ್ಗಾಂವ್ 3. ಸವಣೂರು 4. ಬ್ಯಾಡಗಿ |
ಉತ್ತರ ಕನ್ನಡ | 1. ಕಾರವಾರ 2. ಅಂಕೋಲಾ 3. ಕುಮಟಾ 4. ಹೊನ್ನಾವರ 5. ಭಟ್ಕಳ | 1. ಶಿರಸಿ 2. ಸಿದ್ದಾಪುರ 3. ಯಲ್ಲಾಪುರ 4. ಮುಂಡಗೋಡ 5. ಹಳಿಯಾಳ 6. ದಾಂಡೇಲಿ 7. ಜೋಯಿಡಾ |
ಕಲಬುರಗಿ | 1. ಕಲಬುರಗಿ 2. ಆಳಂದ 3. ಅಫಜಲ್‌ಪುರ 4. ಕಮಲಾಪುರ 5. ಕಾಳಗಿ 6 . ಶಹಾಬಾದ್ | 1. ಯಡ್ರಾಮಿ 2. ಜೇವರ್ಗಿ 3. ಚಿತ್ತಾಪುರ 4. ಚಿಂಚೋಳಿ 5. ಸೇಡಂ |
ಬೀದರ್ | 1. ಬಸವಕಲ್ಯಾಣ2. ಹುಲಸೂರು 3. ಹುಮನಾಬಾದ್ 4. ಚಿಟಗುಪ್ಪ 5. ಭಾಲ್ಕಿ | 1. ಬೀದರ್ 2. ಔರಾದ್ 3. ಕಮಲನಗರ |
ಬಳ್ಳಾರಿ | 1. ಬಳ್ಳಾರಿ 2. ಕುರಗೋಡು 3. ಸಿರಗುಪ್ಪ 4. ಹೊಸಪೇಟೆ 5. ಕಂಪ್ಲಿ | 1. ಸಂಡೂರು 2. ಹಗರಿಬೊಮ್ಮನಹಳ್ಳಿ 3. ಕೂಡ್ಲಿಗಿ 4. ಕೊಟ್ಟುರು 5. ಹೂವಿನಹಡಗಲಿ 6. ಹರಪನಹಳ್ಳಿ |
ರಾಯಚೂರು | 1. ರಾಯಚೂರು 2. ದೇವದುರ್ಗ 3. ಮಾನ್ವಿ 4. ಸಿರವಾರ | 1. ಲಿಂಗಸೂಗೂರು 2. ಮಸ್ಕಿ 3. ಸಿಂಧನೂರು |
ಯಾದಗಿರಿ | 1. ಶಹಾಪುರ2. ಸುರಪುರ 3. ಹುಣಸಗಿ | 1. ಯಾದಗಿರಿ 2. ಗುರಮಿಟ್ಟಕಲ್ 3. ವಡಗೇರಾ |
ಕೊಪ್ಪಳ | 1. ಕೊಪ್ಪಳ 2. ಯಲಬುರ್ಗಾ 3. ಕುಕನೂರು | 1. ಕುಷ್ಟಗಿ 2. ಕಾರಟಗಿ 3. ಕನಕಗಿರಿ 4. ಗಂಗಾವತಿ |